ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರ ಶ್ರಮವೇ ಗೆಲುವಿನ ಶಕ್ತಿ: ಶೆಟ್ಟರ್‌

Last Updated 24 ಏಪ್ರಿಲ್ 2017, 5:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪ್ರಚಂಡ ವಿಜಯಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರ ‘ಹವಾ’ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಬೂತ್‌ ಮಟ್ಟದಲ್ಲಿ ಕೆಲಸ ಮಾಡಿದ ಕಾರ್ಯಕರ್ತರ ಶ್ರಮದಿಂದ ನಮ್ಮ ಪಕ್ಷ ಗೆಲ್ಲಲು ಸಾಧ್ಯವಾಯಿತು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಪ್ರತಿಪಾದಿಸಿದರು.

ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದ ಬೂತ್ ಮಟ್ಟದ ಏಜೆಂಟರ ಸಭೆಯಲ್ಲಿ ಅವರು ಮಾತನಾಡಿದರು.‘ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿ ಹಾಗೂ ಅಮಿತ್‌ ಷಾ ಎರಡು ದಿನವೂ ಇದ್ದು ಸಲಹೆ ಸೂಚನೆಗಳನ್ನು ನೀಡಿದರು. ಹಿಂದಿನ ಕಾರ್ಯಕಾರಿಣಿಗಳಲ್ಲಿಯೂ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಪಕ್ಷದ ವರಿಷ್ಠ ಎಲ್‌.ಕೆ. ಅಡ್ವಾಣಿ ಅವರು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಇಂತಹ ಪ್ರಯತ್ನಗಳಿಂದಾಗಿಯೇ ಜನಸಂಘ ಇದ್ದಾಗ ಸ್ಪರ್ಧಿಸಿ ಸೋಲುತ್ತಿದ್ದ ನಮ್ಮವರು ಇಂದು ಗೆಲುವು ಸಾಧಿಸುತ್ತಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಬೂತ್ ಮಟ್ಟದ ಏಜೆಂಟರಿಗೆ ಕಾನೂನು ಮಾನ್ಯತೆ ಇದ್ದು, ಎಲ್ಲ ಮನೆಗಳಿಗೆ ಭೇಟಿ ನೀಡಿ ಚುನಾವಣಾ ಆಯೋಗದ ಗುರುತಿನ ಚೀಟಿ ಪಡೆಯದವರ ಹೆಸರನ್ನು ಸೇರಿಸಲು ಯತ್ನಿಸಬೇಕು. ಇದರಿಂದ ಜನರೊಂದಿಗೆ ಒಡನಾಟವೂ ಬೆಳೆದು ಮಂದಿನ ರಾಜಕೀಯ ಚಟುವಟಿಕೆಗಳಿಗೆ ಅವರು ಬೆಂಬಲ ನೀಡುತ್ತಾರೆ’ ಎಂದರು.ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ಮಹಾನಗರ ಜಿಲ್ಲಾ ಬಿಜೆಪಿ ಹಾಗೂ ರೈತ ಮೋರ್ಚಾದಿಂದ ಒಂದೊಂದು ತಾಲ್ಲೂಕುಗಳನ್ನು ದತ್ತು ಪಡೆದು ಅನುಪಯುಕ್ತ ಬೋರ್‌ವೆಲ್‌ಗಳನ್ನು ಮುಚ್ಚುವ ಅಭಿಯಾನ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮುಂದಿನ ವರ್ಷ ರಾಜ್ಯ ವಿಧಾನಸಭೆ ಎದುರಾಗುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಬೂತ್‌ ಮಟ್ಟದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಪಕ್ಷದ ಪರ ಒಲವು ಇರುವವರ ಹೆಸರುಗಳನ್ನು ಮತದಾರರ ಯಾದಿಯಲ್ಲಿ ನೋಂದಾಯಿಸಬೇಕು’ ಎಂದರು. ಇದಕ್ಕೂ ಮುನ್ನ ಮಾತನಾಡಿದ ಪಕ್ಷದ ಮಹಾನಗರ ಜಿಲ್ಲಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡ ಮಲ್ಲಿಕಾರ್ಜುನ ಸಾವಕಾರ ಅವರು ಹೆಸರು ನೋಂದಾಯಿಸುವ ಕುರಿತು ವಿವರ ನೀಡಿದರು. ಪಾಲಿಕೆ ಸದಸ್ಯರಾದ ಮಹೇಶ ಬುರ್ಲಿ, ಉಮೇಶಗೌಡ ಕೌಜಗೇರಿ, ಮೇನಕಾ ಹುರಳಿ, ಬೀರಪ್ಪ ಖಂಡೇಕರ, ಸೆಂಟ್ರಲ್ ಕ್ಷೇತ್ರದ ಉಸ್ತುವಾರಿ ತಿಪ್ಪಣ್ಣ ಮಜ್ಜಗಿ ಇದ್ದರು. 180ಕ್ಕೂ ಅಧಿಕ ಬೂತ್‌ ಮಟ್ಟದ ಏಜೆಂಟರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT