ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

614 ಮಂದಿಗೆ ಸ್ಥಳದಲ್ಲೇ ಆದೇಶಪತ್ರ

Last Updated 24 ಏಪ್ರಿಲ್ 2017, 5:26 IST
ಅಕ್ಷರ ಗಾತ್ರ

ಕೋಲಾರ: ನಗರದ ಸಿ.ಬೈರೇಗೌಡ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಎರಡು ದಿನಗಳಿಂದ ನಡೆದ ಬೃಹತ್‌ ಉದ್ಯೋಗ ಮೇಳಕ್ಕೆ ಉದ್ಯೋಗ ಆಕಾಂಕ್ಷಿಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾವಿರಾರು ನಿರುದ್ಯೋಗಿಗಳು ಮೇಳದಲ್ಲಿ ಪಾಲ್ಗೊಂಡು ಉದ್ಯೋಗಾವಕಾಶ ಗಿಟ್ಟಿಸಿಕೊಂಡರು.

ಮೇಳದಲ್ಲಿ 130 ಕಂಪೆನಿಗಳ ಪ್ರತಿನಿಧಿಗಳು ಪಾಲ್ಗೊಂಡು ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿ­ ಸಂದರ್ಶನ ನಡೆಸಿದರು. ಒಟ್ಟಾರೆ ಎರಡು ದಿನದ ಮೇಳದಲ್ಲಿ 14,000 ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡರು. ಈ ಪೈಕಿ 614 ಮಂದಿಯನ್ನು ಕಂಪೆನಿಗಳ ಪ್ರತಿನಿಧಿಗಳು ಕೆಲಸಕ್ಕೆ ಆಯ್ಕೆ ಮಾಡಿ ಸ್ಥಳದಲ್ಲೇ ನೇಮಕಾತಿ ಆದೇಶಪತ್ರ ನೀಡಿದರು.
4,673 ಅಭ್ಯರ್ಥಿಗಳನ್ನು ಕಾಯ್ದಿರಿಸಿದ ಪಟ್ಟಿಗೆ ಸೇರಿಸಲಾಗಿದ್ದು, ಅವರಿಗೆ ಮೂರ್‌್ನಾಲ್ಕು ದಿನದೊಳಗೆ ಕೆಲಸದ ಆದೇಶಪತ್ರ ಕಳುಹಿಸುವುದಾಗಿ ಕಂಪೆನಿಗಳ ಪ್ರತಿನಿಧಿಗಳು ಭರವಸೆ ನೀಡಿದರು. ಮೇಳದಲ್ಲಿ ಉದ್ಯೋಗಾವಕಾಶ ಸಿಗದೆ ಬೇಸರಗೊಂಡ ಅಭ್ಯರ್ಥಿಗಳು ನಿರಾಸೆಯಿಂದ ಮನೆಗೆ ಹಿಂದಿರುಗಿದರು.

ಉತ್ತಮ ಭವಿಷ್ಯ: ಭಾನುವಾರ ಸಂಜೆ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್, ‘ಒಬ್ಬ ನಿರುದ್ಯೋಗಿಗೆ ಕೆಲಸ ಸಿಕ್ಕಿದರೆ ಕುಟುಂಬದ ಸದಸ್ಯರೆಲ್ಲಾ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಮೇಳದಲ್ಲಿ ಉದ್ಯೋಗಾವಕಾಶ ಪಡೆದವರು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ಉನ್ನತ ಸಾಧನೆ: ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಮಾತನಾಡಿ, ‘ಕೆಲಸದ ಆರಂಭದ ದಿನಗಳಲ್ಲಿ ಕಷ್ಟ ಎನಿಸಬಹುದು. ಆದರೆ, ಇದನ್ನೇ ಸವಾಲಾಗಿ ಸ್ವೀಕರಿಸಿ ಹೆಜ್ಜೆ ಹಾಕಿದರೆ ಮುಂದಿನ ದಿನಗಳಲ್ಲಿ ಉನ್ನತ ಸಾಧನೆ ಮಾಡಬಹುದು. ಕೆಲಸ ದೊರೆಯದ ಕಷ್ಟದ ದಿನಗಳಲ್ಲಿ ಕೆಲಸ ಸಿಕ್ಕಿದೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಬಹಳ ಮುಖ್ಯ. ಮೇಳದಲ್ಲಿ ಕೆಲಸ ಸಿಗದೆ ಬೇಸರಗೊಂಡಿರುವ ಅಭ್ಯರ್ಥಿಗಳಿಗೆ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಕೆಲಸ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ಸಿ.ಎನ್.ಮಂಜುನಾಥ್, ಸಿ.ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ, ಖಜಾಂಚಿ ಡಾ.ಪ್ರಭಾಕರ್‌ರೆಡ್ಡಿ, ಕೈಗಾರಿಕಾ ಇಲಾಖೆ ಜಂಟಿ ಕಾರ್ಯದರ್ಶಿ ಸುರೇಶ್, ಕೈಗಾರಿಕೆಗಳ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ದೀಕ್ಷಿತ್‌, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಪ್ರಕಾಶ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆಸುವ ಅನಿವಾರ್ಯತೆಯಿತ್ತು. ಈ ಮೇಳದಿಂದ ಸಾಕಷ್ಟು ಮಂದಿಗೆ ಕೆಲಸ ಸಿಕ್ಕಿದೆ.
–ಕೆ.ಆರ್‌.ರಮೇಶ್‌ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT