ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಹಕ್ಕುಪತ್ರ, ಕ್ರಾಂತಿಕಾರಕ ಹೆಜ್ಜೆ: ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಹೇಳಿಕೆ

Last Updated 24 ಏಪ್ರಿಲ್ 2017, 5:58 IST
ಅಕ್ಷರ ಗಾತ್ರ

ಮಡಿಕೇರಿ:  ‘ರಾಜ್ಯ ಸರ್ಕಾರವು ಬಡವರ ವಾಸದ ಮನೆಗೆ ಹಾಗೂ ಸಾಗುವಳಿ ಜಮೀನಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿರುವುದು ಕ್ರಾಂತಿಕಾರಕ ಹೆಜ್ಜೆಯಾಗಿದೆ’ ಎಂದು ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್‌ ಹೇಳಿದರು.

ನಗರದ ಕಾವೇರಿ ಹಾಲ್‌ನಲ್ಲಿ ಭಾನುವಾರ ಅಲ್‌ ಅಮೀನ್‌ ಕೊಡಗು ಜಿಲ್ಲಾ ಸಮಿತಿ ಆಯೋಜಿಸಿದ್ದ 11ನೇ ವರ್ಷದ ಸರಳ ಸಾಮೂಹಿಕ ವಿವಾಹ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೆ ದೇವರಾಜ ಅರಸು ಅವರು ಉಳುವವನೇ ಭೂಮಿ ಒಡೆಯ ಕಾಯ್ದೆ ಜಾರಿಗೆ ತಂದು ಸಾವಿರಾರು ಕುಟುಂಬಕ್ಕೆ ಅನುಕೂಲ ಮಾಡಿದ್ದರು. ಆ ಬಳಿಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಡವರ ಏಳ್ಗೆಗೆಗೆ ಅನುಕೂಲ ಮಾಡಿಕೊಟ್ಟಿದೆ. ಹಲವು ವರ್ಷಗಳಿಂದ ಪೈಸಾರಿ, ಗೋಮಾಳ ಹಾಗೂ ಸರ್ಕಾರಿ ಜಾಗದಲ್ಲಿ ವಾಸಮಾಡುತ್ತಿದ್ದವರಿಗೆ ಹಕ್ಕುಪತ್ರಗಳೇ ಇರಲಿಲ್ಲ. ತಮ್ಮದು ಎಂದು ಹೇಳಿಕೊಳ್ಳಲು ಜಮೀನು ಇರಲಿಲ್ಲ. ಇದೀಗ ಸ್ವಂತ ಹಕ್ಕು ಪಡೆಯುವ ಅವಕಾಶ ಲಭಿಸಿದ್ದು, ಸಮುದಾಯದ ಬಂಧುಗಳು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಕೋರಿದರು.

ಇಂತಹ ಸಾಮೂಹಿಕ ವಿವಾಹಕ್ಕೆ ಶ್ರೀಮಂತರು ಸಹಕಾರ ನೀಡಿದರೆ ಮಾತ್ರ ಸಮಾಜಮುಖಿ ಕಾರ್ಯಕ್ರಮ ನಡೆಸಲು ಸಂಘ– ಸಂಸ್ಥೆಗಳಿಗೆ ಸಾಧ್ಯವಾಗಲಿದೆ. ದೇವರು ಕೊಟ್ಟಿದ್ದನ್ನು ಬಡವರಿಗೆ ಹಂಚಿಕೆ ಮಾಡಿದರೆ ಮತ್ತಷ್ಟು ಶ್ರೇಯಸ್ಸು ಲಭಿಸಲಿದೆ. ಬಡವರಿಗೆ ಸಹಾಯ ಮಾಡುವ ಕಾರ್ಯವನ್ನು ಎಂದಿಗೂ ಮುಂದೂಡಬಾರದು ಎಂದು ಹೇಳಿದರು.

ಮುಸ್ಲಿಂ ಸಮಾಜದಲ್ಲಿ ಒಗ್ಗಟ್ಟು ಅಗತ್ಯ. ನಾವೆಲ್ಲ ಒಂದಾಗಿದ್ದರೆ ಸಮಾಜದ ಶ್ರೇಯೋಭಿವೃದ್ಧಿ ಸಾಧ್ಯವಾಗಲಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಮನೆ ಬೆಳಗಲಿದೆ. ಧಾರ್ಮಿಕ ಜ್ಞಾನ ಎಲ್ಲಿ ಬೇಕಾದರೂ ಸಿಗಲಿದೆ. ಲೌಕಿಕ ಜ್ಞಾನ ಲಭಿಸುವುದು ಕಷ್ಟ. ಪ್ರತಿಯೊಬ್ಬರು ಲೌಕಿಕ ಜ್ಞಾನ ಅಗತ್ಯ ಎಂದು ಪ್ರತಿಪಾದಿಸಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ, 11 ವರ್ಷಗಳಿಂದ ಸರಳ ಸಾಮೂಹಿಕ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ವಿಚಾರ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಎಲ್ಲ ಧರ್ಮಗಳಲ್ಲೂ ಬಡವರು ಇದ್ದಾರೆ. ಅವರದೇ ಸಮಾಜದವರು ಬಡವರಿಗೆ ಸಹಾಯ ಮಾಡಿದರೆ ಅವರೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದು ಹೇಳಿದರು.

ಆರ್ಥಿಕ ಮುಗ್ಗಟ್ಟಿನಿಂದ ಎಷ್ಟೋ ಕುಟುಂಬಗಳ ಹೆಣ್ಣು ಮಕ್ಕಳು ಮದುವೆಗೆ ಅಡ್ಡಿ ಉಂಟಾಗುತ್ತಿತ್ತು. ಇದನ್ನು ಹೋಗಲಾಡಿಸಲು ಬಿದಾಯಿ ಯೋಜನೆ ಜಾರಿಗೆ ತರಲಾಯಿತು. ಇದುವರೆಗೂ ಜಿಲ್ಲೆಯಲ್ಲಿ 400 ಮಂದಿ ಬಿದಾಯಿ ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದು, ಮತ್ತೆ 100 ಜನರಿಗೆ ವಿತರಿಸುವ ಗುರಿಯಿದೆ ಎಂದು ಸಚಿವರು ಹೇಳಿದರು. ಇದೇ ವೇಳೆ ಸಮಿತಿಗೆ ₹ 1 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.

ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್‌ ಡಿಸೋಜ ಮಾತನಾಡಿ, ಕಡು ಬಡವರನ್ನು ಗುರುತಿಸಿ ಸಾಮೂಹಿಕ ವಿವಾಹ ನಡೆಸುತ್ತಿರುವುದು ಅತ್ಯುತ್ತಮ ಕೆಲಸ. ಸಂಸ್ಥೆ ಮತ್ತಷ್ಟು ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳುವ ಮೂಲಕ ಬಡ ಕುಟುಂಬಗಳಿಗೆ ನೆರವಾಗಲಿ ಎಂದು ಹೇಳಿದರು.

‘ಶ್ರೀಮಂತರಿಗೆ ಮದುವೆ ಆಗಲು ತೊಂದರೆ ಇಲ್ಲ. ಬಡ ಕುಟುಂಬದ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಮದುವೆಯಾಗಲು ಇಂದಿಗೂ ಆರ್ಥಿಕ ತೊಂದರೆಯಿದೆ. ಮದುವೆಯಲ್ಲಿ ವೈಭೋಗ ಪ್ರದರ್ಶನ ಒಳ್ಳೆಯ ಬೆಳವಣಿಗೆ ಅಲ್ಲ. ನಾನು ಸರಳ ವಿವಾಹವಾದೆ. ಇಂದಿಗೂ ನನಗೆ ಆ ಹೆಮ್ಮೆ, ಸಂತೋಷವಿದೆ. ಸಂಸಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ. ತಾಳ್ಮೆಯಿಂದ ಪರಿಹರಿಸಿಕೊಳ್ಳುವುದು ಅಗತ್ಯ ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೆ.ಎಸ್‌. ಮುಕ್ತಾರ್‌ ತಂಞಳ್‌ ಕುಂಬೂಳ್‌, ಎಫ್‌.ಎ. ಮೊಹಮ್ಮದ್‌ ಹಾಜಿ, ಅಹಮ್ಮದ್‌ ನಹೀಂ, ಎಂ.ಎಚ್‌. ಅಬ್ದುಲ್‌ ರೆಹಮಾನ್‌, ಎಸ್‌. ಮಹಮ್ಮದ್‌ ಹಾಜಿ, ಡಿ.ಎಸ್‌. ಜಗದೀಶ್‌ ಹಾಜರಿದ್ದರು.

ಜಾತ್ಯತೀತ ನಿಲುವುಳ್ಳ ಮುಖಂಡರಿಗೆ ಸ್ವಾಗತ

ಮಡಿಕೇರಿ: ಜಾತ್ಯತೀತ ನಿಲುವುಳ್ಳ ಮುಖಂಡರು ಕಾಂಗ್ರೆಸ್‌ಗೆ ಬಂದರೆ ಮುಕ್ತ ಆಹ್ವಾನವಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌.ಸೀತಾರಾಂ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರದಲ್ಲಿ ಅಸಹಿಷ್ಣುತೆ ವಾತಾವರಣವಿದೆ; ಇದನ್ನು ಹೋಗಲಾಡಿಸಲು ಜಾತ್ಯತೀತ ಪಕ್ಷಗಳ ನಡುವೆ ಹೊಂದಾಣಿಕೆ ಅನಿವಾರ್ಯ. ಕೋಮುಶಕ್ತಿಗಳನ್ನು ದೂರವಿಡುವ ಕಾರ್ಯ ನಡೆಯಬೇಕು ಎಂದು ಪ್ರತಿಪಾದಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಹುದ್ದೆ ನೇಮಕ ವಿಚಾರ ಚರ್ಚೆಯಲ್ಲಿದೆ. ಸೂಕ್ತ ವ್ಯಕ್ತಿಯೊಬ್ಬರನ್ನು ಹೈಕಮಾಂಡ್‌ ಆಯ್ಕೆ ಮಾಡಲಿದೆ. ಇದಾದ ಬಳಿಕ ಕೊಡಗು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೂ ಸೂಕ್ತ ಅಭ್ಯರ್ಥಿಯನ್ನು ನೇಮಕ ಮಾಡಲಾಗುವುದು ಎಂದರು.

ಪಾಲೇಮಾಡು ಗ್ರಾಮದಲ್ಲಿ ಉಂಟಾಗಿರುವ ಬಿಗುವಿನ ವಾತಾವರಣ ಪೊಲೀಸರು ಸೂಕ್ತ ರೀತಿಯಲ್ಲಿ ಬಗೆಹರಿಸಲಿದ್ದಾರೆ. ಅಲ್ಲಿ ದೊಡ್ಡ ಬೆಳವಣಿಗೆಯೇನು ನಡೆದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹೆಣ್ಣೊಂದು ಕಲಿತರೆ ಕುಟುಂಬದಲ್ಲಿ ಬೆಳಕು ಕಾಣಲಿದೆ. ಮುಸ್ಲಿಂ ಸಮಾಜದವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು
-ಕೆ.ಎಂ. ಇಬ್ರಾಹಿಂ ಮಾಸ್ಟರ್‌, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT