ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುಭವ ಮಂಟಪ ವಿಶ್ವಕ್ಕೇ ಮಾದರಿ’

Last Updated 25 ಏಪ್ರಿಲ್ 2017, 4:53 IST
ಅಕ್ಷರ ಗಾತ್ರ

ಹರಪನಹಳ್ಳಿ:  ‘ವಿಶ್ವದ ಅತ್ಯಂತ ಹಳೆಯ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಮಹಿಳೆಯರಿಗೆ ಶಿಕ್ಷಣದ ಹಕ್ಕು ಮತ್ತು ಸಮಾನತೆ ಸಿಕ್ಕಿರಲಿಲ್ಲ. ಆದರೆ, 900 ವರ್ಷಗಳ ಹಿಂದೆ ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಮಹಿಳೆಗೆ ಈ ಅವಕಾಶ ಕಲ್ಪಿಸಲಾಗಿತ್ತು’ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವ ಸಮಿತಿ ಮತ್ತು ತಾಲ್ಲೂಕು ವೀರಶೈವ ಮಹಾಸಭಾದ ಮಹಿಳಾ ಘಟಕವು ಇಲ್ಲಿನ ಕೆಂಪೇಶ್ವರ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಜಾತಿ, ಅಂತಸ್ತು, ಲಿಂಗ ತಾರತಮ್ಯ ಇಲ್ಲದೆ ಸಮಾನತೆ ಸಾರಿದ ಅನುಭವ ಮಂಟಪ ವಿಶ್ವಕ್ಕೇ ಮಾದರಿಯಾಗಿತ್ತು’ ಎಂದು ಅವರು ತಿಳಿಸಿದರು.

‘ಜಯಂತ್ಯುತ್ಸವ ಒಂದು ಜಾತಿಗೆ ಸೀಮಿತವಾಗಿದ್ದು, ದಾರ್ಶನಿಕರ ಸಿದ್ಧಾಂತ, ತತ್ವಗಳಿಗೆ ನಾವು ಮಾಡುವ ದ್ರೋಹವಾಗಿದೆ. ಅವರನ್ನು ಸಾರ್ವತ್ರೀ ಕರಣಗೊಳಿಸಬೇಕು. ಜಾತಿಗೆ ಅಂಟಿಕೊಳ್ಳುವ ಬದಲು ಅವರ ನೀತಿಗಳಿಗೆ ಅಂಟಿಕೊಳ್ಳಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

‘ಅರಸನ ಪತ್ನಿಯಾಗಿ ನಡೆಸಬಹುದಾದ ಸುಖ ಜೀವನ ತೊರೆದು ತ್ಯಾಗಮಯಿಯಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಎಲ್ಲಾ ಮಹಿಳೆಯರಿಗೆ ಅಕ್ಕ ಎನಿಸಿಕೊಂಡಿದ್ದರು. ಮಹಿಳೆಯರಲ್ಲಿ ಕಷ್ಟ ಸಹಿಷ್ಣುತೆ ಬರಬೇಕು. ದಿಟ್ಟತನದಿಂದ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ತಂದುಕೊಳ್ಳಬೇಕು’ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ ಅಜ್ಜಣ್ಣ, ‘ವಚನ ಸಾಹಿತ್ಯದಿಂದ ಸಮಾಜವನ್ನು ತಿದ್ದಿದ, ಸಮಾನತೆ, ಜಾತೀಯತೆ ಸಾರಿದ ಅಕ್ಕಮಹಾದೇವಿ ಮಹಿಳೆಯರಿಗೆ ಮಾದರಿಯಾಗಿದ್ದಾರೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಸುವರ್ಣ ಆರುಂಡಿ, ನಿವೃತ್ತ ಶಿಕ್ಷಕಿ ಟಿ.ಎಂ. ಲಲಿತಮ್ಮ, ಸರ್ಕಾರಿ ಅಭಿಯೋಜಕಿ ಟಿ.ಎಸ್‌.ಗೋಪಿಕಾ, ಕವಿತಾ ಸುರೇಶ್‌ ಮಾತನಾಡಿದರು. ಹುಬ್ಬಳ್ಳಿಯ ಮಹಾಲಿಂಗ ಸ್ವಾಮೀಜಿ ಹಾಜರಿದ್ದರು. ಎಸ್‌.ಎಸ್‌.ಕೆಳದಿ ಮಠ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಗುರುಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT