ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ತವಕ

Last Updated 24 ಏಪ್ರಿಲ್ 2017, 20:17 IST
ಅಕ್ಷರ ಗಾತ್ರ

ಬೆಂಗಳೂರು: ಕಡಿಮೆ ಖರ್ಚಿನಲ್ಲಿ ವಿದ್ಯುತ್‌ ಉತ್ಪಾದಿಸುವುದು ಹೇಗೆ? ಕಸ ಸಾಗಿಸುವ ವಾಹನದಲ್ಲೇ ಅದನ್ನು ವಿಂಗಡಣೆ ಮಾಡಲು ಸಾಧ್ಯವೇ? ಸೌರಶಕ್ತಿ ಹಾಗೂ ನೀರಿನ ಸದ್ಬಳಕೆ ಮಾಡುವ ಸುಲಭೋಪಾಯಗಳು ಯಾವುವು?

ಇಂತಹ ಹಲವು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಕಂಡುಕೊಂಡ ಪರಿಹಾರೋಪಾಯಗಳು ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದ ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಿರುವ ‘ವಿಜ್ಞಾನ, ಗಣಿತ ಮತ್ತು ಪರಿಸರ’ ಕುರಿತ ಮಾದರಿಗಳ  ರಾಷ್ಟ್ರೀಯ ಪ್ರದರ್ಶನದಲ್ಲಿ ಅನಾವರಣಗೊಂಡವು. 
ಜನಜೀವನವನ್ನು ಕಾಡುವ ಸಮಸ್ಯೆಗಳಿಗೆ ಇರುವ ಸುಲಭ ಪರಿಹಾರಗಳ ಬಗ್ಗೆ  ವಿದ್ಯಾರ್ಥಿಗಳು ಉತ್ಸಾಹದಿಂದ ಮಾಹಿತಿ ನೀಡಿದರು.

‘ಹಸಿ, ಒಣ ಹಾಗೂ ಲೋಹದ ತ್ಯಾಜ್ಯವನ್ನು ವಿಂಗಡಿಸುವ ಯಂತ್ರ ಹೊಂದಿರುವ ಕಸ ಸಾಗಣೆ ವಾಹನ ರೂಪಿಸಿದ್ದೇನೆ’ ಎಂದು ದೆಹಲಿ ವಿಭಾಗದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಸುಮಿತ್‌ ಕುಮಾರ್‌ ತಿಳಿಸಿದರು.

‘ನಾನು ಎಲೆಕ್ಟ್ರಿಕಲ್‌ ಬೂಟ್‌ ರೂಪಿಸಿದ್ದೇನೆ. ಇದನ್ನು ಧರಿಸಿ ನಡೆದಾಗ ದೇಹದ ಒತ್ತಡ ಬೂಟ್‌ನ ಮೇಲೆ ಬೀಳುತ್ತದೆ. ಅದರ ತಳಭಾಗದಲ್ಲಿ ಅಳವಡಿಸಿರುವ ಸಿಲಿಕಾನ್‌ ಆಕ್ಸೈಡ್‌, ಕಬ್ಬಿಣ ಮತ್ತು ತಾಮ್ರದಿಂದ ತಯಾರಿಸಿದ ಬಿಲ್ಲೆಯಾಕಾರದ ಸಾಧನದಿಂದ ವಿದ್ಯುತ್‌ ಉತ್ಪಾದನೆ ಆಗುತ್ತದೆ. ಇದರಿಂದ ಮೊಬೈಲ್‌ ಚಾರ್ಜ್‌ ಮಾಡಬಹುದು’ ಎಂದು ಭುವನೇಶ್ವರದ ಕಟಕ್‌ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಸೈಯದ್‌ಅಬು ಹೂರೈರಾ ವಿವರಿಸಿದರು.

‘ಕೆಲವೆಡೆ ತ್ಯಾಜ್ಯ ನೀರು ರಭಸವಾಗಿ ಹರಿಯುತ್ತದೆ. ಅದರ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್‌ ಉತ್ಪಾದಿಸಬಹುದು’ ಎಂದು ಜೈಪುರ ಕೇಂದ್ರೀಯ ವಿದ್ಯಾಲಯದ ಪುಷ್ಪೆಂಧರ ಕುಮಾರ್‌ ಶರ್ಮ, ತಾವು ರೂಪಿಸಿದ ಮಾದರಿಯ ಬಗ್ಗೆ ತಿಳಿಸಿದರು.

ಪ್ರದರ್ಶನ ಉದ್ಘಾಟಿಸಿದ ಕೇಂದ್ರೀಯ ವಿದ್ಯಾಲಯಗಳ ಆಯುಕ್ತ ಸಂತೋಷ್‌ ಕುಮಾರ್‌ ಮಾಲ್‌, ‘ಕೇಂದ್ರೀಯ ವಿದ್ಯಾಲಯಗಳ ಸಂಘ
ಟನೆಯು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಇದರಿಂದ ಮಂಡಳಿಯಲ್ಲಿ ನಡೆಯುವ ಸಂಶೋಧನೆಗಳ ಬಗ್ಗೆ ತಿಳಿಯಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ’ ಎಂದು ಹೇಳಿದರು.

ಪ್ರದರ್ಶನದಲ್ಲಿ  22 ವಲಯಗಳ 50 ತಂಡಗಳು ಭಾಗವಹಿಸಿವೆ. ವಿಜ್ಞಾನ ಕುರಿತ ಸಂವಾದ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ. ಏ. 26ರವರೆಗೂ ಪ್ರದರ್ಶನ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT