ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಧಿಸದಿರಲಿ ಫ್ಲೋರೈಡ್ ವಿಷ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಡಾ. ಎನ್.ಬಿ.ಶ್ರೀಧರ 
ಧಾರವಾಡ, ಕೋಲಾರ, ಗದಗ, ಬಳ್ಳಾರಿ, ಬೆಳಗಾವಿ, ರಾಯಚೂರು, ವಿಜಯಪುರ, ಕಲಬುರ್ಗಿ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಫ್ಲೋರೋಸಿಸ್‌ ಸಮಸ್ಯೆ ಬಹಳ ಸಾಮಾನ್ಯ.
 
ಇದು ಮನುಷ್ಯರಿಗಷ್ಟೇ ಅಲ್ಲದೇ ಜಾನುವಾರುಗಳನ್ನೂ ಬಾಧಿಸುತ್ತವೆ. ಮನುಷ್ಯನಲ್ಲಿ ಈ ರೋಗ ತಡೆಯಲು ವಿವಿಧ ಪ್ರಯತ್ನಗಳು ನಡೆಯುತ್ತಿವೆ. ಆದರೆ ಜಾನುವಾರುಗಳಲ್ಲಿ ಈ ಸಮಸ್ಯೆ ಬಗ್ಗೆ ಸಂಶೋಧನೆ ನಿಖರವಾಗಿ ಆಗಿಲ್ಲ ಅಥವಾ ವರದಿಯಾಗಿಲ್ಲ.

ರಾಸಾಯನಿಕವಾಗಿ ಫ್ಲೋರಿನ್ ಇದು ಅತ್ಯಂತ ಚುರುಕಾದ ವಸ್ತುವಾಗಿದ್ದು ಇದು ಅಲ್ಯುಮಿನಿಯಂ, ಕಬ್ಬಿಣ, ಕ್ಯಾಲ್ಸಿಯಂ, ಸಿಲಿಕೇಟ್ಸ್, ಫಾಸ್ಫೇಟ್ಸ್ ಇವುಗಳ ಜೊತೆ ಸಂಯುಕ್ತವಾಗಿ ಇರುತ್ತದೆ.
 
ಅಲ್ಲದೇ ವಿವಿಧ ಕೈಗಾರಿಕೆಗಳು ಫ್ಲೋರೈಡನ್ನು ತ್ಯಾಜ್ಯವಾಗಿ ಹೊರಸೂಸುತ್ತವೆ. ಫ್ಲೋರಿನ್ ಇದು ನೀರಿನಲ್ಲಿ ಬಹಳ ಸಾಮಾನ್ಯವಾಗಿ ಕರಗುವ ವಸ್ತು. ಇದರಿಂದ ಈ ನೀರನ್ನು ಕುಡಿಯುವುದರಿಂದ, ಈ ನೀರನ್ನು ಬಳಸಿ ಬೆಳೆದ ಬೆಳೆ ಇತ್ಯಾದಿಗಳಿಂದ ಫ್ಲೋರೋಸಿಸ್‌ ಬರುತ್ತದೆ. 
 
ಗರ್ಭಧರಿಸಿದ ಜಾನುವಾರುಗಳಲ್ಲಿ ಫ್ಲೋರೈಡ್ ಅಂಶ ಬೆಳೆಯುತ್ತಿರುವ ಭ್ರೂಣವನ್ನು ಪ್ರವೇಶಿಸಿ ಅದರ ಎಲುಬಿನಲ್ಲಿ ಶೇಖರಗೊಳ್ಳುತ್ತದೆ. ಫ್ಲೋರೈಡ್ ವಿಷಬಾಧೆಯು ಜಾನುವಾರಿನ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಸೇರಿದೆ ಎಂಬುದರ ಮೇಲೆ ಅವಲಂಬಿಸಿದೆ. 
 
 
ಸಾಮಾನ್ಯವಾಗಿ ಫ್ಲೋರಿನ್ ಅಂಶವು ಆಹಾರದಲ್ಲಿ 100 ಪಿ.ಪಿ.ಎಂ ಮೀರಿದರೆ ವಿಷಬಾಧೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪಶು ಆಹಾರದಲ್ಲಿ ಡೈ ಕ್ಯಾಲ್ಸಿಯಂ ಫಾಸ್ಫೇಟ್ ಬದಲಾಗಿ ರಾಕ್ ಫಾಸ್ಫೇಟ್ ಅನ್ನು ಉಪಯೋಗಿಸಿದರೂ ಫ್ಲೋರಿನ್ ಅಂಶ ಜಾಸ್ತಿ ಬರಬಹುದು.
 
ಆಹಾರದಲ್ಲಿ   50 ಪಿ.ಪಿ.ಎಂಗಿಂತ ಕಡಿಮೆ ಪ್ರಮಾಣದಲ್ಲಿ ಫ್ಲೋರಿನ್ ಅಂಶವಿದ್ದಲ್ಲಿ ಹಲ್ಲು ಹುಳುಕು ಪ್ರಾರಂಭವಾಗುತ್ತದೆ. ಅಲ್ಲದೇ ಹಲ್ಲು ಮತ್ತು ಎಲುಬು ಸವಕಳಿ ಪ್ರಾರಂಭವಾಗುತ್ತದೆ. ನೀರಿನಲ್ಲಿರುವ ಫ್ಲೋರಿನ್ ಅಂಶ 12–19 ಪಿ.ಪಿ.ಎಂ ಪ್ರಮಾಣದಲ್ಲಿ ಅಥವಾ ಜಾಸ್ತಿ ಇದ್ದಲ್ಲಿ ವಿಷಬಾಧೆ ಪ್ರಾರಂಭವಾಗುತ್ತದೆ. ಪ್ರತಿನಿತ್ಯ  ಫ್ಲೋರಿನ್ ಅಂಶವನ್ನು 0.–102 ಮಿಲಿಗ್ರಾಂ/ಕಿಲೋ ಪ್ರಮಾಣದಲ್ಲಿ ಸೇವಿಸಿದಲ್ಲಿ ಹಲ್ಲಿನ ಹುಳುಕು ಪ್ರಾರಂಭವಾಗುತ್ತದೆ.
 
ಆದರೆ ಈ ಪ್ರಮಾಣದಲ್ಲಿ ಸೇವಿಸಿದಲ್ಲಿ ಶರೀರದ ಬೆಳವಣಿಗೆಗೆ ಯಾವುದೇ ತೊಂದರೆಯಾಗುವುದಿಲ್ಲ. ಪ್ರತಿದಿನ ರೋಮಾಂತಕ ಪ್ರಾಣಿಗಳಲ್ಲಿ ಒಂದು ಮಿಲಿಗ್ರಾಂ/ಕಿಲೋ ಪ್ರಮಾಣದಲ್ಲಿ ಯಾವುದೇ ತೊಂದರೆಯುಂಟು ಮಾಡುವುದಿಲ್ಲ. ಆದರೆ ಇದು ದ್ವಿಗುಣಗೊಂಡರೆ ಬಹಳ ದಿನಗಳ ನಂತರ ವಿಷಬಾಧೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  ವಿಷಬಾಧೆಗೆ ಅತ್ಯಂತ ಸಾಮಾನ್ಯ ಕಾರಣ ಕುಡಿಯುವ ನೀರಿನಲ್ಲಿ ಫ್ಲೋರಿನ್ ಅಂಶ ಜಾಸ್ತಿ ಇರುವುದು.
 
ಇದು ಸಾಮಾನ್ಯವಾಗಿ ಆಳವಾದ ಬಾವಿಗಳು, ಕೊಳವೆಬಾವಿಗಳು ಮತ್ತು ಕಾರ್ಖಾನೆಗಳು ಹೊರಸೂಸುವ ತ್ಯಾಜ್ಯಗಳು ಇವುಗಳಿಂದ ಕಲುಷಿತಗೊಂಡ ನೀರು, ಗಿಡಗಳು, ಹುಲ್ಲುಗಾವಲುಗಳು ಇವುಗಳ ಆಕರದಿಂದ ವಿಷಬಾಧೆಯುಂಟಾಗುತ್ತದೆ. ಅಲ್ಲದೇ ಪ್ರಾಣಿಗಳಲ್ಲಿ ರಂಜಕದ ಕೊರತೆ ಇದ್ದರೂ ಫ್ಲೋರಿನ್ ವಿಷಬಾಧೆಗೆ ಬೇಗ ತುತ್ತಾಗುತ್ತವೆ.
 
ಜಾನುವಾರಿನ ರಕ್ತದಲ್ಲಿ 0.2 ಮಿಲಿಗ್ರಾಂ/100 ಮಿಲಿ ರಕ್ತದಲ್ಲಿ ಮತ್ತು 0.2 ಪಿ.ಪಿ.ಎಂ ಮೂತ್ರದಲ್ಲಿ ಫ್ಲೋರಿನ್ ಇರುತ್ತದೆ. ಇದರಿಂದ ಯಾವುದೇ ಅಪಾಯವಿಲ್ಲ. ಫ್ಲೋರಿನ್ ಪ್ರಮಾಣ ಇದಕ್ಕಿಂತ ಜಾಸ್ತಿಯಾದಲ್ಲಿ ಇದು ರಂಜಕದೊಂದಿಗೆ ಸಮ್ಮಿಶ್ರಗೊಂಡು ಎಲುಬು ಮತ್ತು ಹಲ್ಲುಗಳಲ್ಲಿ ಶೇಖರಗೊಳ್ಳುತ್ತದೆ.
 
ಈ ಕ್ರಿಯೆ ಶರೀರದ ಉದ್ದವಾದ ಎಲುಬುಗಳಲ್ಲಿ ಜಾಸ್ತಿಯಾಗಿರುತ್ತಿದ್ದು ಹೆಚ್ಚಿನ ಪ್ರಮಾಣದ ಫ್ಲೋರಿನ್ ಅಂಶ ಶೇಖರಗೊಂಡಂತೆ ಕ್ಯಾಲ್ಸಿಯಂ ಮತ್ತು ರಂಜಕಗಳು ಹೊರದೂಡಿ ಎಲುಬುಗಳು ಪೊಳ್ಳುಗೊಳ್ಳುತ್ತವೆ. ಇದರಿಂದ ಕುಂಟುವಿಕೆ, ಕಾಲುಗಂಟು ಊದಿಕೊಳ್ಳುವಿಕೆ, ಎಲುಬಿನ ನೋವು, ನಡೆದಾಡಲು ತೊಂದರೆ  ಮತ್ತು ಏಳಲು ತೊಂದರೆಯಾಗುತ್ತದೆ.
 
ಉದ್ದವಾದ ಎಲುಬುಗಳು ಟೊಳ್ಳಾಗಿರುವುದರಿಂದ ಬಾಗಿ ಎಲುಬು ಮುರಿತಕ್ಕೆ ತುತ್ತಾಗುತ್ತವೆ. ಕೆಲವು ಎಲುಬುಗಳು ಬಾಗಿ ಗಿಡ್ಡವಾಗುತ್ತವೆ. ಅಲ್ಲದೇ ಮೂತ್ರಜನಕಾಂಗ, ಪಿತ್ತಜನಕಾಂಗ, ಅಡ್ರಿನಲ್ ಗ್ರಂಥಿ, ಹೃದಯದ ಮಾಂಸಖಂಡಗಳು ಮತ್ತು ಕೇಂದ್ರ ನರಮಂಡಲದಲ್ಲಿ ಉರಿಯೂತ ಮತ್ತು ರಕ್ತಸ್ರಾವ ಕಾಣಿಸಿಕೊಳ್ಳಬಹುದು.
 
ಆದರೆ ಒಂದು ಸಮಾಧಾನಕರ ವಿಷಯವೆಂದರೆ ಫ್ಲೋರಿನ್ ಅಂಶವು ಗರ್ಭಧರಿಸಿದ ಜಾನುವಾರುಗಳಲ್ಲಿ ಗರ್ಭಕೋಶವನ್ನು ಪ್ರವೇಶಿಸಿ ಬೆಳೆಯುತ್ತಿರುವ ಭ್ರೂಣಕ್ಕೆ ತೊಂದರೆ ಕೊಡುವ ಗುಣವನ್ನು ಹೊಂದಿಲ್ಲ.
 
ವಿಷಬಾಧೆಯ ಲಕ್ಷಣಗಳು
ತೀವ್ರತರವಾದ ವಿಷಬಾಧೆಯಲ್ಲಿ ಜಾನುವಾರುಗಳಲ್ಲಿ ಹೊಟ್ಟೆಯ ಚಲನೆ ನಿಲ್ಲುವುದು, ಮಲಬದ್ಧತೆ ಮತ್ತು ಹೈಡ್ರೋಫ್ಲೋರಿಕ್ ಆಮ್ಲದ ಉತ್ಪಾದನೆಯಿಂದ ಹೊಟ್ಟೆಯಲ್ಲಿ ಉರಿಯುಂಟಾಗಿ ಬೇಧಿ ಕಾಣಿಸಿಕೊಳ್ಳಬಹುದು. ರಕ್ತಹೀನತೆ ಸಹ ಕಾಣಿಸಿಕೊಳ್ಳಬಹುದು.
 
ನರಮಂಡಲದ ಮೇಲೆ ವಿಶಿಷ್ಟ ಪರಿಣಾಮಗಳು ಕಾಣಿಸಿಕೊಳ್ಳುತ್ತಿದ್ದು ಮಾಂಸಖಂಡಗಳ ಅದುರುವಿಕೆ, ನಿಶ್ಶಕ್ತಿ, ಕಣ್ಣಿನ ಪಾಪೆಯು ಅಗಲಗೊಳ್ಳುವುದು, ಉದ್ವೇಗ ಮತ್ತು ನಿರಂತರ ಹಲ್ಲು ಕಡಿತ ಇತ್ಯಾದಿಗಳು ಕಂಡುಬರಬಹುದು.
 
ಮುಖ್ಯವಾದ ಪರಿಣಾಮ ಹಲ್ಲುಗಳ ಮೇಲೆ ಆಗುತ್ತದೆ. ವಿಷಬಾಧೆಗೆ ಒಳಗಾಗುವ ಮುನ್ನ ಹುಟ್ಟಿ ಬೆಳೆದ ಹಲ್ಲುಗಳ ಮೇಲೆ ವಿಷಬಾಧೆಯ ಅಂಶಗಳು ಕಾಣಿಸಿಕೊಳ್ಳುವುದಿಲ್ಲ. ಜಾನುವಾರುಗಳಲ್ಲಿ ಕೋರೆ ಹಲ್ಲುಗಳು ವಿಷಬಾಧೆಗೆ ಮೊದಲು ಒಳಗಾಗುತ್ತವೆ.

ಪ್ರಾಥಮಿಕ ಚಿಹ್ನೆಗಳೆಂದರೆ ಹಲ್ಲುಗಳ ಮೇಲೆ ಬಣ್ಣ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವುದು, ಹಲ್ಲು ಸವೆಯುವುದು, ತಿಳಿ ಹಳದಿ, ಹಳದಿ, ಹಸಿರು, ಕಂದು ಅಥವಾ ಕಪ್ಪು ಚುಕ್ಕೆಗಳು ಹಲ್ಲಿನ ಮೇಲೆ ಸಮಾನಾಂತರ ದೂರದಲ್ಲಿ ಕಾಣಿಸಿಕೊಳ್ಳಬಹುದು. ಇದರಿಂದ ಹಲ್ಲಿನ ಮೇಲೆ ಚಿತ್ರ ವಿಚಿತ್ರ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ.
 
ಪರಿಣಾಮವಾಗಿ ಹಲ್ಲುಗಳು ಸವೆದು ಆಹಾರ ಜೀರ್ಣವಾಗದೇ ಜಾನುವಾರು ನಿಶ್ಶಕ್ತಿಯಿಂದ ಬಳಲುತ್ತದೆ. ರಕ್ತಹೀನತೆ, ಪ್ರೊಟೀನ್ ಕೊರತೆ ಮತ್ತು ಹಾಲಿನ ಇಳುವರಿಯಲ್ಲಿ ತೀವ್ರವಾದ ಇಳಿಮುಖ ಕಂಡು ಬರುತ್ತದೆ. ಜಾನುವಾರು ಬಂಜೆತನದಿಂದ ಬಳಲಬಹುದು. ಫ್ಲೋರಿನ್ ವಿಷಬಾಧೆಯಿಂದ ಬಳಲುವ ಜಾನುವಾರುಗಳಲ್ಲಿ ಕೋರೆಹಲ್ಲಿನ ಸಮಸ್ಯೆ ಬಹಳ ಸಾಮಾನ್ಯ.
 
ವಿಷಬಾಧೆಯ ಪತ್ತೆ ವಿಧಾನ
ಈಗಾಗಲೇ ತಿಳಿಸಿದಂತೆ ಸಾಮಾನ್ಯವಾಗಿ ಪ್ರಾಣಿಯ ಶರೀರದಲ್ಲಿ 1,200 ಪಿ.ಪಿ.ಎಂ ಫ್ಲೋರಿನ್ ಅಂಶವಿರುತ್ತದೆ. ಆದರೆ ಇದು 3,000 ಪಿ.ಪಿ.ಎಂಕ್ಕಿಂತ ಜಾಸ್ತಿಯಾದಲ್ಲಿ ವಿಷಬಾಧೆಯ ಲಕ್ಷಣಗಳನ್ನು ಕಾಣಬಹುದು. ಫ್ಲೋರಿನ್ ಅಂಶವನ್ನು ಆಹಾರ, ನೀರು, ರಕ್ತ, ಮೂತ್ರ ಮತ್ತು ಎಲುಬುಗಳಲ್ಲಿ ಪತ್ತೆ ಮಾಡಿ ವಿಷಬಾಧೆಯನ್ನು ಖಚಿತಪಡಿಸಿಕೊಳ್ಳಬಹುದು.
 
ಚಿಕಿತ್ಸೆ ಮತ್ತು ತಡೆಗಟ್ಟುವಿಕೆ
ಈ ವಿಷಬಾಧೆಗೆ ನಿಖರ ಚಿಕಿತ್ಸೆ/ಪ್ರತ್ಯೌಷಧ ಇಲ್ಲ.
lಫ್ಲೋರಿನ್ ಅಂಶವನ್ನು ಹೊಂದಿದ ಆಹಾರ, ನೀರು ಮತ್ತು ಇತರ ವಸ್ತುಗಳು ಜಾನುವಾರುಗಳಿಗೆ ದೊರೆಯದಂತೆ ನೋಡಿಕೊಳ್ಳುವುದು ಮತ್ತು ಗೊತ್ತಾದ ಕೂಡಲೇ ಅದನ್ನು ನಿಲ್ಲಿಸುವುದು.
lಹೊಟ್ಟೆಯನ್ನು ಸೂಕ್ತ ದ್ರಾವಣಗಳಿಂದ ತೊಳೆಯುವುದು.
lಕ್ಯಾಲ್ಸಿಯಂ ಅಂಶವಿರುವ ಚುಚ್ಚು ಮದ್ದುಗಳನ್ನು ರಕ್ತನಾಳಕ್ಕೆ ನೀಡುವುದು. ಬಾಯಿಯ ಮೂಲಕ ನೀಡುವ ಕ್ಯಾಲ್ಸಿಯಂ ಈ ವಿಷಬಾಧೆಯಲ್ಲಿ ಪರಿಣಾಮಕಾರಿ ಅಲ್ಲ.
lಆಹಾರ ಮತ್ತು ನೀರಿನಲ್ಲಿ ಆಗಾಗ ಫ್ಲೋರಿನ್ ಅಂಶದ ಬಗ್ಗೆ ಪರೀಕ್ಷೆ ಮಾಡಿಸಿ ಜಾಸ್ತಿ ಇದ್ದಲ್ಲಿ ಅದಕ್ಕೆ ಸೂಕ್ತ ರಾಸಾಯನಿಕ ಚಿಕಿತ್ಸೆಯನ್ನು ಮಾಡಿಸಬೇಕು.
lಅಲ್ಯುಮಿನಿಯಂ ಸಲ್ಫೇಟ್ ಲವಣವನ್ನು ದಿನಂಪ್ರತಿ 30 ಗ್ರಾಂ ಪ್ರಮಾಣದಲ್ಲಿ ಪ್ರತಿ ಹಸುವಿಗೆ ನೀಡುವುದರಿಂದ ದೀರ್ಘಕಾಲಿಕ ವಿಷಬಾಧೆಯನ್ನು ತಡೆಯಬಹುದು.
ಹೆಚ್ಚಿನ ಮಾಹಿತಿಗೆ ಲೇಖಕರ ಸಂಪರ್ಕ ಸಂಖ್ಯೆ 
08182-651005 .
ಲೇಖಕರು ಪ್ರಧಾನ ಸಂಶೋಧಕರು, ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರ, ಶಿವಮೊಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT