ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಗಣಿತ ಲೋಕ

ಅಕ್ಷರ ಗಾತ್ರ
ಸಾಮಾನ್ಯವಾಗಿ ಗಣಿತವೆಂದರೆ ‘ಕಲಿಯಲು ಬಲು ಕ್ಲಿಷ್ಟ ವಿಷಯ’ ಎಂಬ ಭಾವನೆ ವಿದ್ಯಾರ್ಥಿ, ಪೋಷಕರು ಹಾಗೂ ಶಿಕ್ಷಕರಲ್ಲೂ ಇದೆ. ಆದರೆ ಗಣಿತ ಕಲಿಕೆಯನ್ನು ಸುಲಭವಾಗಿಸುವ ಅಗಣಿತ ಸಾಧ್ಯತೆಗಳನ್ನು ತೆರೆದಿಟ್ಟ ಸಾಧಕ ಯಾಕೂಬ್ ಎಸ್. ಕೊಯ್ಯೂರು.
 
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿರುವ ಇವರು ₹ 13 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ತಮ್ಮ ಕಲ್ಪನೆಯ ಕೂಸು ‘ಗಣಿತ ಲೋಕ’ ಸೃಷ್ಟಿಸಿದ ಸಾಧನೆ ಬೆರಗು ಮೂಡಿಸುವಂಥದು. ಇಂದು ರಾಜ್ಯಮಟ್ಟದ ಗಣಿತ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾಗಿ ಇವರು ಗುರುತಿಸಿಕೊಂಡಿದ್ದಾರೆ.
 
‘ನಡ’ ಒಂದು ಪುಟ್ಟ ಹಳ್ಳಿ. ಇಲ್ಲಿನ ಪ್ರೌಢಶಾಲೆಯಲ್ಲಿ 21 ವರ್ಷಗಳಿಂದ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಯಾಕೂಬ್ ತಮ್ಮ ಪರಿಶ್ರಮದಿಂದ 2015ರಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಆಧರಿತ ‘ಗಣಿತ ಲೋಕ’ ಸೃಷ್ಟಿಸಿ, ಈ ಹಳ್ಳಿಗೆ ರಾಜ್ಯ ಮಟ್ಟದ ಮಾನ್ಯತೆ ದೊರಕಿಸಿದ್ದಾರೆ.
 
ಶಾಲೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಸಹೋದ್ಯೋಗಿಗಳ ನೆರವು ಹಾಗೂ ಮಾರ್ಗದರ್ಶನದಲ್ಲಿ ಪ್ರಯೋಗಶಾಲೆ ಸಹಿತ ‘ಗಣಿತ ಲೋಕ’ವನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಗಣಿತ ಲೋಕದಲ್ಲಿರುವ ಶೇ 60ರಷ್ಟು ಪರಿಕಲ್ಪನೆಗಳನ್ನು ಸ್ವತಃ ಯಾಕೂಬ್ ಅವರೇ ರೂಪಿಸಿದ್ದು, ಇನ್ನುಳಿದವುಗಳನ್ನು ಇತರ ಸಂಪನ್ಮೂಲ ವ್ಯಕ್ತಿಗಳು, ಅಂತರ್ಜಾಲ ಆಧರಿತ ಮಾಹಿತಿಯ ನೆರವಿನಿಂದ ಸಾಕಾರಗೊಳಿಸಿದ್ದಾರೆ.
 
 
ಗಣಿತ ಲೋಕದಲ್ಲಿ ಏನೇನಿದೆ?
ನಡ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ಕಾಲಿಡುತ್ತಿದ್ದಂತೆ ನಿಮ್ಮನ್ನು ‘ಗಣಿತ ಲೋಕ’ ಬರಮಾಡಿಕೊಳ್ಳುತ್ತದೆ. ಶಾಲಾ ಆವರಣದಲ್ಲಿರುವ ‘ಗಣಿತ ತೋಟ’ದಲ್ಲಿ ವೃತ್ತ, ವಿವಿಧ ಬಗೆಯ ತ್ರಿಭುಜಗಳು, ಷಟ್ಕೋನ, ಅಷ್ಟ ಭುಜಾಕೃತಿ, ಆಯತ, ಚೌಕ ಇತ್ಯಾದಿ ರೇಖಾಗಣಿತದ ಮಾದರಿಗಳು ಇಟ್ಟಿಗೆ, ಸಿಮೆಂಟ್ ನಿರ್ಮಾಣದಲ್ಲಿ ಮೈದಳೆದಿವೆ. ಅವುಗಳ ವಿಸ್ತೀರ್ಣ, ಎತ್ತರ, ಅಗಲ, ಸುತ್ತಳತೆ... ಇತ್ಯಾದಿ ಪರಿಕಲ್ಪನೆಗಳ ಪ್ರತ್ಯಕ್ಷ ಕಲಿಕೆಗೆ ಇಲ್ಲಿ ಅನುಕೂಲ ಕಲ್ಪಿಸಲಾಗಿದೆ. ಅಲ್ಲಿರುವ ಪುಟ್ಟ ನೀರಿನ ಟ್ಯಾಂಕ್‌ನಲ್ಲಿ ವಿದ್ಯಾರ್ಥಿಗಳು ‘ನೀರಿನ ಘನಫಲ’ವನ್ನು ಪ್ರಾಯೋಗಿಕವಾಗಿ ಅಳೆಯಲು ಅವಕಾಶ ಕಲ್ಪಿಸಲಾಗಿದೆ. ತೋಟದಲ್ಲಿರುವ ಸೋಲಾರ್ ಗಡಿಯಾರವೂ ಆಕರ್ಷಕವಾಗಿದೆ.
 
‘ಗಣಿತ ತೋಟಕ್ಕೆ’ ಅಂಟಿಕೊಂಡಿರುವ ‘ಗಣಿತ ಪ್ರಯೋಗಾಲಯ’ಕ್ಕೆ ಕಾಲಿಟ್ಟರೆ ಗಣಿತದ ಅಗಣಿತ ಸಾಧ್ಯತೆಗಳು ನಿಮ್ಮೆದುರು ತೆರೆದುಕೊಳ್ಳುತ್ತವೆ. ಗಣಿತವನ್ನು ಇಷ್ಟು ಸುಲಭ, ಆಕರ್ಷಕ ಹಾಗೂ ಪ್ರಾಯೋಗಿಕವಾಗಿ ಕಲಿಸಬಹುದು ಮತ್ತು ಕಲಿಯಬಹುದು ಎಂಬ ಅರಿವಿನ ಜತೆ ಯಾಕೂಬ್ ಅವರ ಪರಿಶ್ರಮದ ಕುರಿತು ಮೆಚ್ಚುಗೆಯೂ ನಿಮ್ಮಲ್ಲಿ ಮೂಡದಿರದು.
 
ಆಧುನಿಕ ತಂತ್ರಜ್ಞಾನದ ಬಳಕೆ
ಗಣಿತ ಪ್ರಯೋಗಾಲಯದಲ್ಲಿ ಸೆಲ್ಕೋ ಸೋಲಾರ್, ರೋಟರಿ ಬೆಳ್ತಂಗಡಿ ಮತ್ತು ಬಾರ್ ಅಸೋಸಿಯೇಷನ್ ಕೊಡುಗೆ ನೀಡಿದ ‘ಸೋಲಾರ್ ಪ್ರೊಜೆಕ್ಟರ್’ ಅಳವಡಿಸಲಾಗಿದೆ. ‘ಮೆಂಡಾ ಫೌಂಡೇಶನ್’ ನೀಡಿರುವ ತಂತ್ರಾಂಶದಲ್ಲಿ 8,9 ಮತ್ತು 10ನೇ ತರಗತಿಗೆ ಸಂಬಂಧಿಸಿದ ಪಠ್ಯ ಹಾಗೂ ಪಠ್ಯಪೂರಕ ಪಾಠಗಳನ್ನು ಸುಲಭ ಕಲಿಕೆಗೆ ಅನುಕೂಲವಾಗುವಂತೆ ಅಳವಡಿಸಲಾಗಿದೆ. ‘ಕ್ರಮಾನುಗತ ಬೋಧನೆ’ ಪರಿಕಲ್ಪನೆ ಆಧರಿಸಿ ವಿದ್ಯಾರ್ಥಿಗಳೇ ತಮಗೆ ಲಭ್ಯವಿರುವ ಸಮಯದಲ್ಲಿ ಇಲ್ಲಿ ಸ್ವಯಂ ಅಧ್ಯಯನ ಕೈಗೊಳ್ಳಲು ಅವಕಾಶವಿದೆ.
 
ಪ್ರಯೋಗಶಾಲೆಯಲ್ಲಿ ಅಳವಡಿಸಿರುವ ಅತ್ಯಾಧುನಿಕ ‘ಐರಿಸ್ ಡಿವೈಸ್’ ತಂತ್ರ ಬಳಸಿ ಗಣಿತದ ಪರಿಕಲ್ಪನೆಗಳನ್ನು ಡಿಜಿಟಲ್ ಪರದೆಯ ಮೇಲೆ ಮೂಡಿಸಬಹುದಾಗಿದೆ. ಈ ತಂತ್ರಜ್ಞಾನದಲ್ಲಿ ಪಾಠವನ್ನು ರೆಕಾರ್ಡ್ ಮಾಡುವ ಸೌಲಭ್ಯವೂ ಇದೆ. ಪರದೆ ಮೇಲೆ ನೇರವಾಗಿ ಅಂತರ್ಜಾಲ ಬಳಸಿಕೊಳ್ಳುವ ಅನುಕೂಲವೂ ಇದ್ದು, ಈ ಮೂಲಕ ಯಾವುದೇ ಪಾಠವನ್ನು ವಿದ್ಯಾರ್ಥಿಗಳ ಪೋಷಕರಿಗೆ ಈ ಮೇಲ್ ಮೂಲಕ ಕಳುಹಿಸಬಹುದಾಗಿದೆ. ಇವುಗಳ ಜತೆ ಎಲ್ಇಡಿ ಟಿ.ವಿಯನ್ನು ಕೂಡ ಇಲ್ಲಿ ಅಳವಡಿಸಲಾಗಿದೆ.
 
ಹಲವು ಸಂಪನ್ಮೂಲ, ಚಟುವಟಿಕೆಯುತ ಕಲಿಕೆ: ಗಣಿತ ಪ್ರಯೋಗಶಾಲೆ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಇಲ್ಲಿ ತಂತ್ರಜ್ಞಾನ ಆಧರಿತ ಬೋಧನೆಯ ಜತೆ ಸಾಮಾನ್ಯ ತರಗತಿಯಲ್ಲೂ ಬಳಸಬಹುದಾದ ಅನೇಕ ಮಾದರಿಗಳನ್ನು ತಯಾರಿಸಿ ಇಡಲಾಗಿದೆ. ಗಣಿತ ಬೋಧನೆ– ಕಲಿಕೆಗೆ ಪೂರಕವಾಗಿರುವ ಸಂಪನ್ಮೂಲ ಪುಸ್ತಕ, ಆಕರ ಗ್ರಂಥಗಳನ್ನು ಒದಗಿಸಲಾಗಿದೆ.
 
ಗಣಿತ ಪ್ರಯೋಗಶಾಲೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಸೂಕ್ತ ಚಟುವಟಿಕೆ ನೀಡುವ ‘ರೋಬೋಟಿಕ್ ಕಿಟ್’ ಇದ್ದು, ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ತಮಗೆ ಇಷ್ಟ ಬಂದಂತೆ ‘ರೋಬೋಟ್’ ಮಾದರಿ ತಯಾರಿಸಲು ಅವಕಾಶವಿದೆ. ಗಣಿತದ ವಿವಿಧ ಪರಿಕಲ್ಪನೆಗಳನ್ನು ಚಟುವಟಿಕೆ ಮೂಲಕ ಕಲಿಯಲು ವೇದಿಕೆ ಒದಗಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗಣಿತ ಪ್ರಯೋಗಶಾಲೆಗೆ ಹೋಗಬೇಕೆನ್ನುವ ತವಕ ಹೆಚ್ಚಿದ್ದು ಅವರು ಗಣಿತವನ್ನು ಮತ್ತಷ್ಟು ಇಷ್ಟಪಡುವಂತಾಗಿದೆ.
 
ಫಲಿತಾಂಶ ಹೆಚ್ಚಳ: ಗಣಿತದ ಸುಲಭ ಕಲಿಕೆಯ ಸಾಧ್ಯತೆಗಳನ್ನು ತೆರೆದಿಟ್ಟಿರುವ ‘ಗಣಿತ ಲೋಕ’ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗಣಿತ ವಿಷಯದಲ್ಲಿ ಶಾಲೆಯ ಮಕ್ಕಳ ಸರಾಸರಿ ಸಾಧನೆ 2013–14ರಲ್ಲಿ ಶೇ 69 ಹಾಗೂ 2014–15ರಲ್ಲಿ ಶೇ 77ರಷ್ಟು ಇದ್ದದ್ದು 2015–16ರಲ್ಲಿ ಶೇ 95ಕ್ಕೆ ಏರಿದೆ. ಹೀಗೆ ಗಣಿತ ಮಾತ್ರವಲ್ಲದೆ ಇತರ ವಿಷಯಗಳಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಉತ್ತಮ ಫಲಿತಾಂಶ ಲಭಿಸಿದೆ.
 
ಸಾಮಾಜಿಕ ಜಾಲತಾಣಗಳ ಯಶಸ್ವಿ ಬಳಕೆ
ಯಾಕೂಬ್ ಅವರ ಯಶೋಗಾಥೆ ಇಷ್ಟಕ್ಕೇ ನಿಲ್ಲುವುದಿಲ್ಲ. ಹತ್ತನೆಯ ತರಗತಿಯ ಗಣಿತ ವಿಷಯದ ಆಕರ್ಷಕ, ಗುಣಮಟ್ಟದ ನೋಟ್ಸ್‌ ತಯಾರಿಸಿ ಗಣಿತ–ವಿಜ್ಞಾನ ವಿಷಯ ಶಿಕ್ಷಕರ ಕೂಟಗಳಲ್ಲಿ (Subject Teacher Forum) ಅದನ್ನು ಶೇರ್ ಮಾಡಿದ್ದಾರೆ.
 
ಅಲ್ಲದೇ ತಮ್ಮ ಪರಿಶ್ರಮದ ಲಾಭ ಇತರ ಶಿಕ್ಷಕರಿಗೂ ಲಭಿಸಬೇಕೆಂದು ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆಪ್, ಫೇಸ್‌ಬುಕ್, ಟ್ವಿಟರ್, ಬ್ಲಾಗ್, ಹೈಕ್ ಗ್ರೂಪ್‌ಗಳಲ್ಲೂ ನೋಟ್ಸ್ ಶೇರ್ ಮಾಡಿದ್ದಾರೆ. ಇವರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶೆರ್ ಮಾಡಿರುವ ನೋಟ್ಸ್ ಸದ್ಯ 5 ಸಾವಿರ ಪುಟಗಳನ್ನು ಮೀರಿದೆ! ಇದಲ್ಲದೇ ಗಣಿತವನ್ನು ಆಪ್ಯಾಯಮಾನವಾಗಿಸುವ ಉದ್ದೇಶದಿಂದ ಗಣಿತ ಸಂಬಂಧಿತ 100ಕ್ಕೂ ಹೆಚ್ಚು ವಿಡಿಯೊಗಳನ್ನು ತಯಾರಿಸಿ ಯೂಟೂಬ್‌ಗೆ ಅಪಲೋಡ್ ಮಾಡಿದ ಹಿರಿಮೆಯೂ ಇವರದ್ದಾಗಿದೆ.
 
ಎಸ್ಸೆಸ್ಸೆಲ್ಸಿ ಮಕ್ಕಳು ಸುಲಭವಾಗಿ ಅಂಕ ಗಳಿಸಲು ಅನುಕೂಲವಾಗುವಂತೆ ‘ಪಾಸಿಂಗ್ ಪ್ಯಾಕೇಜ್’ ತಯಾರಿಸಿದ್ದಾರೆ. ರಾಜ್ಯದಾದ್ಯಂತ ಸಂಚರಿಸಿ ಗಣಿತ ವಿಷಯದ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಯಾಕೂಬ್ ಅವರು ತಯಾರಿಸಿರುವ ನೋಟ್ಸ್‌ ಪಡೆಯಲು ಜಾಲತಾಣ www.inyatrust.co.in/2016/05/yakub.html ಸಂಪರ್ಕಿಸಬಹುದು.
 
ಯಾಕೂಬ್ ಅವರು ಗಣಿತ ಲೋಕವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅದು ಗುರುತಿಸಿಕೊಳ್ಳುವಂತಾಗಬೇಕು ಎಂಬ ಕನಸು ಕಟ್ಟಿಕೊಂಡಿದ್ದಾರೆ. ಅವರಿಗೆ ನೆರವಾಗಲು ಬಯಸುವವರು ಅಥವಾ ಗಣಿತ ಲೋಕದ ಕುರಿತು ಮಾಹಿತಿ ಪಡೆಯಲು ಇಚ್ಛಿಸುವವರು: 90089 83286 ಸಂಪರ್ಕಿಸಬಹುದು. 
***
ಗಣಿತ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಅವಶ್ಯಕ. ಈ ಪರಿಕಲ್ಪನೆ ಅಡಿಯಲ್ಲಿಯೇ ‘ಗಣಿತ ಲೋಕ’ ಸೃಷ್ಟಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆ ತಂದಿದ್ದು ಹೊಸತನವನ್ನು ಕಲಿತು, ಕಲಿಸಿದ್ದಾರೆ. ಇದರಿಂದ ಪ್ರೇರೇಪಿತರಾಗಿ ಶಾಲೆಗಳಲ್ಲೂ ‘ಗಣಿತ ಲೋಕ’ ಸೃಷ್ಟಿಸಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ.
–ಯಾಕೂಬ್ ಎಸ್. ಕೊಯ್ಯೂರು, ಗಣಿತ ಶಿಕ್ಷಕ ಸರ್ಕಾರಿ ಪ್ರೌಢಶಾಲೆ, ನಡ
 
 
 

 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT