ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಂಕರಾಭರಣಂ ವಿಶ್ವನಾಥ್’ಗೆ ಫಾಲ್ಕೆ ಗೌರವ

Last Updated 24 ಏಪ್ರಿಲ್ 2017, 19:38 IST
ಅಕ್ಷರ ಗಾತ್ರ

‘ಹೂಮಾಲೆ ಕಟ್ಟಲು ಬಳಸಿದ ದಾರ ಕಾಣಬಾರದು. ಸಿನಿಮಾ ಕೂಡ ಅಷ್ಟೆ. ಸೂತ್ರ ಕಾಣಬಾರದು; ಪಾತ್ರಗಳಷ್ಟೇ ಕಾಣಬೇಕು’–ಹೀಗೆಂದಿದ್ದ ನಿರ್ದೇಶಕ, ನಟ, ಧ್ವನಿ ವಿನ್ಯಾಸಕ ಕೆ. ವಿಶ್ವನಾಥ್ ಅವರಿಗೀಗ ದಾದಾಸಾಹೇಬ್ ಫಾಲ್ಕೆ ಗೌರವ.

‘ಶಂಕರಾಭರಣಂ’ ಸಿನಿಮಾ 1979ರಲ್ಲಿ ತೆರೆಕಾಣುವ ಮೊದಲೇ ಅವರು ಮಹಿಳಾ ಸಂವೇದನೆಯ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿದ್ದರು. ತೆಲುಗಿನ ‘ಸಪ್ತಪದಿ’, ‘ಓ ಸೀತ ಕಥಾ’, ‘ಜೀವನ ಜ್ಯೋತಿ’ ಸಿನಿಮಾಗಳೇ ಅದಕ್ಕೆ ಉದಾಹರಣೆಗಳು. ‘ಶುಭಲೇಖ’ ಚಿತ್ರದಲ್ಲಿ ವರದಕ್ಷಿಣೆ ಸಮಸ್ಯೆಯನ್ನು ನವಿರು ಹಾಸ್ಯದ ಶೈಲಿಯಲ್ಲಿ ಬಿಚ್ಚಿಟ್ಟು ಸಹೃದಯರ ಮನಗೆದ್ದವರು ವಿಶ್ವನಾಥ್. ಆದರೂ ದಶಕಗಳ ಕಾಲ ಅವರು ‘ಶಂಕರಾಭರಣಂ ವಿಶ್ವನಾಥ್’ ಎಂಬ ವಿಶೇಷಣಕ್ಕೇ ಪಕ್ಕಾದರು.

ಅದುವರೆಗೆ ಜನ ಗುರುತಿಸದೇ ಇದ್ದ ಜೆ.ವಿ. ಸೋಮಯಾಜುಲು ಎಂಬ ನಟನನ್ನು ಮುಂಚೂಣಿಗೆ ತಂದ ಗೌರವವೂ ಅವರದ್ದಾಯಿತು. ಅಷ್ಟೇ ಅಲ್ಲ, ಸೋಮಯಾಜುಲು ಅವರಿಗಿದ್ದ ಆರ್ಥಿಕ ಮುಗ್ಗಟ್ಟಿಗೆ ಪರಿಹಾರದ ರೂಪದಲ್ಲಿಯೂ ಒದಗಿಬಂದ ಆ ಚಿತ್ರ ಒಂದೂವರೆ ವರ್ಷ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗಿ ದಾಖಲೆ ಸೃಷ್ಟಿಸಿತು. 1980ರಲ್ಲಿ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಸಂದದ್ದು ಬೋನಸ್ಸು.

ಕೃಷ್ಣಾ ನದಿ ತೀರದ ಪೆದಪುಲಿವರ್ರು ಎಂಬ ಹಳ್ಳಿಯಲ್ಲಿ ಸುಬ್ರಹ್ಮಣ್ಯಂ ಹಾಗೂ ಸರಸ್ವತಿ ದಂಪತಿಯ ಮಗನಾಗಿ 1930ರಲ್ಲಿ ಹುಟ್ಟಿದ ವಿಶ್ವನಾಥ್, ಚಲನಚಿತ್ರ ವೃತ್ತಿ ಪ್ರಾರಂಭಿಸಿದ್ದು ಚೆನ್ನೈನ ಸ್ಟುಡಿಯೊದಲ್ಲಿ ತಂತ್ರಜ್ಞನಾಗಿ. ನಿರ್ದೇಶಕರಾದ ಅದುರ್ತಿ ಸುಬ್ಬರಾವ್ ಹಾಗೂ ರಾಮನಾಥ್ ಅವರಿಗೆ ಸಹಾಯಕನಾಗಿ ಕೆಲಸ ಮಾಡಿ ಕೈಪಳಗಿಸಿಕೊಂಡದ್ದು. ಧ್ವನಿ ವಿನ್ಯಾಸದ ಒಲವಿಗೆ ತಾವು ಸಿಕ್ಕಿದ್ದೂ ಆಗಲೇ. ಅಕ್ಕಿನೇನಿ ನಾಗೇಶ್ವರ ರಾವ್ ಅಭಿನಯದ ‘ಆತ್ಮಗೌರವಂ’ ಮೂಲಕ ಸ್ವತಂತ್ರ ನಿರ್ದೇಶಕರಾದರು.

ಪರ್ಯಾಯ ಸಿನಿಮಾಗಳಿಗೆ ಇರುವಂಥ ಕಲಾತ್ಮಕತೆಯನ್ನು ಜನಪ್ರಿಯ ಧಾಟಿಗೆ ಒಗ್ಗಿಸುವ ಮೂಲಕ ವಿಶ್ವನಾಥ್ ತಾವು ನಂಬಿದ ಸಿನಿಮಾ ಮಾಲೆ ಕಟ್ಟತೊಡಗಿದರು. ‘ಶಾರದಾ’, ‘ಓ ಸೀತ ಕಥಾ’ ಅವರ ಪಾಲಿಗೆ ಪ್ರಯೋಗಶಾಲೆ ಆಗಿತ್ತಾದರೂ ‘ಸಿರಿ ಸಿರಿ ಮುವ್ವಾ’ ತೆಲುಗು ಚಿತ್ರದಲ್ಲಿ ಅವರ ಅನನ್ಯತೆ ಮೊದಲು ವ್ಯಕ್ತಗೊಂಡಿತು. ಅದು ಗೆದ್ದುದೇ ಸಂಗೀತ, ನಾಟ್ಯದಂಥ ಕಲೆಯನ್ನು ಬೆಸೆದು ಚಿತ್ರಕಥೆ ಹೊಸೆಯಲಾರಂಭಿಸಿದರು. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪಾಶ್ಚಾತ್ಯ ಸಂಗೀತಕ್ಕೆ ಮುಖಾಮುಖಿಯಾಗಿಸಿದ ಹರಳುಗಟ್ಟಿದ ಯತ್ನವಾಗಿ ಸದ್ದು ಮಾಡಿದ್ದು ‘ಶಂಕರಾಭರಣಂ’.

‘ತೋಡಿ ಕಡಲು’ ಸಿನಿಮಾದಲ್ಲಿ ವಾದ್ಯ ಸಂಯೋಜನೆ, ಮಾಧುರ್ಯದ ನಡುವಿನ ಸಮತೋಲನ ನನಗೆ ಹಿಡಿತಕ್ಕೆ ಸಿಕ್ಕಿತು. ಜನರ ಜ್ಞಾನೇಂದ್ರಿಯಗಳನ್ನು ಹಿಡಿದಿಟ್ಟುಕೊಳ್ಳುವ ಬಗೆ ಹೇಗೆಂದು ಹೊಳೆದದ್ದೂ ಆಗಲೇ. ಅಲ್ಲಿಂದ ಎಲ್ಲ ಕಥನ ಯೋಚನೆಗಳಿಗೂ ಸಂಗೀತ, ಕಲೆಯ ಚೌಕಟ್ಟು ಇರುತ್ತಿತ್ತು’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಭಾವ ಸಂಕೇತಗಳನ್ನು ಗಾಢವಾಗಿಸಿಕೊಂಡ ಅವರ ಸಿನಿಮಾಗಳಿಗೆ ಸಾಮಾಜಿಕ ಆಯಾಮವೂ ಇರುತ್ತಿತ್ತು. ‘ಶುಭಲೇಖ’ ತೆಲುಗು ಚಿತ್ರದ ಅಡುಗೆಯವ, ‘ಸ್ವಯಂಕೃಷಿ’ಯ ಮೋಚಿ, ‘ಸೂತ್ರಧಾರುಲು’ ಚಿತ್ರದ ಹರಿದಾಸ, ‘ಸ್ವಾತಿಮುತ್ಯಂ’ನ ಪರಮ ಮುಗ್ಧ, ‘ಸ್ವರಾಭಿಷೇಕಂ’ನ ಸ್ವರಮೋಹಿ ಎಲ್ಲ ಪಾತ್ರಗಳ ಆತ್ಮ ಒಂದೇ ಆದರೂ ‘ದರ್ಶನ’ ಮಾತ್ರ ಬೇರೆ ಬೇರೆ.

ದುರಂತ ಅಂತ್ಯಗಳೆಂದರೆ ಈ ನಿರ್ದೇಶಕರಿಗೆ ಇಷ್ಟ ಎಂಬ ಅಭಿಪ್ರಾಯವೂ ಒಂದು ಕಾಲಘಟ್ಟದಲ್ಲಿ ಮೂಡಿತ್ತು. ‘ಸಾಗರಸಂಗಮಂ’, ‘ಸ್ವಾತಿಮುತ್ಯಂ’, ‘ಸಿರಿವೆನ್ನೆಲ’, ‘ಆಪದ್ಬಾಂಧವುಡು’ ಸಿನಿಮಾಗಳ ಕಥಾನಾಯಕ ಅಥವಾ ನಾಯಕಿಯ ದುರಂತಗಳೇ ಇದಕ್ಕೆ ಸಾಕ್ಷಿ. ಪ್ರಜ್ಞಾಪೂರ್ವಕವಾಗಿ ಹೀಗೆ ಕಥೆಯನ್ನೇನೂ ಹೆಣೆದಿರಲಿಲ್ಲ ಎಂದಿದ್ದ ವಿಶ್ವನಾಥ್, ವೈಯಕ್ತಿಕವಾಗಿ ತಮಗೆ ದುರಂತವೆಂದರೆ ಇಷ್ಟವಿಲ್ಲ. ಅದಕ್ಕೇ ಅಂತಹ ದೃಶ್ಯಗಳನ್ನು ಲಂಬಿಸದೆ ಚಕಚಕನೆ ಮುಗಿಸಿರುವುದಾಗಿ ಹೇಳಿದ್ದರು.

ಚಿತ್ರಕಥೆ ಬರೆಯುವಾಗ ಇಂಥ ನಾಯಕನೇ ಪಾತ್ರಕ್ಕೆ ಸೂಕ್ತ ಎಂದು ಯಾವತ್ತೂ ಯೋಚಿಸದ ಅವರು ಕಾಲ್‌ಷೀಟ್ ಸಿಕ್ಕ ದಿಗ್ಗಜ ನಟರಿಗೇ ಅವಕಾಶ ಕೊಟ್ಟರು. ಕಮಲಹಾಸನ್, ಚಿರಂಜೀವಿ, ಚಂದ್ರಮೋಹನ್ ಇವರೆಲ್ಲ ವಿಶ್ವನಾಥ್ ಗರಡಿಯಲ್ಲಿ ಅಭಿನಯದ ಸಾಣೆಗೆ ಸಿಲುಕಿದವರು.

ಚಿರಂಜೀವಿ ರಾಜಕೀಯಕ್ಕೆ ಕಾಲಿಟ್ಟ ಮೇಲೆ, ‘ಇನ್ನು ಆತ ಮೆಗಾಸ್ಟಾರ್ ಅಲ್ಲವೇ ಅಲ್ಲ’ ಎಂದು ಟೀಕಿಸಿ ಸುದ್ದಿಯಾಗಿದ್ದ ವಿಶ್ವನಾಥ್, ಹಿಂದಿ ಹಾಗೂ ತಮಿಳು ಚಿತ್ರಗಳನ್ನೂ ನಿರ್ದೇಶಿಸಿದರು. ‘ಕಾಮ್‌ಚೋರ್‌’, ‘ಸಂಜೋಗ್‌’, ‘ಜಾಗ್‌ ಉಠಾ ಇನ್ಸಾನ್’, ‘ಈಶ್ವರ್’ (ಸ್ವಾತಿಮುತ್ಯಂ ರೀಮೇಕ್), ‘ಸುರ್‌ ಸಂಗಮ್’, ‘ಶುಭ್ ಕಾಮ್ನಾ’, ‘ಸಂಗೀತ್’, ‘ಧನ್‌ವಾನ್’ ಅವರು ನಿರ್ದೇಶನದ ಹಿಂದಿ ಚಿತ್ರಗಳು. ಐದು ರಾಷ್ಟ್ರ ಪ್ರಶಸ್ತಿಗಳು, ಆರು ನಂದಿ ಹಾಗೂ ಹತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳು ಅವರ ಪ್ರಭಾವಳಿಗೆ ಮೆರುಗು ನೀಡಿವೆ.

‘ಸರ್‌ಗಮ್‌’ ಹಿಂದಿ ಸಿನಿಮಾ ಚಿತ್ರೀಕರಣದ ಸಂದರ್ಭ ಆಕಸ್ಮಿಕವಾಗಿ ಕಾಲಿನ ಮೂಳೆ ಮುರಿದಿತ್ತು. ದೀರ್ಘ ಕಾಲ ಆ ನೋವಿನಿಂದ ನರಳಿದ್ದರು. ‘ಒಂದು ಸಿನಿಮಾ ನಿರ್ದೇಶಿಸುವುದೆಂದರೆ ಐದು ವರ್ಷ ಆಯುಸ್ಸು ಕಡಿಮೆ ಆದಂತೆ’ ಎಂದು ಆಗ ನೋವಿನಿಂದ ನುಡಿದಿದ್ದರು. ಅಭಿನಯದ ಮೂಲಕವೂ ಗುರುತಾಗಿದ್ದ ಅವರು 2000ನೇ ಇಸವಿಯಲ್ಲೂ ‘ಕಲಿಸುಂದಾಂ ರಾ’ ತೆಲುಗು ಚಿತ್ರದ ನಟನೆಗೆ ನಂದಿ ಪ್ರಶಸ್ತಿಗೆ ಭಾಜನರಾಗಿದ್ದರು.

ಎಂಬತ್ತೇಳರ ಪ್ರಾಯದ ಅವರನ್ನು ಈಗಲೂ ವಿದೇಶೀಯರು ಸಹ ‘ಶಂಕರಾಭರಣಂ ವಿಶ್ವನಾಥ್’ ಎನ್ನುತ್ತಾರೆ. ಸಿಎನ್‌ಎನ್‌–ಐಬಿಎನ್ ಬಿಡುಗಡೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ 100 ಚಿತ್ರಗಳ ಪಟ್ಟಿಯಲ್ಲಿ ಆ ಚಿತ್ರವೂ ಇದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT