ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಸಾವಯವ, ಸಿರಿಧಾನ್ಯ ಖರೀದಿಗೆ ಕಂಪೆನಿಗಳ ಆಸಕ್ತಿ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಿಲಯನ್ಸ್‌, ಬ್ರಿಟಾನಿಯಾ, ಸ್ಪಾರ್‌ಹೈಪರ್‌ ಮಾರ್ಕೆಟ್‌, ಬಿಗ್‌ ಬಾಸ್ಕೆಟ್‌ನಂತಹ ಕಂಪೆನಿಗಳು ರೈತರಿಂದ  ಸಾವಯವ ಕೃಷಿ ಉತ್ಪನ್ನ ಮತ್ತು ಸಿರಿಧಾನ್ಯಗಳನ್ನು ಖರೀದಿಸಲು  ರೈತರ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ.

ಮಾಧ್ಯಮ ಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ ಕೃಷಿ ಸಚಿವ ಕೃಷ್ಣಬೈರೇಗೌಡ, ಸಾವಯವ ಉತ್ಪನ್ನಗಳು ಮತ್ತು ಸಿರಿಧಾನ್ಯಗಳಿಗೆ ಮಧ್ಯವರ್ತಿಗಳಿಂದಾಗಿ  ಉತ್ತಮ ಬೆಲೆ ಸಿಗುತ್ತಿಲ್ಲ. ಕಂಪೆನಿಗಳು ಮತ್ತು ರೈತರ ಜತೆ ಒಪ್ಪಂದವಾದರೆ ಉತ್ತಮ ಬೆಲೆ ಸಿಗಬಹುದು ಎಂದರು.

ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ಸಂಸ್ಕರಿಸಿ, ಪ್ಯಾಕಿಂಗ್‌ ಮಾಡಿ ಕಂಪೆನಿಗಳಿಗೆ ನೀಡಿದರೆ, ಇನ್ನು ಉತ್ತಮ ಬೆಲೆ ಸಿಗುತ್ತದೆ. ಅದಕ್ಕೆ ಅಗತ್ಯವಿರುವ ಗೋದಾಮು,  ಸಂಸ್ಕರಣೆ, ಪ್ಯಾಕಿಂಗ್‌  ಘಟಕ ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ಅವರು  ತಿಳಿಸಿದರು.

ಇದೇ 28 ರಿಂದ 30 ರವರೆಗೆ ನಗರದಲ್ಲಿ ನಡೆಯುವ ಸಾವಯವ ಮತ್ತು ಸಿರಿಧಾನ್ಯಗಳ  ವ್ಯಾಪಾರ ಮೇಳದಲ್ಲಿ 250 ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಲಿದ್ದು, ರೈತರು ಮತ್ತು ಕಂಪೆನಿಗಳ ಜತೆ ಮಾತುಕತೆಗೆ ವೇದಿಕೆ ಕಲ್ಪಿಸಲಾಗಿದೆ ಎಂದರು.

ಸಾವಯವ ಕೃಷಿಯಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಆದರೆ, ಸಾವಯವ ಕೃಷಿ ಉತ್ಪನ್ನಗಳಿಗೆ ಅತಿ ಹೆಚ್ಚಿನ ಮಾರುಕಟ್ಟೆ ಸೃಷ್ಟಿ ಆಗಿರುವುದು  ಬೆಂಗಳೂರಿನಲ್ಲಿ. ದೇಶದಲ್ಲಿ ವಾರ್ಷಿಕ   ₹ 4500 ಕೋಟಿ ಮೌಲ್ಯದಷ್ಟು ಸಾವಯವ ಉತ್ಪನ್ನಗಳ ವಹಿವಾಟು ನಡೆಯುತ್ತಿದೆ  ಎಂದು ತಿಳಿಸಿದರು. ರಾಗಿಯಿಂದ ಮುದ್ದೆ, ಜೋಳದಿಂದ ರೊಟ್ಟಿ ಮಾಡಿದರೆ ಎಲ್ಲ ಜನರನ್ನು ಸೆಳೆಯಲು ಆಗುವುದಿಲ್ಲ.  ಸಿರಿ ಧಾನ್ಯಗಳಿಂದ ಸುಮಾರು 150 ಬಗೆಯ ಖಾದ್ಯಗಳನ್ನು ತಯಾರಿಸುವ ಕಿರು ಹೊತ್ತಿಗೆ ಪ್ರಕಟಿಸಲು  ಉದ್ದೇಶಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ರಾಜ್ಯದಲ್ಲಿ ಸಿರಿ ಧಾನ್ಯಗಳನ್ನು ಬೆಳೆಯುವ ಪ್ರದೇಶ ಇತ್ತೀಚೆಗೆ ಹೆಚ್ಚಳವಾಗಿದೆ.  2000ನೇ ಸಾಲಿನಲ್ಲಿ 33 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿತ್ತು. 2015–16 ರಲ್ಲಿ ಅದರ ಪ್ರಮಾಣ 20 ಲಕ್ಷ ಹೆಕ್ಟೇರ್‌ಗೆ ತಗ್ಗಿತ್ತು.  ಈಗ ರಾಗಿ 7 ಲಕ್ಷ ಹೆಕ್ಟೇರ್‌ಗಳಲ್ಲಿ ಮತ್ತು ಜೋಳವನ್ನು 11 ಲಕ್ಷ ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತಿದೆ ಎಂದು ಸಚಿವರು ವಿವರ ನೀಡಿದರು.

* ಸಿರಿ ಧಾನ್ಯಗಳಿಂದ ಪಿಜ್ಜಾ, ಬರ್ಗರ್‌, ಬಿಸಿಬೇಳೆಬಾತ್‌ ಸಿದ್ಧಪಡಿಸುವಂತಾದರೆ ಸಿರಿಧಾನ್ಯ ಜನಪ್ರಿಯವಾಗುತ್ತದೆ

-ಕೃಷ್ಣ ಬೈರೇಗೌಡ, ಕೃಷಿ ಸಚಿವ

‘ಸಿರಿ ಮಗ’, ‘ಸಿರಿ ಮಗಳು’

ಸಿರಿ ಧಾನ್ಯಗಳ ಬಳಕೆ ಕುರಿತು ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಲು  ‘ಸಿರಿ ಮಗ’ ಮತ್ತು ‘ಸಿರಿ ಮಗಳು’ ಹೆಸರಿನಲ್ಲಿ ಬ್ರ್ಯಾಂಡಿಂಗ್‌ ಮಾಡಲಾಗುತ್ತಿದೆ. ಅದಕ್ಕಾಗಿ ವಿಶೇಷ ಪೋಸ್ಟರ್‌ ಮತ್ತು ಕಟೌಟ್‌ಗಳನ್ನೂ ವಿನ್ಯಾಸಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT