ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪಾಸ್‌ಪೋರ್ಟ್‌: ರಾಜನ್‌ ತಪ್ಪಿತಸ್ಥ

ಮೂವರು ನಿವೃತ್ತ ಅಧಿಕಾರಿಗಳು ಅಪರಾಧಿಗಳು
Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಛೋಟಾ ರಾಜನ್‌ ಮತ್ತು ಮೂವರು ನಿವೃತ್ತ ಅಧಿಕಾರಿಗಳು ನಕಲಿ ಪಾಸ್‌ಪೋರ್ಟ್‌ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ನಕಲಿ ಪಾಸ್‌ಪೋರ್ಟ್‌ ಪಡೆಯುವ ಮೂಲಕ ಅವರು ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಕೋರ್ಟ್‌ ಹೇಳಿದೆ.

ಅಪರಾಧ ಒಳಸಂಚು ನಡೆಸಿ ನಕಲಿ ಪಾಸ್‌ಪೋರ್ಟ್‌ ಪಡೆಯಲು ರಾಜನ್‌ಗೆ ನೆರವಾದ ನಿವೃತ್ತ ಅಧಿಕಾರಿಗಳಾದ ಜಯಶ್ರೀ ದತ್ತಾತ್ರೇಯ ರಹಾತೆ, ದೀಪಕ್‌ ನಟವರಲಾಲ್‌ ಷಾ ಮತ್ತು ಲಲಿತಾ ಲಕ್ಷ್ಮಣನ್‌ ಅವರೂ ತಪ್ಪಿತಸ್ಥರು ಎಂದು ಕೋರ್ಟ್‌ ಹೇಳಿದೆ.

ಈ ಮೂವರು ತಪ್ಪಿತಸ್ಥರನ್ನು ವಶಕ್ಕೆ ಪಡೆಯಲು ಪೊಲೀಸರಿಗೆ ನ್ಯಾಯಾಧೀಶರು ಸೂಚಿಸಿದರು. ನ್ಯಾಯಾಲಯದಲ್ಲಿ ಹಾಜರಿದ್ದ ಈ ಮೂವರು ಆದೇಶ ಪ್ರಕಟವಾಗುತ್ತಿದ್ದಂತೆಯೇ ಕಣ್ಣೀರಿಟ್ಟರು. ಈತನಕ ಅವರು ಜಾಮೀನಿನ ಮೇಲೆ ಹೊರಗಿದ್ದರು.

ನ್ಯಾಯಾಂಗ ಬಂಧನದಲ್ಲಿರುವ ರಾಜನ್‌ (55) ಅಲಿಯಾಸ್‌ ರಾಜೇಂದ್ರ ಸದಾಶಿವ ನಿಕಲ್‌ಜೆಯನ್ನು ತಿಹಾರ್‌ ಜೈಲಿನಲ್ಲಿ ಇರಿಸಲಾಗಿದೆ. ಭದ್ರತೆಯ ಕಾರಣದಿಂದಾಗಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಆತ ವಿಚಾರಣೆಯಲ್ಲಿ ಭಾಗವಹಿಸಿದ. ಶಿಕ್ಷೆಯ ಪ್ರಮಾಣದ ವಾದ ಮಂಡನೆ ಮಂಗಳವಾರ ನಡೆಯಲಿದೆ.
ಈ ಅಪರಾಧಕ್ಕೆ ಕನಿಷ್ಠ ಏಳು ವರ್ಷದಿಂದ ಜೀವಾವಧಿವರೆಗಿನ ಶಿಕ್ಷೆ ವಿಧಿಸಲು ಅವಕಾಶ ಇದೆ. ಕಳೆದ 28ರಂದು ಪ್ರಕರಣದ ವಿಚಾರಣೆ ಪೂರ್ಣಗೊಂಡಿತ್ತು. ತೀರ್ಪನ್ನು ಕಾದಿರಿಸಲಾಗಿತ್ತು.

ತಮ್ಮ  ವಿಚಾರಣೆಯನ್ನು ಬೆಂಗಳೂರಿನ ನ್ಯಾಯಾಲಯವೊಂದಕ್ಕೆ ವರ್ಗಾಯಿಸಬೇಕು ಎಂದು ಲಲಿತಾ ಲಕ್ಷ್ಮಣನ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜನವರಿ 9ರಂದು ಈ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿತ್ತು.

70ಕ್ಕೂ ಹೆಚ್ಚು ಪ್ರಕರಣ: 27 ವರ್ಷ ತಲೆಮರೆಸಿಕೊಂಡಿದ್ದ ಪಾತಕಿ ರಾಜನ್‌ನನ್ನು 2015ರ ಅಕ್ಟೋಬರ್‌ನಲ್ಲಿ ಬಾಲಿಯಲ್ಲಿ ಬಂಧಿಸಿ ಭಾರತಕ್ಕೆ ತರಲಾಗಿತ್ತು. ಪಾತಕಿ ದಾವೂದ್‌ ಇಬ್ರಾಹಿಂನ ಸಹಚರನಾಗಿದ್ದ ರಾಜನ್‌ ವಿರುದ್ಧ ಕೊಲೆ, ಸುಲಿಗೆ, ಮಾದಕ ಪದಾರ್ಥ ಕಳ್ಳ ಸಾಗಾಟದ 70ಕ್ಕೂ ಹೆಚ್ಚು ಪ್ರಕರಣಗಳಿವೆ.

ಅಪರಾಧ ಏನು
ಮೋಹನ್‌ ಕುಮಾರ್‌ ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ನೀಡಿ ಛೋಟಾ ರಾಜನ್‌ ಎರಡು ಬಾರಿ ಪಾಸ್‌ಪೋರ್ಟ್‌ ಪಡೆದುಕೊಂಡಿದ್ದಾನೆ ಎಂದು ನ್ಯಾಯಾಲಯ ಹೇಳಿದೆ. ಮೊದಲಿಗೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯಿಂದ ಪಾಸ್‌ಪೋರ್ಟ್‌ ಪಡೆದುಕೊಳ್ಳಲಾಗಿದೆ. ನಂತರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಕಾನ್ಸಲ್‌ ಜನರಲ್‌ ಕಚೇರಿಯಿಂದ ಪಾಸ್‌ಪೋರ್ಟ್‌ ಪಡೆದುಕೊಳ್ಳಲಾಗಿದೆ.

ಬೆಂಗಳೂರು ಪಾಸ್‌ಪೋರ್ಟ್‌ ಕಚೇರಿಗೆ ನೀಡಿದ ಅರ್ಜಿಯಲ್ಲಿರುವ ಸಹಿ, ಆಸ್ಟ್ರೇಲಿಯಾದಲ್ಲಿ ನೀಡಲಾದ ಪಾಸ್‌ಪೋರ್ಟ್‌ನಲ್ಲಿರುವ ಸಹಿ ಮತ್ತು ರಾಜನ್‌ನ ಮಾದರಿ ಸಹಿಗಳು ಒಂದೇ ರೀತಿ ಇವೆ ಎಂದು ಕೋರ್ಟ್‌ ತಿಳಿಸಿದೆ.

ಮೂವರು ತಪ್ಪಿತಸ್ಥ ನಿವೃತ್ತ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸ್ವೀಕರಿಸಿ ರಾಜನ್‌ಗೆ ಮೋಹನ್‌ ಕುಮಾರ್‌ ಎಂಬ ಹೆಸರಿನಲ್ಲಿ ಪಾಸ್‌ಪೋರ್ಟ್‌ ನೀಡಿದ್ದಾರೆ ಎಂದು ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT