ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಸಾಧಕರ ಆಹಾರ ಸೇವನೆ ಕ್ರಮ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಹೊಟ್ಟೆಯ ಬೊಜ್ಜು ಕರಗಿಸಲು ಪ್ರಸಾರಿತ ಪಾದೋತ್ಥಾಸನ ರಾಮಬಾಣವಿದ್ದಂತೆ. ಈ ಆಸನದಿಂದ ಹೊಟ್ಟೆಯ ಬೊಜ್ಜನ್ನು ಬೇಗನೆ ಕರಗಿಸಬಹುದು.
 
ಅಭ್ಯಾಸ ಕ್ರಮ: ಜಮಖಾನದ ಮೇಲೆ ಅಂಗಾತವಾಗಿ ನೆಟ್ಟಗೆ ಮಲಗಬೇಕು. ಆನಂತರ ಉಸಿರನ್ನು ತೆಗೆದುಕೊಳ್ಳುತ್ತ ಕೈಯನ್ನು ಶಿರಸ್ಸಿನ ಹಿಂದಕ್ಕೆ ನೇರವಾಗಿ ಚಾಚಬೇಕು. ಆಮೇಲೆ ಸ್ವಲ್ಪ ಹೊತ್ತು ನೆಲೆಸಿ ಉಸಿರನ್ನು ತೆಗೆದುಕೊಳ್ಳುತ್ತ ಎರಡು ಕಾಲುಗಳನ್ನು ಆರಂಭದಲ್ಲಿ 30, ಆಮೇಲೆ 60 ನಂತರ 90 ಕೋನದವರೆಗೆ ಎತ್ತಿ ನಿಲ್ಲಿಸಬೇಕು (ಚಿತ್ರದಲ್ಲಿರುವಂತೆ).
 
ಸ್ವಲ್ಪ ಹೊತ್ತು ಸಮ ಉಸಿರಾಟದಲ್ಲಿ ನೆಲೆಸಿ ಉಸಿರನ್ನು ಬಿಡುತ್ತಾ ನಿಧಾನವಾಗಿ ಕಾಲುಗಳನ್ನು ನೆಲದ ಮೇಲೆ ಇಡಬೇಕು. ಈ ರೀತಿ ಮೂರರಿಂದ ಆರು ಬಾರಿ ಅಭ್ಯಾಸ ಮಾಡಬೇಕು. ಈ ಆಸನವನ್ನು ಪ್ರತಿಯೊಂದು ಬಾರಿ ಅಭ್ಯಾಸ ಮಾಡಿದಾಗ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬೇಕು.
 
ಉಪಯೋಗಗಳು: ಪ್ರಸಾರಿತ ಪಾದೋತ್ಥಾಸನ ಶಿಸ್ತುಬದ್ಧವಾಗಿ, ಕ್ರಮವತ್ತಾಗಿ, ಉಸಿರಿನ ಗತಿಯೊಂದಿಗೆ ಅಭ್ಯಾಸ ಮಾಡುವುದರಿಂದ ವಿಶೇಷವಾಗಿ ಹೊಟ್ಟೆಯ ಬೊಜ್ಜನ್ನು ಬೇಗನೆ ಕರಗಿಸ ಬಹುದಾಗಿದೆ.
 
ಸೊಂಟ ನೋವು, ಬೆನ್ನು ನೋವು ಪರಿಹಾರಕ್ಕೆ ಈ ಆಸನವು ಉಪಯುಕ್ತ. ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೂ ಈ ವ್ಯಾಯಾಮ ಉಪಯೋಗಕಾರಿ. ತೊಡೆಗಳಿಗೆ ಹೆಚ್ಚಿನ ವ್ಯಾಯಾಮ ದೊರಕಿ ಕಾಲುಗಳಿಗೆ ಶಕ್ತಿ ಬರುತ್ತದೆ. ಮೂತ್ರ ಜನಕಾಂಗಗಳು ಮತ್ತು ಪಿತ್ತಕೋಶ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.
 
ಆಹಾರ ಸೇವನೆ ಕ್ರಮ: ಯೋಗದೊಂದಿಗೆ ನಿಯಮಿತವಾದ ಪೋಷಕಾಂಶಗಳ ಆಹಾರ ಸೇವನೆ ಅಗತ್ಯ. ಆಹಾರವನ್ನು ಸೇವಿಸಿದ ನಂತರ ಬಾಯಿ ಮುಚ್ಚಿ ಆಹಾರವನ್ನು ಜಗಿದು ನುಂಗಬೇಕು. ಬಾಯಿ ತೆರೆದು ಆಹಾರವನ್ನು ಜಗಿಯಬಾರದು.
 
ಏಕೆಂದರೆ ಬಾಯಿಯಲ್ಲಿರುವ ಲಾಲಾರಸ ಆಹಾರಕ್ಕೆ ಬೆರಕೆಯಾಗುವುದಿಲ್ಲ (ಬಾಯಿ ತೆರೆದಾಗ ಗಾಳಿಯ ಸ್ಪರ್ಶದಿಂದ ಜೊಲ್ಲು ಆಹಾರಕ್ಕೆ ಬೆರಕೆಯಾಗುವುದಿಲ್ಲ).
 
ನಾವು ತುಟಿ ಮುಚ್ಚಿ ಆಹಾರವನ್ನು ಜಗಿದು ನುಂಗಿದಾಗ ಆಹಾರದಲ್ಲಿರುವ ಪೋಷಕಾಂಶಗಳು ರಕ್ತಕ್ಕೆ ಸುಲಭವಾಗಿ ಸೇರುತ್ತವೆ. ಆಹಾರ ಸೇವನೆಯ ಸಂದರ್ಭದಲ್ಲಿ ನೀರನ್ನು ಕುಡಿಯಬಾರದು (ಅಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಕುಡಿಯಬಹುದು).
 
ಆಹಾರ ಸೇವನೆಯ ಅರ್ಧ ಗಂಟೆಯ ಮೊದಲು ನೀರನ್ನು ಕುಡಿಯಬಾರದು. ಆಹಾರ ಸೇವನೆಯ ಅರ್ಧ ಗಂಟೆಯ ಅನಂತರ ನೀರನ್ನು ಕುಡಿಯಬಹುದು. ಆಹಾರ ಸೇವನೆಯ ಸಂದರ್ಭದಲ್ಲಿ ನೀರನ್ನು ಕುಡಿದರೆ ಜಠರದಲ್ಲಿರುವ ಹೈಡ್ರೋಕ್ಲೋರಿಕ್ ಆಸಿಡ್‌ನ ಶಕ್ತಿ ಕಡಿಮೆಯಾಗಿ ತಿಂದ ಆಹಾರ ಸಮರ್ಪಕವಾಗಿ ಜೀರ್ಣವಾಗುವುದಿಲ್ಲ. 
 
ನಾವು ತಿಂದ ಆಹಾರ ಜೀರ್ಣವಾಗದಿದ್ದಾಗ ಥೈರಾಯ್ಡ್‌ ಸಮಸ್ಯೆ, ಮಧುಮೇಹ ಸಮಸ್ಯೆ ಹಾಗೂ ಹೆಚ್ಚಿನ ರಕ್ತದೊತ್ತಡ ಹಾಗೂ ಬೊಜ್ಜಿನ ಸಮಸ್ಯೆ ಬರುವ ಸಂದರ್ಭ ಜಾಸ್ತಿ ಇರುತ್ತದೆ. ಆದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಾವು ಆಹಾರ ಸೇವಿಸುವ ಕ್ರಮ ಸರಿಯಾಗಬೇಕು.
 
ಆಹಾರ ಸೇವನೆ ಮಾಡುವಾಗ ನಮ್ಮ ಗಮನ ಆಹಾರದ ಕಡೆಗೇ ಇರಬೇಕು. ಟಿ.ವಿ, ರೇಡಿಯೊ, ಪತ್ರಿಕೆ ಅಥವಾ ಪುಸ್ತಕಗಳನ್ನು ಓದುವುದು, ಮಾತನಾಡುವುದು ಇತ್ಯಾದಿಗಳನ್ನು ಮಾಡಬಾರದು. 
 
ಹಸಿವೆ ಆಗದೆ ಆಹಾರವನ್ನು ಸೇವಿಸಲೇಬಾರದು. ಹಸಿವೆಯಾಗದೆ ಆಹಾರ ಸೇವಿಸಿದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಬೊಜ್ಜು ಹಾಗೂ ಇನ್ನಿತರೆ ಕಾಯಿಲೆಗಳು ಬರುತ್ತವೆ. ಹಾಗೇ ಹಸಿವೆ ಆದ ತಕ್ಷಣ ಆಹಾರವನ್ನು ಸೇವಿಸಲೇಬೇಕು (ತೀರ ಕಷ್ಟವಾದರೆ ಸ್ವಲ್ಪ ನೀರು ಅಥವಾ ಲಘು ಆಹಾರವನ್ನು ಸೇವಿಸಬೇಕು).
 
ನಾವು ಸೇವಿಸುವ ಆಹಾರದಲ್ಲಿ ಪ್ರೊಟೀನ್, ವಿಟಮಿನ್, ಕಾರ್ಬೋಹೈಡ್ರೇಟ್, ಸಸಾರಜನಕ,  ಶರ್ಕರಪಿಷ್ಠ, ಕೊಬ್ಬು, ಖನಿಜಾಂಶ, ಲವಣಗಳು ಹಾಗೂ ನೀರು ಇರಬೇಕು. ಉತ್ತಮ ಸಮತೂಕದ ಆಹಾರ ಪೋಷಣಾಂಶಗಳು, ನಿದ್ರೆ ಹಾಗೂ ಶುಭ್ರ ಗಾಳಿ ಇವಿಷ್ಟು ದೇಹದ ಆರೋಗ್ಯಕ್ಕೆ ಅಗತ್ಯ. 
ಗೋಪಾಲಕೃಷ್ಣ ದೇಲಂಪಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT