ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಸೇರುತ್ತಿರುವ ವಿಷಕಾರಿ ನೀರು

Last Updated 24 ಏಪ್ರಿಲ್ 2017, 5:09 IST
ಅಕ್ಷರ ಗಾತ್ರ

ಕೋಲಾರ: ನಗರದ ಹೊರವಲಯದ ಚಿನ್ನಾಪುರ ಕೆರೆಯ ಸುತ್ತಮುತ್ತಲಿನ ಕೊಳವೆ ಬಾವಿಗಳ ಅಂತರ್ಜಲದ ಜತೆ ಕೊಳಚೆ ನೀರು ಸೇರುತ್ತಿದ್ದು, ಈ ವಿಷಕಾರಿ ನೀರು ಸದ್ದಿಲ್ಲದೆ ಟ್ಯಾಂಕರ್‌ಗಳ ಮೂಲಕ ನಗರಕ್ಕೆ ಸರಬರಾಜಾಗುತ್ತಿದೆ.

ನಗರವಾಸಿಗಳು ಪ್ರತಿನಿತ್ಯ ಬಳಸಿ ಮನೆಯಿಂದ ಹೊರ ಬಿಡುವ ಕೊಳಚೆ ನೀರು ಚರಂಡಿ ಹಾಗೂ ಯುಜಿಡಿ ಮಾರ್ಗವಾಗಿ ಮಣಿಘಟ್ಟ ರಸ್ತೆಯಲ್ಲಿನ ಗ್ರಾಮಸಾರ ಶುದ್ಧೀಕರಣ ಘಟಕಕ್ಕೆ ಹರಿದು ಬರುತ್ತದೆ. ನಂತರ ಈ ಘಟಕದಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್‌ನಂತಹ ಘನ ವಸ್ತುಗಳನ್ನು ಬೇರ್ಪಡಿಸಿ ಕೊಳಚೆ ನೀರನ್ನು ಚಿನ್ನಾಪುರ ಕೆರೆಗೆ ಹರಿದು ಬಿಡಲಾಗುತ್ತಿದೆ.
ಏಳೆಂಟು ವರ್ಷಗಳ ಹಿಂದೆ ಗ್ರಾಮಸಾರ ಶುದ್ಧೀಕರಣ ಘಟಕ ಕಾರ್ಯಾರಂಭ ಮಾಡಿದ್ದು, ಆಗಿನಿಂದಲೂ ನಗರದ ಕೊಳಚೆ ನೀರು ಕೆರೆಯ ಒಡಲು ಸೇರುತ್ತಿದೆ. ಚಿನ್ನಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ವಿರೋಧದ ನಡುವೆಯೂ ಈ ಪ್ರಕ್ರಿಯೆ ಮುಂದುವರಿದಿದೆ.

ಕೆರೆ ಸಂಪೂರ್ಣವಾಗಿ ಕೊಳಚೆ ನೀರಿನಿಂದ ಭರ್ತಿಯಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ದುರ್ನಾತ ಹೆಚ್ಚಿದೆ. ಮತ್ತೊಂದೆಡೆ ಕೊಳಚೆ ನೀರು ಭೂಮಿಗೆ ಬಸಿದು ಅಕ್ಕಪಕ್ಕದ ಕೊಳವೆ ಬಾವಿಗಳಲ್ಲಿನ ಅಂತರ್ಜಲವನ್ನು ಕಲುಷಿತಗೊಳಿಸುತ್ತಿದೆ. ನಗರಕ್ಕೆ ನೀರು ಪೂರೈಸಲು ನದಿ ಅಥವಾ ನಾಲೆಯಂತಹ ಯಾವುದೇ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ಕೊಳವೆ ಬಾವಿಗಳ ನೀರನ್ನೇ ನೆಚ್ಚಿಕೊಳ್ಳಲಾಗಿದೆ.

ನೀರು ಬತ್ತಿಲ್ಲ: ನಗರದೊಳಗಿನ ಬಹುಪಾಲು ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಆದರೆ, ಚಿನ್ನಾಪುರ ಕೆರೆಯ ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿ ಇರುವ ಏಳೆಂಟು ಕೊಳವೆ ಬಾವಿಗಳಲ್ಲಿ ನೀರು ಬತ್ತಿಲ್ಲ. ಟ್ಯಾಂಕರ್‌ ಮಾಲೀಕರು ಈ ಕೊಳವೆ ಬಾವಿಗಳ ಮಾಲೀಕರಿಗೆ ಹಣ ಕೊಟ್ಟು ನೀರು ಖರೀದಿಸಿಕೊಂಡು ಬಂದು ನಗರಕ್ಕೆ ಸರಬರಾಜು ಮಾಡುತ್ತಿದ್ದಾರೆ.

ಕೊಳವೆ ಬಾವಿಗಳ ಮಾಲೀಕರು ಪ್ರತಿ ಟ್ಯಾಂಕರ್‌ ಲೋಡ್‌ ನೀರಿಗೆ ₹ 150 ದರ ನಿಗದಿಪಡಿಸಿದ್ದು, ಹಣದಾಸೆಗೆ ಪ್ರತಿನಿತ್ಯ ಟ್ಯಾಂಕರ್‌ ಮಾಲೀಕರಿಗೆ ನೂರಾರು ಲೋಡ್‌ ನೀರು ಕೊಡುತ್ತಿದ್ದಾರೆ. ಇ–ಟೆಂಡರ್‌ನಡಿ ನೀರು ಸರಬರಾಜಿನ ಗುತ್ತಿಗೆ ಪಡೆದಿರುವವರು ಹಾಗೂ ಖಾಸಗಿ ಟ್ಯಾಂಕರ್‌ ಮಾಲೀಕರು ಹಣ ಸಂಪಾದನೆಗಾಗಿ ತಮಗೆ ಅರಿವಿಲ್ಲದೆ ಈ ಕೊಳವೆ ಬಾವಿಗಳ ಕಲುಷಿತ ನೀರನ್ನೇ ಬಡಾವಣೆಗಳಿಗೆ ಪೂರೈಸುತ್ತಿದ್ದಾರೆ.

ಪ್ರತಿಕೂಲ ಪರಿಣಾಮ: ಕೊಳವೆ ಬಾವಿಗಳ ನೀರಿನಲ್ಲಿ ವಿಷಕಾರಿ ರಾಸಾಯನಿಕ ಅಂಶಗಳಿದ್ದು, ನಗರವಾಸಿಗಳು ಈ ಸಂಗತಿ ತಿಳಿಯದೆ ಕಲುಷಿತ ನೀರನ್ನೇ ಸ್ನಾನ ಮಾಡಲು, ಪಾತ್ರೆ ಮತ್ತು ತರಕಾರಿ ತೊಳೆಯಲು ಬಳಕೆ ಮಾಡುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದ್ದು, ಚರ್ಮ ರೋಗ ಹಾಗೂ ತಲೆಗೂದಲು ಉದುರುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ನಗರಕ್ಕೆ ಸರಬರಾಜಾಗುವ ನೀರಿನ ಶುದ್ಧತೆ ಪರಿಶೀಲಿಸಬೇಕಾದ ನಗರಸಭೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಆ ಕೆಲಸ ಮಾಡುತ್ತಿಲ್ಲ. ಮತ್ತೊಂದೆಡೆ ಭೂಮಿ, ನೀರು, ಗಾಳಿ ಸೇರಿದಂತೆ ಒಟ್ಟಾರೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೊಳವೆ ಬಾವಿಗಳಲ್ಲಿನ ಅಂತರ್ಜಲ ಕಲುಷಿತವಾಗುತ್ತಿದ್ದರೂ ಮೌನವಾಗಿದ್ದಾರೆ.

ನಗರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪರಸ್ಪರರ ವಿರುದ್ಧ ಬೊಟ್ಟು ಮಾಡುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ನಗರವಾಸಿಗಳು ಬವಣೆ ಪಡುವಂತಾಗಿದೆ.

ಮಂಡಳಿ ಜವಾಬ್ದಾರಿ
ಕೊಳವೆ ಬಾವಿಗಳಲ್ಲಿನ ಅಂತರ್ಜಲ ಕಲುಷಿತವಾಗುತ್ತಿರುವುದನ್ನು ತಡೆಯುವುದು ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ. ನಗರವಾಸಿಗಳ ಆರೋಗ್ಯದ ದೃಷ್ಟಿಯಿಂದ ಚಿನ್ನಾಪುರ ಕೆರೆಯ ಸುತ್ತಮುತ್ತಲಿನ ಕೊಳವೆ ಬಾವಿಗಳ ನೀರಿನ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ ಮಂಡಳಿಯ ಅಧಿಕಾರಿಗಳಿಗೆ ಕಳುಹಿಸಿ ಕೊಡುತ್ತೇವೆ.
–ಎಸ್‌.ಎ.ರಾಮ್‌ಪ್ರಕಾಶ್‌, ನಗರಸಭೆ ಆಯುಕ್ತ

ನಗರಸಭೆಯ ಕರ್ತವ್ಯ
ನಗರಕ್ಕೆ ಪೂರೈಕೆಯಾಗುವ ನೀರಿನ ಗುಣಮಟ್ಟವನ್ನು ಪರಿಶೀಲಿಸುವುದು ನಗರಸಭೆ ಅಧಿಕಾರಿಗಳ ಕರ್ತವ್ಯ. ಹಣದಾಸೆಗೆ ರಾಸಾಯನಿಕಯುಕ್ತ ವಿಷಕಾರಿ ನೀರನ್ನು ಸರಬರಾಜು ಮಾಡುತ್ತಿರುವ ಟ್ಯಾಂಕರ್‌ ಮಾಲೀಕರ ವಿರುದ್ಧ ನಗರಸಭೆ ಅಧಿಕಾರಿಗಳೇ ಕ್ರಮ ಜರುಗಿಸಬೇಕು. ಸದ್ಯದಲ್ಲೇ ಚಿನ್ನಾಪುರ ಕೆರೆಯ ಸುತ್ತಮುತ್ತಲಿನ ಕೊಳವೆ ಬಾವಿಗಳ ನೀರಿನ ಮಾದರಿ ಸಂಗ್ರಹಿಸಿ ಪರಿಶೀಲನೆ ಮಾಡುತ್ತೇವೆ.

–ಸಿ.ಆರ್‌.ಮಂಜುನಾಥ್‌, ಪರಿಸರ ಅಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT