ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸಲು ಕಾರ್ಯನೀತಿ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಹಕ್ಕು, ಅವಕಾಶ ಹಾಗೂ ಸೌಲಭ್ಯ ಕಲ್ಪಿಸುವ ಆಶಯದಿಂದ  ಮಹಿಳಾ ಸಬಲೀಕರಣ ಕಾರ್ಯನೀತಿ ಜಾರಿಗೊಳಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದರು.

‘ಮಹಿಳೆಯರ ಸಬಲೀಕರಣ ಕಾರ್ಯನೀತಿ’ ಕುರಿತು ವಿಕಾಸ ಸೌಧದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

‘ಬಜೆಟ್‌ ಅನುದಾನದಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ನಿರ್ದಿಷ್ಟ ಮೊತ್ತವನ್ನು ಮೀಸಲಿಡಬೇಕು ಎಂದು ಕೇಂದ್ರದಲ್ಲಿ ಸಂಯುಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟದ(ಯುಪಿಎ) ಸರ್ಕಾರ ಇದ್ದಾಗ ಚಿಂತನೆ ನಡೆದಿತ್ತು.  ಬಳಿಕ ಅದು ನನೆಗುದಿಗೆ ಬಿದ್ದಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016ರ ಬಜೆಟ್‌ನಲ್ಲಿ ಮಹಿಳೆಯರ ಹಿತ ಕಾಯುವ ಕಾರ್ಯನೀತಿ ಜಾರಿಗೆ ತರುವುದಾಗಿ ಘೋಷಿಸಿದ್ದರು’ ಎಂದು ಸಚಿವರು ಹೇಳಿದರು.

‘ಬಜೆಟ್ ಘೋಷಣೆ ಅನ್ವಯ ಕಾರ್ಯ ನೀತಿಯ ಕರಡನ್ನು ಸಿದ್ಧಪಡಿಸಲಾಗಿದೆ. ಕಾರ್ಯನೀತಿ ಜಾರಿಗೆ ಬಂದರೆ ರಾಜ್ಯ ಸರ್ಕಾರದ ಪ್ರತಿ ಇಲಾಖೆಗಳು ಮಹಿಳೆಯರ ಅಭಿವೃದ್ಧಿಗಾಗಿ ನಿರ್ದಿಷ್ಟ ಅನುದಾನ ಮೀಸಲಿಡಬೇಕಾಗುತ್ತದೆ’ ಎಂದೂ ಅವರು ತಿಳಿಸಿದರು.

‘ಮಹಿಳೆಯರನ್ನು ಪ್ರತಿನಿಧಿಸುವ ನಿಗಮ, ಆಯೋಗದ ಅಧ್ಯಕ್ಷರು ಹಾಗೂ ಮಹಿಳಾ ಚಳವಳಿಯಲ್ಲಿ ಭಾಗಿಯಾಗಿರುವವರ ಅಭಿಪ್ರಾಯವನ್ನು ಆಲಿಸಿ ಕಾರ್ಯನೀತಿಯನ್ನು ಅಂತಿಮ ಗೊಳಿಸಲಾಗುವುದು. ಜೂನ್‌ನಲ್ಲಿ  ನಡೆಯಲಿರುವ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸಿದ್ಧತೆ ನಡೆಸಲಾಗಿದೆ’ ಎಂದರು.

‘ಆಡಳಿತಾಂಗ, ಶಾಸಕಾಂಗ, ನ್ಯಾಯಾಂಗಗಳ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶ ಕಲ್ಪಿಸಲು ನೀತಿಯಲ್ಲಿ ನಿರ್ದಿಷ್ಟವಾದ ನಿಯಮಗಳನ್ನು ರೂಪಿಸಲಾಗುವುದು’ ಎಂದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ, ಬಾಲಭವನ ಸೊಸೈಟಿ ಅಧ್ಯಕ್ಷೆ ಅಂಜಲಿ ನಿಂಬಾಳ್ಕರ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ನಿರ್ದೇಶಕಿ ದೀಪಾ ಚೋಳನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT