ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಪೂರ್ಣಗೊಂಡ ಎಸ್‌ಟಿಪಿ

Last Updated 24 ಏಪ್ರಿಲ್ 2017, 6:38 IST
ಅಕ್ಷರ ಗಾತ್ರ

ಬೀದರ್‌: ನಗರದ ಗೋರನಳ್ಳಿ ಸಮೀಪದ 54 ಎಕರೆ ಪ್ರದೇಶದಲ್ಲಿ ಐದು ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿದ್ದ ಹೈಟೆಕ್ ಕೊಳಚೆ ನೀರು ಸಂಸ್ಕರಣ ಘಟಕ(ಎಸ್‌ಟಿಪಿ)ದ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ. ಮೇನಲ್ಲಿ ಘಟಕಕ್ಕೆ ಚಾಲನೆ ನೀಡಲು ಸಕಲ ಸಿದ್ಧತೆ ನಡೆದಿದೆ.

ಉತ್ತರ ಕರ್ನಾಟಕ ಬಂಡವಾಳ ಹೂಡಿಕೆ ಕಾರ್ಯಕ್ರಮದಡಿ ಏಷಿಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೆರವಿನೊಂದಿಗೆ ₹39.80 ಕೋಟಿ ವೆಚ್ಚದಲ್ಲಿ ಕೊಳಚೆ ನೀರು ಸಂಸ್ಕರಣ ಘಟಕ ನಿರ್ಮಿಸಲಾಗಿದ್ದು, ಮೊದಲ ಹಂತದಲ್ಲಿ 16 ಎಂಎಲ್‌ಡಿ ನೀರನ್ನು ಸಂಸ್ಕರಣೆ ಮಾಡಲು ಉದ್ದೇಶಿಸಲಾಗಿದೆ.

ಕೊಳಚೆ ನೀರಿನಿಂದ ಅಂತರ್ಜಲ ಕಲುಷಿತಗೊಳ್ಳದಂತೆ ಘಟಕದಲ್ಲಿ ಪ್ಲಾಸ್ಟಿಕ್‌ ಹಾಳೆ ಹೊದಿಸಿ ಅದರ ಮೇಲೆ ಮರಳು ಸುರಿಯಲಾಗಿದೆ. ಇನ್ನು ನಗರದ ಒಳಚರಂಡಿ ನೀರು ಗೋರನಳ್ಳಿ ಎಸ್‌ಟಿಪಿ ಘಟಕಕ್ಕೆ ಹರಿದು ಬರಲಿದೆ. ಕೊಳಚೆ ನೀರು ಸಂಗ್ರಹಕ್ಕೆ ಬೃಹತ್ ಬಾವಿಯನ್ನೂ ನಿರ್ಮಿಸಲಾಗಿದೆ. ಇಲ್ಲಿ ಸಂಸ್ಕರಿಸಿದ ನೀರಿನ ಮೂಲಕ ಕೃಷಿಗೆ ಅನುಕೂಲ ಮಾಡಿಕೊಡಲು ಸಿದ್ಧತೆ ನಡೆದಿದೆ.

2011ರಲ್ಲಿ ಎಸ್‌ಟಿಪಿ ಸ್ಥಾಪನೆಗೆ ಪ್ರಯತ್ನ ನಡೆದಾಗ ಕೆಲವರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಕೊಳಚೆ ನೀರು ಸಂಗ್ರಹದಿಂದ ಗಬ್ಬು ವಾಸನೆ ಬರಲಿದೆ. ಅಷ್ಟೇ ಅಲ್ಲ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗಲಿದೆ ಎನ್ನುವುದು ಅವರ ವಾದವಾಗಿತ್ತು. ಆಗ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಸೂಚನೆಯ ಮೇರೆಗೆ ಕೆಯುಐಡಿಎಫ್‌ಸಿ ಅಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳನ್ನು ಹೈದರಾಬಾದ್‌ಗೆ ಕರೆದೊಯ್ದು ಮಾಧ್ಯಮದ ಮೂಲಕ ಅದರ ಪ್ರಯೋಜನವನ್ನು ಸಾರ್ವಜನಿಕರಿಗೆ ಮನವರಿಕೆಗೆ ಯತ್ನಿಸಿದ್ದರು.

ಗೋರನಳ್ಳಿ ಎಸ್‌ಟಿಪಿಗೆ ಆಯ್ಕೆ ಮಾಡಿದ ಪ್ರದೇಶ ನಗರ ಪ್ರದೇಶಕ್ಕಿಂತ 34 ಮೀಟರ್‌ ಕೆಳಗಿದೆ. ನಗರದಿಂದ ನೀರು ಹರಿದು ಬರಲು ಯಾವುದೇ ಅಡೆತಡೆಗಳಿಲ್ಲ. ಎಸ್‌ಟಿಪಿಯಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುವುದನ್ನು ವಿವರಿಸಿದ್ದರು. ತೆರೆದ ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವುದಕ್ಕೆ ಬೇಸತ್ತು ಕೊನೆಗೂ ನಗರದ ಜನತೆ ವೈಜ್ಞಾನಿಕ ವಿಧಾನದಲ್ಲಿ ಎಸ್‌ಟಿಪಿ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದ್ದರು.

**

2013ರಲ್ಲೇ ಪೂರ್ಣಗೊಳ್ಳಬೇಕಿತ್ತು

‘ಮೊದಲ ಅಂದಾಜಿನಂತೆ 2013ರಲ್ಲೇ ಪೂರ್ಣಗೊಳ್ಳಬೇಕಿದ್ದ ಯೋಜನೆ ಈಗ ಪೂರ್ಣಗೊಂಡಿದೆ. ಅಂದಾಜು ವೆಚ್ಚದ ಶೇ 60ರಷ್ಟು ಎಡಿಬಿ ಹಾಗೂ
ಶೇ10ರಷ್ಟನ್ನು ನಗರಸಭೆ ಭರಿಸಿದೆ. ಖಾಸಗಿ ಏಜೆನ್ಸಿಯ ಮೂಲಕ ಎಸ್‌ಟಿಪಿ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ’ ಎಂದು ನಗರಸಭೆಯ ಆಯುಕ್ತ ನರಸಿಂಹಮೂರ್ತಿ ಹೇಳುತ್ತಾರೆ.

**

ತರಕಾರಿ ಬೆಳೆಗೆ ಅನುಕೂಲ

‘ಎಸ್‌ಟಿಪಿಯಿಂದ ನೀರು ಮರು ಬಳಕೆ ಮಾಡಲು ಸಾಧ್ಯವಾಗಲಿದೆ. ತರಕಾರಿ ಬೆಳೆಸಲು ಸಂಸ್ಕರಿಸಿದ ನೀರು ಬಳಸಬಹುದು. ಆಧುನಿಕ ತಂತ್ರಜ್ಞಾನದ ಮೂಲಕ ನೀರು ಸಂಸ್ಕರಣೆ ಮಾಡಲಿರುವ ಕಾರಣ ಸ್ವಚ್ಛತಾ ಕಾರ್ಯಕ್ಕೂ ನೀರನ್ನು ಬಳಸಬಹುದು’ ಎಂದು ನಗರಸಭೆಯ ಪರಿಸರ ಎಂಜಿನಿಯರ್ ರವೀಂದ್ರ ಕೆ. ವಿವರಿಸುತ್ತಾರೆ.

**

ಕಾರ್ಯಾರಂಭಕ್ಕೆ ವಿಳಂಬ

ಹೈದಾಬಾದ್‌ನ ಮೆಘಾ ಎಂಜಿನಿಯರಿಂಗ್‌ ಕಂಪೆನಿ ಕೊಳಚೆ ನೀರು ಸಂಸ್ಕರಣಾ ಘಟಕದ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸಿದೆ. ಇದೇ ಕಂಪೆನಿ ಕೈಗೆತ್ತಿಕೊಂಡಿರುವ ಒಳಚರಂಡಿ ಕಾಮಗಾರಿ ಮಂದಗತಿಯಲ್ಲಿ ಸಾಗಿರುವ ಕಾರಣ ಘಟಕ ಕಾರ್ಯಾರಂಭಕ್ಕೆ ವಿಳಂಬವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT