ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ಮೀಸಲಾತಿ: ಹೋರಾಟ ಅನಿವಾರ್ಯ

Last Updated 24 ಏಪ್ರಿಲ್ 2017, 4:56 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಆತಂಕಕಾರಿಯಾಗಿದ್ದು, ಈ ತೀರ್ಪಿನ ವಿರುದ್ಧ ಹೋರಾಡಬೇಕಾದ ಅಗತ್ಯವಿದೆ’ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟದ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಅಭಿಪ್ರಾಯಪಟ್ಟರು.

ನಗರದ ಗುರುಭವನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಒಕ್ಕೂಟ ರಾಜ್ಯ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಮೂರನೇ ರಾಜ್ಯ ಮಟ್ಟದ ಸಮ್ಮೇಳನ, ಅಂಬೇಡ್ಕರ್ ಜನ್ಮದಿನ ಹಾಗೂ ಸಮಗ್ರ ಮೀಸಲಾತಿ ಸಂರಕ್ಷಣಾ ದಿನ ವಿಷಯ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ಮೀಸಲಾತಿ ಸಂವಿಧಾನದಡಿ ತಳ ಸಮುದಾಯಗಳಿಗೆ ನೀಡಿರುವ ರಕ್ಷೆಯೇ ಹೊರತು ಭಿಕ್ಷೆ ಅಲ್ಲ. ಇದು ಸಮಾಜದಲ್ಲಿ ಅವಕಾಶ ವಂಚಿತರನ್ನು ಮೇಲೆತ್ತಲು ಇರುವ ಅತ್ಯುತ್ತಮ ಮಾರ್ಗ. ಸಂವಿಧಾನ ಕೊಟ್ಟ ಮೀಸಲಾತಿಯಿಂದ ನಮ್ಮ ಬದುಕು ಇಲ್ಲಿಯವರೆಗೆ ನಡೆಯಿತು. ಮುಂದೆ ನಮ್ಮೆಲ್ಲರ ಮಕ್ಕಳಿಗೂ ಮೀಸಲಾತಿ ಸಿಗಬೇಕು. ಅದಕ್ಕಾಗಿ ಸಾಮಾಜಿಕ ಚಳವಳಿ ನಡೆಸಬೇಕಾದ ಅಗತ್ಯವಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ‘ಬಡ್ತಿ ಮೀಸಲಾತಿ ಕುರಿತು ಗಂಭೀರ ಚರ್ಚೆಯಾಗುತ್ತಿದೆ. ಆದರೂ ನಮ್ಮಲ್ಲಿ ಇನ್ನೂ ಪ್ರಜ್ಞೆ ಬಂದಿಲ್ಲ.  ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಎದುರಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಾನು ಮೀಸಲಾತಿ ಲಾಭ ಪಡೆದಿದ್ದೇನೆ. ನನ್ನ ಸೇವೆಯನ್ನು ಭಾಗಶಃ ಪೂರ್ಣಗೊಳಿಸಿ ನಿವೃತ್ತಿ ಅಂಚಿನಲ್ಲಿಇದ್ದೇನೆ. ಪ್ರಸ್ತುತ ನನಗೆ ತೊಂದರೆ ಆದರೂ ಚಿಂತೆ ಇಲ್ಲ. ಆದರೆ, ಮುಂದಿನ ಪೀಳಿಗೆಗೆ ತೊಂದರೆ ಆಗಬಾರದು’ ಎಂದು ಅವರು ಅಭಿಪ್ರಾಯಪಟ್ಟರು.

ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ‘ಡಾ.ಬಿ.ಆರ್‌.ಅಂಬೇಡ್ಕರ್ ಅವರ ಹೋರಾಟದ ಫಲದಿಂದಾಗಿ ನಾವೆಲ್ಲರೂ ಮೀಸಲಾತಿ ಪಡೆದ ಫಲಾನುಭವಿಗಳಾಗಿದ್ದೇವೆ. ನಮ್ಮ ಸಮುದಾಯಗಳಿಗೆ ಏನಾದರೂ ಒಳಿತು ಮಾಡಬೇಕು ಎಂಬ ಉದ್ದೇಶದಿಂದ ಏಳೆಂಟು ವರ್ಷಗಳ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ರಚಿಸಿಕೊಂಡಿದ್ದೇವೆ’ ಎಂದರು.

ಜಿಲ್ಲಾ ಪಂಚಾಯ್ತಿ ಲೆಕ್ಕಾಧಿಕಾರಿ ಓಂಕಾರಪ್ಪ, ಕಾರ್ಯಪಾಲಕ ಎಂಜಿನಿಯರ್ ಜಗದೀಶ್, ಡಿಡಿಪಿಐ ರೇವಣಸಿದ್ದಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್, ನಗರಸಭೆ ಪೌರಾಯುಕ್ತ ಚಂದ್ರಪ್ಪ, ತಾಲ್ಲೂಕು ವೈದ್ಯಾಧಿಕಾರಿ ಸಿ.ಎಲ್.ಫಾಲಾಕ್ಷ, ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪ್ರೊ.ಕೆ.ಕೆ.ಕಮಾನಿ, ಡಯಟ್ ಉಪನ್ಯಾಸಕ ನಾಗಭೂಷಣ್ ಇದ್ದರು.

**

ಮನೆಗೆ ಬೆಂಕಿ ಹೊತ್ತಿಕೊಂಡರೂ ಅದನ್ನು ಆರಿಸಿ ರಕ್ಷಣೆ ಮಾಡಿಕೊಳ್ಳಲಿಲ್ಲ ಎಂದರೆ ಕಷ್ಟ. ಇದೊಂದು ಅಪಾಯಕಾರಿ ತೀರ್ಪು.  ನಾವೆಲ್ಲರೂ ಹೋರಾಡಬೇಕಿದೆ. 

-ಪ್ರೊ. ಸಿ.ಕೆ.ಮಹೇಶ್, ಒಕ್ಕೂಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT