ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಹಡಗಲಿ ಕೆರೆಗೆ ಗ್ರಾಮಸ್ಥರ ಕಾಯಕಲ್ಪ

Last Updated 24 ಏಪ್ರಿಲ್ 2017, 6:34 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಹಿರೇಹಡಗಲಿ ಗ್ರಾಮದ ಐತಿಹಾಸಿಕ ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಗ್ರಾಮಸ್ಥರು ಭಾನುವಾರ ಸ್ವಯಂಪ್ರೇರಣೆಯಿಂದ ಚಾಲನೆ ನೀಡಿದರು.
‘ನಮ್ಮ ಕೆರೆ ನಮ್ಮ ಹಕ್ಕು’ ಯೋಜನೆ ಯಡಿ ಕೊಟ್ಟೂರು ಕೆರೆಯನ್ನು ಸ್ವಚ್ಛಗೊಳಿಸಿದ ಅಲ್ಲಿನ ಯುವಕರ ಕೈಂಕರ್ಯದಿಂದ ಪ್ರಭಾವಿತರಾಗಿರುವ ಹಿರೇಹಡಗಲಿಯ ಗ್ರಾಮಸ್ಥರು ‘ನಮ್ಮ ಊರು ನಮ್ಮ ಕೆರೆ’ ಘೋಷಣೆ ಅಡಿ ಕೆರೆ ಸ್ವಚ್ಛತಾ ಆಂದೋಲನ ಆರಂಭಿಸಿದ್ದಾರೆ.

ಮೈಲಾರ–ತೋರಣಗಲ್ಲು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ 450 ಎಕರೆ ವಿಸ್ತೀರ್ಣದ ಈ ಕೆರೆಯು ಸೂಕ್ತ ನಿರ್ವಹಣೆ ಇಲ್ಲದೇ ಕಳಾಹೀನವಾಗಿತ್ತು. ಒಂದು ಕಾಲಕ್ಕೆ ಹಿರೇಹಡಗಲಿ ಸುತ್ತ ಮುತ್ತಲ ಹಳ್ಳಿಗಳ ಜನ, ಜಾನುವಾರುಗಳ ಕುಡಿಯುವ ನೀರಿನ ದಾಹ ನೀಗಿಸಿದ್ದ ಈ ಕೆರೆಗೆ ಮತ್ತೆ ಜೀವಕಳೆ ತಂದುಕೊಡಲು ಯುವ ಪಡೆಯೊಂದು ಟೊಂಕಕಟ್ಟಿ ನಿಂತಿದೆ.

ಕೊಟ್ಟೂರು ಕೆರೆ ಸ್ವಚ್ಛತೆ ಮಾದರಿಯಲ್ಲಿ ಹಿರೇಹಡಗಲಿ ಕೆರೆಗೆ ಕಾಯಕಲ್ಪ ನೀಡುವ ಕುರಿತಂತೆ ಗ್ರಾಮದ ಉತ್ಸಾಹಿ ಯುವಕ ಗುಂಡಿ ಚರಣರಾಜ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ, ಅಭಿಪ್ರಾಯ ಕೋರಿದ್ದರು. ಇದಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಉದ್ಯೋಗ ಅರಸಿ ಬೇರೆಡೆ ತೆರಳಿರುವ ಗ್ರಾಮದ ನೌಕರರು ನೆರವು ನೀಡುವ ವಾಗ್ದಾನ ಮಾಡಿದ್ದಾರೆ. ಗ್ರಾಮದ ರೈತರು, ವಿದ್ಯಾರ್ಥಿಗಳು, ಯುವಕರು ಸ್ವಯಂ ಸ್ಫೂರ್ತಿಯಿಂದ ಕೆರೆ ಸ್ವಚ್ಛತೆಗೆ ಮುಂದೆ ಬಂದಿದ್ದಾರೆ.

ಈಚೆಗೆ ಹಾಲಸ್ವಾಮಿ ಮಠದಲ್ಲಿ ಸಣ್ಣ ಹಾಲಸ್ವಾಮೀಜಿ ಹಾಗೂ ಅಭಿನವ ಹಾಲವೀರಪ್ಪಜ್ಜ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ಸೇರಿ ಕೆರೆ ಸ್ವಚ್ಛತೆಯ ರೂಪುರೇಷೆ ತಯಾರಿಸಿದ್ದಾರೆ. ಕೆರೆಯಲ್ಲಿ ಬೆಳೆದಿರುವ ದೊಡ್ಡ ದೊಡ್ಡ ಪೊದೆಗಳನ್ನು ಶ್ರಮದಾನದಿಂದ ತೆರವುಗೊಳಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಜೆಸಿಬಿ ಯಂತ್ರವನ್ನು ಬಾಡಿಗೆಗೆ ಪಡೆಯುವ ತೀರ್ಮಾನ ಕೈಗೊಂಡಿದ್ದಾರೆ.ಒಂದು ಗಂಟೆಗೆ ₹750ರಂತೆ ಜೆಸಿಬಿ ಬಾಡಿಗೆಗೆ ನಿಗದಿಪಡಿಸಿದ್ದು, 170 ಗಂಟೆ ಬಾಡಿಗೆಗೆ ದೇಣಿಗೆ ನೀಡಲು ರೈತರು, ನೌಕರ ವರ್ಗದವರು, ಗ್ರಾ.ಪಂ. ಸದಸ್ಯರು ಸಭೆಯಲ್ಲೇ ಹೆಸರು ಬರೆಸಿದ್ದಾರೆ.

ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದೆ. ಬರುವ ಮಳೆಗಾಲದಲ್ಲೇ ಕೆರೆಗೆ ನದಿಯ ನೀರು ಹರಿಯುವ ನಿರೀಕ್ಷೆ ಯಿದೆ. ಹೀಗಾಗಿ ಗ್ರಾಮಸ್ಥರು, ಮಠಾ ಧೀಶರು ಉತ್ಸಾಹದಿಂದ ಕೆರೆ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.‘ಸದ್ಯ ಗ್ರಾಮಸ್ಥರ ನೆರವಿನಲ್ಲಿ ಎರಡು ವಾರಗಳ ಮಟ್ಟಿಗೆ ಕೆರೆಯಲ್ಲಿನ ಗಿಡ, ಗಂಟೆ ತೆರವುಗೊಳಿಸುವ ಯೋಜನೆ ರೂಪಿಸಿದ್ದೇವೆ. ಗ್ರಾಮದ ರೈತರು, ನೌಕರ ವರ್ಗದವರು, ಯುವಕರಿಂದ ಉತ್ತಮ ಸಹಕಾರ ದೊರೆಯುತ್ತಿದೆ. ಇನ್ನೂ ಹೆಚ್ಚಿನ ನೆರವು ಸಿಕ್ಕಲ್ಲಿ ಕೆರೆ ಹೂಳನ್ನೂ ತೆಗೆಸುವ ಯೋಜನೆ ಇದೆ’ ಎಂದರು.

‘ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇರುವ ಈ ಕೆರೆಯ ಅಭಿವೃದ್ಧಿಗೆ ಗ್ರಾಮಸ್ಥರು ಒತ್ತಾಸೆಯಾಗಿ ನಿಂತಿದ್ದಾರೆ. ಕೆರೆಯ ದಡದಲ್ಲೇ ಕಲ್ಯಾಣಿ ಚಾಲುಕ್ಯರ ಕಾಲದ ಕಲ್ಲೇಶ್ವರ ಹಾಗೂ ಕಟ್ಟೆ ಬಸವೇಶ್ವರ ದೇವಸ್ಥಾನ ಇರುವುದರಿಂದ ಇದೊಂದು ಪ್ರವಾಸಿ ತಾಣವಾಗಿಯೂ ರೂಪುಗೊಳ್ಳುತ್ತದೆ. ಬರುವ ದಿನಗಳಲ್ಲಿ ಆಸಕ್ತಿ ಇರುವ ಜನರನ್ನು ತೊಡಗಿಸಿಕೊಂಡು ಕೆರೆ ಸಂರಕ್ಷಣಾ ಸಮಿತಿಯ ಮೂಲಕ ಕೆರೆಯ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ’ ಎಂದು ಅವರು ತಿಳಿಸಿದರು.ಅತಿಕ್ರಮಣದಿಂದ ಕೆರೆ ಅಂಗಳ ಚಿಕ್ಕದಾಗಿದೆ. ಕೂಡಲೇ ಸರ್ವೇ ನಡೆಸಿ ಹದ್ದುಬಸ್ತು ಮಾಡಿಸುವ ಮೂಲಕ ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT