ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕುಟುಂಬ ನಿರ್ವಹಣೆಗಾಗಿ ಲೈಂಗಿಕ ವೃತ್ತಿಗಿಳಿಯುತ್ತಿದ್ದಾರೆ ಗೃಹಿಣಿಯರು?

Last Updated 25 ಏಪ್ರಿಲ್ 2017, 12:32 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಗೃಹಿಣಿಯರು ಕುಟುಂಬದ ನಿರ್ವಹಣೆಗಾಗಿ ಲೈಂಗಿಕ ವೃತ್ತಿಯತ್ತ ಹೊರಳುತ್ತಿದ್ದಾರೆ. ಮನೆ, ಮಕ್ಕಳ ಖರ್ಚು ನಿಭಾಯಿಸುವುದು ಕಷ್ಟವಾದಾಗ ಬೇರೇನೂ ದಾರಿ ತೋಚದೆ 'ಸುಲಭವಾಗಿ' ಸಂಪಾದನೆ ಮಾಡಬಹುದು ಎಂದು ಇವರು ಲೈಂಗಿಕ ವೃತ್ತಿಯನ್ನು ಆಯ್ಕೆ ಮಾಡುತ್ತಿದ್ದಾರೆ ಅಂತಾರೆ ಇಲ್ಲಿನ ಸಾಮಾಜಿಕ ಕಾರ್ಯಕರ್ತರು. ಈ ಬಗ್ಗೆ ಯೂತ್ ಕಿ ಆವಾಜ್ ಡಾಟ್ ಕಾಂನಲ್ಲಿ ಪ್ರಕಟಿಸಿದ ವರದಿಯಲ್ಲಿದೆ ಕೆಲವು ಬದುಕಿನ ಕತೆಗಳು.

ನಾನು ಅನಕ್ಷರಸ್ಥೆ. ಕುಟುಂಬದ ಪೋಷಣೆಗಾಗಿ ನನಗೆ ಹಣದ ಅವಶ್ಯಕತೆ ಇದೆ. ನಾನೀಗ ಲೈಂಗಿಕ ವೃತ್ತಿಗಿಳಿದಿದ್ದೀನಿ. ನನ್ನ ಕುಟುಂಬಕ್ಕಾಗಿ ನಾನು ತ್ಯಾಗ ಮಾಡಿದ್ದೀನಿ. ಈ ಬಗ್ಗೆ ನನಗೆ ಹೆಮ್ಮೆ ಇದೆ ಅಂತಾರೆ  ಜಯಪ್ರದಾ (ಹೆಸರು ಬದಲಿಸಲಾಗಿದೆ).

ಮಕ್ಕಳನ್ನು ಉಪವಾಸಕ್ಕೆ ದೂಡುವುದರ ಬದಲು ಲೈಂಗಿಕ ವೃತ್ತಿಗಿಳಿಯುವದರಲ್ಲಿ ತಪ್ಪೇನಿದೆ? ಎಂಬುದು ಜಯಾ ಅವರ ನಿಲುವು.
ಕುಟುಂಬ ನಿರ್ವಹಣೆಗಾಗಿ ಲೈಂಗಿಕ ವೃತ್ತಿಗಿಳಿದ ಬೆಂಗಳೂರಿನ ಗೃಹಿಣಿಯರಲ್ಲಿ ಜಯಾ ಕೂಡಾ ಒಬ್ಬರು. ನಗರದಲ್ಲಿರುವ ಲೈಂಗಿಕ ವೃತ್ತಿ ನಿರತರು ದಿನವೊಂದಕ್ಕೆ ₹500 ರಿಂದ ₹3000 ಸಂಪಾದನೆ ಮಾಡುತ್ತಾರೆ. ಈ ವೃತ್ತಿ ಆಯ್ಕೆ ಮಾಡಿಕೊಂಡವರಲ್ಲಿ ಹೆಚ್ಚಿನ ಮಹಿಳೆಯರು ಅನಕ್ಷರಸ್ಥರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿದ್ದಾರೆ.

ಕಮಲಾ (ಹೆಸರು ಬದಲಿಸಲಾಗಿದೆ) ಅವರ ಪತಿ ಹಾಸಿಗೆ ಹಿಡಿದಾಗ, ಬೇರೆ ಯಾವ ದಾರಿ ಕಾಣದೆ ಲೈಂಗಿಕ ವೃತ್ತಿಗಿಳಿಯಲೇ ಬೇಕಾಯಿತು. ಕುಟುಂಬ ಸಾಗಬೇಕಲ್ಲಾ...ಹಾಗಾಗಿ ಪತಿ ಕೂಡಾ ನನ್ನ ನಿರ್ಧಾರವನ್ನು ಬೆಂಬಲಿಸಿದ್ದಾರೆ ಅಂತಾರೆ ಇವರು. ಗಾರ್ಮೆಂಟ್  ಕಾರ್ಖಾನೆಯೊಂದರಲ್ಲಿ ಟೇಲರ್ ಆಗಿದ್ದ ಕಮಲಾ ಅವರಿಗೆ ತಿಂಗಳಿಗೆ ₹5000 ಸಂಬಳ ಸಿಗುತ್ತಿತ್ತು. ಪತಿ ಹಾಸಿಗೆ ಹಿಡಿದಾಗ ಮನೆಯಲ್ಲಿ ಊಟ ತಿಂಡಿಗೆ ಹಣ ಸಾಕಾಗುತ್ತಿರಲಿಲ್ಲ. ಹಾಗಾಗಿ ಈ ಕೆಲಸಕ್ಕಿಳಿದೆ. ಇದೇ ಕೆಲಸ ಮಾಡುವ ನನ್ನ ಗೆಳತಿಯರು ತಿಂಗಳಿಗೆ  ₹10,000ದಿಂದ 12,000 ವರೆಗೆ ಸಂಪಾದನೆ ಮಾಡುತ್ತಾರೆ. ಈ ವೃತ್ತಿಗಿಳಿದ ನಂತರ ಗಾರ್ಮೆಂಟ್  ಕಾರ್ಖಾನೆ ಕೆಲಸವನ್ನೂ ಬಿಟ್ಟೆ.

ಲೈಂಗಿಕ ವೃತ್ತಿಗಿಳಿದ ನಂತರ ನಾನು ನನ್ನ ಗಂಡನ ಮೆಡಿಕಲ್ ಬಿಲ್ ಪಾವತಿ ಮಾಡುವಂತಾಯಿತು. ಅಷ್ಟೇ ಅಲ್ಲ ಅವರ ಶುಶ್ರೂಷೆಗೆ  ಹೆಚ್ಚು ಸಮಯವೂ ದೊರಕಿತು ಅಂತಾರೆ ಕಮಲಾ. 

ಲಕ್ಷ್ಮಿ ಅವರ ಮನೆ ಕಥೆ ಕಮಲಾ ಅವರಿಗಿಂತ ಭಿನ್ನ. ಲಕ್ಷ್ಮಿ ಅವರ ಮನೆಯಲ್ಲಿ ಈಕೆ ಲೈಂಗಿಕ ವೃತ್ತಿ ಮಾಡುತ್ತಿರುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಈಕೆ ಬೆಂಗಳೂರಿನವರಲ್ಲ, ಆದರೆ ಬೆಂಗಳೂರು ಇವರ ಕರ್ಮ ಭೂಮಿ.

ನಾನು ಇಲ್ಲಿ ಮನೆಗೆಲಸ ಮಾಡುತ್ತಿದ್ದೇನೆ ಎಂದು  ನನ್ನ ಪತಿ ಮತ್ತು ಮಕ್ಕಳು ನಂಬಿದ್ದಾರೆ. ನನ್ನ ಗಿರಾಕಿ ಮತ್ತು ಈ ವೃತ್ತಿಯಲ್ಲಿರುವವರಿಗೆ ಮಾತ್ರ ಈ ವಿಷಯ ಗೊತ್ತಿದೆ. ಕಳೆದ ಎಂಟು ವರ್ಷಗಳಿಂದ ನಾನು ಈ ರೀತಿಯ ಜೀವನ ನಡೆಸುತ್ತಿದ್ದೇನೆ. ನನ್ನ ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ನಾನಿಲ್ಲಿಗೆ ಬಂದಿದ್ದೇನೆ. ನನಗೆ ಬಡತನದ ಬಗ್ಗೆ ಭಯವಿದೆ. ನನ್ನ ಪತಿ ಬಡಗಿ, ತಿಂಗಳಿಗೆ ₹12,000 ಸಂಪಾದನೆ ಮಾಡುತ್ತಾರೆ. ಆದರೆ ಐವರು ಸದಸ್ಯರಿರುವ ಕುಟುಂಬದ ನಿರ್ವಹಣೆಗೆ ಸಾಕಾಗುವುದಿಲ್ಲ.

ಹೊಟ್ಟೆ ಪಾಡು
ಹೀಗೆ ವೃತ್ತಿಗಿಳಿದ ಮಹಿಳೆಯರು ಹೆಚ್ಚೆಚ್ಚು ದುಡ್ಡು ಸಂಪಾದನೆ ಮಾಡುತ್ತಾ ಹೋದರಂತೆ ಅವರ ಕುಟುಂಬ ಮತ್ತು ಸಮುದಾಯ ಅವರಿಗೆ ಗೌರವ ನೀಡುತ್ತದೆ ಎಂಬುದು ಲೈಂಗಿಕ ವೃತ್ತಿ ನಿರತರು ಮತ್ತು ಲೈಂಗಿಕ ಅಲ್ಪ ಸಂಖ್ಯಾತರನ್ನು ತುಂಬಾ ಹತ್ತಿರದಿಂದ ಬಲ್ಲ, ಮಂಗಳಮುಖಿಯರ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ನಿಶಾ ಗುಲೂರ್ ಅಭಿಪ್ರಾಯ.

ಆರ್ಥಿಕವಾಗಿ ಸುದೃಢವಾಗಿದ್ದರೆ ಸಮಾಜದಲ್ಲಿ ಅವರ ಘನತೆಯೂ ಹೆಚ್ಚುತ್ತದೆ. ಹಾಗಂತ ಲೈಂಗಿಕ ವೃತ್ತಿ ತುಂಬಾ ಸುಲಭವಲ್ಲ. ಅಲ್ಲಿಯೂ ಸಮಸ್ಯೆಗಳಿರುತ್ತವೆ. ಗಿರಾಕಿಗಳಿಂದ, ಪೊಲೀಸರಿಂದ ಹಿಂಸೆ ಅನುಭವಿಸಬೇಕಾಗಿ ಬರುತ್ತದೆ. ಈ ವೃತ್ತಿಗೆ ಇಳಿಯುವಾಗ ಇಂಥಾ ಸಮಸ್ಯೆಗಳನ್ನು  ಎದುರಿಸಲು ತಯಾರಿರಬೇಕು ಅಂತಾರೆ ನಿಶಾ.

ಬಡತನವೇ ಮುಖ್ಯ ಕಾರಣ
ಈ ವೃತ್ತಿಯಲ್ಲಿ ನನಗೆ ಹೆಚ್ಚಿನ ಅನುಭವವಿದೆ. ಹೆಚ್ಚಾಗಿ ದಲಿತ ಮತ್ತು ಕೆಳವರ್ಗದ ಮಹಿಳೆಯರು ಈ ವೃತ್ತಿಗೆ ಬರುತ್ತಾರೆ. ಇದಕ್ಕೆ ಕಾರಣ ಬಡತನ, ಇಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದವರೂ ಇದ್ದಾರೆ. ಆದರೆ ಅವರ ಸಂಖ್ಯೆ ಅತೀ ಕಡಿಮೆ. ಇಲ್ಲಿ ಯಾವ್ಯಾವ ಸಮುದಾಯವರು ಎಷ್ಟೆಷ್ಟು ಇದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿಯೇನೂ ಇಲ್ಲ. ಈ ಬಗ್ಗೆ ನಾವು ಸಮೀಕ್ಷೆ ಮಾಡಬೇಕೆಂದಿದ್ದೇವೆ ಅಂತಾರೆ ಕರ್ನಾಟಕ ಲೈಂಗಿಕ ವೃತ್ತಿನಿರತರ ಸಂಘದ ಪ್ರಧಾನ ಕಾರ್ಯದರ್ಶಿ ಭಾರತಿ.

ಕರ್ನಾಟಕ ರಾಜ್ಯ ಏಡ್ಸ್ ನಿವಾರಣಾ ಸೊಸೈಟಿ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 85,000 ಲೈಂಗಿಕ ವೃತ್ತಿ ನಿರತರು ಇದ್ದಾರೆ. ಇವರಿಗೆ ಗುರುತಿನ ಚೀಟಿ, ಕಲ್ಯಾಣ ಯೋಜನೆ ಮತ್ತು ತಾರತಮ್ಯ ಮತ್ತು ದೌರ್ಜನ್ಯ ವಿರುದ್ಧ ರಕ್ಷಣೆ  ನೀಡುವುದರ ಬಗ್ಗೆ ಸಂಸ್ಥೆ ಕಾರ್ಯವೆಸಗುತ್ತಿದೆ. ಆದಾಗ್ಯೂ, ಈ ಸಂಸ್ಥೆಯಲ್ಲಿ ನೋಂದಣಿ ಮಾಡಿದವರಲ್ಲಿ ಕೆಲವೇ ಕೆಲವರು ಮಾತ್ರ ಗೃಹಿಣಿಯರಾಗಿದ್ದಾರೆ.

ಅಂದಹಾಗೆ ಗೃಹಿಣಿಯರು ಲೈಂಗಿಕ ವೃತ್ತಿಯತ್ತ ಯಾಕೆ ಹೊರಳುತ್ತಿದ್ದಾರೆ? ಎಂಬುದರ ಬಗ್ಗೆ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ನಾಗಸಿಂಹ ರಾವ್ ಹೇಳುವುದು ಹೀಗೆ... ಇಲ್ಲಿನ ನಗರದಲ್ಲಿ ವಾಸಿಸುವ ಬಡ ಕುಟುಂಬಗಳಲ್ಲಿ ಗೃಹಿಣಿಯರು ತುಂಬಾ ಕಷ್ಟದ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಕೆಲವೊಂದು ಮನೆಯಲ್ಲಿ ಗಂಡಸರು ಮಹಿಳೆಯರನ್ನು ದುಡಿಯಲು ಕಳುಹಿಸುವುದಿಲ್ಲ ಆದರೆ ಮನೆಯ ಜವಾಬ್ದಾರಿ ಹೊರಬೇಕು ಎಂದು ಬಯಸುತ್ತಾರೆ. ಮನೆಯಲ್ಲಿ ಮಕ್ಕಳು  ಬೆಳೆಯುತ್ತಿದ್ದಂತೆ ಖರ್ಚು ಕೂಡಾ ಜಾಸ್ತಿಯಾಗುತ್ತಾ  ಹೋಗುತ್ತದೆ. ಭಾರತದಲ್ಲಿ ಕೂಲಿ ಸಂಬಳವೂ ಕಡಿಮೆ ಆಗಿರುವುದರಿಂದ  ಮನೆಯ ಖರ್ಚು ನಿಭಾಯಿಸಲು ಬೇರೊಂದು ಮೂಲ ಹುಡುಕಲೇ ಬೇಕಾಗುತ್ತದೆ. ಈ ಸ್ಥಿತಿ ಬಂದಾಗ ಗೃಹಿಣಿಯರು ಮೈ ಮಾರಿ ಕೊಳ್ಳಲು ಮುಂದಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT