ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಪರಿಸ್ಥಿತಿ: ಮಾತುಕತೆಗೆ ಒಲವು

ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ – ಪ್ರಧಾನಿ ನರೇಂದ್ರ ಮೋದಿ ಭೇಟಿ
Last Updated 24 ಏಪ್ರಿಲ್ 2017, 20:44 IST
ಅಕ್ಷರ ಗಾತ್ರ

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಮಾತುಕತೆಗೆ ಮುಂದಾಗುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹಮತ ಹೊಂದಿರುವಂತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದರು.

‘ಕಲ್ಲು ತೂರಾಟ ಹಾಗೂ ಗುಂಡಿನ ಸದ್ದಿನ ನಡುವೆ ಮಾತುಕತೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ, ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸುವ ಅವಶ್ಯಕತೆ ಇದೆ’ ಎಂದು ಮುಫ್ತಿ ಅವರು ಪ್ರಧಾನಿ ಜೊತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಬಳಿ ಹೇಳಿದರು.

ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕಾಶ್ಮೀರದ ವಿಚಾರದಲ್ಲಿ ಅನುಸರಿಸುತ್ತಿದ್ದ ನೀತಿಯನ್ನೇ ಈಗಲೂ ಪಾಲಿಸಬೇಕು ಎಂದು ಮುಫ್ತಿ ಅವರು ಮಾತುಕತೆ ವೇಳೆ ಹೇಳಿದರು.

‘ವಾತಾವರಣ ಸಹಜ ಸ್ಥಿತಿಗೆ ಮರಳಿದ ನಂತರ ಮಾತುಕತೆ ನಡೆಸುವ ಇಚ್ಛೆ ಪ್ರಧಾನಿಯವರದ್ದು’ ಎಂದು ಮುಫ್ತಿ ತಿಳಿಸಿದರು. ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್‌ 9ರಂದು ಉಪ ಚುನಾವಣೆ ನಡೆದ ನಂತರ ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಾಗಿದೆ.

‘ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಹುರಿಯತ್ ಕಾನ್ಫರೆನ್ಸ್ ನಾಯಕರ ಜೊತೆ ಮಾತುಕತೆ ನಡೆದಿತ್ತು. ಅದನ್ನು ಮುಂದುವರಿಸಬೇಕು’ ಎಂದರು.
ಕಲ್ಲು ತೂರಾಟದ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಉಲ್ಲೇಖಿಸಿದ ಮುಫ್ತಿ, ‘ಕೆಲವು ಯುವಕರು ಭ್ರಮನಿರಸನಕ್ಕೆ ಒಳಗಾಗಿದ್ದಾರೆ. ಇನ್ನು ಕೆಲವರು ಬೇರೊಬ್ಬರಿಂದ ಪ್ರಚೋದನೆಗೆ ಒಳಗಾಗಿದ್ದಾರೆ’ ಎಂದರು.

ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುವ ವಿಚಾರದಲ್ಲಿ ಸರ್ಕಾರದ ಪಾಲುದಾರ ಪಕ್ಷಗಳಾದ ಬಿಜೆಪಿ ಮತ್ತು ಪಿಡಿಪಿ ನಡುವಣ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ವಿಚಾರವೂ ಮಾತುಕತೆ ವೇಳೆ ಪ್ರಸ್ತಾಪವಾಯಿತು.

‘ಈ ವಿಚಾರವನ್ನು ನಾವು ಬಿಜೆಪಿ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ’ ಎಂದು ಮುಫ್ತಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪರಿಸ್ಥಿತಿ ತಿಳಿಗೊಳ್ಳುವ ವಿಶ್ವಾಸ: ಮುಫ್ತಿ
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಎರಡರಿಂದ ಮೂರು ತಿಂಗಳಲ್ಲಿ ತಿಳಿಗೊಳ್ಳಲಿದೆ ಎಂದು ಮೆಹಬೂಬಾ ಮುಫ್ತಿ ವಿಶ್ವಾಸ ವ್ಯಕ್ತಪಡಿಸಿದರು.

ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ಮಾತುಕತೆ ಪುನರಾರಂಭಿಸಬಹುದು ಎಂದು ಅವರು ಹೇಳಿದರು.

‘ಮುಂದಿನ ಎರಡರಿಂದ ಮೂರು ತಿಂಗಳುಗಳು ನಮ್ಮ ಪಾಲಿಗೆ ಮಹತ್ವದ್ದು’ ಎಂದು ಅವರು ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ನಂತರ ಹೇಳಿದರು. ಮುಫ್ತಿ ಅವರು ರಾಜ್ಯದಲ್ಲಿನ ಭದ್ರತಾ ಪರಿಸ್ಥಿತಿ ಕುರಿತು ಸಿಂಗ್ ಜೊತೆ ಚರ್ಚಿಸಿದರು.

ಪಿಡಿಪಿ ಮುಖಂಡ ಅಬ್ದುಲ್ ಘನಿ ಹತ್ಯೆ
ಶ್ರೀನಗರ (ಪಿಟಿಐ):
ಪಿಡಿಪಿಯ ಪುಲ್ವಾಮಾ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಘನಿ ದರ್ ಅವರನ್ನು ಉಗ್ರಗಾಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿರುವ ದರ್ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT