ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಿಷಭಾಪ್ರಿಯಾ’ಕ್ಕೆ ಶ್ರೀಮಹದೇವ್ ನಾಯಕ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ನಟಿ ರಚಿತಾರಾಮ್ ನಿರ್ಮಾಣದ ‘ರಿಷಭಾಪ್ರಿಯಾ’ ಕಿರುಚಿತ್ರಕ್ಕೆ ಕಿರುತೆರೆ ನಟ ಶ್ರೀಮಹದೇವ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಅವರ ಮೊದಲ ಚಿತ್ರವಾಗಿರುವ ‘ರಿಷಭಾಪ್ರಿಯಾ’ ಗಾಂಧಿನಗರದಲ್ಲಿ ಕುತೂಹಲ ಹುಟ್ಟಿಸಿದೆ.
 
‘92.7 ಬಿಗ್ ಎಫ್‌.ಎಂ.ನಲ್ಲಿ ಆರ್.ಜೆ. ಆಗಿರುವ ಮಯೂರ್‌ ರಾಘವೇಂದ್ರ ಚಿತ್ರದ ಕತೆ ಹೇಳಿದಾಗ ತುಂಬಾ ಇಷ್ಟವಾಯಿತು. ಮಯೂರ್‌ ಪ್ರತಿ ಸಣ್ಣ ಸಂಗತಿಗೂ ಒತ್ತು ನೀಡುತ್ತಾರೆ. ಅದ್ಭುತವಾದ ಚಿತ್ರಕತೆ ಹೆಣೆದಿದ್ದಾರೆ. ಅವರ ಕಿರುಚಿತ್ರದಲ್ಲಿ ಜನರಿಗೆ ಯೋಚನೆ ಮಾಡಲು ಅವಕಾಶವಿರುತ್ತದೆ. ಹಾಗಾಗಿ, ಚಿತ್ರವನ್ನು ಒಪ್ಪಿಕೊಂಡೆ’ ಎಂದು ಮಾಹಿತಿ ನೀಡುತ್ತಾರೆ ಮಹದೇವ್.  
 
‘ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಅವರು ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ. ಅವರ ಜತೆ ನಾಯಕನಾಗಿ ನಟಿಸುತ್ತಿರುವುದು ನನಗೆ ಖುಷಿ ತಂದಿದೆ. ಇದು ಕಿರುಚಿತ್ರವಾದರೂ ಅದರಲ್ಲಿ ಭಾವನಾತ್ಮಕ ಸಂಗತಿಗಳಿವೆ. ತುಂಬಾ ಏರಿಳಿತಗಳಿವೆ. ಮೂರು ವರ್ಷಗಳಿಂದ  ಕಿರುತೆರೆಯಲ್ಲೇ ಇದ್ದೆ.
 
ಅನೇಕ ಸಿನಿಮಾ ಆಫರ್‌ಗಳು ಬಂದರೂ ಕತೆ ಇಷ್ಟವಾಗಿರಲಿಲ್ಲ. ಈಗ ಒಳ್ಳೆಯ ಕತೆ ಮತ್ತು ತಂಡ ಸಿಕ್ಕಿದೆ.  ಯಾಕೆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಹಲವರು ಪ್ರಶ್ನಿಸುತ್ತಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ’ ಎನ್ನುತ್ತಾರೆ ಅವರು. 
 
ಸಂಗೀತ ಪ್ರಧಾನವಾಗಿರುವ ಈ ಕಿರುಚಿತ್ರ ಮ್ಯೂಸಿಕಲ್ ಲವ್ ಸ್ಟೋರಿ ಆಗಿರಬಹುದು ಎನ್ನಲಾಗುತ್ತಿದೆ.  ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದ್ದು, ಕಿರುಚಿತ್ರದ ಕತೆ ಕುರಿತು ನಿರ್ದೇಶಕ ಮಯೂರ್ ಯಾವುದೇ ಸುಳಿವು ನೀಡಿಲ್ಲ. 
 
ಪ್ರಜ್ವಲ್‌ ಅವರನ್ನು ಮದುವೆಯಾಗುವ ಮುನ್ನ ಮಾಡೆಲಿಂಗ್ ಮಾಡುತ್ತಿದ್ದ ರಾಗಿಣಿ ಅವರಿಗೆ ಸಿನಿಮಾದಲ್ಲಿ ಅನೇಕ ಅವಕಾಶ ಬಂದಿದ್ದವು. ಆದರೆ, ಆಗ ನಟಿಸಲು ಅಷ್ಟಾಗಿ ಒಲವು ತೋರಿರದ ಅವರು, ಈಗ ಕಿರುಚಿತ್ರದ ಮೂಲಕ ಬಣ್ಣದ ಬದುಕಿಗೆ ಪದಾರ್ಪಣೆ ಮಾಡುತ್ತಿದ್ದಾರೆ. 
 
ಈ ಕಿರುಚಿತ್ರಕ್ಕೆ  ಚರಣ್ ರಾಜ್ ಅವರ ಸಂಗೀತ ನಿರ್ದೇಶನವಿದ್ದು, ಪತ್ನಿ ರಾಗಿಣಿ ಅವರನ್ನು ತೆರೆಯ ಮೇಲೆ ಕಣ್ತುಂಬಿ ಕೊಳ್ಳಲು ಪ್ರಜ್ವಲ್ ದೇವರಾಜ್ ಕಾತುರರಾಗಿದ್ದಾರಂತೆ. ‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT