ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಳಕಳಿಯ ‘ಪತ್ರ’ಕರ್ತ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಶಿರಸಿ
06–11–1997
ರಿಗೆ,
ಶ್ರೀ ಜೆ.ಎಚ್. ಪಟೇಲ್
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ರಾಜ್ಯ ಸರ್ಕಾರ
ವಿಧಾನ ಸೌಧ
ಬೆಂಗಳೂರು
ಮಾನ್ಯರೇ,
ವಿಷಯ: ಆಕ್ಟ್ರಾಯ್ ಮರು ಜಾರಿಗೊಳಿಸುವ ಪ್ರಸ್ತಾವ– ವಿರೋಧ
ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಸಂಪನ್ಮೂಲಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಈ ಮೊದಲು ರದ್ದುಪಡಿಸಿದ ಆಕ್ಟ್ರಾಯ್ ಪದ್ಧತಿಯನ್ನು ರಾಷ್ಟ್ರದಲ್ಲಿ ಮರುಜಾರಿಗೊಳಿಸುವ ಸರ್ಕಾರದ ಪ್ರಸ್ತಾವವನ್ನು ವಾಣಿಜ್ಯ ತಜ್ಞರು, ಸಂಘ ಸಂಸ್ಥೆಗಳು ಬಲವಾಗಿ ಖಂಡಿಸಿ ವಿರೋಧಿ ಪ್ರಕಟಿಸಿರುವ ಸಂಗತಿ ತಮಗೆ ತಿಳಿದ ವಿಷಯವಾಗಿದೆ.
.....ಮೊಗಲ ರಾಜರ ಕಾಲದ ಅವೈಜ್ಞಾನಿಕ ಮತ್ತು ಜನ ಅಹಿತಕಾರಿ ಆಕ್ಟ್ರಾಯ್ ಪದ್ಧತಿಯನ್ನು ಮರು ಜಾರಿಗೊಳಿಸುವ ಪ್ರಸ್ತಾವವನ್ನು ಕೈಬಿಡಬೇಕಾಗಿ ಉತ್ತರ ಕನ್ನಡ ಜಿಲ್ಲಾ ವಾಣಿಜ್ಯ, ಉದ್ದಿಮೆ, ಕೃಷಿ ಸಂಸ್ಥೆ ವಿನಂತಿಸುತ್ತದೆ. 
                                     ಇತಿ ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ವಿ.ಎಸ್.ಸೋಂದೆ
ಗೌರವ ಕಾರ್ಯದರ್ಶಿ
 
...ಹೀಗೆ ಸಾಗುತ್ತದೆ ಸೋಂದೆಯವರ ಪತ್ರಪಯಣ. ವೈಕುಂಠರಾವ್ ಸೋಂದೆ ಅವರು 1997ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲರಿಗೆ ಬರೆದ ಪತ್ರದ ತುಣುಕು ಇದು. ಸಾಮಾಜಿಕ ಸಮಸ್ಯೆಗಳಿಗೆ ಸದಾ ತುಡಿಯುವ ಸೋಂದೆ ಅವರು ಬರೆದಿರುವ ಇಂತಹ ಪತ್ರಗಳ ಸಂಖ್ಯೆ ಸಾವಿರ ದಾಟಿದೆ. ಸೋಂದೆಯವರ ‘ಪತ್ರ ಜಾಗೃತಿ’ ಕಾಯಕಕ್ಕೆ ಈಗ 40ರ ಸಂಭ್ರಮ.

ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಶಿರಸಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ಎದುರಿನ ದೊಡ್ಡ ಮನೆ ಎದುರು ಕೆಲಹೊತ್ತು ಕಾದು ನಿಂತೆ. ಕೊಂಚ ಹಿಂಜರಿಕೆಯಿಂದಲೇ ಕದ ತಟ್ಟಿದೆ. ವಾಕಿಂಗ್ ಫ್ರೇಮ್ ಹಿಡಿದು ನಿಧಾನವಾಗಿ ಬಂದ ಸೋಂದೆಯವರು ನಗುಮೊಗದಲ್ಲಿ ಸ್ವಾಗತಿಸಿದರು. ನಿಮ್ಮ ಪತ್ರ ಜಾಗೃತಿ ಅಭಿಯಾನದ ಬಗ್ಗೆ ತಿಳಿದುಕೊಳ್ಳೋಣವೆಂದು ಬಂದಿದ್ದೆ ಎಂದಾಗ ಮುಗುಳ್ನಕ್ಕು ಸುಮ್ಮನಾದರು.

ಮೌನದೊಳಗೆ ಮಾತಿನ ಹೂರಣ: ಹಳೆಯ ನೆನಪುಗಳನ್ನು ಮೆಲಕು ಹಾಕುತ್ತ ಕೆಲ ಹೊತ್ತಿನ ಮೌನ ಮುರಿದು ಮಾತಿಗಿಳಿದರು. ‘1973ರ ಹೊತ್ತಿಗೆ ಅಡಿಕೆ ಧಾರಣೆ ಕುಸಿಯಿತು.
 
ಅಡಿಕೆಯಲ್ಲಿ ಅಡಗಿರುವ ಮಲೆನಾಡಿನ ನೆಮ್ಮದಿ ಉಳಿಸಲು ಇದೇ ವರ್ಷ ಉತ್ತರ ಕನ್ನಡ ಜಿಲ್ಲಾ ವಾಣಿಜ್ಯ ಉದ್ದಿಮೆ ಕೃಷಿ ಸಂಸ್ಥೆ ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಅಸ್ತಿತ್ವಕ್ಕೆ ಬಂತು.
 
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನು ಈ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅಂದಿನಿಂದ 35 ವರ್ಷಗಳವರೆಗೆ ಕೆಲಸ ಮಾಡಿದ್ದೆ. ಕೃಷಿಯಲ್ಲೇ ಬದುಕಿನ ಅಸ್ತಿತ್ವ ಕಂಡುಕೊಳ್ಳುವ ಉದ್ದೇಶದಿಂದ ಧಾರವಾಡ ಕೃಷಿ ಕಾಲೇಜಿಗೆ ಸೇರಿದ್ದ ನಾನು ಆಗಷ್ಟೇ ಪದವಿ ಪೂರೈಸಿ ಊರಿಗೆ ಮರಳಿದ್ದೆ.
 
ಆ ಕಾಲೇಜಿನ ಮೂರನೇ ಬ್ಯಾಚಿನ ವಿದ್ಯಾರ್ಥಿಯಾಗಿದ್ದ ನಾನು ಕೃಷಿ ಪದವಿ ಪಡೆದು ಸ್ವಂತ ಸಾಗುವಳಿಗೆ ಮರಳಿದ ಮೊದಲ ಪದವೀಧರ’ ಎಂದ ಅವರಿಗೆ ಈಗಲೂ ತಾನೊಬ್ಬ ಕೃಷಿಕ ಎಂಬ ಹೆಮ್ಮೆಯಿದೆ.

‘1974ರಲ್ಲಿ ಕೃಷಿ ಕ್ಷೇತ್ರದ ಸಮಸ್ಯೆಗೆ ಸಂಬಂಧಿಸಿ ರಾಜ್ಯದ ಕೃಷಿ ಸಚಿವರಿಗೆ ಬರೆದಿದ್ದು ನನ್ನ ಮೊದಲ ಪತ್ರ. ಆಗೆಲ್ಲ ಸಾಧ್ಯವಿದ್ದಿದ್ದು ಅಂಚೆ ವ್ಯವಸ್ಥೆ ಮಾತ್ರ. ಅಂದಿನಿಂದ ಶುರುವಾದ ಪತ್ರದ ತುಡಿತ ಇಂದಿಗೂ ಮುಂದುವರಿದಿದೆ.
 
ರೈಲ್ವೆ, ಬಂದರು, ಅರಣ್ಯ, ಕಂದಾಯ, ಶಿಕ್ಷಣ, ಸಹಕಾರಿ, ಕೃಷಿ ಇಲಾಖೆಗಳ ಸಚಿವರು, ಮುಖ್ಯಸ್ಥರು, ವಿಶ್ವವಿದ್ಯಾಲಯಗಳ ಕುಲಪತಿ, ಸಾಂಬಾರು ಮಂಡಳಿ ಮುಖ್ಯಸ್ಥರು ಹಲವರೊಂದಿಗೆ ಪತ್ರದ ಮೂಲಕ ಮಾತನಾಡಿ ಜನರ ನಾಡಿಮಿಡಿತ ತಿಳಿಸಿದ್ದೇನೆ. ಆದರೆ ಅವುಗಳಲ್ಲಿ ಉತ್ತರ ಸಿಕ್ಕಿದ್ದು ಶೇ 10ರಷ್ಟು ಪತ್ರಗಳಿಗೆ ಅಷ್ಟೇ’ ಎಂದರು.

‘ಶಿರಸಿಯಲ್ಲಿ ಈಗ ಇದ್ದ ಅರಣ್ಯ ಕಾಲೇಜನ್ನು ಧಾರವಾಡದಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆದಿತ್ತು. ಅರಣ್ಯವಿರುವ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಮಾಗೋಡಿನಲ್ಲಿ ಈ ಕಾಲೇಜು ಪ್ರಾರಂಭವಾಗಬೇಕು ಎಂದು ಅಂದಿನ ಕೃಷಿ ಸಚಿವರಿಗೆ ಪತ್ರ ಬರೆದಿದ್ದೆ.
 
ಶಿರಸಿಯಲ್ಲಿ ಕಾಲೇಜು ಸ್ಥಾಪನೆಯಾದ ನಂತರ ಒಮ್ಮೆ ಕಾರ್ಯಕ್ರಮದಲ್ಲಿ ಸಚಿವ ಆರ್‌.ವಿ.ದೇಶಪಾಂಡೆ ಅವರು ‘ಅರಣ್ಯ ಕಾಲೇಜು ಶಿರಸಿಗೆ ಬರಲು ಸೋಂದೆ ಕಾರಣ’ ಎಂದು ಉಲ್ಲೇಖಿಸಿದ್ದರು’ ಎಂದು ದಶಕಗಳ ಹಿಂದಿನ ಸಂದರ್ಭವನ್ನು ಸ್ಮರಿಸಿದರು.

‘ವ್ಯವಸ್ಥೆ ಸುಧಾರಿಸಿದೆ. ಅಂಚೆ ಜತೆಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪತ್ರಗಳನ್ನು ಇಮೇಲ್ ಮಾಡುತ್ತೇನೆ. ಈವರೆಗೆ ಬರೆದಿರುವ ಪತ್ರಗಳು ಸಾವಿರ  ಮೀರಿರಬಹುದು. ವಾರಕ್ಕೆ ಒಂದಾದರೂ ಪತ್ರ ಖಚಿತ. ನನಗೀಗ 87 ವರ್ಷ. ಬರೆಯಲು ಉತ್ಸಾಹವಿದ್ದರೂ ಕೈ ಸಹಕರಿಸದು. ಮನೆಗೆ ಅತಿಥಿಗಳು ಬಂದಾಗ ಅವರನ್ನು ಆಶ್ರಯಿಸಿ ಪತ್ರ ಬರೆಸುತ್ತೇನೆ’ ಎಂದು ಮುಗುಳ್ನಕ್ಕರು. 

ಸೋಂದೆಯವರ ಪತ್ರಗಳು ಉತ್ತರ ಕನ್ನಡದ ಒಂದೊಂದು ಕತೆಯನ್ನು ಬಿಚ್ಚಿಡುತ್ತವೆ. ಅವರ ಪತ್ರಗಳನ್ನು ಆಧರಿಸಿ ಉತ್ತರ ಕನ್ನಡದ ಅಭಿವೃದ್ಧಿ ನೋಟಗಳನ್ನು ಬರೆಯಬಹುದು ಎಂದು ಹಿರಿಯರೊಬ್ಬರು ಹೇಳುತ್ತಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT