ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್‌: ಜಲಮೂಲದಲ್ಲಿ ಕಸ, ತ್ಯಾಜ್ಯ

Last Updated 24 ಏಪ್ರಿಲ್ 2017, 6:31 IST
ಅಕ್ಷರ ಗಾತ್ರ

ಔರಾದ್: ಪಟ್ಟಣದಲ್ಲಿ ಸಾಕಷ್ಟು ಕಡೆ ನೀರಿನ ಮೂಲ ಇದ್ದರೂ ಅವುಗಳ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ.

ಪಟ್ಟಣದ ಬಸ್ ನಿಲ್ದಾಣದ ಬಳಿ ಸಾಕಷ್ಟು ನೀರಿನ ಮೂಲ ಇರುವ ಪುರಾತನ ಬಾವಿ ಈಗ ಕಸ ಮತ್ತು ತ್ಯಾಜ್ಯ ವಿಲೇವಾರಿಗಾಗಿ ಬಳಕೆಯಾಗುತ್ತಿದೆ. ಹರ್ಷಗುಪ್ತ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಬಾವಿ ಜೀರ್ಣೋದ್ಧಾರ ಮಾಡಿ ಸಾರ್ವಜನಿಕರಿಗೆ ನೀರು ಬಳಸಲು ಅನುವು ಮಾಡಿಕೊಟ್ಟಿದ್ದರು. ಆದರೆ, ನಂತರ ಈ ಬಾವಿ ಉಪೇಕ್ಷೆಗೆ ಒಳಗಾಗಿ ಈಗ ಅದು ಘನತ್ಯಾಜ್ಯ ವಿಲೇವಾರಿ ತೊಟ್ಟಿಯಾಗಿ ಪರಿಣಮಿಸಿದೆ.

‘ಬಸ್ ನಿಲ್ದಾಣ ಸಮೀಪದಲ್ಲೇ ತೋಟಗಾರಿಕೆ ಕಚೇರಿ ಆವರಣದಲ್ಲಿ ಮತ್ತೊಂದು ದೊಡ್ಡ ಬಾವಿಯಲ್ಲಿ ಸಾಕಷ್ಟು ನೀರಿನ ಮೂಲ ಇದೆ. ಪಟ್ಟಣದ ಅರ್ಧದಷ್ಟು ಊರಿಗೆ ಪೂರೈಸುವಷ್ಟು ನೀರು ಇದ್ದರೂ ಅದರ ಉಪಯೋಗದ ಕಡೆ ಯಾರೂ ಗಮನಿಸುತ್ತಿಲ್ಲ. ಬಾವಿಯಲ್ಲಿ ಬಿದ್ದಿರುವ ಕಸ ಕಡ್ಡಿ ತೆಗೆದು ಸ್ವಚ್ಛ ಮಾಡಿದರೆ ಪಟ್ಟಣದ ಜನರಿಗೆ ಒಂದಿಷ್ಟು ಅನುಕೂಲವಾಗುತ್ತದೆ. ಆದರೆ ಈ ಕಡೆ ಪಟ್ಟಣ ಪಂಚಾಯಿತಿಯವರು ಗಮನ ಹರಿಸುತ್ತಿಲ್ಲ’ ಎಂದು ಪಟ್ಟಣದ ನಿವಾಸಿಗಳು ದೂರಿದ್ದಾರೆ.

ಪಟ್ಟಣದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ತೇಗಂಪುರ ಕೆರೆಯಲ್ಲಿ ಮೀನುಗಳು ಸತ್ತಿರುವ ಕಾರಣದಿಂದ ಆ ನೀರು ಕುಡಿಯಲು ಬಳಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಸುಮಾರು ₹40 ಕೋಟಿ ಖರ್ಚು ಮಾಡಿ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವ ಹಾಲಹಳ್ಳಿ ಬ್ಯಾರೇಜ್‌ನಲ್ಲೂ ನೀರಿಲ್ಲ. ಹೀಗಾಗಿ ಪಟ್ಟಣದ ಜನ ಕುಡಿಯುವ ನೀರಿಗಾಗಿ ಅಹೋರಾತ್ರಿ ಪರದಾಡಬೇಕಾಗಿದೆ.

‘ಇರುವ ಹಳೆ ನೀರಿನ ಮೂಲ ಗುರುತಿಸಿ ಅವುಗಳ ಸಣ್ಣಪುಟ್ಟ ರಿಪೇರಿ ಮಾಡಿಸಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.

**

‘ಕೊಳವೆಬಾವಿ ಕೊರೆಸುತ್ತೇವೆ’

‘ಹಾಲಹಳ್ಳಿ ಬ್ಯಾರೇಜ್‌ನಲ್ಲಿ ನೀರಿಲ್ಲ. ತೇಗಂಪುರ ಕೆರೆ ನೀರು ಕುಡಿಯಲು ಬಳಸುವಂತಿಲ್ಲ. ಹೀಗಾಗಿ ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ. ಹಳೆ ಕೊಳವೆ ಬಾವಿ ರಿಪೇರಿ ಮತ್ತು ಅಗತ್ಯ ಇರುವ ಕಡೆ ಹೊಸ ಕೊಳವೆ ಬಾವಿ ಕೊರೆಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೇಣುಕಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT