ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿನ ದಾಳಿ: ಮಹಿಳೆ ಸಾವು

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮಡಿಕೇರಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಗುಂಡಿನ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡ ಘಟನೆ ತಾಲ್ಲೂಕಿನ ಚೇರಂಗಾಲದಲ್ಲಿ ಸೋಮವಾರ ನಡೆದಿದೆ. 

ಅಮರಾವತಿ (50) ಮೃತಪಟ್ಟವರು. ಗಂಭೀರವಾಗಿ ಗಾಯಗೊಂಡಿರುವ ಅಮರಾವತಿ ಸಹೋದರಿ ರೇಣುಕಾ (53) ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಚಿದಾನಂದ್‌ನನ್ನು ಬಂಧಿಸಲಾಗಿದೆ.

‘ಆಸ್ತಿ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ಅಮರಾವತಿ ಪತಿ ಪೂವಯ್ಯ ಹಾಗೂ ಪುತ್ರ ಚರಣ್‌ ಅವರು ಚಿದಾನಂದ್‌ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಕೋಪಗೊಂಡ ಚಿದಾನಂದ್‌ ಗುಂಡಿನ ದಾಳಿ ನಡೆಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶಿರಸಿ ನಗರಸಭೆ 6 ಸದಸ್ಯರು ಅನರ್ಹ 
ಕಾರವಾರ:
ಶಿರಸಿ ನಗರಸಭೆ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ವಿಪ್‌ ಉಲ್ಲಂಘಿಸಿದ  ಕಾಂಗ್ರೆಸ್‌ನ ಆರು ಸದಸ್ಯರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಸೋಮವಾರ ಅನರ್ಹಗೊಳಿಸಿದ್ದಾರೆ.

ನಗರಸಭೆ ಅಧ್ಯಕ್ಷ ಪ್ರದೀಪ್‌ ಸಂಜೀವ ಶೆಟ್ಟಿ, ಸದಸ್ಯರಾದ ಸುಧಾಕರ ಶ್ರೀನಿವಾಸ ಶೆಟ್ಟಿ, ಶೀಲು ಬ್ಲೆಜ್‌ವಾಜ್, ಫ್ರಾನ್ಸಿಸ್ ಪೆಡ್ರೂ ನರೋನಾ, ಶ್ರೀಧರ್ ಮೊಗೇರ, ರಜಿಯಾ ಶೇಖ್ ಅವರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

2016 ಏಪ್ರಿಲ್‌ 6 ರಂದು ನಡೆದ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರದೀಪ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಕುರಿತು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ರಾಮನಗರ ತಹಶೀಲ್ದಾರ್‌ಗೆ ಜೈಲು
ಮೈಸೂರು:
ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲಗೆ ಬಿದ್ದಿದ್ದ ಈಗಿನ ರಾಮನಗರ ತಹಶೀಲ್ದಾರ್ ಎನ್‌.ರಘುಮೂರ್ತಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಹಾಗೂ ₹ 50 ಸಾವಿರ ದಂಡ ವಿಧಿಸಿ ಸೋಮವಾರ ಅದೇಶ ನೀಡಿದೆ.

ಮೈಸೂರು ತಾಲ್ಲೂಕಿನ ಶಿರಸ್ತೇದಾರರಾಗಿದ್ದಾಗ ಇವರು ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷ್ಯ ನುಡಿದ ದೂರುದಾರ ಮುನಿರಾಜು ಎಂಬುವರಿಗೆ ಷೋಕಾಸ್‌ ನೋಟಿಸ್ ನೀಡಲು ನ್ಯಾಯಾಧೀಶ ಸುಧೀಂದ್ರನಾಥ ಸೂಚನೆ ನೀಡಿದ್ದಾರೆ.

ತಾಲ್ಲೂಕಿನ ಮಾಡಳ್ಳಿಯ ಸರ್ವೆ ನಂಬರ್‌ 13ರಲ್ಲಿ 3 ಎಕರೆ ಭೂಮಿಯನ್ನು ಗುರುಮಲ್ಲಯ್ಯ ಹೊಂದಿದ್ದರು. ಇವರು ನಿಧನರಾದ ಬಳಿಕ ಪುತ್ರ ರಮೇಶ್‌ ಈ ಜಮೀನು ಮಾರಾಟ ಮಾಡಲು ಮುಂದಾಗಿದ್ದರು. ಬೆಂಗಳೂರಿನ ಕೆಂಗೇರಿ ನಿವಾಸಿ ಮುನಿರಾಜು ಈ ಜಮೀನು ಖರೀದಿಗೆ ಆಸಕ್ತಿ ತೋರಿದ್ದರು. ಗುರುಮಲ್ಲಯ್ಯ ಅವರಿಂದ ರಮೇಶ್‌ಗೆ ಖಾತೆ ಬದಲಾವಣೆ ಮಾಡಿಕೊಡಲು ಶಿರಸ್ತೇದಾರರಾಗಿದ್ದ ರಘುಮೂರ್ತಿ ₹ 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.

ಕ್ರಿಕೆಟ್‌ ಬೆಟ್ಟಿಂಗ್‌: ಇಬ್ಬರ ಬಂಧನ
ಬೆಳಗಾವಿ:
ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಇಬ್ಬರು ಬುಕ್ಕಿಗಳನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರದ ಕೃಷ್ಣ ರಘುನಾಥ್ (27), ನೇಕಾರ ನಗರದ ದೇವೇಂದ್ರ ಜಡಿ (21) ಬಂಧಿತ ಆರೋಪಿಗಳು. ಅವರಿಂದ ₹ 47,260 ನಗದು, ₹ 11,000 ಮೌಲ್ಯದ ಮೊಬೈಲ್, ಟಿ.ವಿ ಸೆಟ್‌ಟಾಪ್‌ ಬಾಕ್ಸ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT