ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಸ್ಥಳದ ಕಸದ ಬುಟ್ಟಿಗೆ ಬೆಂಕಿ

Last Updated 24 ಏಪ್ರಿಲ್ 2017, 4:52 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುಂಜಾನೆ ಏಳೆಂಟು ಗಂಟೆ. ನಗರದ ಜೆಸಿಆರ್ ಬಡಾವಣೆ ಗಣಪತಿ ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯಿಂದ ದಟ್ಟ ಹೊಗೆ ಹೊಮ್ಮುತ್ತಿತ್ತು. ಬೆಳಗಿನ ವಾಯುವಿಹಾರಕ್ಕಾಗಿ ಬಂದವರು ಮೂಗು ಮುಚ್ಚಿಕೊಂಡೇ ವಾಕಿಂಗ್ ಮಾಡುತ್ತಿದ್ದರು..!

ಪಕ್ಕದ ವಿ.ಪಿ.ಬಡಾವಣೆಯ ಅರಣ್ಯ ಇಲಾಖೆ ಕಚೇರಿ ಮೂಲೆಯಲ್ಲಿರುವ ಕಬ್ಬಿಣದ ಕಸದ ಬುಟ್ಟಿಯಲ್ಲಿ ಸಂಜೆ ವೇಳೆ ಧಗ ಧಗಿಸುವ ಬೆಂಕಿ ಉರಿಯುತ್ತಿತ್ತು. ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಮರಗಳ ಕೊಂಬೆಗಳಿಗೆ ತಾಗುತ್ತಿತ್ತು. ಸೇಂಟ್ ಜೋಸೆಫ್ ಕಾನ್ವೆಂಟ್ ಪಕ್ಕದ ಕಸದ ಬುಟ್ಟಿಯಲ್ಲಿ ಹೊಮ್ಮುತ್ತಿದ್ದ ಬೆಂಕಿಯ ಜ್ವಾಲೆ ಅಕ್ಕಪಕ್ಕದ ಕಟ್ಟಡದ ಕಾಂಪೌಂಡ್‌ಗೂ ವ್ಯಾಪಿಸಿತ್ತು..!.

ಇಂಥ ಹಲವು ಉದಾಹರಣೆಗಳ ಜತೆಗೆ, ಜೆಸಿಆರ್ 4ನೇ ಕ್ರಾಸ್. ಜೋಗಿಮಟ್ಟಿ ರಸ್ತೆ, ಸಂತೆಹೊಂಡ, ಮೆದೇಹಳ್ಳಿ ರಸ್ತೆ, ಸರಸ್ವತಿಪುರಂ, ಐಯುಡಿಪಿ ಬಡಾವಣೆ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಹೀಗೆ ಕಸದ ರಾಶಿಗೆ, ಕಸದ ಬುಟ್ಟಿಗೆ ಬೆಂಕಿ ಹಾಕಿರುವ ದೃಶ್ಯ ಸರ್ವೇ ಸಾಮಾನ್ಯ. ಒಂದು ರೀತಿ ಕಸಕ್ಕೆ ಬೆಂಕಿ ಇಡುವುದು ‘ಸಂಪ್ರದಾಯ’­ದಂತಾಗಿದೆ.

ಕಸದ ಬುಟ್ಟಿಗಳಿಗೆ ನಿರಂತರವಾಗಿ ಬೆಂಕಿ ಹಾಕುವ ಪರಿಣಾಮ ಬುಟ್ಟಿಯ ಸುತ್ತಲಿನ ಕಬ್ಬಿಣದ ತಗಡುಗಳು ಸುಟ್ಟುಹೋಗಿವೆ. ಸುಟ್ಟುಹೋಗಿರುವ ತಗಡುಗಳಿಗೆ ಚಾಪೆಯನ್ನು ತೇಪೆಯಾಗಿಸಲಾಗಿದೆ. ಹೀಗೆ ತ್ಯಾಜ್ಯವನ್ನು ಸುಡುವುದು ನಗರಸಭೆ ಸಿಬ್ಬಂದಿಯೋ, ಸಾರ್ವಜನಿಕರೋ ಎಂಬುದು ಯಕ್ಷಪ್ರಶ್ನೆಯಾಗಿದೆ.

ತ್ಯಾಜ್ಯ ಹೊಗೆ ಅಪಾಯಕಾರಿ: ‘ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಕಸದಲ್ಲಿರುವ ಕೊಳೆತ ವಸ್ತುಗಳು, ಪ್ಲಾಸ್ಟಿಕ್ ಕವರ್ ನಂತಹ ತ್ಯಾಜ್ಯಗಳು ರಾಸಾಯನಿಕ­ಯುಕ್ತ ಅನಿಲವನ್ನು ಹೊರಹಾಕುತ್ತವೆ. ಇದರಿಂದ ಅಸ್ತಮಾ, ಶ್ವಾಸಕೋಶ ಸಮಸ್ಯೆ, ಕ್ಯಾನ್ಸರ್‌ನಂತಹ ರೋಗ ಹರಡಲು ಕಾರಣವಾಗುತ್ತದೆ’ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ.

‘ತ್ಯಾಜ್ಯದಿಂದ ಹೊರಹೊಮ್ಮುವ ಹೊಗೆ ವಾಹನ ಹೊರಬಿಡುವ ಇಂಗಾಲದ ಡೈ ಆಕ್ಸೈಡ್‌ಗಿಂತ ಹೆಚ್ಚು ಅಪಾಯಕಾರಿ’ ಎನ್ನುತ್ತಾರೆ ಪರಿಸರ ಕಾರ್ಯಕರ್ತ ಡಾ.ಎಚ್.ಕೆ.ಎಸ್.ಸ್ವಾಮಿ. ಈ ಎಲ್ಲ ಅಪಾಯಗಳ ಕಾರಣ ಸರ್ಕಾರ ದಶಕದ ಹಿಂದೆಯೇ ತ್ಯಾಜ್ಯ ಸುಡುವುದನ್ನು ನಿಷೇಧಿಸಿದೆ. ಆದರೂ ನಗರದಲ್ಲಿ ಕಸ ಸುಡುವುದು ಮುಂದುವರಿದಿದೆ.

‘ಅರಿವು ಮೂಡಿಸಿದ್ದೇವೆ’: ತ್ಯಾಜ್ಯಕ್ಕೆ ಬೆಂಕಿ ಇಡುವುದರಿಂದ ಉಂಟಾಗುವ ಹೊಗೆ ದುಷ್ಪರಿಣಾಮದ ಬಗ್ಗೆ ನಗರಸಭೆ ಸಿಬ್ಬಂದಿಗೆ ಅರಿವು ಮೂಡಿಸಬೇಕಾದದ್ದು ಮಾಲಿನ್ಯ ನಿಯಂತ್ರಣ ಮಂಡಳಿ ಜವಾಬ್ದಾರಿ. ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಮುರಳೀಧರ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ತ್ಯಾಜ್ಯ ವಿಲೇವಾರಿ ವೇಳೆ ಕೈಗೊಳ್ಳುವ ಕ್ರಮಗಳ ಬಗ್ಗೆ ನಗರಸಭೆ ಸಿಬ್ಬಂದಿಗೆ ತಿಳಿಸಿದ್ದೇವೆ.

ಕಾರ್ಮಿಕರಿಗೂ ಕಾರ್ಯಾಗಾರಗಳನ್ನು ಮಾಡಿದ್ದೇವೆ. ತ್ಯಾಜ್ಯದ ಹೊಗೆ­ಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆಯೂ ತಿಳಿವಳಿಕೆ ಮೂಡಿ­ಸಿದ್ದೇವೆ. ಮಾಹಿತಿ ಪತ್ರಗ­ಳನ್ನು ವಿತರಿಸಿದ್ದೇವೆ. ಇವೆಲ್ಲವನ್ನೂ ನಗರಸಭೆಯವರು ಅವುಗಳನ್ನು ಕಾರ್ಯರೂಪಕ್ಕೆ ತರಬೇಕು’ ಎಂದರು.

ಕಸದ ಬುಟ್ಟಿಗಳನ್ನು ಇಡುವಂತಿಲ್ಲ: ‘ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿಗಳನ್ನು ಇಡುವಂತಿಲ್ಲ. ಕೆಲವು ಕಡೆ ಮಾತ್ರ ಬೇಡಿಕೆ ಆಧಾರದ ಮೇಲೆ ಇಟ್ಟಿರಬಹುದು. ಆದರೆ, ಆ ಬುಟ್ಟಿಗೂ ಬೆಂಕಿ ಹಾಕುವಂತಿಲ್ಲ. ಇದು ಹೇಗೆ ಆಗುತ್ತದೆ ಎಂಬುದನ್ನು ಪರಿಶೀಲಿಸುತ್ತೇನೆ’ ಎಂದು ಪೌರಾಯುಕ್ತ ಸಿ.ಚಂದ್ರಪ್ಪ ತಿಳಿಸಿದರು.

‘ಕಸವನ್ನು ಸುಡಬಾರದೆಂದು ನಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ. ಆದರೂ ಅದು ಮುಂದುವರಿದಿದ್ದರೆ, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂಥ ಘಟನೆಗಳು ಕಂಡು ಬಂದರೆ ಸಾರ್ವಜನಿಕರು ನಗರಸಭೆಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

**

‘ಕಸ ವಿಲೇವಾರಿ ಮನೆಯಿಂದ ಆರಂಭವಾಗಲಿ’

* ಹಸಿ ಕಸ, ಒಣಗಿದ ಕಸ ಬೇರ್ಪಡಿಸಿ.
* ಪ್ಲಾಸ್ಟಿಕ್ ಶೀಷೆ, ಕವರ್ ಮತ್ತಿತರ ಮಣ್ಣಲ್ಲಿ ಕರಗದ ವಸ್ತುಗಳನ್ನು ಪ್ರತ್ಯೇಕಿಸಿ.
* ಆಟೊ, ಟಿಪ್ಪರ್, ಟ್ರ್ಯಾಕ್ಟರ್ ಮನೆಮುಂದೆ ಬಂದಾಗ, ಅದರೊಳಕ್ಕೆ ಕಸ ಹಾಕಿ.
* ವಿಳಂಬವಾದರೆ, ಸಾರ್ವಜನಿಕ ಬುಟ್ಟಿಗಳಲ್ಲೇ ಕಸವನ್ನು ಸುರಿಯಿರಿ.
* ಬೇರ್ಪಡಿಸಿದ ಕಸವನ್ನು ಗೊಬ್ಬರವಾಗಿಸಬೇಕು.
– ಎಂ.ಆರ್.ದಾಸೇಗೌಡ, ವಿಜ್ಞಾನ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT