ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು, ನೃತ್ಯದ ಸಂಗಮ ‘ಸಮರಸ’

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಅದೊಂದು ಸುಂದರ ವೇದಿಕೆ. ಆ ವೇದಿಕೆಯ ನಿರ್ಮಾತೃಗಳು ಗಣೇಶ್‌ ದೇಸಾಯಿ ಹಾಗೂ ನಮಿತಾ ದೇಸಾಯಿ. ಕಲೆಯ ಪ್ರಕಾರಗಳಾದ ಸಂಗೀತ ನೃತ್ಯ, ತಬಲಾಗಳನ್ನು ಕಲಿಯುವ ಜೊತೆಗೆ ಆಸಕ್ತಿ ಇರುವವರಿಗೆ ಕಲಿಸುವ ಉದ್ದೇಶದಿಂದ ಆರಂಭಿಸಿದ ವೇದಿಕೆಯೇ ‘ಸಮರಸ’. 
 
2012ರಲ್ಲಿ ಆರಂಭವಾದ ಸಮರಸ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಇಂದು ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. 
ಹಾಡುಗಾರ ಹಾಗೂ ಸಂಗೀತ ಸಂಯೋಜಕರಾಗಿರುವ ಗಣೇಶ ದೇಸಾಯಿ ಹಾಗೂ ನಟಿ, ಭರತನಾಟ್ಯ ಕಲಾವಿದೆ ನಮಿತಾ ದೇಸಾಯಿ ದಂಪತಿ ಹುಟ್ಟು ಹಾಕಿದ ವೇದಿಕೆಯಲ್ಲಿ ಇಂದು 140 ವಿದ್ಯಾರ್ಥಿಗಳಿದ್ದಾರೆ. 
 
2012ರಲ್ಲಿ 20 ಜನರೊಂದಿಗೆ ಮಲ್‍ಲೇಶ್ವರದ ಅನನ್ಯ ಸಂಸ್ಥೆಯಲ್ಲಿ ಇವರು ತರಗತಿಯನ್ನು ಆರಂಭಿಸಿದರು. ನಂತರ ಅಲ್ಲಿಂದ ರಾಜಾಜಿನಗರದಲ್ಲಿ ಅಧಿಕೃತವಾಗಿ ಸಂಸ್ಥೆ ಕಾರ್ಯರೂಪಕ್ಕೆ ಬಂತು. ಆರ್‌.ಟಿ ನಗರ, ಮಲ್ಲತ್ತಹಳ್ಳಿ, ಬಾಣಸವಾಡಿಯಲ್ಲೂ ಸಮರಸ ಸಂಸ್ಥೆ ತನ್ನ ಖಾತೆಯನ್ನು ತೆರೆದಿದೆ. ಹಾಡು, ವಾದ್ಯ ಸಂಗೀತ ಹಾಗೂ ಭರತನಾಟ್ಯ ಮತ್ತಿತರ ಕಲೆಗಳನ್ನು ಇಲ್ಲಿ ಕಲಿಸಲಾಗುತ್ತದೆ. 
 
ಶಶಿಕಲಾ, ಪೂರ್ಣಿಮಾ, ರಾಗಿಣಿ ಭಟ್‌, ಶ್ರುತಿ ಬಾಲಾಜಿ, ಸುಚೇತಾ ರಾವ್‌ ಸೇರಿದಂತೆ ಇನ್ನೂ ಕೆಲವರು ಈ ಸಂಸ್ಥೆಯಲ್ಲೇ ಕಲಿತು ಸಿನಿಮಾಗಳಲ್ಲಿ ಹಾಡಿದ್ದಾರೆ. ಅಲ್ಲದೇ ಹಾಡಿನ ಸಿ.ಡಿಗಳನ್ನು ಕೂಡ ಹೊರತಂದಿದ್ದಾರೆ. 
 
ಪ್ರತಿವರ್ಷ ಸಮರಸ ತಂಡದಿಂದ ‘ಸಮ್ಮೇಳನ’ ಎಂಬ ಹೆಸರಿನಲ್ಲಿ ವಾರ್ಷಿಕ ಕಾರ್ಯಕ್ರಮವನ್ನು  ನಡೆಸಿಕೊಂಡು ಬರುತ್ತಿದೆ. ‘ಚಿಂತನ, ಮಂಥನ, ದರ್ಪಣ’ ಎಂಬ ಅಡಿಬರಹವಿರುವ ಈ ಕಾರ್ಯಕ್ರಮದಲ್ಲಿ ಕಾರ್ಯಾಗಾರ, ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. 
 
ಸಮರಸ ಸಂಸ್ಥೆಯ ಸ್ಥಾಪಕರಾದ ಗಣೇಶ್ ದೇಸಾಯಿ ಸಂಸ್ಥೆಯ ಹುಟ್ಟಿನ ಬಗ್ಗೆ ಹೇಳುವುದು ಹೀಗೆ ‘ನಾನು ಹಾಗೂ ನಮಿತಾ ಕಲೆಗಾಗಿ ನಮ್ಮನ್ನು ಸಮರ್ಪಿಸಿಕೊಂಡವರು. ನಮಗೆ ತಿಳಿದಿರುವ ಕಲೆಯನ್ನು ನಾವು ಇತರರಿಗೆ ಕಲಿಸಬೇಕು. ಜೊತೆಗೆ ಕಲೆಯ ಪ್ರಕಾರದ ಮೂಲವನ್ನು ಜನರಿಗೆ ತಿಳಿಸಬೇಕು ಎಂಬ ಉದ್ದೇಶದಿಂದ ಸಂಸ್ಥೆಯನ್ನು ಹುಟ್ಟುಹಾಕಿದೆವು’.
 

 
ಪಾಶ್ಚಿಮಾತ್ಯ ಸಂಗೀತದ ಗೀಳಿನಲ್ಲಿರುವ ಜನ ಶಾಸ್ತ್ರೀಯ ಸಂಗೀತದತ್ತ ಒಲವು ತೋರುವುದು ಕಡಿಮೆಯಾಗುತ್ತಿದೆ. ಹಾಗಾಗಿ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲೆಗೆ ಸರಿಯಾದ ವೇದಿಕೆ ಕಲ್ಪಿಸುವ ಮೂಲಕ ಜನರಲ್ಲಿ ಕಲಾಪ್ರೀತಿಯನ್ನು ಹುಟ್ಟುಹಾಕಬೇಕು ಎಂಬ ಸುದುದ್ದೇಶ ಇರಿಸಿಕೊಂಡು ಸಂಸ್ಥೆಯನ್ನು ಆರಂಭಿಸಿದ್ದಾರೆ ಗಣೇಶ್ ದೇಸಾಯಿ. 
 
ಸಮರಸ ಸಂಸ್ಥೆಯ 140 ವಿದ್ಯಾರ್ಥಿಗಳಲ್ಲಿ 40 ಮಂದಿ ನೃತ್ಯ ಕಲಿಯುವ ವಿದ್ಯಾರ್ಥಿಗಳಾದರೆ, ಉಳಿದ 100 ಮಂದಿ ಸಂಗೀತಾಭ್ಯಾಸ ಮಾಡುತ್ತಾರೆ. ರಾಜಾಜಿನಗರದಲ್ಲಿ ಪ್ರತಿದಿನ ತರಗತಿಗಳು ನಡೆಯುತ್ತವೆ. ಮಲ್ಲತ್ತಹಳ್ಳಿಯಲ್ಲಿ ಒಂದು ದಿನ, ಆರ್‌ಟಿ ನಗರ ಹಾಗೂ ಬಾಣಸವಾಡಿಯಲ್ಲಿ  ವಾರದಲ್ಲಿ ಒಂದು ದಿನ ತರಗತಿಗಳು ನಡೆಯುತ್ತವೆ. 
 
ಗಣೇಶ ದೇಸಾಯಿ ದಂಪತಿ ಜತೆ ಉಮೇಶ್ ದೇಸಾಯಿ ಹಾಗೂ ಅಕ್ಷಯ್‌ ದೀಕ್ಷಿತ್  ಅವರು ಸಮರಸ ತಂಡದಲ್ಲಿ ಶಿಕ್ಷಕರಾಗಿದ್ದಾರೆ. ಗಣೇಶ್ ದೇಸಾಯಿ ಹಿಂದೂಸ್ತಾನಿ ಸಂಗೀತ ಹಾಗೂ ಲಘು ಸಂಗೀತವನ್ನು ಕಲಿಸಿದರೆ, ನಮಿತಾ ಭರತನಾಟ್ಯ ಹಾಗೂ ಜನಪದ ನೃತ್ಯದ ಪ್ರಕಾರಗಳನ್ನು ಕಲಿಸುತ್ತಾರೆ. ಉಮೇಶ್ ದೇಸಾಯಿ ಶಾಸ್ತ್ರೀಯ ಸಂಗೀತ ಹಾಗೂ ಅಕ್ಷಯ್ ದೀಕ್ಷಿತ್ ತಬಲಾ ವಾದನವನ್ನು ಹೇಳಿಕೊಡುತ್ತಾರೆ. 
 
ಬೆಂಗಳೂರು ಮಾತ್ರವಲ್ಲದೇ ದಾವಣಗೆರೆ, ಶಿರಸಿ ಹಾಗೂ ಧಾರಾವಾಡದಲ್ಲೂ ಸಮರಸದ  ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಿದ್ದಾರೆ. ವಿದೇಶಗಳಿಂದಲೂ ಸಂಗೀತ ಕಲಿಯಲು ಇವರ ಬಳಿಗೆ ವಿದ್ಯಾರ್ಥಿಗಳು ಬರುತ್ತಾರೆ.
 
‘ಫೇಸ್‌ಬುಕ್ ಪೇಜ್‌ನಲ್ಲಿ ನೋಡಿ ನಮ್ಮನ್ನು ಸಂಪರ್ಕಿಸಿ ನಮ್ಮ ಬಳಿ ಸಂಗೀತ ನೃತ್ಯ ಕಲಿಯಲು ವಿದೇಶಿಗರು ಬರುತ್ತಾರೆ’ ಎಂದು ಖುಷಿಯಿಂದ ಹೇಳುತ್ತಾರೆ ಗಣೇಶ್ ದೇಸಾಯಿ. 
 
ಸಮರಸ ಸಂಸ್ಥೆಯ ಇನ್ನೊಂದು ವಿಶೇಷ ಎಂದರೆ ಸಮೂಹ ಗೀತೆ. ಭಾರತೀಯ ಸಮೂಹ ಗೀತೆಯನ್ನು ವಿಶಿಷ್ಟ ಶೈಲಿಯಲ್ಲಿ ಹಾಡುವುದು.  ಸಮರಸ ತಂಡ ‘ನವಪಲ್ಲವ’ ಎಂಬ ಸಮೂಹ ಗೀತೆಗಳ ಸಿಡಿಯೊಂದನ್ನು ಬಿಡುಗಡೆ ಮಾಡಿದೆ.
 
ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯೋಗಿಗಳು, ಸೆಲೆಬ್ರಿಟಿಗಳು ಸಮರಸದಲ್ಲಿ ಸಂಗೀತ ಹಾಗೂ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.
ಗಣೇಶ ದೇಸಾಯಿ ಸಂಪರ್ಕ ಸಂಖ್ಯೆ: 98452 16091.  
***
ಇಂದು ಕಗ್ಗ, ವಚನ, ದಾಸರ ಪದಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ನನ್ನದು.
–ಗಣೇಶ ದೇಸಾಯಿ, ಸಮರಸ ಸಂಸ್ಥೆ ಸ್ಥಾಪಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT