ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾಕಲ್ಯಾಣ ಯೋಜನೆ ವಿಳಂಬ; ತನಿಖೆಗೆ ಆದೇಶ

Last Updated 25 ಏಪ್ರಿಲ್ 2017, 4:58 IST
ಅಕ್ಷರ ಗಾತ್ರ

ಶಿವಮೊಗ್ಗ: ನಿರೀಕ್ಷಿತ ಮಟ್ಟದಲ್ಲಿ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಗೊಳ್ಳದೇ ಇರುವುದಕ್ಕೆ ಕಾರಣಗಳನ್ನು ಪತ್ತೆಹಚ್ಚಲು ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳ ಮೂಲಕ ಸಣ್ಣ ರೈತರ ಜಮೀನುಗಳಲ್ಲಿ ಕೊಳವೆಬಾವಿ ಕೊರೆಸಲು ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಆದರೆ, ಎರಡು–ಮೂರು ವರ್ಷಗಳ ಹಿಂದೆ ಮಂಜೂರಾದ ಕೊಳವೆಬಾವಿಗಳು ಇದುವರೆಗೂ ಪೂರ್ಣಗೊಂಡಿಲ್ಲ. ಹಲವು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಭಾನುಪ್ರಕಾಶ್, ಸೊರಬ ಶಾಸಕ ಮಧು ಬಂಗಾರಪ್ಪ, ಕೆಡಿಪಿ ಸದಸ್ಯ ಗುಡಮಗಟ್ಟೆ ಮಲ್ಲಯ್ಯ ಮತ್ತಿತರರು ದೂರಿದರು.

ಮರಳಿನ ಸಮಸ್ಯೆ ನಿವಾರಣೆಗೆ ಕ್ರಮ: ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದೆ. ಜನರು ಮನೆ ಕಟ್ಟಲು ಪರದಾಡುತ್ತಿದ್ದಾರೆ. ಸಮಸ್ಯೆ ಬಗೆಹರಿ ಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಎಂಟು ಬ್ಲಾಕ್‌ಗಳ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಂಡಿದೆ. 4 ಬ್ಲಾಕ್‌ಗಳಲ್ಲಿ ಮರಳು ತುಂಬಲಾಗುತ್ತಿದೆ. ಉಳಿದ ಬ್ಲಾಕ್‌ಗಳ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿದೆ. ನಿಗದಿತ ದರಕ್ಕಿಂತ ₹ 200 ಹೆಚ್ಚು ಬೆಲೆಗೆ ಸಾರ್ವಜನಿಕರಿಗೆ ವಿತರಿಸಲು ಸೂಚಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಮಾಹಿತಿ ನೀಡಿದರು.

ಆನವಟ್ಟಿ ಠಾಣೆಯ ಪೊಲೀಸ್‌ ಒಬ್ಬರು ಮರಳು ದಂಧೆಯಲ್ಲಿ ತೊಡಗಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕರೆ ಮಾಡಿದರೆ, ಸ್ವೀಕರಿಸುವುದಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಕೊಟಗಿಹಳ್ಳಿ ಆರೋಪಿಸಿದರು.

₹ 19.55 ಕೋಟಿ ಪರಿಹಾರ ವಿತರಣೆ: ಕಳೆದ ವರ್ಷ ಶೇ 37ರಷ್ಟು ಮುಂಗಾರು ಕೊರತೆಯಾದ ಕಾರಣ ಜಿಲ್ಲೆಯ ಭದ್ರಾವತಿ ತಾಲ್ಲೂಕು ಹೊರತುಪಡಿಸಿ ಉಳಿದ 6 ತಾಲ್ಲೂಕು ಗಳನ್ನು ಬರಪೀಡಿತ ಎಂದು ಘೋಷಿಸ ಲಾಗಿತ್ತು. ಹಿಂಗಾರು ಹಂಗಾಮಿನಲ್ಲಿ ಭದ್ರಾವತಿ ತಾಲ್ಲೂಕನ್ನೂ ಬರಪೀಡಿತ ಎಂದು ಘೋಷಿಸಲಾಗಿದೆ. ಪರಿಹಾರ ತಂತ್ರಾಂಶದಲ್ಲಿ ನೋಂದಾಯಿಸಿದ 75,710 ರೈತರಿಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 45,442 ರೈತರ ಖಾತೆಗಳಿಗೆ ₹ 19.55 ಕೋಟಿ ಹಣ ನೇರವಾಗಿ ಜಮೆ ಮಾಡ ಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್‌ ವಿವರ ನೀಡಿದರು.

ವಾರದ ಒಳಗೆ ಉಳಿದ ರೈತರಿಗೂ ಪರಿಹಾರ ವಿತರಿಸುವಂತೆ ಕಾಗೋಡು ತಿಮ್ಮಪ್ಪ ಸೂಚಿಸಿದರು.

ಎರಡು ವರ್ಷವಾದರೂ ಬಾರದ ಪರಿಹಾರ: ಸೊರಬ ತಾಲ್ಲೂಕು ಬರಪೀಡಿತ ಎಂದು 2015–16ನೇ ಸಾಲಿನಲ್ಲಿ ಘೋಷಿಸಲಾಗಿತ್ತು. ₹ 3 ಕೋಟಿ ಪರಿಹಾರ ಘೋಷಿಸಲಾಗಿತ್ತು. ಆದರೆ, ₹ 1.74 ಕೋಟಿ ಮಾತ್ರ ಬಂದಿದೆ. ಉಳಿದ ಹಣ ಇದುವರೆಗೂ ಬಂದಿಲ್ಲ. ಕೆಲವು ರೈತರಿಗೆ ಪರಿಹಾರ ನೀಡಿ, ಕೆಲ ರೈತರಿಗೆ ನೀಡದೇ ಇರುವುದು ಸರಿಯೇ ಎಂದು ಶಾಸಕ ಮಧು ಬಂಗಾರಪ್ಪ ಪ್ರಶ್ನಿಸಿದರು.

ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಕೊರೆದ ಹಲವು ಕೊಳವೆಬಾವಿಗಳಿಗೆ ಪೈಪ್‌ಲೈನ್ ಅಳವಡಿಸಿಲ್ಲ. ಸುಮ್ಮನೆ ಕೊರೆದು ಬಿಟ್ಟರೆ ಏನು ಪ್ರಯೋಜನ ಎಂದು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಗಾಜನೂರಿನಿಂದ  ಶಿವಮೊಗ್ಗಕ್ಕೆ ಸರಬರಾಜು ಮಾಡುವ ಕುಡಿಯುವ ನೀರಿನ ಪೈಪ್‌ ಮೂಲಕವೇ ಗಾಜನೂರು ಮತ್ತಿತರ ಗ್ರಾಮಗಳಿಗೆ ನೀರು ಪೂರೈಸಬೇಕು. ಅದಕ್ಕಾಗಿ ಪ್ರತ್ಯೇಕ ಯೋಜನೆ ಅಗತ್ಯವಿಲ್ಲ ಎಂದು ಭಾನುಪ್ರಕಾಶ್ ಸಲಹೆ ನೀಡಿದರು.

ಉದ್ಯೋಗ ಖಾತ್ರಿ; ಯಂತ್ರ ಬಳಕೆ ಸಲ್ಲದು: ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಲು ಮಹಿಳಾ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ, ಗಟ್ಟಿ ನೆಲ ಅಗೆಯಲು ಅವರಿಗೆ ಕಷ್ಟವಾಗುತ್ತದೆ. ಅದಕ್ಕಾಗಿ ಯಂತ್ರ ಬಳಕೆಗೆ ಸೀಮಿತ ಅವಕಾಶ ನೀಡಬೇಕು ಎಂದು ಮಧು ಬಂಗಾರಪ್ಪ ಕೋರಿದರು.

ಯಂತ್ರ ಬಳಕೆಗೆ ಅವಕಾಶ ಇಲ್ಲ. ಕೆರೆ ಸಂಜೀವಿನಿ ಯೋಜನೆ ಅಡಿ ಕೆರೆ ಹೂಳೆತ್ತಲು ಪ್ರತಿ ಕೆರೆಗೆ ₹ 5 ಲಕ್ಷ ಅನುದಾನ ನೀಡುತ್ತಿದೆ. ಆ ಅನುದಾನ ಬಳಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ರಾಕೇಶ್‌ ಕುಮಾರ್‌ ಸಲಹೆ ನೀಡಿದರು.

ನಗರದ ಜನರಿಗೂ ಸೀಮೆಎಣ್ಣೆ: ಅಡುಗೆ ಅನಿಲ ಹೊಂದಿರುವ ಗ್ರಾಮೀಣ ಪ್ರದೇಶದ ಜನರಿಗೆ ಸೀಮೆಎಣ್ಣೆ ನೀಡಲಾಗುತ್ತಿದೆ. ನಗರ ಪ್ರದೇಶದ ಜನರಿಗೂ ನೋಂದಣಿ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಭದ್ರಾವತಿ ಶಾಸಕ ಎಂ.ಜೆ.ಅಪ್ಪಾಜಿ ಗೌಡ ಆಗ್ರಹಿಸಿದರು.

ವಾರದ ಒಳಗೆ ವರದಿ: ಜಿಲ್ಲೆಯ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ಕಾರಣ ಅಡಿಕೆ ತೋಟಗಳು ಒಣಗುತ್ತಿವೆ. ವಾರದ ಒಳಗೆ ಒಣಗಿದ ತೋಟಗಳ ವರದಿ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳಿದರು.

ಅಂಗನವಾಡಿ ಸೌಲಭ್ಯಕ್ಕೆ ಆಗ್ರಹ: ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಆಟದ ಸಾಮಗ್ರಿ ವಿತರಿಸಿಲ್ಲ. ಹೊಳೆಹೊನ್ನೂರು ಆಸ್ಪತ್ರೆ ಕಟ್ಟಡ ಶಿಥಿಲಗೊಂಡಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ರಾತ್ರಿಪಾಳಿ ವೈದ್ಯರ ನೇಮಿಸಬೇಕು ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರೇಖಾ ಉಮೇಶ್ ಕೋರಿದರು.

ಎಲ್ಲ ಅಂಗನವಾಡಿಗಳಿಗೂ ಅಗತ್ಯ ಮೂಲಸೌಲಭ್ಯ ಒದಗಿಸಬೇಕು. ಕುಡಿಯುವ ನೀರು, ಶೌಚಾಲಯ ಇರಲೇಬೇಕು. ಮಕ್ಕಳು ಮಲಗಲು ಚಾಪೆ ಬದಲು ಜಮಖಾನ ಒದಗಿಸಬೇಕು ಎಂದು ಸಚಿವರು ಸೂಚಿಸಿದರು.

ಕುಡಿಯುವ ನೀರಿನ ಯೋಜನೆ, ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತಡಮಾಡುತ್ತಿರುವ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಸಚಿವರು ಹರಿಹಾಯ್ದರು. ಸರ್ಕಾರಿ ಸೌಲಭ್ಯವನ್ನು ಸಮರ್ಪಕವಾಗಿ ಜನರಿಗೆ ತಲುಪಿಸ ಬೇಕು. ಇಲ್ಲದಿದ್ದರೆ ಆಡಳಿತ ನಡೆಸಲು ಯೋಗ್ಯರಲ್ಲ ಎಂಬ ಭಾವನೆ ಬರುತ್ತದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇತರೆ ಜಿಲ್ಲೆಗಳಿಗೂ ಜಿಲ್ಲೆಯ ಮೇವು
ಜಿಲ್ಲೆಯ ಮೇವು ಬ್ಯಾಂಕ್‌ಗಳಲ್ಲಿ 352 ಟನ್‌ ಮೇವು ಸಂಗ್ರಹವಿದೆ. ಮೇವಿನ ಸಮಸ್ಯೆ ಇರುವ ಜಿಲ್ಲೆಗಳಿಗೆ ಈಗಾಗಲೇ 105 ಟನ್‌ ಮೇವು ಕಳುಹಿಸಲಾಗಿದೆ. ಜಿಲ್ಲೆಯ ಜಾನುವಾರಿಗೆ ತುರ್ತು ಸಂದರ್ಭಕ್ಕೆ ಬಳಸಲು 150 ಟನ್‌ ಮೀಸಲಿಡಲಾಗುವುದು ಎಂದು ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಭಾಸ್ಕರ ನಾಯ್ಕ ಮಾಹಿತಿ ನೀಡಿದರು.

ಹೋಬಳಿಗೊಂದು ವಸತಿ ಶಾಲೆ
ಸರ್ಕಾರ ಹೋಬಳಿಗೊಂದು ವಸತಿ ಶಾಲೆ ತೆರೆಯಲು ಕ್ರಮ ಕೈಗೊಂಡಿದೆ. ಜಿಲ್ಲೆಯ 40 ಹೋಬಳಿಗಳಲ್ಲಿ 23ರಲ್ಲಿ ವಸತಿಶಾಲೆಗಳಿವೆ. ಕಳೆದ ವರ್ಷ 9 ಮೊರಾರ್ಜಿ ವಸತಿ ಶಾಲೆ ಮಂಜೂರಾಗಿದ್ದವು. ಅವುಗಳಿಗೆ ನಿವೇಶನ ದೊರೆತಿದೆ. ಈಗ 8 ಅಂಬೇಡ್ಕರ್ ವಸತಿ ಶಾಲೆ ಮಂಜೂರಾಗಿವೆ ಎಂದು ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಶಿವಕುಮಾರ್ ತಿಳಿಸಿದರು.

ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಮೇಲ್ವಿಚಾರಕರು ಬೆಳಿಗ್ಗೆ 6ಕ್ಕೇ ಹಾಜರಿರಬೇಕು. ಸರಿಯಾಗಿ ಕೆಲಸ ಮಾಡದ ಮೇಲ್ವಿಚಾರಕರಿಗೆ ನೋಟಿಸ್‌ ನೀಡಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ವೈದ್ಯರ ಕೊರತೆ ಇಲ್ಲ. 36 ತಜ್ಞ ವೈದ್ಯರ ಹುದ್ದೆ ಖಾಲಿ ಇವೆ. ಕಿರಿಯ ಆರೋಗ್ಯ ಸಹಾಯಕಿಯರ ಸ್ಥಾನ ಭರ್ತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಚ್‌ಒ ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT