ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ನೀರು ಶುದ್ಧೀಕರಣ ಘಟಕಕ್ಕೆ ಬೀಗ

Last Updated 24 ಏಪ್ರಿಲ್ 2017, 6:24 IST
ಅಕ್ಷರ ಗಾತ್ರ

ಮೈಸೂರು: ‘ಐಎಸ್‌ಐ’ ಮಾರ್ಕ್ ಹೊಂದಿಲ್ಲದ ನೀರು ಶುದ್ಧೀಕರಣ ಘಟಕಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಅಧಿಕಾರಿಗಳು 7 ಘಟಕಗಳಿಗೆ ಬೀಗಮುದ್ರೆ ಹಾಕಿದ್ದಾರೆ.

‘ಐಎಸ್ಐ’ ಮಾನ್ಯತೆ ಹೊಂದಿಲ್ಲದ 13 ನೀರು ಶುದ್ಧೀಕರಣ ಘಟಕಗಳ ವಿರುದ್ಧ ದೂರುಗಳು ಬಂದಿದ್ದರಿಂದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಇದರಲ್ಲಿ 7 ಘಟಕಗಳಿಗೆ ಬೀಗ ಹಾಕಿದ್ದರೆ, ಇನ್ನುಳಿದ ಘಟಕಗಳ ತಪಾಸಣೆ ನಡೆಸಬೇಕಿದೆ.

ಗುಣಮಟ್ಟ ಹೇಗಿತ್ತು?: ಬೀಗ ಹಾಕಿದ 7 ಘಟಕಗಳು ‘ಐಎಸ್ಐ’ ಪ್ರಮಾಣಪತ್ರ ಹೊಂದಿಲ್ಲ ಎಂಬುದನ್ನು ಬಿಟ್ಟರೆ ನೀರಿನ ಗುಣಮಟ್ಟ ಕಳಪೆಯಾಗಿರಲಿಲ್ಲ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಂಕಿತ ಅಧಿಕಾರಿ ಡಾ.ಚಿದಂಬರ ಹೇಳುತ್ತಾರೆ.

‘ಐಎಸ್ಐ’ ನಿಗದಿಪಡಿಸಿದ ಮಾನ ದಂಡಗಳನ್ನು ತಯಾರಿಕಾ ಹಂತದಲ್ಲಿ ಪಾಲಿಸಿರಲಿಲ್ಲ. ಅಂದರೆ, ಇಂತಿಷ್ಟೇ ವಿಸ್ತೀರ್ಣದ ಭೂಮಿ, ಇಷ್ಟೇ ಕಾರ್ಮಿಕರು... ಹೀಗೆ ಹಲವು ಮಾನ ದಂಡಗಳನ್ನು ಐಎಸ್‌ಐ ನಿಗದಿಪಡಿಸಿದೆ. ಇವುಗಳನ್ನು ಇಂತಹ ಘಟಕಗಳು ಪಾಲಿಸಿಲ್ಲ ಎಂದು ಹೇಳಿದರು.

ನಗರದಲ್ಲಿ ‘ಐಎಸ್‌ಐ’ ಮಾನ್ಯತೆ ಪಡೆದ 32 ನೀರು ಶುದ್ಧೀಕರಣ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಇವುಗಳಲ್ಲೂ ಬಹುತೇಕ ಕಡೆ ನಿಯಮಗಳು ಪಾಲನೆಯಾಗುತ್ತಿಲ್ಲ. ‘ಐಎಸ್‌ಐ’ ಅಧಿಕಾರಿಗಳು ತಪಾಸಣೆಗೆ ಬಂದಾಗಲಷ್ಟೇ ಶಿಸ್ತಿನಿಂದ ಕಾರ್ಯ ನಿರ್ವಹಿಸುತ್ತವೆ. ಉಳಿದಂತೆ, ಬೇಕಾಬಿಟ್ಟಿಯಾಗಿ ಇವು ನೀರನ್ನು ಶುದ್ಧೀಕರಿಸುತ್ತಿವೆ. ಅಧಿಕಾರಿಗಳೂ ದೂರು ಬಂದರಷ್ಟೇ ತಪಾಸಣೆ ನಡೆಸುತ್ತಾರೆ. ಇಲ್ಲದಿದ್ದ ವೇಳೆಯಲ್ಲಿ ಶುದ್ಧೀಕರಣ ಘಟಕಗಳು ತಮಗಿಷ್ಟ ಬಂದಂತೆ ಕಾರ್ಯನಿರ್ವಹಿಸುತ್ತಿವೆ.

ನಿಯಮಗಳೇನು?
ನೀರು ಶುದ್ಧೀಕರಣಕ್ಕೆ ಹಲವು ನಿಯಮಗಳನ್ನು ‘ಐಎಸ್ಐ’ ವಿಧಿಸಿದೆ. ಪಾಲಿಕೆಯಿಂದ ಸರಬರಾಜಾಗುವ ನೀರನ್ನು ಇದಕ್ಕೆ ಬಳಕೆ ಮಾಡಬಾರದು. ತಮ್ಮದೇ ಖಾಸಗಿ ಕೊಳವೆ ಬಾವಿ ಮೂಲಕವೇ ನೀರನ್ನು ತೆಗೆಯಬೇಕು. ಈ ಕೊಳವೆ ಬಾವಿ ಶುದ್ಧ ಪರಿಸರ ದಲ್ಲಿರಬೇಕು. ಇದರ ಸುತ್ತ ಚರಂಡಿ, ಕಸ ಇರಬಾರದು.

ಇದರಿಂದ ತೆಗೆದ ನೀರನ್ನು ಮಹಡಿ ಮೇಲಿನ ತೊಟ್ಟಿಯಲ್ಲಿ ಘನ ಕಶ್ಮಲಗಳು ತಳ ಸೇರಲಿ ಎಂದು ಕನಿಷ್ಠ ಒಂದು ದಿನ ಸಂಗ್ರಹಿಸಬೇಕು. ನಂತರ, ತಳದಿಂದ ಎರಡು ಅಡಿ ಮೇಲಕ್ಕೆ ಪೈಪ್‌ ಮೂಲಕ ನೀರನ್ನು ಶುದ್ದೀಕರಣ ಘಟಕಕ್ಕೆ ಸರಬರಾಜು ಮಾಡಬೇಕು.

‘ಓಝೋನೈಜೇಷನ್’ ಇಲ್ಲವೇ ‘ಅಲ್ಟ್ರಾವೈಲೇಟ್ ಪ್ಯಾಸೇಜ್’ ತಂತ್ರಜ್ಞಾನ ಗಳ ಮೂಲಕ ನೀರನ್ನು ಶುದ್ಧೀಕರಣ ಮಾಡಬೇಕು. ಆರ್‌.ಒ ಘಟಕದಲ್ಲಿ ಬೇಡದ ರಾಸಾಯನಿಕಗಳನ್ನು ಹಾಗೂ ಹೆಚ್ಚಿನ ರಾಸಾಯನಿಕಗಳನ್ನು ತೆಗೆಯಬೇಕು. ನಂತರ, ತೊಟ್ಟಿಗೆ ನೀರು ಬಂದು ಸಂಗ್ರಹವಾಗುತ್ತದೆ. ಇದನ್ನು ಬಾಟಲ್‌ಗಳಿಗೆ ತುಂಬಿದ ನಂತರ 48 ಗಂಟೆಗಳ ಕಾಲ ಅದು ಹಾಗೆಯೇ ಇರಬೇಕು. ಶುದ್ಧೀಕರಿಸಿದ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ಅದು ಸುರಕ್ಷಿತ ಎಂದು ವರದಿ ಬಂದ ಬಳಿಕವಷ್ಟೇ ನೀರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂಬ ನಿಯಮಗಳಿವೆ. ಆದರೆ, ಇವೆಲ್ಲವೂ ಚಾಚೂತಪ್ಪದೇ ಯಾವುದೇ ಘಟಕದಲ್ಲೂ ಪಾಲನೆಯಾಗುತ್ತಿಲ್ಲ.

ಬಾಟಲ್ ತೊಳೆಯುವ ಕ್ರಮ: ಕಲ್ಯಾಣ ಮಂಟಪಗಳಲ್ಲಿ ನೀರಿನ ಕ್ಯಾನ್‌ಗಳಿಗೆ ಸಾಂಬರು, ಮಜ್ಜಿಗೆಗಳನ್ನು ತುಂಬುವು ದರಿಂದ ಖಾಲಿ ಕ್ಯಾನ್‌ಗಳೂ ಮಲೀನ ಗೊಳ್ಳಲಿವೆ. ಇದನ್ನು ತೊಳೆಯುವುದಕ್ಕೆ ಫ್ಲೆಷ್‌ ಮಾಡಿ, ‘ಡಿಫಿನ್‌ಫೆಕ್ಟೆಂಟ್‌’ ಮೂಲಕ ಸ್ವಚ್ಛಗೊಳಿಸಬೇಕು. ಕೊನೆಗೆ, ಬಿಸಿನೀರಿನಿಂದ ತೊಳೆದು, ಶುದ್ಧೀಕರಿಸಿದ ನೀರಿನಿಂದ ಮತ್ತೊಮ್ಮೆ ತೊಳೆಯಬೇಕು ಎಂಬ ನಿಯಮಗಳಿವೆ. ಆದರೆ, ಇಷ್ಟೆಲ್ಲ ನಿಯಮಗಳು ಪಾಲನೆ ಆಗುವುದು ಅನುಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT