ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರರ ಕೈಯಲ್ಲಿ ಪಕ್ಷಗಳ ಅಸ್ತಿತ್ವ!

Last Updated 25 ಏಪ್ರಿಲ್ 2017, 5:12 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ತೆರವಾಗಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಏಪ್ರಿಲ್‌ 28ರಂದು ಚುನಾವಣೆ ನಡೆಯಲಿದ್ದು, ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಕಾಂಗ್ರೆಸ್ ಬೆಂಬಲಿತ ಅಬ್ದುಲ್‌ ರಷೀದ್‌ (ಅಧ್ಯಕ್ಷ) ಹಾಗೂ ಭಾಗ್ಯಮ್ಮ ತಿಮ್ಮರಾಜು (ಉಪಾಧ್ಯಕ್ಷೆ) ಒಪ್ಪಂದದ ಪ್ರಕಾರ ರಾಜೀನಾಮೆ ನೀಡಿರುವುದರಿಂದ ಎರಡೂ ಸ್ಥಾನಗಳು ತೆರವಾಗಿವೆ. ಶಾಸಕ ಎಸ್‌.ತಿಪ್ಪೇಸ್ವಾಮಿ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಒಟ್ಟು 15 ಸ್ಥಾನಗಳ ಪೈಕಿ ಕಾಂಗ್ರೆಸ್‌ 6, ಬಿಎಸ್‌ಆರ್‌ ಕಾಂಗ್ರೆಸ್‌ 5, ಜೆಡಿಎಸ್‌ 1, ಬಿಜೆಪಿ 1 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಸಂಸದ ಚಂದ್ರಪ್ಪ ಅವರ ಒಂದು ಮತ ಸೇರಿದಂತೆ ಕಾಂಗ್ರೆಸ್‌ 7, ಶಾಸಕ ತಿಪ್ಪೇಸ್ವಾಮಿ ಮತ ಸೇರಿದರೆ ಬಿಎಸ್‌ಆರ್‌ ಕಾಂಗ್ರೆಸ್‌ಗೆ 6 ಮತಗಳ ಬಲವಿದೆ.

ಕಳೆದ ಬಾರಿ ಇಬ್ಬರು ಪಕ್ಷೇತರ ಸದಸ್ಯರಾದ ವದ್ದಿ ಸರೋಜಮ್ಮ ಹಾಗೂ ಎಂ.ಎಸ್. ರಘು ಬೆಂಬಲದೊಂದಿಗೆ ಕಾಂಗ್ರೆಸ್‌ ಅಧಿಕಾರ ಪಡೆದಿತ್ತು. ಇದಕ್ಕೂ ಮೊದಲು ಬಿಎಸ್‌ಆರ್‌್ ಕಾಂಗ್ರೆಸ್‌, ಜೆಡಿಎಸ್ ಮತ್ತು ಬಿಜೆಪಿಯ ತಲಾ ಒಬ್ಬ ಸದಸ್ಯರು, ಇಬ್ಬರು ಪಕ್ಷೇತರರ ಬೆಂಬಲ ಪಡೆದು ಅಧಿಕಾರ ಗಳಿಸಿತ್ತು. ಈ ಬಾರಿಯೂ ಪಕ್ಷೇತರರನ್ನು ಒಲಿಸಿ ಕೊಳ್ಳಲು ಎರಡೂ ಪಕ್ಷಗಳು ಇನ್ನಿಲ್ಲದ ಕಸರತ್ತಿಗೆ ಮುಂದಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ಸದಸ್ಯರು ಹೇಳುತ್ತಾರೆ.

‘ಬಿಎಸ್ಆರ್‌ ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಮೆಹಬೂಬ್‌ ಬಾಷಾ, ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ್‌, ಜೆಡಿಎಸ್‌ನ ಉಲ್ಫತ್‌ ಉನ್ನೀಸಾ, ಬಿಜೆಪಿಯ ರಾಜಶೇಖರ ಗಾಯಕವಾಡ್‌್ ಹೆಸರು ಕೇಳಿಬಂದಿದೆ. ಒಬ್ಬ ಸದಸ್ಯ ಬೆಂಬಲ ಅವಶ್ಯಕತೆಯಿದ್ದು ಪಕ್ಷೇತರರ ಬೆಂಬಲ ಸಿಗುವ ವಿಶ್ವಾಸ ಇದೆ’ ಎಂದು ಬಿ.ಎಸ್‌.ಆರ್‌ ಕಾಂಗ್ರೆಸ್‌ನ ಸದಸ್ಯ ಶಿವಮೂರ್ತಿ ಮಾಹಿತಿ ನೀಡಿದರು.

ಹಿಂದಿನ ಆಯ್ಕೆ ವೇಳೆ ನಡೆದಿದ್ದ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ಜಿ. ಪ್ರಕಾಶ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಂಜಿನಪ್ಪ ಹೆಸರು ಮಾತ್ರ ಕೇಳಿ ಬಂದಿದೆ. ಪಕ್ಷದ ಮುಖಂಡರ ನಿರ್ಧಾರಕ್ಕೆ ಕೊನೆ ಕ್ಷಣದಲ್ಲಿ ಕೆಲ ಸದಸ್ಯರು ಅಪಸ್ವರ ಎತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ ಕಾಂಗ್ರೆಸ್‌ ಸದಸ್ಯ ಜಿ. ಪ್ರಕಾಶ್‌ ಮಾತನಾಡಿ, ‘ಪಕ್ಷದ ಸದಸ್ಯರಲ್ಲಿ ಯಾವುದೇ ಗೊಂದಲವಿಲ್ಲ, ಕಳೆದ ಬಾರಿಯಂತೆ ಪಕ್ಷೇತರ ಸದಸ್ಯರೂ ಬೆಂಬಲ ನೀಡಲಿದ್ದಾರೆ. ಶಾಸಕ ಎನ್‌.ವೈ. ಗೋಪಾಲಕೃಷ್ಣ ನೇತೃತ್ವದಲ್ಲಿ ಅಧಿಕಾರ ಹಿಡಿಯುವ ಯೋಜನೆ ಫಲಪ್ರದವಾಗಲಿದೆ. ವದಂತಿಗಳಲ್ಲಿ ಯಾವುದೇ ಹುರುಳಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT