ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ತಾತನ ಮನೆಯೇ ‘ಮಕ್ಕಳ ಲೋಕ’

Last Updated 24 ಏಪ್ರಿಲ್ 2017, 5:13 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿಗೆ ಬರುವ ಮಕ್ಕಳದ್ದು ಸ್ಪಷ್ಟ ಉಚ್ಚಾರಣೆ, ತಪ್ಪಿಲ್ಲದ ಬರಹ, ಶ್ರುತಿ ತಪ್ಪದ ಗಾಯನ, ಲಯ ತಪ್ಪದ ನೃತ್ಯ. ಇದು ‘ಮಕ್ಕಳ ಲೋಕ’ದ ಚಮತ್ಕಾರ.

ಮಕ್ಕಳಿಗೆಲ್ಲ ‘ಸ್ವಾಮಿ ತಾತ’ನೇ ಆಗಿರುವ ಕೆ.ಎನ್‌.ಸ್ವಾಮಿ ಹುಟ್ಟು ಹಾಕಿದ್ದೇ ಈ ಮಕ್ಕಳ ಲೋಕ. ಇಲ್ಲಿ ಮಕ್ಕಳು ಕನ್ನಡ ಭಾಷೆಯನ್ನು ತಪ್ಪಿಲ್ಲದೆ ಸರಾಗವಾಗಿ ಮಾತನಾಡುತ್ತಾರೆ, ಓದು ತ್ತಾರೆ, ಬರೆಯುತ್ತಾರೆ ಕೂಡ. ಇದರ ಲ್ಲೇನು ಹೆಚ್ಚುಗಾರಿಕೆ ಅನ್ನಿಸಬಹುದು. ಆದರೆ, ಈ ‘ಮಕ್ಕಳ ಲೋಕ’ ದಲ್ಲಿರುವ ಬಹುತೇಕರು ಕಾರ್ಮಿಕರ ಮಕ್ಕಳು.

ಮಕ್ಕಳ ಲೋಕ ನಗರದ ನಿಟುವಳ್ಳಿಯ ಹೊಸ ಬಡಾವಣೆಯ ಎಚ್‌.ಕೆ.ಆರ್‌.ವೃತ್ತದ ಸಮೀಪದಲ್ಲಿದೆ. ಸ್ವಾಮಿ ಅವರ ಮನೆಯೇ ಮಕ್ಕಳ ಲೋಕ. ಈ ಮನೆಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲ ಪೇಂಟಿಂಗ್, ಗಾರೆ, ಕ್ಷೌರಿಕ ಕೆಲಸ ಮಾಡುತ್ತಿದ್ದಾರೆ. ತಮ್ಮ ಮಕ್ಕಳ ಶಾಲಾ ಓದಿಗೆ ಹೊರತಾದ ಕಲಿಕೆಗೆ ಗಮನ ಕೊಡಲು ಇವರ್‍್ಯಾರಿಗೂ ಸಾಧ್ಯವಾಗು ತ್ತಿಲ್ಲ. ಇವರ ಮಕ್ಕಳಿಗೀಗ ಸ್ವಾಮಿ ಅವರ ಲೋಕ ಆಶಾಕಿರಣವಾಗಿದೆ.

ಪ್ರತಿ ಶನಿವಾರ, ಭಾನುವಾರ ಸಂಜೆ 5ರಿಂದ 6.30ರವರೆಗೆ ಈ ಲೋಕ ತೆರೆದುಕೊಳ್ಳುತ್ತದೆ. ಆರಂಭದಲ್ಲಿ ಕನ್ನಡ ಪುಸ್ತಕ ಓದುವ ಚಟುವಟಿಕೆ. ನಂತರ ಬರೆಯುವುದು, ಕವನ ವಾಚನ. ಅದಕ್ಕೆ ಸಂಗೀತ ಅಳವಡಿಸಿ ಹಾಡುವುದು, ನೃತ್ಯ ಸಂಯೋಜಿಸುವುದು ಕೂಡ ನಡೆಯುತ್ತವೆ.

ಇವೆಲ್ಲವನ್ನೂ ಸ್ವಾಮಿ ಅವರೇ ಮಾಡುತ್ತಾರೆ. ತಪ್ಪಿಲ್ಲದ ಉಚ್ಚಾರಣೆಗೆ, ಬರವಣಿಗೆ, ಗಾಯನ, ನೃತ್ಯಗಳಿಗೆ ತಿಂಗಳಿಗೊಮ್ಮೆ ಪ್ರತ್ಯೇಕ ಬಹುಮಾನ ನೀಡುವ ಸಂಪ್ರದಾಯವಿದೆ. 

ಈ ಚಟುವಟಿಕೆಗಳ ಜತೆಗೆ ಹಬ್ಬ–ಹರಿದಿನಗಳಲ್ಲಿ ರಂಗೋಲಿ, ಚಿತ್ರಕಲೆ ಬಿಡಿಸುವುದು ನಡೆಯುತ್ತವೆ. ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭಗಳಲ್ಲಿ   ‘ಮಕ್ಕಳ ಲೋಕ’ದ ಮಕ್ಕಳಿಗೆ ಅತಿಥಿಗಳಾಗುವ ಅವಕಾಶ ಎದುರಾಗು ತ್ತದೆ. ತಂಡವಾಗಿ ಹೋಗಿ ಹಾಡು, ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಾರೆ. ಸ್ಪರ್ಧೆಗಳಿದ್ದರೆ ಈ ಮಕ್ಕಳಿಗೆ ಬಹುಮಾನ ಖಚಿತ.

‘ಮಕ್ಕಳ ಲೋಕ’ ಸ್ಥಾಪನೆಗೆ ತುಮ ಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರೇ ಪ್ರೇರಣೆ. ಮಠದ ಶಾಲೆಯಲ್ಲಿ ವ್ಯಾಸಂಗ ಮಾಡಿ, ಅಲ್ಲಿಯೇ ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಕೆ.ಎನ್‌.ಸ್ವಾಮಿ ಅವರಿಗೆ ‘ಬಡ ಮಕ್ಕಳಿಗೆ ಸಹಾಯ ಮಾಡು’ ಎಂದು ಸ್ವಾಮೀಜಿ ಹೇಳಿದ್ದ ಮಾತೇ ಮಾರ್ಗದರ್ಶನ ವಾಯಿತು. ಅದ ರಂತೆ 2009ರಲ್ಲಿ ಮಕ್ಕಳ ಲೋಕ ಸ್ಥಾಪಿತವಾಯಿತು.

ಸ್ವಾಮಿ ಅವರ ಹುಟ್ಟೂರು ತುಮ ಕೂರು ಸಮೀಪದ ಕ್ಯಾತಸಂದ್ರ.  ರಾಜ್ಯದ ವಿವಿಧೆಡೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ದಾವಣಗೆರೆಯಲ್ಲಿ ಈಗ ನಿವೃತ್ತ ಜೀವನ ಕಳೆಯುತ್ತಿದ್ದಾರೆ. ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಒಂದು ಕವನ ಸಂಕಲನ, ಎರಡು ಪ್ರಬಂಧ ಸಂಕಲನ ಗಳು, ಹಲವು ಕಥೆಗಳನ್ನು ಬರೆದಿರುವ ಸ್ವಾಮಿ ಅವರಿಗೆ ಈಗ 80ರ ಹರೆಯ.

‘ಮಕ್ಕಳ ಲೋಕಕ್ಕೆ 64 ಮಕ್ಕಳು ಸದಸ್ಯರಾಗಿದ್ದಾರೆ. 9 ಶಾಲೆಗಳ ಮಕ್ಕಳು ಇಲ್ಲಿಗೆ ಬರುತ್ತಾರೆ. ಮಕ್ಕಳ ಈ ಚಟುವಟಿಕೆ ಕಂಡು ವಿವಿಧ ಸಂಘ–ಸಂಸ್ಥೆಗಳು ನೆರವಿನ ಹಸ್ತ ಚಾಚಿವೆ. ಧ್ವನಿವರ್ಧಕ ಉಚಿತವಾಗಿ ಸಿಕ್ಕಿದೆ. ಬಹುಮಾನಗಳ ಪ್ರಾಯೋಜಕತ್ವ ವಹಿಸಿ ಕೊಳ್ಳುತ್ತವೆ. ಸಂಗೀತ ಶಿಕ್ಷಕಿಯೊಬ್ಬರು ಉಚಿತ ತರಬೇತಿ ನೀಡುತ್ತಾರೆ. ಆಸಕ್ತರ ಒಂದು ಗುಂಪು ನನ್ನೊಂದಿಗಿದೆ’ ಎನ್ನುತ್ತಾರೆ ಕೆ.ಎನ್.ಸ್ವಾಮಿ.

‘ಮಕ್ಕಳ ಲೋಕಕ್ಕೆ ಈಚೆಗೆ ಭೇಟಿ ನೀಡಿದ್ದೆ. ಅಲ್ಲಿನ ಚಟುವಟಿಕೆಗಳು ಗಮನ ಸೆಳೆದವು. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಸ್ವಾಮಿ ಅವರ ಕಾರ್ಯ ಶ್ಲಾಘನೀಯ. ಪ್ರತಿ ಬಡಾ ವಣೆಯಲ್ಲೂ ಇಂತಹ ಲೋಕಗಳು ಸೃಷ್ಟಿ ಯಾಗಬೇಕು’ ಎನ್ನುತ್ತಾರೆ ಲೇಖಕ ನಾಗರಾಜ ಸಿರಿಗೆರೆ.

**

ಮಕ್ಕಳ ಲೋಕಕ್ಕೆ ಸೇರಿದ ಮೇಲೆ ವೇದಿಕೆಯಲ್ಲಿ ಧೈರ್ಯದಿಂದ ಮಾತಾ ಡುವುದನ್ನು ಕಲಿತೆ. ಸ್ಪಷ್ಟ ಉಚ್ಚಾರಣೆ, ಸಂಗೀತ ಕಲಿಕೆಗೆ ಇದು ನೆರವಾಗುತ್ತಿದೆ.
–ವೈಷ್ಣವಿ ಆರ್.ಭಾರದ್ವಾಜ್, ಬಾಲ ಪ್ರತಿಭೆ

**

ಮಕ್ಕಳ ಲೋಕಕ್ಕೆ ಒಂದು ವಾರವೂ ತಪ್ಪಿಸಿಲ್ಲ. ಇಲ್ಲಿಗೆ ಬರಲು ಖುಷಿಯಾ ಗುತ್ತೆ. ಇಲ್ಲಿ ಆಟದ ಜತೆಗೆ ಸ್ವಾಮಿ ತಾತನ ಹಿತನುಡಿ ಕೇಳುವ ಅವಕಾಶ ಸಿಗುತ್ತೆ.
–ಶಶಾಂಕ್, ಬಾಲ ಪ್ರತಿಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT