ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಉದ್ಯಾನಗಳಿಗೆ ‘ಅಮೃತ್’ ಭಾಗ್ಯ

Last Updated 24 ಏಪ್ರಿಲ್ 2017, 6:27 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರದ ಅಮೃತ್‌ ಯೋಜನೆಯ ಅನುದಾನದಲ್ಲಿ ಇಲ್ಲಿನ ಮೂರು ಉದ್ಯಾನಗಳು ಹೊಸ ರೂಪ ಪಡೆಯುತ್ತಿವೆ. ಮತ್ತಷ್ಟು ಅಂದಗೊಂಡು ಸಾರ್ವಜನಿಕರಿಗೆ ನೆರಳು, ನೆಮ್ಮದಿ ಶೀಘ್ರದಲ್ಲಿಯೇ ನೀಡಲಿವೆ.

ಅಕ್ಕಮಹಾದೇವಿ ನಗರ, ಸ್ವಸ್ತಿಕ್‌ ನಗರ ಹಾಗೂ ಮನ್ಸ್‌ಬ್‌ದಾರ್ ಲೇಔಟ್‌ನ ಸಾರ್ವಜನಿಕ ಉದ್ಯಾನಗಳನ್ನು ಅಮೃತ್‌ ಯೋಜನೆಗೆ ಆಯ್ಕೆ ಮಾಡಲಾಗಿದೆ. ಇದಕ್ಕಾಗಿ ₹3.20 ಕೋಟಿ ಅನುದಾನ ಪಾಲಿಕೆಗೆ ಬಂದಿದೆ. ಈ ಹಣವನ್ನು ಹಸಿರೀಕರಣ, ಆವರಣಗೋಡೆ ನಿರ್ಮಾಣ, ವಿಹಾರ ಪಥ ಹಾಗೂ ಸ್ವಚ್ಛತೆ ಕಾಪಾಡಲು ಬಳಸಲಾಗುತ್ತಿದೆ. ಈಗಾಗಲೇ ಅಕ್ಕಮಹಾದೇವಿ ನಗರದ ಉದ್ಯಾನದ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಉದ್ಯಾನಗಳಲ್ಲಿಯೂ ಕೆಲಸ ಭರದಿಂದ ಸಾಗಿದೆ.

‘ನಮ್ಮ ಬಡಾವಣೆಯ ಉದ್ಯಾನ ಪಾಳುಬಿದ್ದಿದೆ. ಅಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. ಇನ್ನು ವಾಯುವಿಹಾರ ದೂರದ ಮಾತು. ಸಸಿಗಳು ಹಾಳಾಗಿವೆ, ಹಂದಿಗಳು ಬೀಡುಬಿಟ್ಟಿವೆ. ಈ ಉದ್ಯಾನ ಅಮೃತ್‌ ಯೋಜನೆಗೆ ಆಯ್ಕೆಯಾಗಿದ್ದು ಸಂತಸ ತಂದಿದೆ’ ಎಂದು ಸ್ವಸ್ತಿಕ್‌ ನಗರದ ನಿವಾಸಿ ಬಸವರಾಜ ನಂದಿಕೂರು ಹೇಳಿದರು.

‘ಕೇಂದ್ರ ಸರ್ಕಾರದ ಹಣ ಸಮರ್ಪಕವಾಗಿ ಬಳಕೆಯಾಗಲಿ. ಸ್ವಸ್ತಿಕ್‌ ನಗರದ ಉದ್ಯಾನ ಉಳಿದ ವಾರ್ಡ್‌ಗಳಿಗೆ ಮಾದರಿಯಾಗಬೇಕು’ ಎಂಬುದು ಅವರ ಒತ್ತಾಯ.

‘ಪಾಲಿಕೆ ಎಲ್ಲ ಪಾರ್ಕ್‌ಗಳ ಅಭಿವೃದ್ಧಿಗೆ ಗಮನ ಹರಿಸಿದೆ. ಆದರೆ, ಈ ಮೂರು ಉದ್ಯಾನಗಳಿಗೆ ಮಾತ್ರ ವಿಶೇಷ ಅನುದಾನ ಲಭಿಸಿದೆ. ಅಲ್ಲಿ ಹಸಿರು ಬೆಳೆಸುವ ಕಾರ್ಯ ಆರಂಭವಾಗಿದೆ’ ಎಂದು ಪಾಲಿಕೆ ಆಯುಕ್ತ ಪಿ.ಸುನಿಲಕುಮಾರ್‌ ತಿಳಿಸಿದರು.

**

ಪಾಳುಬಿದ್ದ ಉದ್ಯಾನಗಳು

ನಗರದಲ್ಲಿ 420ಕ್ಕೂ ಹೆಚ್ಚು ಸಾರ್ವಜನಿಕ ಉದ್ಯಾನಗಳಿವೆ. ಅವುಗಳಲ್ಲಿ 216 ಉದ್ಯಾನಗಳು ನಗರಾಭಿವೃದ್ಧಿ ಪ್ರಾಧಿಕಾರ(ಕುಡಾ)ದ ವ್ಯಾಪ್ತಿಗೆ ಒಳಪಟ್ಟಿವೆ. ಆದರೆ, ಅಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲ. ನೀರು, ನೆರಳು ಮರೀಚಿಕೆಯಾಗಿದೆ. ಆವರಣಗೋಡೆ ಸಹ ಇಲ್ಲದೆ ಹಂದಿಗಳ ವಾಸದ ತಾಣವಾಗಿ ಮಾರ್ಪಟ್ಟಿವೆ. ಹೀಗಾಗಿ ಪಾಲಿಕೆ ಉದ್ಯಾನಗಳನ್ನು ಹಸ್ತಾಂತರ ಮಾಡುವಂತೆ ಕುಡಾಕ್ಕೆ ಮನವಿ ಮಾಡಿಕೊಂಡಿದೆ.

**

ಖಾಸಗಿ ವ್ಯಕ್ತಿಗಳಿಂದಲೂ ಅಭಿವೃದ್ಧಿ

ವಿವಿಧ ವಸತಿ ಬಡಾವಣೆಗಳಲ್ಲಿನ 42 ಉದ್ಯಾನಗಳನ್ನು ಖಾಸಗಿ ವ್ಯಕ್ತಿಗಳು ಅಭಿವೃದ್ಧಿಪಡಿಸಿದ್ದಾರೆ. ವಿಹಾರ ಪಥ, ತಂತಿ ಬೇಲಿ, ಮಕ್ಕಳ ಆಟಿಕೆ ಪರಿಕರಗಳನ್ನು ಅಳವಡಿಸಲು ಸಂಘ, ಸಂಸ್ಥೆಗಳು ನೆರವಾಗಿದ್ದು, ನಿರ್ವಹಣೆಯನ್ನೂ ಮಾಡುತ್ತಿವೆ. ಇದರಿಂದ ಹಲವು ಹೊಸ ಬಡಾವಣೆಗಳು ಹಸಿರಿನಿಂದ ನಳನಳಿಸುತ್ತಿವೆ.

**

ಉದ್ಯಾನ ಅಭಿವೃದ್ಧಿ

₹80 ಲಕ್ಷ: ವೆಚ್ಚದಲ್ಲಿ ಅಕ್ಕಮಹಾದೇವಿ ನಗರದ ಉದ್ಯಾನ ಅಭಿವೃದ್ಧಿ

ಮೂಲ ಸೌಕರ್ಯ: ಖಾಸಗಿಯವರು ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿನ ಉದ್ಯಾನಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಪಾಲಿಕೆ ಷರತ್ತು ವಿಧಿಸಿದೆ.

₹93ಲಕ್ಷ: ಸ್ವಸ್ತಿಕ್‌ ನಗರದ ಉದ್ಯಾನಕ್ಕೆ ಮೀಸಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT