ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ ನಗರಸಭೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸದ ಅಸ್ತ್ರ

Last Updated 25 ಏಪ್ರಿಲ್ 2017, 4:47 IST
ಅಕ್ಷರ ಗಾತ್ರ

ಹರಿಹರ: ನಗರಸಭೆ ಅಧ್ಯಕ್ಷೆ ಆಶಾ ಮರಿಯೋಜಿರಾವ್ ಅವರ ವಿರುದ್ಧ ಅವಿಶ್ವಾಸ ಮಂಡನೆಗೆ ವಿಶೇಷ ಸಭೆ ನಡೆಸುವಂತೆ ಆಗ್ರಹಿಸಿ, ಸೋಮವಾರ 24 ಸದಸ್ಯರು ಅಧ್ಯಕ್ಷೆಗೆ ಮನವಿ ಸಲ್ಲಿಸುವ ಮೂಲಕ ರಾಜಕೀಯ ಸಂಚಲನ ಮೂಡಿಸಿದರು.

ನಗರಸಭೆಯಲ್ಲಿ 13 ಕಾಂಗ್ರೆಸ್, 10 ಜೆಡಿಎಸ್, 4 ಕೆಜೆಪಿ, 1 ಬಿಜೆಪಿ 3 ಪಕ್ಷೇತರ ಸದಸ್ಯರ ಬಲವಿದೆ. ಕಾಂಗ್ರೆಸ್‌ನ ಐವರು ಸದಸ್ಯರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಪಕ್ಷಾಂತರ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಕೆಜೆಪಿಯ ಇಬ್ಬರು ಬಿಜೆಪಿಗೆ, ಒಬ್ಬರು ಕಾಂಗ್ರೆಸ್, ಇನ್ನೊಬ್ಬರು ಅತಂತ್ರವಾಗಿದ್ದಾರೆ. ಪಕ್ಷೇತರ ಸದಸ್ಯರೊಬ್ಬರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.

ಒಬ್ಬರು ಜೆಡಿಎಸ್ ಬೆಂಬಲಿಗರಾಗಿದ್ದಾರೆ. ಒಟ್ಟಾರೆ ಯಾರು ಯಾರ ಬೆಂಬಲಿಗರು ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ ‘ಬಿ’ ಮಹಿಳಾ ಮೀಸಲಾತಿ ದೊರೆತಿತ್ತು. ಸದಸ್ಯರಲ್ಲಿ ಬಿಸಿಎಂ ಬಿ ಮಹಿಳಾ ಮೀಸಲಾತಿಗೆ ಆಶಾ ಮರಿಯೋಜಿರಾವ್ ಒಬ್ಬರೇ ಅರ್ಹ ರಾಗಿದ್ದರಿಂದ ಅನಾಯಾಸವಾಗಿ ಅಧ್ಯಕ್ಷ ಗಾದಿ ಅವರಿಗೆ ಒಲಿದು ಬಂದಿತ್ತು.

18ನೇ ವಾರ್ಡ್‌ ಸದಸ್ಯ ಜಿ. ಸುರೇಶಗೌಡ ಅವರ ಅಕಾಲಿಕ ನಿಧನದಿಂದ ತೆರವುಗೊಂಡಿತ್ತು. ಆ ವಾರ್ಡ್‌ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿತ್ತು. ಅಲ್ಲಿ ಗೆಲ್ಲುವ ಮಹಿಳಾ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಬಹುದೆಂಬುದನ್ನು ಅರಿತ ರಾಜಕೀಯ ಪಕ್ಷಗಳು, ಆ ವಾರ್ಡ್‌ನಲ್ಲಿ ಮಹಿಳಾ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಮೂಲಕ ರಾಜಕೀಯ ದಾಳ ಉರುಳಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಸುಜಾತಾ ಗೆಲುವು ಸಾಧಿಸುವ ಮೂಲಕ ಅಧ್ಕಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿ ಆಗಿದ್ದರು.

ಅವಿಶ್ವಾಸ ಮಂಡನೆಗೆ 22 ಸದಸ್ಯರ ಬೆಂಬಲ ಅಗತ್ಯವಿತ್ತು. ಈಚೆಗೆ ನಡೆದ ಸರ್ವ ಪಕ್ಷಗಳ ಸಮಾನ ಮನಸ್ಕರ ಸಭೆಯಲ್ಲಿ 24 ಸದಸ್ಯರು ಒಟ್ಟಾಗಿ ಅವಿಶ್ವಾಸ ಮಂಡನೆಗೆ ಸಹಿ ಹಾಕಲು ಒಪ್ಪಿದ್ದರು. ಎರಡು ತಿಂಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸೋಮವಾರ ದಿಢೀರ್ ಚಾಲನೆ ದೊರೆಯಿತು. ಪೂರ್ವ ನಿರ್ಧಾರದಂತೆ 24 ಸದಸ್ಯರ ಸಹಿ ಇರುವ ಮನವಿ ಪತ್ರವನ್ನು ಆಶಾ ಮರಿಯೋಜಿರಾವ್ ಅವರಿಗೆ ಸಲ್ಲಿಸಿದರು.

ಮನವಿ ಪತ್ರಕ್ಕೆ ನಗರಸಭೆ ಸದಸ್ಯರಾದ ಬಿ.ಕೆ. ಸೈಯದ್ ರೆಹಮಾನ್, ನಿಂಬಕ್ಕ ಚಂದಾಪೂರ, ಬಿ. ರೇವಣಸಿದ್ದಪ್ಪ, ಶಹಾಜಾದಾ ಸನಾವುಲ್ಲಾ, ಮಹಮದ್ ಸಿಗ್ಬತ್ಉಲ್ಲಾ, ಎಸ್.ಎಂ.ವಸಂತ ಹೊರತು ಉಳಿದ 24 ಸದಸ್ಯರು ಸಹಿ ಮಾಡಿದ್ದಾರೆ. ಗದ್ದುಗೆ ಗುದ್ದಾಟಕ್ಕೆ ಚಾಲನೆ ದೊರೆತಿದ್ದು, ಮುಂಬರುವ ದಿನಗಳಲ್ಲಿ ಸ್ಥಳಿಯ ರಾಜಕೀಯ
ಯಾವ ತಿರುವು ಪಡೆಯುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

15 ದಿನಗಳ ಒಳಗೆ ಸಭೆ ಕರೆಯಬೇಕು
ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಪೌರಸಭೆಗಳ ಅಧಿನಿಯಮ 1964 ಪ್ರಕರಣ 42 ಸೆಕ್ಷನ್, ಉಪಪ್ರಕರಣ 9ರಂತೆ ಸದಸ್ಯರ 1/3ರಷ್ಟು ಸದಸ್ಯರ ಸಹಿಯುಳ್ಳ ಮನವಿ ಪತ್ರವನ್ನು ಅಧ್ಯಕ್ಷರಿಗೆ ಸಲ್ಲಿಸಬೇಕು. ಈ ವಿಷಯದ ಸಭೆಯನ್ನು ಅಧ್ಯಕ್ಷರು 15 ದಿನಗಳೊಳಗಾಗಿ ಕರೆದು ಪೂರ್ಣಗೊಳಿಸಬೇಕು. 15ಗಳಲ್ಲಿ ಸಭೆ ಕರೆದು ನಿರ್ಧಾರ ಕೈಗೊಳ್ಳದಿದ್ದರೆ, 16ನೇ ದಿನದಿಂದ 30 ದಿನಗಳವರೆಗೆ ಉಪಾಧ್ಯಕ್ಷರಿಗೆ ಈ ಅಧಿಕಾರವನ್ನು ನೀಡಲಾಗುತ್ತದೆ ಎಂದು ಪೌರಾಯುಕ್ತೆ ಎಸ್. ಲಕ್ಷ್ಮೀ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT