ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಬಲ್ ಅಳವಡಿಕೆ: ವರ್ಷಾಂತ್ಯಕ್ಕೆ ಮುಕ್ತಾಯ ಸಾಧ್ಯತೆ

Last Updated 24 ಏಪ್ರಿಲ್ 2017, 6:00 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಹೆಸ್ಕಾಂನಿಂದ ಕೈಗೊಂಡಿರುವ ಯುಜಿ ಕೇಬಲ್‌ ಅಳವಡಿಕೆ (ಭೂಮಿಯಲ್ಲಿ ವಿದ್ಯುತ್‌ ಕೇಬಲ್‌ ಹಾಕುವುದು) ಕಾಮಗಾರಿ ಭರದಿಂದ ಸಾಗಿದೆ.
ಅವಘಡಗಳನ್ನು ತಡೆಯುವುದು, ಗುಣ­ಮಟ್ಟದ ವಿದ್ಯುತ್‌ ಪೂರೈಕೆ­ಯಾಗು­ವಂತೆ ಮಾಡುವುದು, ವಿತರಣೆ­ಯಲ್ಲಿನ ನಷ್ಟ ಹಾಗೂ ಪೋಲಾಗುವು­ದನ್ನು ತಡೆಯುವ ಸಲುವಾಗಿ ಕುಂದಾ­ನಗರಿಯಲ್ಲಿ ಪ್ರಸ್ತುತ ಇರುವ ಹೈಟೆನ್ಷನ್‌ ವಿದ್ಯುತ್ ತಂತಿಗಳ ಬದಲಿಗೆ ಭೂಮಿಯಲ್ಲೇ ವಿದ್ಯುತ್‌ ಕೇಬಲ್‌ ಅಳವಡಿಸುವ ಕಾರ್ಯ ಮಾಡಲಾಗುತ್ತಿದೆ.

ಇಂಧನ ಇಲಾಖೆ ನೀಡಿದ ₹ 380 ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ನಗರದಲ್ಲಿ ವಿದ್ಯುತ್‌ ಪೂರೈಕೆಗೆ ಒಟ್ಟು 58 ಫೀಡರ್‌ ಸ್ಥಾಪಿಸಲಾಗಿದೆ. ಇವುಗಳ ಪೈಕಿ ಉದ್ಯಮಬಾಗದ 6 ಫೀಡರ್‌ಗಳಲ್ಲಿ ಕೇಬಲ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಚಾರ್ಜಿಂಗ್‌ ಮಾಡಲಾಗುತ್ತಿದೆ ಹಾಗೂ ಪರೀಕ್ಷಾ ಕಾರ್ಯವನ್ನೂ ನಡೆಸಲಾಗುತ್ತಿದೆ. ರಾಮತೀರ್ಥನಗರದ 5 ಫೀಡರ್‌­ಗಳಲ್ಲೂ ಅಳವಡಿಕೆ ಪೂರ್ಣಗೊಂಡಿದೆ.

ಮೂರು ಪ್ಯಾಕೇಜ್‌ಗಳಲ್ಲಿ: ‘ಯುಜಿ ಕೇಬಲ್ ಅಳವಡಿಕೆ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದೆ. ನಗರದ ಹೃದಯ ಭಾಗದಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಬಹುತೇಕ ರಾತ್ರಿಗಳಲ್ಲಿಯೇ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮೂರು ಪ್ಯಾಕೇ­ಜ್‌­ಗಳಲ್ಲಿ ಗುಂಡಿ ತೆಗೆಯುವ ಹಾಗೂ ಕೇಬಲ್‌ ಹಾಕುವ ಕೆಲಸ ನಡೆಸ­ಲಾಗುತ್ತಿದೆ. ಗುಂಡಿ ತೆಗೆದು ನಿಗದಿತ ಕೇಬಲ್‌ಗಳನ್ನು ಇಲ್ಲಿ ಅಳವಡಿಸಿ, ಗುಂಡಿ ಮುಚ್ಚಲಾಗು­ವುದು. ಒಂದು ಮಾರ್ಗದ ಕೇಬಲ್‌ ವಿಫಲವಾದರೆ, ಇನ್ನೊಂದರಲ್ಲಿ ವಿದ್ಯುತ್‌ ಪೂರೈಸು­ವುದಕ್ಕೆ ಸಾಧ್ಯವಾಗುವಂತೆ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ’ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಟಿ. ಅಪ್ಪಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘2016ರ ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಪ್ಯಾಕೇಜ್‌–1 ಹಾಗೂ 2ರಲ್ಲಿ ಶೇ 60ರಿಂದ 65 ಹಾಗೂ ಪ್ಯಾಕೇಜ್‌ 3ರಲ್ಲಿ ಶೇ 90ರಷ್ಟು ಪ್ರದೇಶಗಳಲ್ಲಿ ಕೇಬಲ್ ಹಾಕುವ ಕೆಲಸ ಪೂರ್ಣಗೊಂಡಿದೆ. ನಗರದಾದ್ಯಂತ ಕೇಬಲ್‌ ಅಳವಡಿಸುವ ಕಾರ್ಯ ಪೂರ್ಣಗೊಂಡಲ್ಲಿ, ಈ ಮಾರ್ಗದ ಮೂಲಕವೇ ವಿದ್ಯುತ್‌ ಪೂರೈಕೆ ಆರಂಭಗೊಂಡಲ್ಲಿ ‘ವ್ಯತ್ಯಯ’ ಪ್ರಮಾಣ ಶೇ 90ರಿಂದ 95ಕ್ಕೆ ಇಳಿಯಲಿದೆ. ಸುರಕ್ಷತೆಯೂ ಹೆಚ್ಚುತ್ತದೆ. ಇದಕ್ಕೆ ಹಣ ವೆಚ್ಚವಾಗುವುದನ್ನೂ ತಪ್ಪಿಸಬಹುದು. ಮಾರ್ಗದಲ್ಲೇನಾದರೂ ವೈಫಲ್ಯ ಕಂಡುಬಂದಲ್ಲಿ, ತಕ್ಷಣವೇ ದುರಸ್ತಿಗೆ ಸಹಾಯವಾಗುತ್ತದೆ. ನಿರ್ವಹಣೆಯೂ ಸುಲಭವಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಒಟ್ಟು 980 ಕಿ.ಮೀ.ನಷ್ಟು ಕೇಬಲ್‌ ಅಳವಡಿಸಬೇಕಾಗಿದೆ. ಇದರಲ್ಲಿ ಈಗಾಗಲೇ 630 ಕಿ.ಮೀ.ನಷ್ಟು ಕಾರ್ಯ ಮುಗಿದಿದೆ. ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT