ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಪಾಲಿಸಿದರೆ ಮಾತ್ರ ಜಯಂತಿ ಸಾರ್ಥಕ

Last Updated 24 ಏಪ್ರಿಲ್ 2017, 6:22 IST
ಅಕ್ಷರ ಗಾತ್ರ

ಹುಮನಾಬಾದ್: ‘ಬುದ್ಧ, ಬಸವ, ಅಂಬೇಡ್ಕರ್‌ ಒಳಗೊಂಡಂತೆ ಎಲ್ಲ ಮಹಾತ್ಮರುಗಳ ಜಯಂತಿ ಕೇವಲ ಆಚರಣೆಗೆ ಸೀಮಿತಗೊಳ್ಳದೇ ಆದರ್ಶ ಪಾಲನೆ ಮೂಲಕ ಜಯಂತಿ ಸಾರ್ಥಕಗೊಳಿಸಬೇಕು’ ಎಂದು ಕರ್ನಾಟಕ ಭೂಸೇನಾ ನಿಗಮ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ ಹೇಳಿದರು.

ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆ ಸಮಿತಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

‘ಅಸ್ಪೃಶ್ಯತೆ ಆಚರಣೆ ಪ್ರಸ್ತುತ ಕಡಿಮೆಯಾಗಿದೆ. ಸಮಾನತೆ ಬಂದಿದೆ. ಸಂವಿಧಾನಬದ್ಧ ಹಕ್ಕಿನಿಂದಾಗಿ ಶಿಕ್ಷಣ, ಸರ್ಕಾರಿ ಹುದ್ದೆ ಹಾಗೂ ರಾಜಕೀಯ ಕ್ಷೇತ್ರ ಪ್ರವೇಶ ಸಾಧ್ಯವಾಗಿದೆ. ಆದರೆ, ಅದರ ಸದ್ಬಳಕೆ ಆಗಬೇಕು’ ಎಂದು ಹೇಳಿದರು.

‘ಸಮುದಾಯದಲ್ಲಿ ಅನ್ಯಾಯ ಹಾಗೂ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಒದಗಿಸುವುದು ಸಂಘಟನೆಗಳ ಉದ್ದೇಶ ಆಗಬೇಕೇ ಹೊರತು ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಬಾರದು. ಡಾ. ಬಾಬು ಜಗಜೀವನರಾಂ, ಡಾ.ಅಂಬೇಡ್ಕರ್‌ ಹೆಸರಿಗೆ ಚ್ಯುತಿ ತರುವ ಕೆಲಸಕ್ಕೆ ಯಾರೊಬ್ಬರೂ ಕೈಹಾಕಬಾರದು’ ಎಂದು ಹೇಳಿದರು.

ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನ ನಗರದಲ್ಲಿ ಡಾ.ಅಂಬೇಢ್ಕರ್‌ ಭವನ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟಿಸುವುದಾಗಿ ಘೋಷಿಸಿದರು.

ಉಪನ್ಯಾಸ ನೀಡಿದ ಪ್ರೊ.ಪ್ರಹ್ಲಾದ್ ವಿ.ಚೇಂಗ್ಟೆ, ‘ಡಾ.ಬಾಬು ಜಗಜೀವನರಾಂ ಅವರು 27 ವರ್ಷ ಕಾಲ ನಿರಂತರ ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗಿ ರೈಲ್ವೆ, ರಕ್ಷಣಾ, ಕೃಷಿ, ಕಾರ್ಮಿಕ ಖಾತೆ ಸಮರ್ಥವಾಗಿ ನಿಭಾಯಿಸಿದ್ದರು’ ಎಂದು ತಿಳಿಸಿದರು.

ತಹಶೀಲ್ದಾರ್‌ ಡಿ.ಎಂ.ಪಾಣಿ, ತಾಲ್ಲೂಕು ಪಂಚಾಯಿತಿ ಇಒ ಡಾ.ಗೋವಿಂದ, ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ.ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ಸುರೇಶ ಬಬಲಾದ್, ಸದಸ್ಯ ಅಪ್ಸರಮಿಯ್ಯ, ದಲಿತ ಮುಖಂಡರಾದ ಲಕ್ಷ್ಮೀಪುತ್ರ ಮಾಳಗೆ, ಸುರೇಶ ಘಾಂಗ್ರೆ, ಮಾಣಿಕರಾವ ಪವಾರ, ಬಾಬು ಪರಮಶೆಟ್ಟಿ, ಗುಂಡಾರೆಡ್ಡಿ ಮಾತನಾಡಿದರು.

ಉತ್ಸವ ಸಮಿತಿ ಅಧ್ಯಕ್ಷ ಜೈರಾಜ್ ಎನ್‌.ವೈದ್ಯ, ಗೌರವಾಧ್ಯಕ್ಷ ಪ್ರಭು ತಾಳ್ಮಡಗಿ, ಕಾರ್ಯದರ್ಶಿ ಅಶೋಕರಾಜ್‌ ಕಟ್ಟಿ, ಕೋಶಾಧ್ಯಕ್ಷ ಜೈರಾಜ ಸದಲಾಪೂರೆ, ಸದಸ್ಯರಾದ ದಶರಥ ಆರ್ಯ, ಸುರೇಶ ಮಂಠಾಳ್ಕರ್ ಇದ್ದರು. ಸುಮಂತ ಕಟ್ಟಿಮನಿ ನಿರೂಪಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ.ಬಾಬು ಜಗಜೀವನರಾಂ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT