ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯದಂತಾದ ಐತಿಹಾಸಿಕ ಕೋಟೆ!

Last Updated 24 ಏಪ್ರಿಲ್ 2017, 6:09 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಹೃದಯ ಭಾಗದಲ್ಲಿರುವ ಆ ಕೋಟೆ ಇಡೀ ಜಿಲ್ಲೆಯನ್ನು ಸಂಕೇತಿಸುತ್ತದೆ. ನೂತನ ಜಿಲ್ಲೆಯನ್ನು ಸಾಂಕೇತಿಕ ಎನ್ನುವಂತೆ  ಕೋಟೆ ಗುರುತಿಸಿಕೊಂಡಿದೆ. ಹಾಗಂತ ಪ್ರವಾಸಿಗರೇನಾದರೂ ಕೋಟೆಯತ್ತ ಸುಳಿದರೆ ಥೇಟ್‌ ಪಾಯಖಾನೆ ಸ್ವರೂಪ ಪಡೆದಿರುವುದು ಗೋಚರಿಸಿ ಅಸಹ್ಯ ಹುಟ್ಟಿಸುತ್ತದೆ! ಪ್ರವಾಸೋದ್ಯಮ ಮತ್ತು ಪ್ರಾಚ್ಯವಸ್ತು ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಕೋಟೆಗೆ ಒದಗಿರುವ ದುಸ್ಥಿತಿ ಇದು.

ಉತ್ತರ ದಿಕ್ಕಿನಿಂದ ಕೋಟೆಯ ಪ್ರವೇಶ ದ್ವಾರ ನಿರ್ಮಾಣಗೊಂಡಿದೆ. ಪ್ರವೇಶ ದ್ವಾರದಲ್ಲೇ ಇಡೀ ನಗರದ ತ್ಯಾಜ್ಯ ತುಂಬಿದೆ. ಮೆಟ್ಟಿಲು ದಾಟಿದರೆ ಎದುರುಗೊಳ್ಳುವ ಅಶುರಖಾನ ಹೆಸರಿನ ಕಾವಲು ಗೋಪುರದ ಆವರಣ ಶೌಚಾಲಯವಾಗಿ ಬಳಕೆಯಾಗುತ್ತಿದೆ! ಪ್ರವಾಸೋದ್ಯಮ ಸಚಿವರ ಜಿಲ್ಲೆಯಲ್ಲಿ ಐತಿಹಾಸಿಕ ಕೋಟೆಯ ಸ್ಥಿತಿ ಹೀನಾಯವಾಗಿರುವುದರ ಬಗ್ಗೆ ನಗರದ ನಾಗರಿಕರು ಬೇಸರಕ್ಕೆ ವ್ಯಕ್ತಪಡಿಸುತ್ತಾರೆ.

‘ಏತಗಿರಿ’ಎಂದರೆ ಎತ್ತರದ ಗಿರಿ ಎಂದರ್ಥ. ಜನರ ಆಡು ಭಾಷೆಯಲ್ಲಿ ‘ಏತಗಿರಿ’, ‘ಏದಗಿರಿ’, ‘ಯಾದಗಿರಿ’ ಎಂದಾಗಿದೆ. ಬೃಹತ್ ಬೆಟ್ಟದ ಮೇಲೆ ಈ ಕೋಟೆಯನ್ನು ಕಟ್ಟಲಾಗಿರುವುದರಿಂದ ಈಗ ‘ಗಿರಿದುರ್ಗ’ ಅಂತಲೂ ಕರೆಯುತ್ತಾರೆ.

ಎಂಟು ಪ್ರವೇಶ ದ್ವಾರ: ಕೋಟೆಯಲ್ಲಿ ಒಟ್ಟು ಎಂಟು ಪ್ರವೇಶದ್ವಾರಗಳಿವೆ. ಒಂದೊಂದು ಪ್ರವೇಶ ದ್ವಾರಗಳನ್ನು ದಾಟುತ್ತಾ ಹೋದಂತೆಲ್ಲಾ ಹಾಳಾಗಿರುವ ಬುರುಜು, ಕಮಾನು, ಗೋಡೆಗಳ ಅವಶೇಷಗಳು ಕಂಡುಬರುತ್ತವೆ. ಪಾತಾಳ ಬಾವಿ, ತೋಪುಗಳು, ಶಿಲಾ ಶಾಸನಗಳು ಅವುಗಳ ಜತೆಗೆ ಅರಮನೆಯ ಅವಶೇಷಗಳು ಕಂಡುಬರುತ್ತವೆ.

ಹಾಳಾಗಿರುವ ಟ್ಯಾಂಕ್‌ಗಳು: ಕೋಟೆ ವೀಕ್ಷಿಲು ಬರುವ ಪ್ರವಾಸಿಗರ ದಾಹ ನೀಗಿಸಲು ಒಟ್ಟು ಮೂರು ನೀರಿನ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಿ ಅವುಗಳಿಗೆ ಪೈಪ್‌ಲೈನ್‌ ಅಳವಡಿಸಲಾಗಿದೆ. ಮೇಲುಕೋಟೆಯಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದರೂ, ಪೈಪ್‌ಲೈನ್‌ ಹಾಳಾಗಿದೆ. ಅಳವಡಿಸಿರುವ ಪೈಪ್‌ಗಳು ಅವಶೇಷಗಳಂತೆ ಅಲ್ಲಲ್ಲಿ ಬಿದ್ದಿವೆ.

**

₹4 ಕೋಟಿ ಅನುದಾನ ನೀರಲ್ಲಿ ಹೋಮ

2015ರಲ್ಲಿ ಕೋಟೆಯ ಪುರುಜ್ಜೀವನಕ್ಕೆ ಎಚ್‌ಕೆಆರ್‌ಡಿಬಿಯಿಂದ ₹4ಕೊಟಿ ಅನುದಾನ ಬಳಸಲಾಗಿದೆ. ಮೆಟ್ಟಿಲು ಹಾಗೂ ಶಿಥಿಲಾವಸ್ಥೆ ತಲುಪಿರುವ ಗೋಡೆ, ಬತೇರಿಗಳಿಗೆ ಸಿಮೆಂಟ್‌ ಹಾಕುವ ಕಾರ್ಯ ಮಾತ್ರ ಮಾಡಲಾಗಿದೆ. ಮೆಟ್ಟಿಲುಗಳ ಇಕ್ಕೆಲ್ಲದಲ್ಲಿ ಕಬ್ಬಿಣದ ಗ್ರಿಲ್‌ ಬಳಸಿದ್ದಾರೆ.

ಕುಡಿಯುವ ನೀರು ಪೂರೈಕೆಗೆ ಪೈಪ್‌ಲೈನ್‌ ಅಳವಡಿಸಲಾಗಿದೆ. ಪ್ರವಾಸಿಗರಿಗಾಗಿ ಕೆಳಗೋಟೆಯಲ್ಲಿ ಮೂರು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ನಿರ್ವಹಣೆ ಇಲ್ಲದೇ ಶೌಚಾಲಯಗಳು ದುಸ್ಥಿತಿಯಲ್ಲಿವೆ. ಸಂಫೂರ್ಣ ₹4 ಕೋಟಿ ಅನುದಾನ ಪುನರುಜ್ಜೀವನ ದುರಸ್ತಿ ಕಾಮಗಾರಿಗಳಿಗೆ ಬಳಕೆಯಾಗಿಲ್ಲ ಎಂಬುದು ಇಲ್ಲಿನ ಸಾಮಾಜಿಕ ಸಂಘಟನೆಗಳು ಆರೋಪಿಸಿವೆ.

**

ರಕ್ಷಣಾ ಗೋಡೆ ಇಲ್ಲ

ಉತ್ತರ ದಿಕ್ಕಿನಿಂದ ಮೇಲುಕೋಟೆ ಹತ್ತಿ ಫಿರಂಗಿ ಇರುವ ಸ್ಥಳ ತಲುಪಿದರೆ ನಗರದ ವಿಹಂಗಮ ದರ್ಶನವಾಗುತ್ತದೆ. ದಕ್ಷಿಣ ದಿಕ್ಕಿನ ಕಡೆಗೆ ಮುಖ ಮಾಡಿದರೆ ಅಂಬೇಡ್ಕರ್‌ ನಗರದ ನೆತ್ತಿಯ ಮೇಲೆ ಕುಳಿತಂತೆ ಭಾಸವಾಗುತ್ತದೆ. ಸುಮಾರು 200 ಮೀಟರ್‌ ಎತ್ತರ ಏಕಶಿಲೆ ಇರುವ ಕೋಟೆಯ ಪ್ರಮುಖ ಭಾಗ ಅದು. ಭರ್ ಎಂದು ಬೀಸುವ ಗಾಳಿಯ ವೇಗ ಭಯ ಹುಟ್ಟಿಸುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಾಪಾಯ ತಪ್ಪಿದ್ದಲ್ಲ. ಇಂತಹ ಸ್ಥಳದಲ್ಲಿ ಜಿಲ್ಲಾಡಳಿತ ಇದುವರೆಗೂ ರಕ್ಷಣಾ ಗೋಡೆಗಳನ್ನು ನಿರ್ಮಿಸಿಲ್ಲ.

**

ಏಕೈಕ ತಾಣ

ನಗರಕ್ಕೆ ಭೂಷಣದಂತಿರುವ ಏಕೈಕ ಪ್ರವಾಸಿ ತಾಣ. ಹಿಂದೂ–ಮುಸ್ಲಿಂ ರಾಜರು ಅಭಿವೃದ್ಧಿಪಡಿಸಿದ್ದರಿಂದ ವಿಶಿಷ್ಟ ಪ್ರವಾಸಿ ತಾಣವಾಗಬಲ್ಲುದು. ಜಿಲ್ಲಾಡಳಿತ ಇತ್ತ ಗಮನಹರಿಸಲಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಒತ್ತಾಯಿಸಿದ್ದಾರೆ.

**
ಇತಿಹಾಸ ಏನು?

ಕಲ್ಯಾಣ ಚಾಲುಕ್ಯ ಅರಸರು ಮಳಖೇಡ, ಏತಗಿರಿ, ಪೊಟ್ಟಳಕೆರೆ, ಕೊಲ್ಲಿಪಾಕೆಗಳಲ್ಲಿ ರಾಜಧಾನಿಗಳನ್ನು ಸ್ಥಾಪಿಸಿದ್ದರು. ಚೋಳರ ಆಕ್ರಮಣದಿಂದಾಗಿ ಅತ್ಯಂತ ವೈಭವಯುತವಾಗಿ ಮೆರೆದಿದ್ದ ಮಳಖೇಡವನ್ನು ಸುಟ್ಟು ಹಾಕಿದ್ದರಿಂದ ಎರಡನೇ ಜಯಸಿಂಹ ‘ಏತಗಿರಿ’ಯಲ್ಲಿ ರಾಜಧಾನಿ ಸ್ಥಾಪಿಸಿದ ಎಂದು ಕ್ರಿ.ಶ. 1019ರ ರೂಗಿ ಶಾಸನ ಮತ್ತು ಕ್ರಿ.ಶ. 1033ರ ಭೈರನಮಟ್ಟಿ ಶಾಸನ, ಮದ್ದರಕಿ ಶಾಸನ, ಮಾನ್ವಿ ತಾಲ್ಲೂಕಿನ ಬಲ್ಲಟಗಿ ಶಾಸನ ಹಾಗೂ ತಡಕಲ್ ಶಾಸನಗಳಿಂದ ತಿಳಿದು ಬರುತ್ತದೆ.

ವಿಜಯಪುರದ ಆದಿಲ್‌ಷಾಹಿಗಳಿಗೂ ಅಹಮ್ಮದ್‌ ನಗರದ ನಿಜಾಂಷಾಹಿಗಳ ನಡುವಿನ ಯುದ್ಧದ ಸಂದರ್ಭದಲ್ಲಿ ವಿಜಯನಗರದ ರಾಮರಾಯ ಬಿಜಾಪುರದ ಅಲಿ ಆದಿಲ್‌ಷಾಹಿಯ ಪರವಾಗಿ ಮಧ್ಯಪ್ರವೇಶ ಮಾಡಿದ್ದರಿಂದ ರಾಮರಾಯನಿಗೆ ಅಲಿ ಆದಿಲ್‌ಷಾಹಿ ಯಾದಗಿರಿಯನ್ನು ಬಿಟ್ಟುಕೊಟ್ಟನೆಂದು ತಿಳಿದು ಬರುತ್ತದೆ. ಮೂಲತಃ ಈ ಕೋಟೆಯನ್ನು ಚಾಲುಕ್ಯ ಅರಸರ ಕಾಲದಲ್ಲಿ ಕಟ್ಟಿದ್ದರೂ ನಂತರದಲ್ಲಿ ಬಂದ ಬಹಮನಿ, ವಿಜಯಪುರ ಆದಿಲ್‌ಷಾಹಿಗಳಿಂದ ನವೀಕರಿಸಲ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT