ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟು ಮುಖದ ಗೆಲುವಿನ ಗುಟ್ಟು

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಹದಿನಾಲ್ಕು ವರ್ಷದೊಳಗಿನವರ ವಿಭಾಗದಲ್ಲಿ ಟೆನಿಸ್ ಆಡಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊಮ್ಮಿದ ಆ್ಯಂಡಿ ಮರ್ರೆ ಅಂಗಣದ ಆಚೆ ಜೋಕುಮಾರಸ್ವಾಮಿ ಅರ್ಥಾತ್ ಜೋಕುಗಳ ಸಿಡಿಸುವ ಹುಡುಗ. ಆಟಕ್ಕಿಳಿದಾಗ ಮಾತ್ರ ಮುಖ ಗಂಟಿಕ್ಕುವುದೇ ಹೆಚ್ಚು. 
 
ಸ್ಕಾಟ್ಲೆಂಡ್ ಹುಡುಗ ಮರ್ರೆ ಮೊದಲು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯ ಸನಿಹ ಬಂದು ಸೋತಾಗ ಎದುರಾಗಿದ್ದ ಪ್ರಶ್ನೆ: ‘ನೀನ್ಯಾಕೆ ಗ್ರೇಟ್ ಬ್ರಿಟನ್ ಪರವಾಗಿ ಆಡುತ್ತಿರುವೆ’. ಆಗ ಮರ್ರೆ ದೀರ್ಘವಾದ ಉತ್ತರ ಕೊಟ್ಟಿದ್ದರು. ಬರೆಯುವವರಿಗೆ ಅದು ಒಳ್ಳೆಯ ಆಹಾರವಾಗಿ ಬಿಟ್ಟಿತು.
 
ಆಮೇಲಿನ ಸುದ್ದಿಗೋಷ್ಠಿಗಳಲ್ಲಿ ಅವರು ಮಾತಿನ ವಿಷಯದಲ್ಲಿ ಜುಗ್ಗರಾಗಿಬಿಟ್ಟರು. ಅಳೆದು ತೂಗಿಯಷ್ಟೇ ಎಲ್ಲ ಪ್ರಶ್ನೆಗಳಿಗೂ ಉತ್ತರ. ಒಂದು ಪದವನ್ನೂ ದುಂದು ಮಾಡಬಾರದೆಂಬ ಎಚ್ಚರಿಕೆ. 
 
ಹತಾಶೆಯಲ್ಲಿದ್ದಾಗ ಮರ್ರೆ ವರ್ತನೆಯನ್ನು ಕಂಡವರು ಬೆಚ್ಚಿಬಿದ್ದ ಉದಾಹರಣೆಗಳಿವೆ. ರ್‍ಯಾಕೆಟ್ ಬಿಸಾಡಿದ್ದು, ಬಾಳೆಹಣ್ಣಿನ ಸಿಪ್ಪೆಯನ್ನು ಎಲ್ಲೆಂದರಲ್ಲಿಗೆ ಎಸೆದದ್ದು, ಕಿಟ್ ಅನ್ನು ಒದ್ದದ್ದು, ಇಷ್ಟದ ಫೆರಾರಿ ಕಾರನ್ನು ಪಾರ್ಕ್ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಮಾರಿದ್ದು ಹೀಗೆ. 
 
ಮರ್ರೆ ತನ್ನನ್ನು ತಾನೇ ಸ್ವಾರ್ಥಿ ಎಂದು ಕರೆದುಕೊಂಡಿದ್ದರು. ಅದಿಲ್ಲವಾದರೆ ಟೆನಿಸ್ ಆಡಿ ಗೆಲ್ಲಲಾಗದು ಎನ್ನುವುದು ಅವರ ಸಮಜಾಯಿಷಿ. ನೊವಾಕ್ ಜೋಕೋವಿಕ್, ರೋಜರ್ ಫೆಡರರ್, ರಫೆಲ್ ನಡಾಲ್ ಈ ಮೂವರನ್ನೂ ಆಗೀಗ ಸೋಲಿಸಿರುವ, ಮೂವರಿಂದಲೂ ಹೆಚ್ಚಾಗಿ ಸೋಲುಂಡಿರುವ ಮರ್ರೆ ತಮ್ಮ ಆ ಸ್ವಾರ್ಥದಿಂದಲೇ ಆಟವನ್ನು ಉತ್ತಮಪಡಿಸಿಕೊಂಡವರು.
 
ಸದಾ ಗಂಟು ಮುಖದ ದೂರ್ವಾಸನಂತೆ ಕಾಣುವ ಈ ಆಟಗಾರ ಒಳಗಿನ ಕೋಪವನ್ನು ಹೊರಹಾಕಿ ಹಗುರಾಗುವುದಾದರೂ ಹೇಗೆ? ಈ ಪ್ರಶ್ನೆಗೆ ಅವರೇ ಕೊಟ್ಟಿರುವ ಉತ್ತರ ಮಜವಾಗಿದೆ, ಓದಿ: ‘ಟೆನಿಸ್ ಆಡುವಾಗ ಎರಡು ಮೂರು ಗೇಮ್‌ಗಳಲ್ಲಿ ಕೋಪದಿಂದ ಆಡಿದರೆ ಗಿಟ್ಟುವುದಿಲ್ಲ; ಹತಾಶೆಯಲ್ಲಿ ಕೊನೆಯಾಗುತ್ತದಷ್ಟೆ. ಆಗೀಗ ಕೋಪ ಮಾಡಿಕೊಂಡರೆ ಅದು ಆಟಕ್ಕಿಳಿದು, ಎದುರಾಳಿಯನ್ನು ಪೇಚಿಗೆ ಸಿಲುಕಿಸಬಹುದು. ಕೋಪದಲ್ಲಿದ್ದಾಗ ಕೆಲವು ಪಾಯಿಂಟ್‌ಗಳನ್ನು ಗೆದ್ದರೆ ಸಹಜವಾಗಿಯೇ ಅದರ ಪ್ರಮಾಣ ಕಡಿಮೆಯಾಗಿಬಿಡುತ್ತದೆ. ಆಮೇಲೆ ನಮ್ಮದೇ ಆಟ’.
 
ಹೀಗೆ ಭಾವ ತುಳುಕಿಸುವುದರಲ್ಲೂ ಅಳತೆ ಮಾಡಿದಂತೆ ವರ್ತಿಸುವ ಮರ್ರೆ ಚಿಕ್ಕಂದಿನಲ್ಲಿ ಗೋ-ಕಾರ್ಟಿಂಗ್, ಫುಟ್‌ಬಾಲ್ ಹಾಗೂ ಸ್ನೂಕರ್ ಆಡಿದವರು. ಇವೆಲ್ಲವೂ ಟೆನಿಸ್‌ಗಿಂತ ಸಂಪೂರ್ಣ ಭಿನ್ನ ಎಂದು ಅವರಿಗನ್ನಿಸಿದೆ. ‘ಫುಟ್‌ಬಾಲ್‌ನಲ್ಲಿ ದಿಗ್ಗಜರ ನಡುವೆ ಸ್ಪರ್ಧೆ ಇರುವುದಿಲ್ಲ; ಅವರ ತಂಡಗಳ ನಡುವೆ ಪೈಪೋಟಿ ಇರುತ್ತದೆ’ ಎನ್ನುವ ಈ ಟೆನಿಸ್ ಆಟಗಾರನಿಗೆ ಸ್ನೂಕರ್ ಒತ್ತಡಮುಕ್ತಿಯ ದಾರಿಯಂತೆ ಒದಗಿಬಂದಿದೆ. 
 
ಮನಸ್ಸಿನಲ್ಲಿ ಏನೋ ಹೊಯ್ದಾಟ ಇದ್ದರೆ ಸೀದಾ ಬಾಕ್ಸಿಂಗ್ ನೋಡಲು ಹೊರಟುಬಿಡುತ್ತಾರೆ. ಮಿಯಾಮಿಯಲ್ಲಿ ಡೇವಿಡ್ ಹೇಯ್ ಬಾಕ್ಸರ್‌ಗಳಿಗೆ ತರಬೇತಿ ನೀಡುವುದನ್ನು ನೋಡಲೆಂದೇ ಕೆಲವು ದಿನ ಅವರು ಹೋಗಿದ್ದುಂಟು.
 
‘ಬಾಕ್ಸರ್‌ಗಳು ಮುಷ್ಟಿ ಪ್ರಹಾರದ ಮೂಲಕ, ದೇಹದ ಚುರುಕುಗತಿಯ ಚಲನೆಯ ಮೂಲಕ ಎದುರಾಳಿಗಳ ಮಟ್ಟಹಾಕುತ್ತಾರೆ. ಅಲ್ಲಿ ಅವರ ಕಣ್ಣೋಟವೂ ಕೆಲಸ ಮಾಡುತ್ತದೆ. 
 
ಟೆನಿಸ್‌ನ ತತ್ವವೂ ಅದಕ್ಕಿಂತ ಭಿನ್ನವಾಗಿಲ್ಲ; ಮುಷ್ಟಿ ಪ್ರಹಾರವೊಂದನ್ನು ಹೊರತುಪಡಿಸಿ’ ಎನ್ನುವ ಅವರ ಇನ್ನೊಂದು ಮಾತೂ ಸೋಜಿಗ ಹುಟ್ಟಿಸುವಂತಿದೆ. 
 
ಪುರುಷರ ವೃತ್ತಿಪರ ಟೆನಿಸ್ ಸಂಸ್ಥೆ-ಎಟಿಪಿ- ಮೊನ್ನೆ ಸಿಂಗಲ್ಸ್ ಆಟಗಾರರ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿತು. ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನ ಹಾಗೂ ಇದುವರೆಗೆ 45 ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಮರ್ರೆಗೆ ಪಟ್ಟಿಯಲ್ಲಿ ಅಗ್ರ ಪಟ್ಟ.
 
ಗಂಟಿಕ್ಕಿದ ಮುಖ ಹೊತ್ತು ಆಡಿ ಅವರು ಗೆದ್ದಿರುವ ಪಂದ್ಯಗಳನ್ನು ಲೆಕ್ಕ ಹಾಕಿದ ಅಭಿಮಾನಿಗಳೂ ಇದ್ದಾರೆ. ಈ ವಿಷಯ ಓದಿದಾಗ ಖುದ್ದು ಮರ್ರೆಗೆ ನಗು ಬಂದಿತ್ತು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT