ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತಿ ಕೈಚಳಕದಲಿ ಮೂಡಿದ ಕ್ರಿಕೆಟ್‌ ಬ್ಯಾಟ್‌

Last Updated 24 ಏಪ್ರಿಲ್ 2017, 5:17 IST
ಅಕ್ಷರ ಗಾತ್ರ

ಶಿವಮೊಗ್ಗ: ಸವಳಂಗ ರಸ್ತೆಯಲ್ಲಿ ಬೀಡುಬಿಟ್ಟಿರುವ ಗುಜರಾತ್ ಮೂಲದ ಅಲೆಮಾರಿ ಕುಟುಂಬ ತಯಾರಿಸುವ  ಕ್ರಿಕೆಟ್‌ ಬ್ಯಾಟ್‌ಗಳು ಸಾರ್ವಜನಿಕರ ಆಕರ್ಷಿಸುತ್ತಿವೆ.

ಗುಜರಾತ್‌ ರಾಜ್ಯದ ಆನಂದ್ ಜಿಲ್ಲೆಯ 6 ಕುಟುಂಬಗಳ ಸುಮಾರು 40 ಮಂದಿ ಸದಸ್ಯರು ಕ್ರಿಕೆಟ್ ಆಟಕ್ಕೆ ಅಗತ್ಯವಿರುವ ಬ್ಯಾಟ್, ವಿಕೆಟ್, ಬೇಲ್ಸ್‌ಗಳನ್ನು ತಯಾರಿಸುತ್ತಿದ್ದಾರೆ. ಪರೀಕ್ಷೆ ಮುಗಿಸಿ, ಬೇಸಿಗೆ ರಜೆಯ ಸಂತಸ ಅನುಭವಿಸುತ್ತಿರುವ ಮಕ್ಕಳು ಗುಜರಾತಿಗಳ ಬ್ಯಾಟ್ ತಯಾರಿಕೆ ಕಾರ್ಯ ನೋಡಿ, ಬ್ಯಾಟ್–ವಿಕೆಟ್ ಕೊಡಿಸುವಂತೆ ತಮ್ಮ ಪೋಷಕರಿಗೆ ದುಂಬಾಲು ಬೀಳುತ್ತಿದ್ದಾರೆ.

ಇವರ ಬಳಿ ಗಾತ್ರ ಹಾಗೂ ಗುಣಮಟ್ಟಕ್ಕೆ ಅನುಗುಣವಾಗಿ ₹ 75 ರಿಂದ ₹ 450ರವರೆಗೆ ಬ್ಯಾಟ್‌ಗಳು ಲಭ್ಯವಿದೆ. ವಿಕೆಟ್‌ಗಳು ₹ 150 ರಿಂದ ₹ 250 ಹಾಗೂ ಬೇಲ್ಸ್‌ಗಳು ₹ 20 ರಿಂದ ₹ 30ವವರೆಗೂ ಮಾರಾಟವಾಗುತ್ತಿವೆ. ಒಂದು ಅಡಿ ಬ್ಯಾಟ್‌ನಿಂದ, ಮೂರುವರೆ ಅಡಿ ಉದ್ದದವರೆಗಿನ ಬ್ಯಾಟ್‌ಗಳು ಅವರ ಬಳಿ ಲಭ್ಯ.

ಎಂಆರ್‌ಎಫ್, ರಿಬಾಕ್, ನೈಕ್, ಅಡಿಡಾಸ್, ಸ್ಪರ್ಟೈನ್, ಕಿಂಗ್ ಫಿಷರ್, ರಾಯಲ್ ಚಾಲೆಂಚ್ ಕ್ರೀಡಾ ಕಂಪೆನಿ ಹೆಸರುಗಳಿರುವ ಸ್ಟಿಕ್ಕರ್ ಅಂಟಿಸಿದ ಬ್ಯಾಟ್‌ಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.

‘ಗುಜರಾತ್ ಬ್ಯಾಟ್‌ಗಳಿಗೆ ಕರ್ನಾಟಕದಲ್ಲಿ ಹೆಚ್ಚು ಬೇಡಿಕೆ ಇದೆ. 15 ವರ್ಷಗಳಿಂದ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದೇವೆ. ಇಲ್ಲಿಯ ಜನರು ಕ್ರಿಕೆಟ್‌ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾರೆ. ಗುಲಾಲಿಂ, ಮಾಳೋವ್, ಪೈಂಡ್ ಸೇರಿದ ಇತರೆ ಕಾಡು ಜಾತಿಯ ಮರದ ತುಂಡುಗಳನ್ನು ಉಪಯೋಗಿಸಿ ಬ್ಯಾಟ್ ತಯಾರು ಮಾಡುತ್ತೇವೆ. ದಿನವೊಂದಕ್ಕೆ ಸುಮಾರು 20 ರಿಂದ 30 ಬ್ಯಾಟ್‌ ತಯಾರಿಸಲಾಗುತ್ತದೆ. ಈಚಿನ ದಿನಗಳಲ್ಲಿ ಶಿವಮೊಗ್ಗದಲ್ಲೂ 40 ಡಿಗ್ರಿ ಗರಿಷ್ಠ ಬಿಸಿಲಿನ ತಾಪಮಾನ ಇದೆ. ಪರಿಣಾಮ ಪೋಷಕರು ಮಕ್ಕಳಿಗೆ ಹೊರಗೆ ಆಟವಾಡಲು ಅವಕಾಶ ನೀಡುತ್ತಿಲ್ಲ. ಇದರಿಂದ ವ್ಯಾಪಾರಕ್ಕೆ ಸ್ವಲ್ಪ ಹಿನ್ನಡೆಯಾಗಿದೆ’ ಎಂದು ಮಾಹಿತಿ ನೀಡುತ್ತಾರೆ ವ್ಯಾಪಾರಿ ದಿನೇಶ್.

‘ಬೇಸಿಗೆ ರಜೆ ಪ್ರಾರಂಭವಾಗುವ 6 ತಿಂಗಳ ಮೊದಲೇ ಕುಟುಂಬಗಳ ಜತೆ ಶಿವಮೊಗ್ಗ ನಗರಕ್ಕೆ ಬರುತ್ತೇವೆ. ಬಿದಿರಿನ ಟೆಂಟ್‌ಗೆ ಸೋಲಾರ್ ವಿದ್ಯುತ್ ಅಳವಡಿಸಿಕೊಂಡು ಬ್ಯಾಟ್ ತಯಾರಿಕೆಯಲ್ಲಿ ತೊಡಗಿದ್ದೇವೆ. ಕೆಲ ಗ್ರಾಹಕರು ಚೌಕಾಸಿ ಮಾಡುತ್ತಾರೆ. ನಾವು ತೊಡಗಿಸಿದ ಬಂಡವಾಳ, ಶ್ರಮ ಗ್ರಾಹಕರಿಗೆ  ಅರ್ಥವಾಗುವುದಿಲ್ಲ. ಗುಜರಾತ್‌ನಿಂದ ಬ್ಯಾಟ್‌ನ ಕಚ್ಛಾವಸ್ತುಗಳನ್ನು ಒಂದು ಬಾರಿ ನಗರಕ್ಕೆ ತರಲು ₹ 80 ಸಾವಿರ ತಗಲುತ್ತದೆ. ಲಾಭದ ಅರ್ಧದಷ್ಟು ಸಾರಿಗೆ ವೆಚ್ಚಕ್ಕೇ ಭರಿಸಬೇಕು’ ಎನ್ನುತ್ತಾರೆ ಬ್ಯಾಟ್‌ ತಯಾರಿಸುವ ಉಸ್ತುವಾರಿ ನೋಡಿಕೊಳ್ಳುವ ಮಂಜುಳಾ.
‘ಉತ್ತಮ ಗುಣಮಟ್ಟದ ಬ್ಯಾಟ್‌ಗಳು ಕಡಿಮೆ ಬೆಲೆಗೆ ದೊರಕುವ ಕಾರಣ ಟೆಂಟ್‌ ಬಳಿಯೇ ಆಗಮಿಸಿ, ಬ್ಯಾಟ್‌ ಖರೀದಿಸುತ್ತಿದ್ದೇನೆ’ ಎಂದು ಮಾಹಿತಿ ನೀಡಿದರು ಖಾಸಗಿ ಕಂಪೆನಿ ಉದ್ಯೋಗಿ ಶಿವಕುಮಾರ್.

‘ವಿಶಿಷ್ಟ ಸ್ಟಿಕ್ಕರ್ ಹೊಂದಿರುವ ಹಗುರ ಹಾಗೂ ತೂಕದ ಬ್ಯಾಟ್‌ಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಆದ್ದರಿಂದ ನಾನು ಮತ್ತು ನನ್ನ ಗೆಳೆಯರು ಸವಳಂಗ ರಸ್ತೆಯ ಈ ಗುಜರಾತಿ ಕುಟುಂಬ ತಯಾರಿಸುವ ಕ್ರಿಕೆಟ್‌ ಬ್ಯಾಟ್‌ಗಳನ್ನೇ ಖರೀದಿಸುತ್ತೇವೆ’ ಎನ್ನುತ್ತಾರೆ ಖಾಸಗಿ ಉದ್ಯೋಗಿ ಕಿರಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT