ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಕೊಳವೆಬಾವಿ ದುರಂತ ಆಡಳಿತಯಂತ್ರದ ನಿಷ್ಕ್ರಿಯತೆ ಅಕ್ಷಮ್ಯ

Last Updated 24 ಏಪ್ರಿಲ್ 2017, 19:57 IST
ಅಕ್ಷರ ಗಾತ್ರ

ಸರಿಯಾಗಿ ಮುಚ್ಚದೆ ಬಿಟ್ಟ ಕೊಳವೆಬಾವಿಗೆ ನಮ್ಮ ರಾಜ್ಯದಲ್ಲಿ ಇನ್ನೊಂದು ಮಗು ಬಿದ್ದಿದೆ. ಅಥಣಿ ತಾಲ್ಲೂಕು ಝುಂಜರವಾಡದ ಬಳಿ ಶನಿವಾರ ಸಂಜೆ  ಕೊಳವೆಬಾವಿಯೊಳಗೆ ಬಿದ್ದಿದ್ದ ಮುಗ್ಧ ಬಾಲಕಿ, 6 ವರ್ಷದ ಕಾವೇರಿಯನ್ನು ಮೇಲೆತ್ತಲು ನುರಿತ ನೂರಾರು ಪರಿಣತರು ಆಧುನಿಕ ಯಂತ್ರೋಪಕರಣ, ಕೌಶಲ ಬಳಸಿ 42 ತಾಸಿಗೂ ಹೆಚ್ಚು ಕಾಲದ ಕಾರ್ಯಾಚರಣೆ ನಡೆಸಿದ್ದಾರೆ. ಇಂತಹ ಹೃದಯವಿದ್ರಾವಕ ದುರಂತ ಇಲ್ಲಿಗೇ ಕೊನೆಗೊಳ್ಳಬೇಕು. ಮುಂದೆ ಯಾವ ಮಗುವೂ ಕೊಳವೆಬಾವಿಗೆ ಬೀಳುವಂತಾಗಬಾರದು. ಅದು ಎಲ್ಲರ ಪ್ರಾರ್ಥನೆ.

ಮಕ್ಕಳು ಕೊಳವೆಬಾವಿಯಲ್ಲಿ ಬೀಳುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇವೆ. ನಮ್ಮ ರಾಜ್ಯದಲ್ಲಿ ಇಂತಹ ಮೊದಲ ದುರಂತ ನಡೆದದ್ದು  ಸುಮಾರು 17 ವರ್ಷಗಳ ಹಿಂದೆ, ದಾವಣಗೆರೆಯಲ್ಲಿ. ಅಲ್ಲಿಯೂ, ಕರಿಯ ಎಂಬ ಬಾಲಕ  ಆಟವಾಡುತ್ತ ಹೋಗಿ ಕೊಳವೆಬಾವಿಗೆ ಬಿದ್ದಿದ್ದ. ಎರಡು ದಿನಗಳ ರಕ್ಷಣಾ ಕಾರ್ಯ ವಿಫಲಗೊಂಡು  ಶವವಾಗಿ ಸಿಕ್ಕಿದ್ದ. 

ಅಲ್ಲಿಂದೀಚೆಗೆ ಅರ್ಧ ಡಜನ್‌ಗೂ ಹೆಚ್ಚು ಮಕ್ಕಳನ್ನು ಕೊಳವೆಬಾವಿಗಳು ಬಲಿ ತೆಗೆದುಕೊಂಡಿವೆ. ಆದರೆ ಅದರಿಂದ ಅಧಿಕಾರಶಾಹಿಯಾಗಲಿ, ಸಾರ್ವಜನಿಕರಾಗಲಿ ಎಳ್ಳಷ್ಟೂ ಪಾಠ ಕಲಿತಿಲ್ಲ.

ದುರಂತ ಆದಾಗ ಒಂದಿಷ್ಟು ಸುತ್ತೋಲೆ– ಆದೇಶ ಹೊರಡಿಸುವುದು, ಜನರ ಕಣ್ಣಿಗೆ ಮಣ್ಣೆರಚಲು ಯಾರನ್ನೋ ಬಲಿಪಶು ಮಾಡುವುದು, ಅಮಾನತಿನಲ್ಲಿ ಇಡುವುದು, ಕೊಳವೆಬಾವಿ ಕೊರೆಸಿ ಹಾಗೆಯೇ ಬಿಟ್ಟ ಜಮೀನಿನ ಮಾಲೀಕನ ಮೇಲೆ ಮೊಕದ್ದಮೆ ದಾಖಲಿಸುವುದನ್ನು ಬಿಟ್ಟರೆ, ಶಾಶ್ವತವಾಗಿ ತಡೆಯುವ ಕ್ರಮಗಳನ್ನು ತೆಗೆದುಕೊಂಡೇ ಇಲ್ಲ. 

ಪ್ರತೀ ಸಲ ಇಂತಹ ದುರಂತ ನಡೆದಾಗಲೂ ಸರ್ಕಾರ ಏಕಾಏಕಿ ಕ್ರಿಯಾಶೀಲವಾಗುತ್ತದೆ. ಅನುಪಯುಕ್ತ ಕೊಳವೆಬಾವಿಗಳನ್ನು ಮುಚ್ಚಿಸುವ ಫರ್ಮಾನ್‌ ಹೊರಡಿಸುತ್ತದೆ. ಅದಕ್ಕೊಂದು ಗಡುವನ್ನೂ ನಿಗದಿಪಡಿಸುತ್ತದೆ. ಅಧಿಕಾರಿಗಳ ಸಮಿತಿ ರಚಿಸುತ್ತದೆ.

‘ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದರೆ ಅಧಿಕಾರಿಗಳೇ ಹೊಣೆ’ ಎಂದು ಗುಡುಗುತ್ತದೆ. ಕೆಲವೇ ದಿನ ಕಳೆಯುವಷ್ಟರಲ್ಲಿ ಜನರಿಗೂ ಅದು ಮರೆತು ಹೋಗುತ್ತದೆ, ತೂಕಡಿಸುವ ಅಧಿಕಾರಶಾಹಿಗೂ ಮರೆತು ಹೋಗುತ್ತದೆ.

2014ರಲ್ಲಿ ನಮ್ಮ ರಾಜ್ಯದಲ್ಲಿಯೇ ಬರೀ ಎರಡು ತಿಂಗಳ ಅವಧಿಯಲ್ಲಿ ಎರಡು ಮಕ್ಕಳು ಕೊಳವೆಬಾವಿಯಲ್ಲಿ ಬಿದ್ದು ಅಸು ನೀಗಿದ್ದರು. ಅದಾದ ನಂತರ ಆದೇಶ, ಸುತ್ತೋಲೆ, ಮಾರ್ಗದರ್ಶಿ ಸೂತ್ರ, ಅಧಿಕಾರಿಗಳ ಸಮಿತಿ ರಚನೆ... ಎಲ್ಲವೂ ಆಗಿತ್ತು. ಆದರ ನಂತರವೂ ಈ ದುರಂತ ನಡೆದಿದೆ. ಅಂದರೆ, ಪದೇ ಪದೇ ಇಂತಹ ಅವಘಡಗಳು ನಡೆದರೂ ಯಾರ ಹೃದಯವನ್ನೂ ಅದು ಕಲಕುತ್ತಿಲ್ಲ.

ನಮ್ಮಲ್ಲಿ ಕಿಂಚಿತ್ತಾದರೂ ಅಳುಕು, ಪಾಪಪ್ರಜ್ಞೆ ಇದ್ದರೆ ಕಾವೇರಿಯಂತಹ ಅಮಾಯಕ ಹಸುಳೆಯನ್ನು ತನ್ನೊಳಗೆ ಎಳೆದುಕೊಂಡ ಕೊಳವೆಬಾವಿಯ ಬಾಯಿಯನ್ನು ಮುಚ್ಚದೆ ಹಾಗೇ ಬಿಡುತ್ತಿರಲಿಲ್ಲ.

ರೈತರು ತಮ್ಮ ಜಮೀನಿನಲ್ಲಿ ಕೊರೆಸಿ ನೀರು ಬಾರದ ಕಾರಣದಿಂದ ಬಳಸದೇ ಹಾಗೆಯೇ ಬಿಟ್ಟ ಕೊಳವೆಬಾವಿಗಳಿಂದಲೇ ಹೆಚ್ಚಿನ ದುರಂತಗಳಾಗಿವೆ. ಕೊಳವೆಬಾವಿ ವಿಫಲವಾದರೆ ಅದರ ಬಾಯಿಗೊಂದು ಚಿಕ್ಕ ಪೈಪ್‌ ಅಳವಡಿಸಿ ಮುಚ್ಚಳ ಹಾಕುವುದಕ್ಕೂ ಉದಾಸೀನ. ಕಟ್ಟುನಿಟ್ಟು ಕ್ರಮ ಕೈಗೊಳ್ಳದೆ ಇರುವುದೇ ಇದಕ್ಕೆಲ್ಲ ಕಾರಣ.

ಈ ಪ್ರವೃತ್ತಿ ಸಾಕು. ಕೊಳವೆಬಾವಿಯಿಂದ ಏನಾದರೂ ಅನಾಹುತ ಸಂಭವಿಸಿದರೆ ಆ ಭೂಮಿಯ ಒಡೆಯನನ್ನು ಮತ್ತು ಕೊಳವೆಬಾವಿ ಕೊರೆದ ಯಂತ್ರದ ಮಾಲೀಕನನ್ನು ಹೊಣೆ ಮಾಡಬೇಕು. ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಬೇಕು. ಶಿಕ್ಷೆಯೂ ಕಠಿಣವಾಗಿರಬೇಕು. ಅಧಿಕಾರಿಗಳಿಗೂ ಜವಾಬ್ದಾರಿ ನಿಗದಿಪಡಿಸಬೇಕು. ಆಗ ಮಾತ್ರ ಅಮೂಲ್ಯ ಜೀವಗಳು ಉಳಿದಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT