ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ ರೂಪಾಯಿ ರಸ್ತೆಯಲ್ಲಿ ಬಿರುಕು

Last Updated 24 ಏಪ್ರಿಲ್ 2017, 5:10 IST
ಅಕ್ಷರ ಗಾತ್ರ

ಅಣ್ಣಿಗೇರಿ:  ಪಟ್ಟಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ನಗರೋತ್ಥಾನ ಯೋಜನೆಯಡಿ 2014–15 ಮತ್ತು 2015–16ನೇ ಸಾಲಿನಲ್ಲಿ ಪಟ್ಟಣಕ್ಕೆ ಬಿಡುಗಡೆಯಾದ ಕೋಟ್ಯಂತರ ರೂಪಾಯಿ ಅನುದಾನದಡಿ ನಿರ್ಮಿಸಲಾದ ಬಹುತೇಕ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಕೆಲವೇ ತಿಂಗಳಲ್ಲಿ ಕಿತ್ತು ಹೋಗಿವೆ.

ಪಟ್ಟಣದಲ್ಲಿ ನಿರ್ಮಿಸುತ್ತಿರುವ ಮುಖ್ಯ ಚರಂಡಿಗಳು, ರಸ್ತೆಗಳು ಮತ್ತು ಸೇತುವೆಗಳು ಅಭಿವೃದ್ಧಿಗೊಂಡು ಪಟ್ಟಣ ಸುಧಾರಣೆ ಯಾಗುವುದರ ಜೊತೆಗೆ ದೂಳುಮುಕ್ತ ರಸ್ತೆಗಳಲ್ಲಿ ಸರಾಗವಾಗಿ ಓಡಾಡಬಹುದು. ಕೊಳಚೆಯಿಂದ ತುಂಬಿರುವ ಗಟಾರುಗಳಿಂದ ಮುಕ್ತಿ ಸಿಗುತ್ತದೆ ಎಂದು ಕನಸು ಕಂಡಿದ್ದ ಸ್ಥಳೀಯುರಿಗೆ ನೀರು ಹರಿಯದ ಗಟಾರ, ಕಿತ್ತು ಹೋಗುತ್ತಿರುವ ಕಾಂಕ್ರೀಟ್ ರಸ್ತೆಗಳನ್ನು ಕಂಡು ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

ಪಟ್ಟಣದಲ್ಲಿ ಕಾಮಗಾರಿ ನಡೆಯುತ್ತಿದ್ದಾಗ ಸ್ಥಳಿಯರೇ ಆಸಕ್ತಿ ವಹಿಸಿ ಸದಸ್ಯರ ಗಮನಕ್ಕೆ ತಂದಾಗ ‘ಸ್ಥಳೀಯ ಆಡಳಿತದಿಂದ  ಕಾಮಗಾರಿ ನಡೆಯುತ್ತಿಲ್ಲ. ನಗರೋತ್ಥಾನ ಯೋಜನೆಯಡಿ ನಡೆಯುತ್ತಿದೆ’ ಎಂದು ಉತ್ತರ ನೀಡುತ್ತಾರೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೆ ‘ಥರ್ಡ್‌ ಪಾರ್ಟಿ ಕಾಮಗಾರಿ ಪರಿಶೀಲಿಸುತ್ತಾರೆ’ ಎಂದು ಹೇಳಿ ಜಾರಿಕೊಳ್ಳುತ್ತಾರೆ.  ‘ಆದರೆ, ಕಳಪೆ ಕಾಮಗಾರಿಗೆ ಯಾರು ಹೊಣೆ’ ಎಂಬುದು ನಾಗರಿಕರ ಪ್ರಶ್ನೆ.

ಅವೈಜ್ಞಾನಿಕ ರಸ್ತೆ, ಗಟಾರುಗಳ ನಿರ್ಮಾಣ:  ಚರಂಡಿಗಳನ್ನು ಮನೆ ಬಾಗಿಲುಗಳಿಗಿಂತ ಎತ್ತರಕ್ಕೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇಕ್ಕಟ್ಟಾದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಗಟಾರಿನಲ್ಲಿ ಬೀಳುತ್ತಿರುವುದು ಒಂದೆಡೆ'ಯಾದರೆ, ಮತ್ತೊಂದೆಡೆ ರಸ್ತೆಗಿಂತ ಮನೆ ಬಾಗಿಲು ಕೆಳಗೆ ಇರುವುದರಿಂದ ಮಳೆ ನೀರು ಸರಾಗವಾಗಿ ಒಳಗೆ ನುಗ್ಗುತ್ತದೆ.

ಕಳಪೆ ಕಾಮಗಾರಿಗಳು:  ‘ಪಟ್ಟಣದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಗಟಾರುಗಳ ನಿರ್ಮಾಣದಲ್ಲಿ ಉಸುಕು ಬದಲಾಗಿ ಕಲ್ಲಿನ ಪುಡಿಯನ್ನೇ ಹೆಚ್ಚಾಗಿ ಬಳಕೆ ಮಾಡಿರುವುದರಿಂದ ಕಾಮಗಾರಿ ಕಳಪೆಯಿಂದ ಕೂಡಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT