ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ರೊಮಾನ್ಸ್‌ ವಂಚಿತ’

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ರಾಯಲ್ ಚಾಲೆಂಜರ್ಸ್‌ ಬೆಂಗಳೂರು  (ಆರ್‌ಸಿಬಿ) ತಂಡದ ಅಭಿಮಾನಿಗಳಿಗೆ ಮಿಸ್ಟರ್ ನ್ಯಾಗ್ಸ್‌ ಪರಿಚಯ ಇದ್ದೇ ಇರುತ್ತದೆ. ‘ಆರ್‌ಸಿಬಿ ಇನ್‌ಸೈಡರ್‌ ಷೋ’ನಲ್ಲಿ ವಿರಾಟ್ ಕೊಹ್ಲಿಯ ಕಾಲೆಳೆಯುವ, ಕ್ರಿಸ್‌ ಗೇಲ್, ವಿಜಯ್‌ ಮಲ್ಯ ಬಾಯಲ್ಲಿ ಕನ್ನಡ ಮಾತನಾಡಿಸುವ, ಶೇನ್ ವ್ಯಾಟ್ಸನ್‌ ಬಾಯಲ್ಲಿ ಅಣ್ಣಾವ್ರ ಹಾಡು ಹೇಳಿಸುವ ಮಿಸ್ಟರ್‌ ನ್ಯಾಗ್ಸ್‌ ಆರ್‌ಸಿಬಿ ತಂಡದ ಭಾಗವೇ ಆಗಿದ್ದಾರೆ.
 
ಮಿಸ್ಟರ್‌ ನ್ಯಾಗ್ಸ್‌ ಪಾತ್ರಧಾರಿಯ ನಿಜದ ಹೆಸರು ದಾನಿಶ್ ಸೇಟ್‌. ಇವರು ರಾಜಕಾರಣಿ ಅಜೀಜ್ ಸೇಟ್‌ ಅವರ ಮೊಮ್ಮಗ. ದುಬೈನಲ್ಲಿ ಆರ್‌ಜೆ ಆಗಿದ್ದ ದಾನಿಶ್ ಅಮ್ಮನ ಕರೆಯ ಮೇರೆಗೆ ನಗರಕ್ಕೆ ಬಂದು ಇಲ್ಲಿಯೂ ಆರ್‌ಜೆ ವೃತ್ತಿಯನ್ನೇ ಮುಂದುವರೆಸಿದರು.
 
ಆದರೆ ದಾನಿಶ್‌ರ ಪ್ರತಿಭೆ  ಅವರನ್ನು ರೇಡಿಯೊಗೆ ಸೀಮಿತಗೊಳ್ಳಲು ಬಿಡದೆ ಹೊಸ ಹೊಸ ಅವಕಾಶಗಳನ್ನು ಅವರ ಮುಂದೆ ಹರಡಿತು. ಆರ್‌ಜೆ ಆಗಿದ್ದಾಗ ನಕಲಿ ಕರೆಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ದಾನಿಶ್ ನಂತರ ಇಂಪ್ರೋವ್ ಕಮಿಡಿಯನ್ ಆಗಿ ಗುರುತಿಸಿಕೊಂಡರು.
 
l‘ಮಿಸ್ಟರ್‌ ನ್ಯಾಗ್ಸ್‌’ ಮತ್ತು ‘ಹಂಬಲ್ ಪಾಲಿಟಿಶಿಯನ್ ನೋಗರಾಜ್‌’ಗೆ ಏನಾದರೂ ಸಂಬಂಧ ಇದೆಯಾ?
‘ಹಂಬಲ್ ಪಾಲಿಟೀಶಿಯನ್ ನೋಗರಾಜ್’ ಪಾತ್ರದ ಮುಂದುವರೆದ ಭಾಗವೇ ಮಿಸ್ಟರ್‌ ನ್ಯಾಗ್ಸ್‌. ಐಪಿಎಲ್ ಇದ್ದಾಗ ನ್ಯಾಗ್ಸ್ ಇಲ್ಲದಾಗ ನೋಗರಾಜ್ ಅಷ್ಟೆ.
 
lನೋಗರಾಜ್ ಪಾತ್ರದ ಐಡಿಯಾ ಬಂದದ್ದು ಹೇಗೆ?
ನಮ್ಮ ತಾತನ ಮನೆಗೆ ಸಾಕಷ್ಟು ರಾಜಕಾರಣಿಗಳು ಬರುತ್ತಿದ್ದರು. ಅವರು ಮಾತನಾಡುವ ರೀತಿಯೇ ವಿಚಿತ್ರವಾಗಿರುತ್ತಿತ್ತು, ಕಷ್ಟಪಟ್ಟು ನಮ್ಮನ್ನು ಇಂಗ್ಲಿಷ್‌ನಲ್ಲಿ ಮಾತನಾಡಿಸುತ್ತಿದ್ದರು. ಅವರು ಹೋದಮೇಲೆ ನಾನು ಅವರನ್ನು ಅನುಕರಿಸಿ  ಮನೆಯವರನ್ನು ನಗಿಸುತ್ತಿದ್ದೆ.  ತಾತನ ಮನೆಯಲ್ಲಿ ನೋಡಿದ ರಾಜಕಾರಣಿಗಳೇ ನೋಗರಾಜ್ ಪಾತ್ರಕ್ಕೆ ಸ್ಪೂರ್ತಿ.
 
lನಿಮ್ಮ ಇಂಗ್ಲಿಷ್ ಆಕ್ಸೆಂಟ್ ಸಖತ್ ಫೇಮಸ್‌, ಇದರ ಹಿಂದಿರುವ ರಹಸ್ಯ...
ನಾನು ತಮಿಳುನಾಡಿನಲ್ಲಿ ಕೆಲ ದಿನ ಕೆಲಸ ಮಾಡಿದೆ. ಅಲ್ಲಿ ಕೆಲ ಕೇರಳದ ಗೆಳೆಯರೂ ಸಿಕ್ಕರು. ತಮಿಳು ಮತ್ತು ಮಲಯಾಳಂ ಮಾತೃಭಾಷಿಕರು ಕನ್ನಡ ಮಾತನಾಡುತ್ತಿದ್ದ ರೀತಿ ನಗು ತರಿಸುತ್ತಿತ್ತು. ತಮ್ಮ ಮೂಲ ಭಾಷೆಯ ಶೈಲಿಯಲ್ಲಿಯೇ ಹೊಸ ಭಾಷೆ ಮಾತನಾಡಲು ಪ್ರಯತ್ನಿಸುತ್ತಾರೆ. ನೋಗರಾಜ್‌ ಕೂಡ ಅಷ್ಟೆ ಆತನು ಕನ್ನಡದ ಶೈಲಿಯಲ್ಲಿ ಇಂಗ್ಲಿಷ್‌ ಮಾತನಾಡುತ್ತಾನೆ ಅದು ಕೇಳಲು ತಮಾಶೆ ಎನಿಸುತ್ತದೆ.
 
lನೀವು ಆರ್‌ಸಿಬಿ ಕುಟುಂಬ ಸೇರಿದ್ದು ಹೇಗೆ?
ನಾನು ಮೊದಲು ಇಂಪ್ರೋವ್ (ಪ್ರೇಕ್ಷಕರು ಕೊಡುವ ವಿಷಯದ ಬಗ್ಗೆ ಮಾತನಾಡಿ ನಗಿಸುವ  ಕಾರ್ಯಕ್ರಮ) ಕಾಮಿಡಿ ಷೋ ಮಾಡುತ್ತಿದ್ದೆ. ಷೋ ನೋಡಲು ಬಂದಿದ್ದ ಆರ್‌ಸಿಬಿ ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ನನ್ನನ್ನು ಗುರುತಿಸಿ ಆರ್‌ಸಿಬಿಯೊಂದಿಗೆ ಕೆಲಸ ಮಾಡಲು ಕರೆದರು. ನಾನು ಅವರನ್ನು ಭೇಟಿಯಾಗಿ ನನ್ನ ಐಡಿಯಾಗಳ ಬಗ್ಗೆ ಹೇಳಿದೆ ಅದು ಅವರಿಗೆ ಹಿಡಿಸಿ ನನಗೆ ಅವಕಾಶ ನೀಡಿದರು. ಈಗ ಮೂರು ವರ್ಷದಿಂದ ನಾನು ಆರ್‌ಸಿಬಿ ತಂಡದೊಂದಿಗಿದ್ದೇನೆ.
 
lನೀವು ಮೊದಲೇ ಪ್ಲಾನ್ ಮಾಡಿ ವಿಡಿಯೊ ಮಾಡ್ತೀರಾ...?
ನಮ್ಮದು ಸ್ಕ್ರಿಪ್ಟೆಡ್ ವಿಡಿಯೊ ಅಲ್ಲ. ಸ್ಕ್ರಿಪ್ಟ್, ಯೋಜನೆ ಯಾವುದೂ ಅಲ್ಲಿ ಕೆಲಸಕ್ಕೆ ಬರುವುದಿಲ್ಲ. ಆಟಗಾರರ ಮೂಡ್‌ಗೆ ತಕ್ಕಂತೆ ನಾನು ಮಾತು ಬೆಳೆಸುತ್ತೇನೆ. ಏನು ಹೊಳೆಯುತ್ತದೆಯೋ ಅದನ್ನು ಮಾತನಾಡುತ್ತೇನೆ. ಈ ಮುಂಚೆ ಇಂಪ್ರೊವ್ ಷೋಗಳನ್ನು ಮಾಡಿದ್ದರಿಂದ ಕ್ಷಣಾರ್ಧದಲ್ಲಿ ಮಾತನಾಡಿ ನಗಿಸುವ ಕಲೆ ಸಿದ್ಧಿಸಿದೆ.
 
lಆರ್‌ಸಿಬಿ ಈನ್‌ಸೈಡರ್‌ ಷೋ ಹಿಂದೆ ಇರುವವರು ಯಾರು?
ಈ ಷೋ ಹಿಂದೆ ಇರುವವರು ನಾನು ಮತ್ತು ನನ್ನ ಕ್ಯಾಮೆರಾಮನ್ ಕಂ ಎಡಿಟರ್ ಕಲ್ವೀರ್ ಬಿರಾದರ್‌. ನಮ್ಮಿಬ್ಬರ ನಡುವೆ ಅದ್ಭುತವಾದ ಹೊಂದಾಣಿಕೆ ಇದೆ. ಅದನ್ನು ನಮ್ಮ ವಿಡಿಯೊಗಳಲ್ಲೂ ನೋಡಬಹುದು.
 
lನಿಮ್ಮ ಜೋಕುಗಳಿಗೆ, ಅಧಿಕ ಪ್ರಸಂಗತನಕ್ಕೆ ಆಟಗಾರರು ಸಿಟ್ಟಾಗಿದ್ದಿದೆಯೇ?
ಇಲ್ಲಿಯವರೆಗೆ ಇಲ್ಲ. ವಿಡಿಯೊ ಮಾಡುವ ಮುಂಚೆ ಆಟಗಾರರ ಮೂಡ್‌ ನೋಡಿಯೇ ಅವರ ಮುಂದೆ ಹೋಗುತ್ತೇನೆ. ಯಾರ ಬಳಿಯೂ ಖಾಸಗಿ ವಿಷಯಗಳನ್ನು ಕೇಳುವುದಿಲ್ಲ. ನನ್ನನ್ನು ವ್ಯಂಗ್ಯ ಮಾಡಲು ಅವರಿಗೆ ಅವಕಾಶ ಒದಗಿಸಿಕೊಡುತ್ತೇನೆ.

ನನಗೆ ನನ್ನ ಮಿತಿಯ ಅರಿವು ಸದಾ ಇರುತ್ತದೆ. ತಂಡ ಸೋತಾಗ ಅವರ ಮುಂದೆ ಕ್ಯಾಮೆರಾ ಹಿಡಿದು ಹೋಗುವುದಿಲ್ಲ. ಬೇರೆ ಸಮಯದಲ್ಲಿ ಅವರನ್ನು ಬಹಳ ಗೌರವದಿಂದ, ಪ್ರೀತಿಯಿಂದ ಕಾಣುತ್ತೇನೆ. ಅವರೊಂದಿಗೆ ಕ್ರಿಕೆಟ್‌ ಬಗ್ಗೆ ಚರ್ಚೆ ಮಾಡುವುದಿಲ್ಲ. ಹೀಗಾಗಿ ಅವರು ನನ್ನ ಜತೆ ಮುಕ್ತವಾಗಿ ಮಾತನಾಡುತ್ತಾರೆ. ಸಣ್ಣಪುಟ್ಟ ಅಧಿಕ ಪ್ರಸಂಗವನ್ನು ನಗುತ್ತಲೇ ಸಹಿಸುತ್ತಾರೆ.
 
lಫೇಮಸ್ ಪೊಲಿಟೀಶಿಯನ್ ಪಾತ್ರ ಸೃಷ್ಟಿಸಿದ್ದೀರಿ. ನಿಮ್ಮ ಇಷ್ಟದ ರಾಜಕಾರಣಿ ಯಾರು?
ಯಾರೂ ಇಷ್ಟವಾಗಲ್ಲ. ಎಲ್ಲ ರಾಜಕಾರಣಿಗಳೂ ಒಂದೇ. ಬರೀ ಪಕ್ಷ, ಚಿಹ್ನೆ ಬೇರೆ ಅಷ್ಟೆ. ರಾಜಕಾರಣಿಗಳ ನಿಜ ಮುಖದ ಪರಿಚಯ ಮಾಡಲೆಂದೆ ನೋಗರಾಜ್ ಪಾತ್ರ ಸೃಷ್ಟಿ ಮಾಡಲಾಯಿತು. ನೋಗರಾಜ್ ತಾನೊಬ್ಬ ಹಂಬಲ್ ರಾಜಕಾರಣಿ ಎಂದು ಹೇಳಿಕೊಳ್ಳುತ್ತಾನೆ. ಪ್ರೀತಿಯಿಂದ ಮಾತನಾಡುತ್ತಾನೆ. ಆದರೆ ಹಣ ಕೊಳ್ಳೆ ಹೊಡೆಯುವುದೇ ಅವನ ಉದ್ದೇಶ.
 
lಸಿನಿಮಾ ಮಾಡ್ತಿದ್ದೀರಂತೆ?
ಹೌದು ‘ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಅಂತ ಸಿನಿಮಾ ಹೆಸರು. ನೋಗರಾಜ್ ಪಾತ್ರಧಾರಿ ನಾನೆ. 
 
lಚಿತ್ರ ತಂಡದ ಬಗ್ಗೆ ಹೇಳಿ?
ಗೆಳೆಯ ಸಾದ್ ಖಾನ್ ನಿರ್ದೇಶಿಸುತ್ತಿದ್ದಾರೆ. ನಟ ರಕ್ಷಿತ್‌ ಶೆಟ್ಟಿ, ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿರ್ದೇಶಕ ಹೇಮಂತ್ ಮತ್ತು ನಿರ್ಮಾಪಕ ಪುಷ್ಕರ್‌ ಮೂವರು ಸೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಮುಂದಿನ ತಿಂಗಳು ಟ್ರೇಲರ್‌ ಬಿಡುಗಡೆ ಮಾಡುತ್ತೇವೆ. 
 
lಚಿತ್ರದ ನಾಯಕಿ ಬಗ್ಗೆ ಹೇಳಲೇ ಇಲ್ಲ?
ಚಿತ್ರದಲ್ಲಿ ಮಹಿಳಾ ಪಾತ್ರಧಾರಿಗಳು ಇದ್ದಾರೆ, ಆದರೆ ನಾಯಕಿ ಇಲ್ಲ. ಮೊದಲ ಚಿತ್ರದಲ್ಲೇ ನಾನು ರೊಮಾನ್ಸ್‌ನಿಂದ ವಂಚಿತನಾಗಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT