ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 80 ಕೋಟಿ ವೆಚ್ಚದಲ್ಲಿ 200 ಹಳ್ಳಿಗಳ ಅಭಿವೃದ್ಧಿ

Last Updated 24 ಏಪ್ರಿಲ್ 2017, 5:02 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಮೂಲಕ ₹ 80 ಕೋಟಿ ವೆಚ್ಚದಲ್ಲಿ ರಾಜ್ಯದ 200 ಹಳ್ಳಿಗಳನ್ನು ಅಭಿವೃದ್ಧಿ ಮಾಡಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು. ಪಟ್ಟಣದಲ್ಲಿ ₹ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ರಸ್ತೆಗಳನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಅನುಷ್ಠಾನ ಸಮಿತಿಗೆ ನಾನು ಅಧ್ಯಕ್ಷನಾಗಿದ್ದು, ರಾಜ್ಯದ ಐದು ಜಿಲ್ಲೆಗಳನ್ನು ಆಯ್ಕೆ ಮಾಡಿದ್ದೇನೆ. ಮೊದಲ ಹಂತವಾಗಿ ಚಿತ್ರದುರ್ಗ, ಚಾಮರಾಜ ನಗರ, ಕೋಲಾರ, ವಿಜಯಪುರ, ಕಲಬುರ್ಗಿ ಜಿಲ್ಲೆಗಳ ಸುಮಾರು 200 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಪರಿಶಿಷ್ಟರ ಸಂಖ್ಯೆ ಶೇ 50ಕ್ಕಿಂತ ಹೆಚ್ಚು ಇರುವ ಹಳ್ಳಿಗಳಲ್ಲಿ ಯೋಜನೆ ಜಾರಿ ಆಗಲಿದೆ. ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ₹ 40 ಕೋಟಿ ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರ ₹ 40 ಕೋಟಿ ನೀಡಲಿದೆ’ ಎಂದರು.

‘ಆಯ್ಕೆ ಆದ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ, ಸಮುದಾಯ ಭವನ, ಶೌಚಾಲಯ, ಸೌರ ದೀಪ, ತ್ಯಾಜ್ಯ ಸಂಸ್ಕರಣಾ ಘಟಕ, ದೇವಾಲಯ, ಮಸೀದಿ ಜೀರ್ಣೋದ್ಧಾರ, ಭೂ ಅಭಿವೃದ್ಧಿ, ನಮ್ಮ ಹೊಲ–ನಮ್ಮ ದಾರಿ, ಒಕ್ಕಲು ಕಣ, ಕುರಿ, ದನದ ಕೊಟ್ಟಿಗೆ, ಸ್ಮಶಾನ ಅಭಿವೃದ್ಧಿ, ಜಾನುವಾರು ತೊಟ್ಟಿ, ಕೆರೆ ಏರಿ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕ, ಕೃಷಿಹೊಂಡ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದರು.

ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆ: ಮುಖ್ಯಮಂತ್ರಿ ಮಾದರಿ ಗ್ರಾಮ ಯೋಜನೆಯ ಮೂಲಕ ರಾಜ್ಯದ 2,000 ಹಳ್ಳಿಗಳನ್ನು ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಈ ಯೋಜನೆಗೂ ಪರಿಶಿಷ್ಟರು ಹೆಚ್ಚಿರುವ ಗ್ರಾಮಗಳನ್ನು ಆಯ್ಕೆ ಮಾಡಲಾಗುವುದು.

ರಾಜ್ಯ ಸರ್ಕಾರದ ಅನುದಾನದಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು ಎಂದು ಆಂಜನೇಯ ಹೇಳಿದರು.ಪಟ್ಟಣದ ಪ್ರತಿಷ್ಠಿತ ಎಂಎಂ ಸರ್ಕಾರಿ ಪ್ರೌಢಶಾಲೆ ಶಿಥಿಲಗೊಂಡಿದ್ದು, ₹ 5 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

2,3,8ನೇ ವಾರ್ಡ್, ಗೃಹಮಂಡಳಿ ಕಾಲೊನಿಯಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಗಳನ್ನು ಉದ್ಘಾಟಿಸಿದರು. ತಹಶೀಲ್ದಾರ್ ಸೋಮಶೇಖರ, ತಾಲ್ಲೂಕು ಪಂಚಾಯ್ತಿ ಇಒ ಬಾಲಸ್ವಾಮಿ ದೇಶಪ್ಪ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸವಿತಾ ಬಸವರಾಜು, ಉಪಾಧ್ಯಕ್ಷೆ ಜಯಮ್ಮ, ಮುಖ್ಯಾಧಿಕಾರಿ ಡಿ.ಉಮೇಶ್,  ಪಿ.ಎಚ್.ಮುರುಗೇಶ್, ಆರ್.ರಾಜಪ್ಪ, ಹಬೀಬ್, ಇಂದೂಧರ ಮೂರ್ತಿ, ರುದ್ರಪ್ಪ, ಎಂಜಿನಿಯರ್ ಎನ್.ಪಿ.ವೆಂಕಟೇಶುಲು, ಪಾಡಿಗಟ್ಟೆ ಸುರೇಶ್ ಇದ್ದರು.

**

‘ಜನ ಹಿತ’ ಆ್ಯಪ್
ಹೊಳಲ್ಕೆರೆ ಪಟ್ಟಣ ಪಂಚಾಯ್ತಿಯ ‘ಜನ ಹಿತ’ ಮೊಬೈಲ್ ಆ್ಯಪ್‌ಗೆ ಆಂಜನೇಯ ಚಾಲನೆ ನೀಡಿದರು.ಈ ಆ್ಯಾ

ಪ್‌ ಬಳಸಿ ಪಟ್ಟಣ ಪಂಚಾಯ್ತಿಗೆ ನಾಗರಿಕರು ದೂರುಗಳನ್ನು ಸಲ್ಲಿಸಬಹುದು. ರಸ್ತೆ, ಕುಡಿಯುವ ನೀರು, ಬೀದಿ ದೀಪ, ಚರಂಡಿ, ಪಟ್ಟಣದ ನೈರ್ಮಲ್ಯಗಳಿಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲೇ ಅಹವಾಲು ಸಲ್ಲಿಸಬಹುದು.

ಸಹಾಯವಾಣಿ ಸಂಖ್ಯೆ: 080–23108108, ವಾಟ್ಸ್ ಆ್ಯಪ್ ಸಂಖ್ಯೆ: 82777 77728 ಬಳಸಬಹುದು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ.

**

ಪ್ರಧಾನಮಂತ್ರಿ ಆದರ್ಶ ಗ್ರಾಮಗಳು

ಹೊಳಲ್ಕೆರೆ ತಾಲ್ಲೂಕಿನ ತಣಿಗೆ ಹಳ್ಳಿ, ಕಾಳಘಟ್ಟ, ನಂದಿಹಳ್ಳಿ, ಉಗಣೆಕಟ್ಟೆ, ಜಕ್ಕನ ಹಳ್ಳಿ, ಕುಡಿನೀರ ಕಟ್ಟೆ, ಹೊಳಲ್ಕೆರೆ ಗ್ರಾಮೀಣ, ಗುಂಡೇರಿ ಕಾವಲು, ಕಾಶೀಪುರ, ವೈ.ಎಮ್ಮಿಗನೂರು, ಬೋರೇನ ಹಳ್ಳಿ, ನೇರಲ ಕಟ್ಟೆ, ಗಿಡ್ಡನ ಹಳ್ಳಿ, ರಾಮೇನ ಹಳ್ಳಿ.

ಹಿರಿಯೂರು ತಾಲ್ಲೂಕಿನ ಗುಡಿಹಳ್ಳಿ, ಭರಮಗಿರಿ, ಸೇವಾಲಾಲ್ ನಗರ, ಕಂಬದ ಹಳ್ಳಿ, ಪಟ್ರೆಹಳ್ಳಿ, ಗಂಜಲಗುಂಟೆ, ಓಬಳಾಪುರ, ಚಳ್ಳಕೆರೆ- ತಾಲ್ಲೂಕಿನ ಕೆರೆಯಾಗಳ ಹಳ್ಳಿ, ಜಂಬಿಯ ಹಳ್ಳಿ, ಭೀಮನ ಕೆರೆ, ನಂದನ ಹಳ್ಳಿ, ಸೇವಾಲಾಲ್ ನಗರ, ಚೌಳೂರು ಕಾವಲು.

ಚಿತ್ರದುರ್ಗ ತಾಲ್ಲೂಕಿನ ಬೇವಿನ ಹಳ್ಳಿ, ದೊಡ್ಡಿಗನ ಹಳ್ಳಿ, ಬೋಗಳೇರ ಹಳ್ಳಿ, ಸಿದ್ದವ್ವನ ಹಳ್ಳಿ, ಓಬಣ್ಣನ ಹಳ್ಳಿ, ನಂದಿಪುರ, ದೊಡ್ಡಪುರ, ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕೆರಹಳ್ಳಿ, ಸಿದ್ದಯ್ಯನ ಕೋಟೆ, ಒಡೇರ ಹಳ್ಳಿ, ಭಟ್ರ ಹಳ್ಳಿ, ಗುಂಡಲೂರು, ಹೊಸದುರ್ಗ ತಾಲ್ಲೂಕಿನ ಚಿನ್ನಾಪುರ, ಸೇವಾನಗರ, ಗೊಲ್ಲರ ಹಳ್ಳಿ, ಹರಿಯನ ಹಳ್ಳಿ, ಸಿಂಗೇನ ಹಳ್ಳಿ, ಗಿರಿಯಾಪುರ ಗ್ರಾಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT