ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ದೀಪ ತೆಗೆಸಿದ ಅಧಿಕಾರಿಗಳಿಗೆ ಗದರಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಗಮನಕ್ಕೆ ತರದೆ ಕಾರಿನ ಮೇಲಿದ್ದ ಕೆಂಪು ದೀಪ ತೆಗೆಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗದರಿದ ಪ್ರಸಂಗ ಸೋಮವಾರ ನಡೆಯಿತು.

ಬೆಳಿಗ್ಗೆ ಹಾಸನಕ್ಕೆ ಹೋಗುವ ಮೊದಲು ಕಾರು ಹತ್ತಿದಾಗ ಇದ್ದ ಕೆಂಪು ದೀಪ ಸಂಜೆ ಹೊತ್ತಿಗೆ ಇರಲಿಲ್ಲ.

ಫ್ರೀಡಂ ಪಾರ್ಕ್‌ನಲ್ಲಿ ಸಂಜೆ ಹಮ್ಮಿಕೊಂಡಿದ್ದ ಖಾದಿ ಉತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಂದಾಗ ಕಾರಿನಲ್ಲಿ ಕೆಂಪು ದೀಪ ಇರಲಿಲ್ಲ. ಕಾರ್ಯಕ್ರಮ ಮುಗಿಸಿ ಹೊರಟ ಸಿದ್ದರಾಮಯ್ಯ ಅವರನ್ನು ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ  ಪ್ರಶ್ನಿಸಿದರು.

‘ಹೌದಾ, ಯಾರ್ರೀ ದೀಪ ತೆಗೆದಿದ್ದು’ ಎಂದು ತಮ್ಮ ಹಿಂದೆ ನಿಂತಿದ್ದ ಅಧಿಕಾರಿಗಳನ್ನು ಏರುಧ್ವನಿಯಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದರು. ಅಧಿಕಾರಿಗಳು ಉತ್ತರ ನೀಡಲು ಹಿಂಜರಿದಾಗ, ‘ಯಾರ್ರೀ ಹೇಳಿದ್ದು ನಿಮಗೆ ದೀಪ ತೆಗೆಯೋದಕ್ಕೆ’ ಎನ್ನುತ್ತಾ ಮುಖ್ಯಮಂತ್ರಿ ಗರಂ ಆದರು.

‘ಕೇಂದ್ರ ಸರ್ಕಾರದ ಆದೇಶ ಮಾಡಿದ್ದರಿಂದ ತೆಗೆದಿದ್ದೀವಿ ಸರ್‌’ ಎಂದು  ಅಧಿಕಾರಿಗಳು ಉತ್ತರಿಸಿದರು.

ಈ ಕುರಿತು ಮಾತು ಮುಂದುವರಿಸಲು ಇಚ್ಛಿಸದ ಸಿದ್ದರಾಮಯ್ಯ, ‘ಆಯ್ತಾಯ್ತು. . ಈ ಬಗ್ಗೆ ಆಮೇಲೆ ಚರ್ಚೆ ಮಾಡೋಣ’ ಎಂದು ಹೇಳಿ  ಕಾರು
ಹತ್ತಿ ಹೊರಟೇ ಬಿಟ್ಟರು.

ಕೆಂಪುದೀಪಕ್ಕೆ ದೇವೇಗೌಡ ಗುಡ್‌ಬೈ

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ  ಎಚ್‌.ಡಿ.ದೇವೇಗೌಡ ತಮ್ಮ ಕಾರಿನ ಕೆಂಪು ದೀಪ ತೆಗೆಸಿದ್ದಾರೆ. ದೇಶದಲ್ಲಿ ವಿವಿಐಪಿ ಸಂಸ್ಕೃತಿ ಕೊನೆಗೊಳಿಸುವ ಉದ್ದೇಶದಿಂದ ಕಾರುಗಳ ಮೇಲೆ ಕೆಂಪು ದೀಪ ತೆಗೆದು ಹಾಕಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಬೆಂಬಲಿಸಲು ದೇವೇಗೌಡರು ಈ ತೀರ್ಮಾನ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಕೆಂಪು ದೀಪ ಇಲ್ಲದಿದ್ದರೆ ಗಣ್ಯರಿಗೆ ‘ವೇಟೇಜ್‌’ ಇಲ್ಲ

ಧಾರವಾಡ: ‘ಸಮಾಜದಲ್ಲಿ ಜನಸಾಮಾನ್ಯರು ಮತ್ತು ವಿಐಪಿಗಳಿಗೆ ವ್ಯತ್ಯಾಸವಿದೆ. ಸಭೆ–ಸಮಾರಂಭಗಳಿಗೆ ಕೆಂಪು ದೀಪ ಇಲ್ಲದ ವಾಹನದಲ್ಲಿ ಹೋದರೆ ಜನಪ್ರತಿನಿಧಿಗಳಿಗೆ ‘ವೇಟೇಜ್’ ಇರುವುದಿಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದರು.

ಕೇಂದ್ರದ ಆದೇಶದ ಅನ್ವಯ ಇನ್ನೂ ಕೆಂಪು ದೀಪ ತೆಗೆಸಿಲ್ಲದ ಕುರಿತು ಸುದ್ದಿಗಾರರ  ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇಂದ್ರ ಸರ್ಕಾರ ಹೊರಡಿಸಿರುವ ಕೆಂಪು ದೀಪ ನಿಷೇಧದ ಆದೇಶಕ್ಕೆ ವೈಯಕ್ತಿಕವಾಗಿ ನನ್ನ ಆಕ್ಷೇಪವಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸುರಕ್ಷತೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಉನ್ನತ ಸ್ಥಾನದಲ್ಲಿರುವ ಅವರು ನಮ್ಮ ಹಾಗೆ ಜನಸಾಮಾನ್ಯರ ನಡುವೆ ಬದುಕು ಸಾಗಿಸುತ್ತದ್ದರೆ ಕಷ್ಟ ಏನು ಎಂದು ತಿಳಿಯುತ್ತಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಲವು ಬಾರಿ ಕೆಂಪು ದೀಪ ಹಚ್ಚಿಕೊಂಡು ಸೈರನ್ ಬಾರಿಸುತ್ತ ಹೋದರೂ ಜನರು ದಾರಿ ಬಿಡುವುದಿಲ್ಲ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಂಪು ದೀಪ ನಿಷೇಧಿಸಿ ಆದೇಶ ಹೊರಡಿಸಿದ್ದರಿಂದ ರಾಜಕಾರಣಿಗಳಿಗೆ ಅಷ್ಟೇ ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ತೊಂದರೆ ಆಗಲಿದೆ’ ಎಂದು ಹೇಳಿದರು. ‘ಕೆಂಪು ದೀಪ ನಿಷೇಧ ಕುರಿತು ಇಲ್ಲಿಯವರೆಗೆ ನನಗೆ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದ ನಂತರ ಅದರ ಕುರಿತು ವಿಚಾರ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT