ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲನೆಯಾಗದ 2014ರ ಸುತ್ತೋಲೆ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಂದಮ್ಮಗಳನ್ನು ನುಂಗಲು ಬಾಯಿ ತೆರೆದು ಕಾಯುತ್ತಿರುವ ಕೊಳವೆ ಬಾವಿಗಳನ್ನು ಮುಚ್ಚುವಂತೆ  ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆ  ಮೂರು ವರ್ಷದಿಂದಲೂ  ಜಾರಿಯಾಗದೆ  ಉಳಿದಿದೆ.

2014ರ ಜೂನ್‌ನಲ್ಲಿ ವಿಜಯಪುರ ಜಿಲ್ಲೆ ನಾಗಠಾಣದಲ್ಲಿ ನಾಲ್ಕು ವರ್ಷದ ಬಾಲಕಿ ಅಕ್ಷತಾ ಹಾಗೂ ಅದೇ ಆಗಸ್ಟ್‌ನಲ್ಲಿ ಬಾಗಲಕೋಟೆ ಜಿಲ್ಲೆ ಬದಾಮಿ ತಾಲ್ಲೂಕು  ಸೂಲಿಕೆರೆಯಲ್ಲಿ ಆರು ವರ್ಷದ ಬಾಲಕ ತಿಮ್ಮಣ್ಣ ಹಟ್ಟಿ ಕೊಳವೆ ಬಾವಿಗೆ ಬಿದ್ದು ದುರ್ಮರಣಕ್ಕೆ ತುತ್ತಾಗಿದ್ದರು.

ಇದರಿಂದ ಎಚ್ಚೆತ್ತುಕೊಂಡ ಸರ್ಕಾರ 2014ರ ಆಗಸ್ಟ್‌ 6 ರಂದು  ಸುತ್ತೋಲೆ ಹೊರಡಿಸಿತ್ತು. ‘ಇನ್ನು ಮುಂದೆ ಯಾವುದೇ ರೀತಿಯ ದುರ್ಘಟನೆ, ಅವಘಡಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸುವುದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ (ಸಿಇಒ)ಕರ್ತವ್ಯ’ ಎಂದು ಸ್ಪಷ್ಟವಾಗಿ ಹೇಳಿತ್ತು.

ಕೊಳವೆ ಬಾವಿಗಳಿಂದಾಗುವ ಅನಾಹುತ ತಪ್ಪಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ  ಸಮಿತಿ ರಚಿಸಲು ಸೂಚಿಸಲಾಗಿತ್ತು. ಸಮಿತಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್‌ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಸದಸ್ಯರಾಗಿರಬೇಕು ಎಂದು ಹೇಳಲಾಗಿತ್ತು.

ಸಮಿತಿ ಪ್ರತಿ ತಿಂಗಳು ಸಭೆ ಸೇರಿ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಕುರಿತು ಖಾತ್ರಿ ಪಡಿಸಿಕೊಳ್ಳಬೇಕು. ಎಲ್ಲಿ, ಎಷ್ಟು ಕೊಳವೆಬಾವಿಗಳಿವೆ ಎಂಬ ಸಂಪೂರ್ಣ ಮಾಹಿತಿ ಹೊಂದಿರುವುದು ಕಡ್ಡಾಯ ಎಂದು ನಿರ್ದೇಶನ ನೀಡಲಾಗಿತ್ತು.

2014ರ ಆಗಸ್ಟ್‌ 31ರಂದು ಸರ್ಕಾರಕ್ಕೆ ಸಲ್ಲಿಕೆಯಾದ ವರದಿಯಲ್ಲಿ ರಾಜ್ಯಾದ್ಯಂತ 2958 ನಿಷ್ಕ್ರಿಯ ಕೊಳವೆ ಬಾವಿ ಮುಚ್ಚಲು ಬಾಕಿ ಇದೆ ಎಂದು ಹೇಳಲಾಗಿತ್ತು. ಆನಂತರ ಪ್ರತಿ ತಿಂಗಳು ಜಿಲ್ಲಾ ಮಟ್ಟದಿಂದ ಸರ್ಕಾರಕ್ಕೆ ವರದಿ ಕೊಡಲು ಸೂಚಿಸಲಾಗಿತ್ತು. ಇಲ್ಲಿವರೆಗೂ ವರದಿ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಮೂರು ವರ್ಷಗಳಿಂದೀಚೆಗೆ ನಿಷ್ಕ್ರಿಯವಾಗಿರುವ ಕೊಳವೆ ಬಾವಿಗಳ ಸಂಖ್ಯೆ ಎಷ್ಟು ಎಂಬ ಬಗ್ಗೆಯೂ ಸರ್ಕಾರದ ಬಳಿ ಮಾಹಿತಿ ಇಲ್ಲ. ಈ ಬಗ್ಗೆ ಸಮೀಕ್ಷೆ ನಡೆಯುತ್ತಿದೆ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ.

ಕೊಳವೆಬಾವಿ ಮುಚ್ಚಿಸಲು ಕ್ರಮ: ನಿಷ್ಕ್ರಿಯ ಕೊಳವೆಬಾವಿಗಳನ್ನು ಮುಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿತ್ತು.

ನಿಷ್ಕ್ರಿಯ ಕೊಳವೆ ಬಾವಿಗಳಲ್ಲಿ ಕೇಸಿಂಗ್‌ ಪೈಪ್‌ ಇಲ್ಲದೆ ಇದ್ದಲ್ಲಿ, ಅಂತಹ ಬಾವಿಗಳನ್ನು ಕಲ್ಲು ಮಣ್ಣಿನಿಂದ ಮುಚ್ಚಬೇಕು. ಕೇಸಿಂಗ್‌ ಪೈಪ್‌ ಇಳಿಸಿದ್ದರೆ  ಅದಕ್ಕೆ ಮುಚ್ಚಳ ಹಾಕಿ, ಪೈಪ್‌ ಸುತ್ತ ಕಟ್ಟೆ ನಿರ್ಮಿಸಬೇಕು ಎಂದು ಸೂಚಿಸಲಾಗಿತ್ತು.

ಸರ್ಕಾರದಿಂದ ಕೊರೆದ ಕೊಳವೆ ಬಾವಿ ಸಫಲವಾದರೆ ಕೈ ಪಂಪು ಅಳವಡಿಸಬೇಕು. ಅಲ್ಲಿಯವರೆಗೆ ಕೊಳವೆ ಬಾವಿಗೆ ಮುಚ್ಚಳ ಹಾಕಿ, ಕಾಂಕ್ರೀಟ್‌ ಕಟ್ಟೆ ನಿರ್ಮಿಸಿರುವುದನ್ನು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೃಢೀಕರಿಸಿಕೊಳ್ಳಬೇಕು.

ತಪ್ಪಿತಸ್ಥರ ವಿರುದ್ಧ ಮೊಕದ್ದಮೆ: ನೀರು ಸಿಗದೆ ವಿಫಲವಾದ ಕೊಳವೆ ಬಾವಿಗಳನ್ನು ಮುಚ್ಚಿಸದೆ ಅನಾಹುತವಾದರೆ ಕೊರೆದ ಸಂಸ್ಥೆ ಹಾಗೂ ಜಮೀನಿನ ಮಾಲೀಕರನ್ನು ಜವಾಬ್ದಾರರನ್ನಾಗಿಸಬೇಕು. ತಪ್ಪಿತಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ಶಿಕ್ಷೆಗೆ ಗುರಿಪಡಿಸುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿರುತ್ತದೆ ಎಂದು ಸುತ್ತೋಲೆ ಹೇಳಿತ್ತು.

ಕೊಳವೆ ಬಾವಿ ಮಾಲೀಕರ ಹೊಣೆ

* ಕೊರೆಯಿಸುವ 15 ದಿನಗಳ ಮೊದಲು ಜಮೀನಿನ ಮಾಲೀಕ ಅಥವಾ ಕೊರೆಯುವ ಗುತ್ತಿಗೆದಾರರು ಸಂಬಂಧಿಸಿದ ಗ್ರಾಮ ಪಂಚಾಯಿತಿ ಪಿಡಿಇಗೆ ಮಾಹಿತಿ ನೀಡಿ ಸ್ವೀಕೃತಿ  ಪಡೆಯಬೇಕು.

* ಕೊರೆಯುವ ಮುನ್ನ ಅಂತರ್ಜಲ ಪ್ರಾಧಿಕಾರ ಅಥವಾ ಸ್ಥಳೀಯ ಪಂಚಾಯಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ.

* ಕೊಳವೆ ಬಾವಿ ಕೊರೆಯುವ ರಿಗ್‌ ಮಾಲೀಕರು ರಿಗ್ ಯಂತ್ರಗಳ ವಿವರಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿಸದೇ ಕೊಳವೆಬಾವಿ ಕೊರೆಯುವ ರಿಗ್ ಮಾಲೀಕರ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಕಾನೂನು ರೀತಿ ಕ್ರಮ ಜರುಗಿಸಬೇಕು.

* ಯಾವ ಜಿಲ್ಲೆಯ ಯಾವ ಪ್ರದೇಶದಲ್ಲಿ ಕೊಳವೆಬಾವಿ ಕೊರೆಯಲು  ಅನುಮತಿ ಪಡೆಯಲಾಗಿದೆಯೋ ಅಲ್ಲಿಯೇ ಕೊರೆಯಬೇಕು. ಬೇರೆ ಕಡೆಗಳಿಗೆ ಕೊರೆಯಲು ಹೊರಟರೆ, ಅಂತಹ ರಿಗ್‌ ಯಂತ್ರಗಳನ್ನು ಪೊಲೀಸರು ವಶಕ್ಕೆ ಪಡೆಯಬೇಕು.

ಜಿಲ್ಲಾಡಳಿತದ ಹೊಣೆ
* ‘ನಿರುಪಯುಕ್ತ, ನಿಷ್ಕ್ರಿಯ ಕೊಳವೆಬಾವಿಗಳನ್ನು ಮುಚ್ಚಿಸಿ, ಮಕ್ಕಳು ಅದರಲ್ಲಿ ಬೀಳುವುದನ್ನು ತಪ್ಪಿಸಿ’ ಎಂದು ಜನರಲ್ಲಿ ಅರಿವು ಮೂಡಿಸುವುದು.

* ಖಾಸಗಿ ಮತ್ತು ಸರ್ಕಾರಿ ಮಾಲೀಕತ್ವದ ಕೊಳವೆ ಬಾವಿಗಳ ಬಗ್ಗೆ ಮಾಹಿತಿ ಪಡೆದು ನಿಷ್ಕ್ರಿಯ ಕೊಳವೆಬಾವಿಗಳನ್ನು ಮುಚ್ಚಿಸುವುದು.

* ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಗ್ರಾಮಲೆಕ್ಕಿಗರು, ಪಂಚಾಯಿತಿ ರಾಜ್‌ ಇಲಾಖೆಯ ಕಿರಿಯ ಎಂಜಿನಿಯರ್‌, ಪೊಲೀಸ್‌ ಕಾನ್‌ ಸ್ಟೆಬಲ್‌ ಸದಸ್ಯರಾಗಿರುವ ತಂಡ ರಚಿಸುವುದು.

* ಕೊಳವೆ ಬಾವಿ ಮುಚ್ಚಿಸಿದ ಕುರಿತು   ಪಿಡಿಒ ಅಥವಾ ಗ್ರಾಮಲೆಕ್ಕಿಗರಿಂದ ಜಿಲ್ಲಾ ಪಂಚಾಯಿತಿ ಸಿಇಒ ಅವರು ಪ್ರಮಾಣ ಪತ್ರ ಪಡೆಯವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT