ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವ ಪರಂಪರೆಯ ರಕ್ಷಣೆಯ ಅಗತ್ಯ

Last Updated 24 ಏಪ್ರಿಲ್ 2017, 19:57 IST
ಅಕ್ಷರ ಗಾತ್ರ

 ರವಿ ಹೆಗಡೆ, ಲಕ್ಷ್ಮೀ ಮೂರ್ತಿ

ಪ್ರತಿವರ್ಷವೂ ವಿಶ್ವ ಪರಂಪರೆ ದಿನವನ್ನು (ಏ.18) ಎಷ್ಟು ಉತ್ಸಾಹದಿಂದ ಆಚರಿಸುತ್ತೇವೆಯೋ ಅಷ್ಟೇ ಉತ್ಸಾಹದಿಂದ ಮರೆಯುತ್ತೇವೆ. ಭಾರತದ, ಅದರಲ್ಲೂ ನಮ್ಮ ನಾಡಿನ ವೈವಿಧ್ಯಮಯ ಪರಂಪರೆಯ ಸೊಗಡು ಇನ್ನೆಲ್ಲೂ ಕಾಣಸಿಗದಂಥದ್ದು. ಹಿಂದೆ, ಶಿವರಾಮ ಕಾರಂತರು, ‘ನಮ್ಮ ನಾಡಿನಲ್ಲಿ ಏನಿದೆ ಎಂದು ಕೇಳುವವರಿಗೆ ಇಲ್ಲಿ ಏನಿಲ್ಲ ಎಂದು ಮರುಪ್ರಶ್ನೆ ಮಾಡಬೇಕಾದೀತು’ ಎಂದಿದ್ದರು.

ಹೌದು, ಇಲ್ಲಿ ಎಲ್ಲವೂ ಇದೆ. ಆದರೆ ನಾವು ಹಲವು ಬಾರಿ ‘ಯಾವುದೂ ಇಲ್ಲ’ ಎಂಬ ಭಾವದಿಂದಲೇ ಬದುಕು ಸಾಗಿಸುತ್ತಿದ್ದೇವೆಯೇನೋ ಎಂದು ಅನಿಸುತ್ತದೆ.

ನಮ್ಮ ಸಾಂಸ್ಕೃತಿಕ, ಪ್ರಾಗೈತಿಹಾಸಿಕ ಮತ್ತು ನೈಸರ್ಗಿಕ ಪರಂಪರೆ ಅತಿ ವಿಶಿಷ್ಟವೂ, ಪ್ರಮುಖವೂ ಅಲ್ಲದೆ ಕೆಲ ವಿಚಾರಗಳಲ್ಲಿ ಜಗತ್ತಿನ ಇನ್ನೆಲ್ಲೂ ಕಾಣಸಿಗದ ಸಂಗತಿಗಳನ್ನು ಒಳಗೊಂಡದ್ದು. ಇಂಥ ಸಂಪದ್ಭರಿತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಹರಿಕಾರರು ನಮ್ಮ ಪೂರ್ವಜರು ಎನ್ನಲು ನಮಗೆ ಹೆಮ್ಮೆ ಎನಿಸಬೇಕು.

ನಮ್ಮಲ್ಲಿನ ಭಾಷೆ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಸಂಗೀತ, ಕಲೆ, ಸಂಸ್ಕೃತಿ, ಶಿಲ್ಪಕಲೆ, ಅಗಾಧ ನೈಸರ್ಗಿಕ ಸಂಪತ್ತು ಇವೆಲ್ಲ ನಾಡು ಎಷ್ಟು ಶ್ರೀಮಂತ ಎಂಬುದನ್ನು ಪ್ರತಿಬಿಂಬಿಸುವಂತಹದ್ದು. ಬಳುವಳಿಯಾಗಿ ಬಂದ ನಮ್ಮ ಪರಂಪರೆಗೆ ಎಂದಿಗೂ ದಾರಿದ್ರ್ಯವಿಲ್ಲ, ದಾರಿದ್ರ್ಯವಿರುವುದು ಅದನ್ನು ನಾವು ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ಅದನ್ನು ಕಾಪಾಡಿ ಮುಂದಿನ ಯುಗದಲ್ಲೂ ಉಳಿಸುವ ಪ್ರಯತ್ನದಲ್ಲಿ.

ನಿಸರ್ಗವನ್ನು, ಅದರ ಎಲ್ಲ ಶಕ್ತಿ ಪ್ರಕಾರಗಳನ್ನು ಆರಾಧಿಸುವಂಥ  ಸಂಪ್ರದಾಯದ ಹಿನ್ನೆಲೆಯಲ್ಲಿ ಉಗಮಗೊಂಡ ನಮ್ಮ ಪರಂಪರೆಗೆ ಜಗತ್ತಿನಲ್ಲಿ ಅತಿವಿಶಿಷ್ಟ ಸ್ಥಾನವಿದೆ. ಮಾನವನ ಬೌದ್ಧಿಕ ಪ್ರಗತಿ, ಸಾಮಾಜಿಕ ಸ್ಥಿತ್ಯಂತರ, ನೈತಿಕ ಮೌಲ್ಯಗಳ ಹಿನ್ನೆಲೆಯಲ್ಲಿ ಪರಂಪರೆಯ ರಕ್ಷಣೆಗೆ ನಮ್ಮ ಸಮಾಜ ಕಾರ್ಯಪ್ರವೃತ್ತವಾದಲ್ಲಿ ಮುಂದಿನ ಪೀಳಿಗೆಗೆ ನಾವು ನೀಡುವ ಕೊಡುಗೆ ಅಪಾರ ಎನಿಸಬಲ್ಲದು.

ಪರಂಪರೆಯಿಂದ ಬಂದುದರಲ್ಲಿ ಒಳ್ಳೆಯವೂ ಇವೆ, ಅಹಿತಕರವಾದಂಥವುಗಳೂ ಇವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಂಥ ಮೌಲ್ಯಾಧಾರಿತ ಸಮಾಜದ ನಿರ್ಮಾಣದಲ್ಲಿ ನಾವು ಆಸಕ್ತಿಯನ್ನೇ ತೋರಿಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ನಾವು ಕಳೆದುಕೊಂಡದ್ದು ಎಷ್ಟೋ.

ಬೌದ್ಧಿಕ ಮತ್ತು ನೈತಿಕ ಮೌಲ್ಯಗಳ ನೆಲೆಯಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆ ಅನೇಕ ಬದಲಾವಣೆಗಳನ್ನು ಹೊಂದುತ್ತ ಬಂದಿದೆ. ಅಂಥ ಬದಲಾವಣೆಯ ವೇಗ ಆಯಾ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ಅವಲಂಬಿಸಿರುವಂಥದ್ದು. ಆಯಾ ಕಾಲಘಟ್ಟದಲ್ಲಿ ಒಳಿತನ್ನು ಪೋಷಿಸುತ್ತ, ಕೆಡುಕನ್ನು ತೊರೆಯುತ್ತ ನಿರಂತರ ಮುಂದುವರೆಯುವ ಶ್ರೇಷ್ಠತೆ ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿದೆ.

ಅತಿ ಪುರಾತನ ಕಾಲದ ಕೊಂಡಿಯನ್ನು ಹೊಂದಿರುವ ಪ್ರಾಣಿಬಲಿ ಸಂಸ್ಕೃತಿಯ ವಿಚಾರ ಇಲ್ಲಿ ಪ್ರಸ್ತುತ. ಪುರಾತನ ಕಾಲದ ವೈದಿಕ ಪರಂಪರೆಯಲ್ಲಿ ಯಜ್ಞ-ಯಾಗಗಳಲ್ಲಿ ಪ್ರಾಣಿಬಲಿ ನೀಡುತ್ತಿದ್ದುದನ್ನು ಸಹಿಸದ ಸಾಮಾಜಿಕ ಚಿಂತನೆಗಳು ಬೌದ್ಧ ಮತ್ತು ಜೈನ ಧರ್ಮದ ಅಹಿಂಸೆಯ ಪ್ರತಿಪಾದನೆಗೆ, ಅದರ ಪ್ರಸಾರಕ್ಕೆ ಒತ್ತು ನೀಡಿದವು. ಕಾಲಾಂತರದಲ್ಲಿ, ವೈದಿಕ ಪರಂಪರೆಯ ವಿಧಿ-ವಿಧಾನಗಳಲ್ಲಿ ಪ್ರಾಣಿಬಲಿ ನಿಂತು ಹೋದದ್ದೂ ಅಷ್ಟೇ ಪ್ರಮುಖವಾದದ್ದು. ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಳದಲ್ಲಿ ಬಹು ಹಿಂದಿನಿಂದ ನಡೆಯುತ್ತಿದ್ದ ಕೋಣನ ಬಲಿ ನಿಂತಿದ್ದು ಗಾಂಧೀಜಿ ಮಧ್ಯಪ್ರವೇಶದಿಂದ.

ಪ್ರಾಣಿಹಿಂಸೆಯನ್ನು ಕಟುವಾಗಿ ವಿರೋಧಿಸಿದ ಗಾಂಧೀಜಿ ಉದ್ದೇಶ ಎಷ್ಟು ಪ್ರಾಮುಖ್ಯವೋ, ಪರಂಪರಾಗತವಾಗಿ ಬಂದ ಸಂಸ್ಕೃತಿಯೊಂದನ್ನು ತೊರೆಯುವ ಔದಾರ್ಯವನ್ನು ಸಮಾಜ ತೋರಿದ್ದು ನಮ್ಮ ಪರಂಪರೆ ಒಳಿತನ್ನು ಪೋಷಿಸುವಂಥದ್ದು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುವಂಥದ್ದು.

ಅತಿ ಪುರಾತನ ದೇವಸ್ಥಾನದ ಕುರುಹುಗಳು, ಸಂಕೀರ್ಣ ವಾಸ್ತುಶಿಲ್ಪ ಹೊಂದಿರುವ ಸಹಸ್ರಾರು ಶಿಲಾಮಯ ದೇವಸ್ಥಾನಗಳು, ಗತಕಾಲದ ವೈಭವ ಸಾರುವ ಮಸೀದಿಗಳು, ಪುರಾತನ ಚರ್ಚ್‌ಗಳು, ಜೈನ ಮಂದಿರಗಳು, ಬೌದ್ಧ ವಿಹಾರದ ಕುರುಹುಗಳು, ದೇವಳದ ಭಿತ್ತಿಚಿತ್ರಗಳು ನಾಡಿನೆಲ್ಲೆಡೆ ಹರಡಿರುವುದನ್ನು ನೋಡಿದರೆ, ಐತಿಹಾಸಿಕವಾಗಿ ನಾವು ಎಷ್ಟೊಂದು ಶ್ರೀಮಂತರು ಎಂಬುದು ಅರಿವಿಗೆ ಬರುತ್ತದೆ.

ಇಷ್ಟೊಂದು ಅಗಾಧ ಪ್ರಮಾಣದ, ಅತ್ಯಮೂಲ್ಯ ವಾಸ್ತುಶಿಲ್ಪಗಳನ್ನು ನಮ್ಮ ಪೂರ್ವಜರು ಕಾಳಜಿಯಿಂದ ನಮಗೆ ಹಸ್ತಾಂತರಿಸಿದರು ಎಂಬುದು ಮಹತ್ವದ್ದು. ನಮ್ಮ ಪೂರ್ವಜರಿಗಿದ್ದ ಇಂಥ ಸೂಕ್ಷ್ಮತೆ, ಕಳಕಳಿಯನ್ನು ನಾವೂ ಉಳಿಸಿಕೊಂಡರೆ, ಮುಂದಿನ ಪೀಳಿಗೆ ಎಂದೆಂದಿಗೂ ನಮಗೆ ಋಣಿಯಾಗಿದ್ದೀತು.

ಇಂದಿಗೂ ನಿರಂತರವಾಗಿ ನಡೆಯುತ್ತಿರುವ ಪುರಾತನ ಮೂರ್ತಿಗಳ ಕಳ್ಳತನ, ಶಿಲ್ಪಗಳನ್ನು ವಿಕೃತಗೊಳಿಸುವುದು, ಉಳಿದುಕೊಂಡಿರುವ ಅಪೂರ್ವ ಭಿತ್ತಿಚಿತ್ರಗಳ ಕುರಿತು ಸರ್ಕಾರ ಮತ್ತು ಸಮಾಜಕ್ಕೆ ಇರುವ ತಾತ್ಸಾರ ಮುಂತಾದ ಪ್ರವೃತ್ತಿಗಳು ನಾಡೇ ತಲೆತಗ್ಗಿಸುವಂತೆ ಮಾಡುತ್ತವೆ.  ‘ಯಾವುದೋ ಕಾಲದ ಶಿಲಾಮೂರ್ತಿ ಹೋದರೆ ನನಗೇನು’ ಎನ್ನುವ ‘ವಿದ್ಯಾವಂತರೇ’ ನಮ್ಮಲ್ಲಿ ಹೆಚ್ಚು.

ಇನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿ ಯುವ ಪೀಳಿಗೆಗೆ ಇತಿಹಾಸದ ಕುರಿತು, ಪುರಾತತ್ವ ಕುರುಹುಗಳ ಕುರಿತು ಅಧ್ಯಯನಕ್ಕೆ ಪ್ರೇರೇಪಿಸುವ ಮಾತು ದೂರವೇ ಉಳಿಯಿತು. ಇಂದಿಗೂ ನಮ್ಮ ನಾಡಿನ ಹೆಚ್ಚಿನೆಲ್ಲ ಪುರಾತತ್ವ,  ಐತಿಹಾಸಿಕ ವಾಸ್ತುಶಿಲ್ಪಗಳು ಸಮಗ್ರತೆಯನ್ನು ಉಳಿಸಿಕೊಂಡಿದ್ದರೆ, ಅದು ನಮ್ಮ ಗ್ರಾಮಸ್ಥರ ಮುಗ್ಧತೆ ಮತ್ತು ಅವರ ಭಾವನಾತ್ಮಕ ಸಂಬಂಧಗಳ ತಳಹದಿಯಲ್ಲಿ.

ನಮ್ಮಲ್ಲಿನ ನೈಸರ್ಗಿಕ ಸಂಪತ್ತು, ಅದರಲ್ಲೂ ಪಶ್ಚಿಮ ಘಟ್ಟಗಳ ಮಳೆಕಾಡುಗಳು ಜೀವವಿಕಸನದ ತೊಟ್ಟಿಲು. ಲಕ್ಷಾಂತರ ವರ್ಷಗಳಿಂದ ವಿಕಸನ ಹೊಂದುತ್ತಾ ಬಂದ ಇಂಥ ಅಮೂಲ್ಯ ಪರಂಪರಾಗತ ಆಸ್ತಿಯನ್ನು ಸಮಗ್ರ ಭೂಮಂಡಲದ ಒಳಿತಿನ ದೃಷ್ಟಿಕೋನದಿಂದ ಉಳಿಸಿಕೊಳ್ಳುವಲ್ಲಿ ಮೊದಲ ಮತ್ತು ಪ್ರಮುಖ ತೊಡರುಗಾಲು– ನಮ್ಮ ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆ. ಅಪೂರ್ವ ಮಳೆಕಾಡುಗಳನ್ನು ಉಳಿಸಿಕೊಳ್ಳುವ ಭರವಸೆ ನೀಡಿದ ಒಂದು ರಾಜಕೀಯ ಪಕ್ಷವೂ ಇಲ್ಲ!

ಭೂಮಂಡಲದ ಒಟ್ಟಾರೆ ಜೀವಜಾಲದ, ಮನುಜನ ಉಳಿವಿಗೆ ನಿಸರ್ಗದತ್ತ ಪಾರಂಪರಿಕ ಮಳೆಕಾಡುಗಳು ಬೇಕೇಬೇಕು ಎಂಬ ಜ್ಞಾನವನ್ನು ಉದ್ದೇಶಪೂರ್ವಕವಾಗಿ ಬದಿಗೊತ್ತಿ ತಮ್ಮ ದುರುದ್ದೇಶಗಳನ್ನು ಸಾಧಿಸಿಕೊಳ್ಳಲು ಹೊರಟರೆ, ಅದರ ಪರಿಣಾಮವನ್ನು ಮುಂದಿನ ಪೀಳಿಗೆ ಅನುಭವಿಸಲೇಬೇಕಾಗುತ್ತದೆ.

ನಮ್ಮ ನಾಡಿನ ಅಪೂರ್ವ ನೈಸರ್ಗಿಕ ಪರಂಪರೆಯ ಕೊನೆಯ ಕೊಂಡಿಯಾದ ಪಶ್ಚಿಮ ಘಟ್ಟಗಳ ದಟ್ಟ ಮಳೆಕಾಡು ಮತ್ತು ಅಲ್ಲಿರುವ ಅತಿ ವಿರಳ ಜೀವಿಗಳಿಗೆ ಈ ಭೂಮಿಯ ಮೇಲೆ ಬದುಕುವ ಎಲ್ಲ ಹಕ್ಕೂ ಇದೆ. ಇಂಥ ಅದ್ಭುತ ನೈಸರ್ಗಿಕ ಪರಂಪರೆಯನ್ನು ಮನರಂಜನಾ ತಾಣಗಳಾಗಿ ಪರಿವರ್ತಿಸಲು ಹೊರಟಿರುವುದು ದುರಂತ.

ರಾಜಕೀಯ ಇಚ್ಛಾಶಕ್ತಿಯ ಕೊರತೆ, ಭ್ರಷ್ಟ ಆಡಳಿತ, ಮತ್ತು ಅನಾಸಕ್ತ ವಿದ್ಯಾವಂತ ಸಮೂಹ ನಮ್ಮ ಎಲ್ಲ ತೆರನ ಪರಂಪರೆಯ ರಕ್ಷಣೆಗೆ ತೊಡಕಾಗಿಯೇ ಇರುತ್ತದೆ. ಇಷ್ಟೆಲ್ಲ ಕ್ಲಿಷ್ಟ ಸಮಸ್ಯೆಗಳ ಮಧ್ಯೆಯೂ ನಮ್ಮ ಪರಂಪರೆ ಉಳಿದಿದೆ ಎಂದರೆ, ಅದು ಪರಂಪರೆಯ ಗಟ್ಟಿತನ ಮತ್ತು ಹಿರಿಮೆಯೇ ಹೊರತು ನಮ್ಮದಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT