ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೂವರೆ ಕೋಟಿ ಯಾತ್ರಿಗಳ ನಿರೀಕ್ಷೆ

₹72 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ
Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಮುಂದಿನ ಫೆಬ್ರುವರಿಯಲ್ಲಿ ನಡೆಯುವ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಒಂದೂವರೆ ಕೋಟಿ ಯಾತ್ರಾರ್ಥಿಗಳು ಬರುವ ನಿರೀಕ್ಷೆ ಇದ್ದು, ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಭರವಸೆ ನೀಡಿದರು.

ಇಲ್ಲಿನ ಬಾಹುಬಲಿ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ, ಮಹಾಮಸ್ತಕಾಭಿಷೇಕ ಮಹೋತ್ಸವ ನಿಮಿತ್ತ  ₹ 72 ಕೋಟಿ ವೆಚ್ಚದ ಮೂಲಸೌಕರ್ಯ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕಳೆದ ಬಾರಿಯ ಮಹಾಮಸ್ತಕಾಭಿಷೇಕಕ್ಕೆ ಒಂದು ಕೋಟಿ ಯಾತ್ರಿಗಳು ಬಂದಿದ್ದರು. ಸಾರಿಗೆ ವ್ಯವಸ್ಥೆ, ರೈಲು ಸಂಪರ್ಕ ಇರುವುದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದರೂ ಅಚ್ಚರಿ ಇಲ್ಲ ಎಂದರು.

‘ಈ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಹೆಚ್ಚು ಸಮಯ ಮೀಸಲಿಡಲು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರಿಗೆ ಸೂಚಿಸಿದ್ದೇನೆ. ಬಜೆಟ್‌ನಲ್ಲಿ ₹ 175 ಕೋಟಿ ಅನುದಾನ ಒದಗಿಸಿರುವುದರ ಜತೆಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ₹274 ಕೋಟಿ ಅನುದಾನ ನೀಡಲಾಗಿದೆ’ ಎಂದರು.

‘ಮಹೋತ್ಸವಕ್ಕೆ ಹೆಚ್ಚಿನ ಅನುದಾನ ಕೋರಿ ಕೇಂದ್ರಕ್ಕೂ ಪತ್ರ ಬರೆಯಲಾಗಿದೆ. 2006ರಲ್ಲಿ ಉಪಮುಖ್ಯಮಂತ್ರಿ ಆಗಿದ್ದಾಗ ಮಸ್ತಕಾಭಿಷೇಕಕ್ಕೆ ಹಣ ನೀಡಿದ್ದೆ. ಆದರೆ ಉತ್ಸವದ ವೇಳೆಗೆ ಅಧಿಕಾರ ಇರಲಿಲ್ಲ. ಈ ಬಾರಿ ಮುಖ್ಯಮಂತ್ರಿಯಾಗಿ ಅನುದಾನ ಒದಗಿಸಿದ್ದೇನೆ. ಮುಖ್ಯಮಂತ್ರಿ ಆಗಿಯೇ ಮಹೋತ್ಸವಕ್ಕೆ ಬರುತ್ತೇನೆ’ ಎಂದು ಹೇಳಿದರು.

‘ಸಂಸದ ಎಚ್‌.ಡಿ.ದೇವೇಗೌಡ ಅವರ ಹಾಸನ– ಬೆಂಗಳೂರು ರೈಲು ಮಾರ್ಗದ ಕನಸು ಈಗ ಕೈಗೂಡಿದೆ. ಆದರೆ ವಿಳಂಬವಾಗಿದ್ದಕ್ಕೆ ಬೇಸರವಿದೆ. ಈ ಮಾರ್ಗದಲ್ಲಿ ಹೊರ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ಹೆಚ್ಚು ರೈಲು ಓಡಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದರು.

‘ಮಸ್ತಕಾಭಿಷೇಕಕ್ಕೆ ಅನುದಾನ ಕೊಡುವಂತೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತೇನೆ. ನನೆಗುದಿಗೆ ಬಿದ್ದಿರುವ ಹಾಸನ ವಿಮಾನ ನಿಲ್ದಾಣ ಯೋಜನೆ ಸಾಕಾರಗೊಳಿಸಬೇಕು. ಎಲ್ಲಾ ಕೃಷಿ ಉತ್ಪನ್ನ ವಿದೇಶಕ್ಕೆ ರಫ್ತು ಆಗಬೇಕು ಎಂಬುದು ನನ್ನ ಆಸೆ’ ಎಂದು ತಿಳಿಸಿದರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಹಿತಿ ಹಂಪ ನಾಗರಾಜಯ್ಯ ಅಭಿನಂದನಾ ನುಡಿಗಳನ್ನಾಡಿದರು. ಮಹೋತ್ಸವ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್‌, ಸಚಿವರಾದ ಎ.ಮಂಜು, ಡಾ.ಜಿ.ಪರಮೇಶ್ವರ್‌, ರುದ್ರಪ್ಪ ಲಮಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT