ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾವಲ್ಮನೆ: ಕೋಟಿ ವೆಚ್ಚದಲ್ಲಿ ಅಯ್ಯಪ್ಪ ದೇಗುಲ

Last Updated 24 ಏಪ್ರಿಲ್ 2017, 6:59 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಕಮ್ಮರಡಿ ಸಮೀಪದ ಚಾವಲ್ಮನೆ ಗ್ರಾಮದಲ್ಲಿ ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ಅಯ್ಯಪ್ಪ ಸ್ವಾಮಿಯ ಭವ್ಯ ದೇಗುಲ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.

ಈ ದೇಗುಲವನ್ನು ನಿರ್ಮಿಸುತ್ತಿರು ವವರು ಸ್ಥಳೀಯ ಕೃಷಿಕ ಸಿ.ಆರ್. ಉಮೇಶ್ ನಾಯ್ಕ್. ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿ,  26 ವರ್ಷಗಳಿಂದ ಪ್ರತೀ ವರ್ಷ ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಯಾತ್ರೆ ಕೈಗೊಳ್ಳುತ್ತಿರುವ ಅವರು, ಶಬರಿಮಲೆಯಂತೆಯೇ 18 ಮೆಟ್ಟಿಲನೇರಿ ಅಯ್ಯಪ್ಪನ ದರ್ಶನ ಪಡೆಯುವ ಮಾದರಿಯಲ್ಲಿ ತಮ್ಮೂರಿ ನಲ್ಲೇ ಭವ್ಯ ದೇಗುಲ ನಿರ್ಮಿಸುವ ಕೆಲಸ ಮಾಡಿದ್ದಾರೆ. ‘ಅಯ್ಯಪ್ಪ ಸ್ವಾಮಿಯ ಜೊತೆಗೆ ಆತನ ಸಹೋದರರಾದ ಗಣೇಶ ಮತ್ತು ಸುಬ್ರಹ್ಮಣ್ಯ ದೇವರನ್ನೂ ಪ್ರತಿ ಷ್ಠಾಪಿಸಲಾಗುವುದು. ಬರುವ ಭಕ್ತರಿಗೆ ಉಳಿದುಕೊಳ್ಳಲು ವಸತಿ, ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು’ ಎಂದಿದ್ದಾರೆ.

‘ಪ್ರತೀ ವರ್ಷ ಊರಿನ ಹತ್ತಾರು ಯುವಕರನ್ನು ಒಟ್ಟುಗೂಡಿಸಿ ಮನೆ ಸಮೀಪದ ‘ಸೋಮನಾಥನ ಬಂಡೆ’ ಯಲ್ಲಿ ಅಯ್ಯಪ್ಪನನ್ನಿಟ್ಟು ಪೂಜಿಸಿ, ಶಬರಿಮಲೆಗೆ ಹೋಗುವ ಪರಿಪಾಠ ಬೆಳೆಸಿಕೊಂಡಿದ್ದೆ. ಅಯ್ಯಪ್ಪನ ಆರಾಧ ನೆಯ ವ್ರತ ನಿಯಮ, ಶಿಸ್ತನ್ನು ಬದುಕಿ ನಲ್ಲೂ ಅಳವಡಿಸಿಕೊಂಡಿದ್ದರಿಂದ ಸಂಕಷ್ಟಗಳು ದೂರಾಗಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಾಯಿತು’ ಎಂದು ಅವರು ತಿಳಿಸಿದ್ದಾರೆ.

‘ನಾನು ಬಡತನದಲ್ಲಿ ಬೆಳೆದವನು. ಹಲವು ವರ್ಷ ಶಿವಮೊಗ್ಗದಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದೆ. ಬಳಿಕ ಕೊಪ್ಪದ ‘ಮ್ಯಾಮ್ಕೋಸ್’ನಲ್ಲಿ ಸಣ್ಣ ಉದ್ಯೋಗ ಸಿಕ್ಕಿತ್ತು. ಅಲ್ಪ ದುಡಿಮೆಯಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಕಷ್ಟಪಟ್ಟಿದ್ದರೂ ಇಬ್ಬರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದೇನೆ. ಈಗ ಹಿರಿಯ ಮಗಳು ಅಶ್ವಿನಿ ಹೈಕೋರ್ಟ್ ವಕೀಲೆಯಾಗಿದ್ದು, ಕಿರಿಯ ಮಗಳು ನಂದಿನಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ನಾನೂ ಕೆಲಸದಿಂದ ನಿವೃತ್ತನಾಗಿ ಕೃಷಿಯಲ್ಲಿ ತೊಡಗಿ ನೆಮ್ಮದಿಯಿಂದ ಇದ್ದೇನೆ’ ಎನ್ನುವ ಉಮೇಶ್ ನಾಯ್ಕ್ ಕೋಟಿ ವೆಚ್ಚದ್ಲ ಅಯ್ಯಪ್ಪಸ್ವಾಮಿ ದೇಗುಲ ನಿರ್ಮಾಣದ ಹಿನ್ನೆಲೆಯನ್ನು ವಿವರಿಸಿದ್ದು ಹೀಗೆ-

‘1999ರಲ್ಲಿ ಬೇಲೂರು ಚನ್ನಕೇಶವ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿ ಆಧಾರ ವಿಲ್ಲದೆ ತಿರುಗುವ ಶಿಲಾಕಂಬವೊಂದು ನನ್ನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿತ್ತು. ಅಂದು ರಾತ್ರಿ ಮನೆಯಲ್ಲಿ ಮಲಗಿದ್ದಾಗ ಅಯ್ಯಪ್ಪ ಸ್ವಾಮಿ ಕನಸಲ್ಲಿ ಬಂದು ‘ಸೋಮನಾಥನ ಬಂಡೆಯಲ್ಲಿ ಗುಡಿ ಕಟ್ಟಿ ನನ್ನನ್ನೂ, ಗಣೇಶ, ಸುಬ್ರಹ್ಮಣ್ಯರನ್ನೂ ಪ್ರತಿಷ್ಠಾಪಿಸು. ನಾವು ಮೂವರು ಬ್ರಹ್ಮ ವಿಷ್ಣು ಮಹೇಶ್ವರರಂತೆ ಲೋಕವನ್ನು ಕಾಪಾಡುತ್ತೇವೆ’ ಎಂದು ಆದೇಶಿಸಿದ್ದು, ಮರುದಿನ ಕುಟುಂಬ ಸದಸ್ಯರಲ್ಲಿ ದೈವ ಸಂಕಲ್ಪವನ್ನು ಹೇಳಿ ಕೊಂಡಾಗ ಮಕ್ಕಳು, ಅಳಿಯಂದಿರು ಸಂತೋಷದಿಂದ ಒಪ್ಪಿ ನೆರವಿನ ಭರವಸೆ ನೀಡಿದ್ದರಿಂದ ಈ ಮಹತ್ಕಾರ್ಯಕ್ಕೆ ಮುಂದಾಗಿದ್ದೇನೆ.

ಚಾವಲ್ಮನೆ ಪಂಚಾ ಯಿತಿಯವರು ಒಂದು ಎಕರೆ ಪ್ರದೇಶವನ್ನು ದೇವಸ್ಥಾನ ನಿರ್ಮಾಣಕ್ಕೆ ಕಾಯ್ದಿರಿಸಿ ಸಹಕರಿಸಿದ್ದಾರೆ’ ಎಂದರು.

ದೇವಸ್ಥಾನ ನಿರ್ಮಾಣಕ್ಕಾಗಿ ಉಮೇಶ್ ನಾಯ್ಕ್ ಅಧ್ಯಕ್ಷತೆಯ ‘ಸ್ವಾಮಿ ಅಯ್ಯಪ್ಪ ಸೇವಾ ಟ್ರಸ್ಟ್’ ರಚಿಸಲಾಗಿದೆ. ಉಪಾಧ್ಯಕ್ಷರಾಗಿ ಪತ್ನಿ ರೂಪಾ, ಕಾರ್ಯದರ್ಶಿಯಾಗಿ ಅಳಿಯ ಸಂದೀಪ್, ನಿರ್ದೇಶಕರಾಗಿ ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಕೆ.ಕಿರಣ್, ಸಾಹಿತಿ ಚಾವಲ್ಮನೆ ಸುರೇಶ್ ನಾಯ್ಕ್, ಎ.ಲಕ್ಷ್ಮಣ, ವಿ.ದುಗ್ಗಪ್ಪ, ವಿಶ್ವನಾಥ್ ಮುಂತಾದವರು ಸಕ್ರಿಯರಾಗಿ ಶ್ರಮಿಸುತ್ತಿದ್ದಾರೆ.

ಕೋಟಿ ವೆಚ್ಚದ  ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸುವವರು ತಮ್ಮ ನೆರವನ್ನು ಕಮ್ಮರಡಿ ಕೆನರಾ ಬ್ಯಾಂಕ್‌ನಲ್ಲಿರುವ ಟ್ರಸ್ಟ್‌ನ  ಖಾತೆ ಸಂಖ್ಯೆ 5571101001710 ಗೆ ನೀಡುವ ಮೂಲಕ ಈ ಮಹತ್ಕಾರ್ಯದಲ್ಲಿ ಕೈಜೋಡಿಸುವಂತೆ ಉಮೇಶ್ ನಾಯ್ಕ್ ಮನವಿ ಮಾಡಿದ್ದಾರೆ.  ಸಿ.ಆರ್. ಉಮೇಶ್ ನಾಯ್ಕ್ ಅವರ ಮೊಬೈಲ್ ಸಂಖ್ಯೆ : 9448767110

*

-ಜಿನೇಶ್ ಇರ್ವತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT