ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಅಗಲಿಕೆ ನಡುವೆ 11 ಚಿನ್ನ ಪಡೆದ ರಘುವೀರ್‌

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 51ನೇ ಘಟಿಕೋತ್ಸವ
Last Updated 24 ಏಪ್ರಿಲ್ 2017, 20:31 IST
ಅಕ್ಷರ ಗಾತ್ರ

ಬೆಂಗಳೂರು: ಮಗನ ಸಾಧನೆ ಕಂಡು ಹೆಮ್ಮೆ ಪಡಬೇಕಿದ್ದ ತಂದೆಯ ನಿಧನದ ನೋವು ಆ ವಿದ್ಯಾರ್ಥಿಯನ್ನು ಬಾಧಿಸುತ್ತಿತ್ತು. ಅದರ ನಡುವೆಯೇ ಭಾರವಾದ ಹೆಜ್ಜೆಗಳನ್ನು ಇಡುತ್ತಾ ವೇದಿಕೆ ಮೇಲೆ ಏರುತ್ತಿದ್ದಂತೆ ಸಭಾಂಗಣದ ತುಂಬ ಕರತಾಡನ. ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದ ಗಣ್ಯರಿಗೂ ಅಚ್ಚರಿ.

ರೈತ ಕುಟುಂಬದಿಂದ ಬಂದ ಆ ವಿದ್ಯಾರ್ಥಿ ಪಡೆದ ಚಿನ್ನದ ಪದಕಗಳು 11! ಹೀಗೆ ಅತಿಹೆಚ್ಚು ಚಿನ್ನದ ಪದಕ ಪಡೆದವರು ಮಂಡ್ಯ ಕೃಷಿ ಕಾಲೇಜಿನಲ್ಲಿ ಬಿ.ಎಸ್ಸಿ ಮುಗಿಸಿದ ಎಂ.ರಘುವೀರ್‌.

ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ  (ಜಿ.ಕೆ.ವಿ.ಕೆ) ಸೋಮವಾರ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 51ನೇ ಘಟಿಕೋತ್ಸವದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ಪದವಿ ಪ್ರಮಾಣಪತ್ರ, ಚಿನ್ನದ ಪದಕ­ಗಳನ್ನು ಪಡೆದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

‘ನನ್ನದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ನಂಜೆಒಡೆಯರದೊಡ್ಡಿ. ತಂದೆ ಮಾದಪ್ಪ, ತಾಯಿ ಭಾಗ್ಯಮ್ಮ. ತಂದೆ ಅನಾರೋಗ್ಯದಿಂದ ಜನವರಿಯಲ್ಲಿ ಮೃತಪಟ್ಟರು. ಅವರು ಈ ದಿನ ಇದ್ದಿದ್ದರೆ ತುಂಬಾ ಸಂತೋಷಪಡುತ್ತಿದ್ದರು. ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ’ ಎಂದು ಭಾವುಕರಾದರು.

‘ತಾಯಿ ಮನೆಗೆಲಸ ಹಾಗೂ ಜಮೀನಿನ ಕೆಲಸ ಮಾಡುತ್ತಾರೆ. ಅಣ್ಣ ಕೃಷಿ ನೋಡಿಕೊಳ್ಳುತ್ತಾರೆ. ನಮಗೆ ಐದು ಎಕರೆ ಜಮೀನು ಇದೆ. ಅದರಲ್ಲಿ ಆಲೂಗಡ್ಡೆ ಬೆಳೆದಿದ್ದೇವೆ. ಆದರೆ, ವಿದ್ಯುತ್‌ ಸಮಸ್ಯೆಯಿಂದ ನೀರಿಗೆ ತೊಂದರೆ ಉಂಟಾಗಿದೆ’ ಎಂದರು.

‘ನಾನು ಚಿನ್ನದ ಪದಕಗಳಿಗಾಗಿ ಓದಲಿಲ್ಲ. ಮೆರಿಟ್‌ ಪಡೆದರೆ ವಿದ್ಯಾರ್ಥಿ ವೇತನ ಸಿಗುತ್ತದೆ ಎಂಬ ಉದ್ದೇಶದಿಂದ ಚೆನ್ನಾಗಿ ಓದಲು ಆರಂಭಿಸಿದೆ. ಆ ವೇತನದಲ್ಲೇ ಬಹುಪಾಲು ಶಿಕ್ಷಣವನ್ನು ಮುಗಿಸಿದ್ದೇನೆ. ಹೆಚ್ಚೆಂದರೆ ಒಂದು ಚಿನ್ನದ ಪದಕ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇಷ್ಟು ಪದಕಗಳು ಸಿಕ್ಕಿವೆ’ ಎಂದು ಸಂತಸಪಟ್ಟರು.

ಅವರೀಗ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ವಂಶವಾಹಿ ಮತ್ತು ಸಸ್ಯತಳಿ ಸಂವರ್ಧನೆ ವಿಷಯದಲ್ಲಿ ಎಂ.ಎಸ್ಸಿ ಮಾಡುತ್ತಿದ್ದಾರೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ನೆಟ್‌) ದೇಶಕ್ಕೆ 18ನೇ ರ್‍್ಯಾಂಕ್‌ ಬಂದಿದ್ದು, ಕಿರಿಯ ಸಂಶೋಧನಾ ಶಿಷ್ಯವೇತನ (ಜೆಆರ್‌ಎಫ್‌) ಪಡೆದಿದ್ದಾರೆ.

6 ಚಿನ್ನ: ಬಿ.ಎಸ್ಸಿಯಲ್ಲಿ (ಕೃಷಿ ಮಾರುಕಟ್ಟೆ) ಆರು ಚಿನ್ನದ ಪದಕ ಪಡೆದ ವೈ.ಸಿ. ಅರ್ಚನಾ ಮದ್ದೂರು ತಾಲ್ಲೂಕಿನ ಯಡಗನಹಳ್ಳಿಯವರು. ತಂದೆ ಚನ್ನಬಸವೇಗೌಡ, ತಾಯಿ ಅನ್ನಪೂರ್ಣ. ಕೃಷಿ ವಿಷಯದಲ್ಲೇ ಪದವಿ ಪಡೆಯಬೇಕೆಂಬ ಅಪ್ಪನ ಆಸೆಯನ್ನು ಈಡೇರಿಸಿದ ಖುಷಿ ಅವರ ಮುಖದಲ್ಲಿ ವ್ಯಕ್ತವಾಗುತ್ತಿತ್ತು.

‘ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಒಳ್ಳೆಯ ಲಾಭ ಸಿಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು. ಎಂ.ಎಸ್ಸಿ ಬಳಿಕ ಎಪಿಎಂಸಿಯಲ್ಲಿ ಕೆಲಸ ಸಿಕ್ಕರೆ ನಾನು ಮಾಡುವ ಮೊದಲ ಕೆಲಸವೇ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವುದು’ ಎಂದು ಹೇಳಿದರು.

ಮತ್ತೊಬ್ಬ ವಿದ್ಯಾರ್ಥಿನಿ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಹೆಜ್ಜಾಜಿ ಗ್ರಾಮದ ಗೀತಾ ಎಂ.ಎಸ್ಸಿ ಕೃಷಿ ವಿಷಯದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಅವರ ತಂದೆ ಆರ್‌. ನರಸಿಂಹಮೂರ್ತಿ ಕೃಷಿಕರು.

‘ಕೃಷಿಯಲ್ಲಿ ಪಿಎಚ್‌.ಡಿ ಮಾಡುತ್ತಿದ್ದೇನೆ. ಹೆಚ್ಚು ಇಳುವರಿ ನೀಡುವ ತಳಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ’ ಎಂದು ಗೀತಾ ಹೇಳಿದರು. ಪಿಎಚ್‌.ಡಿ ಪಡೆದ ವೀರೇಶ ಹಟ್ಟಿ, ಜಿ.ಉದಯ್‌ ಹಾಗೂ ಎಂ.ಎ. ಯಶಸ್ವಿನಿ ಅವರಿಗೆ ತಲಾ 3 ಚಿನ್ನದಪದಕಗಳು ದೊರೆತವು. ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಮಹಾನಿರ್ದೇಶಕ ಡಾ. ತ್ರಿಲೋಚನ್‌ ಮೊಹಾಪಾತ್ರ ಘಟಿಕೋತ್ಸವ ಭಾಷಣ ಮಾಡಿದರು.

ತೂಕ ತಗ್ಗಿಸಿಕೊಂಡು ಚಿನ್ನದ ಬೇಟೆ
ಚಿಂತಾಮಣಿಯಲ್ಲಿರುವ ರೇಷ್ಮೆ ಕೃಷಿ ಕಾಲೇಜಿನ ಬಿ.ಎಸ್ಸಿ ಕೃಷಿ ವಿಭಾಗದ ವಿದ್ಯಾರ್ಥಿನಿ ಸಿ.ಪ್ರೀತಿ 6 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಅವರು ತಮಿಳುನಾಡಿನ ಹೊಸೂರಿನವರು. ಎಸ್‌.ವಿ.ಚಂದ್ರಶೇಖರನ್‌ ಹಾಗೂ ಬಿ.ಕೆ.ಸೌಂದರ್ಯವಲ್ಲಿ ದಂಪತಿಯ ಪುತ್ರಿ. ಬಿ.ಎಸ್ಸಿ ಓದುವಾಗ ಥೈರಾಯ್ಡ್‌ ಸಮಸ್ಯೆಗೆ ತುತ್ತಾಗಿದ್ದರು. ಅನಾರೋಗ್ಯದಲ್ಲೂ ಛಲ ಬಿಡದೆ ಓದಿ ಈ ಸಾಧನೆ ಮಾಡಿದ್ದಾರೆ.

ಈ ಬಗ್ಗೆ ಅವರು ಹೇಳಿದ್ದು ಹೀಗೆ– ‘ನನ್ನ ದೇಹದ ತೂಕ ದಿಢೀರನೆ 145 ಕೆ.ಜಿ.ಗೆ ಏರಿತು. ಹೀಗಾಗಿ ಲ್ಯಾಪ್ರೊಸ್ಕೋಪಿ  ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಆಗ ಆಹಾರ ಸೇವಿಸದೆ ಹಣ್ಣಿನ ರಸವನ್ನು ಮಾತ್ರ ಕುಡಿಯಬೇಕು ಎಂದು ವೈದ್ಯರು ಸೂಚಿಸಿದ್ದರು. ಎರಡು ವರ್ಷ ಹಣ್ಣಿನ ರಸ ಕುಡಿದೆ. ದೇಹದ ತೂಕ 65 ಕೆ.ಜಿ.ಗೆ ಇಳಿಯಿತು.’

ಮದುವೆ ನಂತರ ಪದವಿ: 7 ಚಿನ್ನ
ಎಂ.ಎಸ್ಸಿ ಕೃಷಿ ಅರ್ಥಶಾಸ್ತ್ರದಲ್ಲಿ 7 ಚಿನ್ನದ ಪದಕ ಪಡೆದ ಬಿ. ಆರತಿ, ಬಾಗೇಪಲ್ಲಿ ತಾಲ್ಲೂಕಿನ ಬ್ರಾಹ್ಮಣರಹಳ್ಳಿಯವರು. ಪ್ರಥಮ ಪಿ.ಯು ಓದುವಾಗಲೇ ಅವರಿಗೆ ಮದುವೆ ಆಗಿತ್ತು. ಅವರಿಗೆ ಆರು ವರ್ಷದ ಗಮ್ಯಾ ಎಂಬ ಮಗಳಿದ್ದಾಳೆ. ಅವರು 2014ನೇ ಸಾಲಿನ ಕೆಎಎಸ್‌ ಪರೀಕ್ಷೆಯನ್ನೂ ಪಾಸು ಮಾಡಿದ್ದು, ತಹಶೀಲ್ದಾರ್‌ ಹುದ್ದೆ ಸಿಕ್ಕಿದೆ.

‘ಗಂಡ ಶಂಕರ್‌ ಹಾಗೂ ಪೋಷಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಓದಿದೆ. ರಜೆ ಇದ್ದಾಗ ಊರಿಗೆ ಹೋಗುತ್ತಿದ್ದೆ’ ಎಂದು ಹೇಳಿದರು.

‘ತಹಶೀಲ್ದಾರ್‌ಗಿಂತ ಉನ್ನತ ಹುದ್ದೆಯನ್ನು ಪಡೆಯುವ ಗುರಿ ಇದೆ. ಸರ್ಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದ ಅವರು, ‘ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಈ ವಿಷಯದಲ್ಲಿ ಅವರ ಮನಸ್ಥಿತಿ ಬದಲಾಗಬೇಕು. ಸಮಸ್ಯೆಗೆ, ಆತ್ಮಹತ್ಯೆ ಪರಿಹಾರ ಅಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT