ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ಪರದಾಟ; ಸ್ವಚ್ಛತೆ ಮರೀಚಿಕೆ

Last Updated 25 ಏಪ್ರಿಲ್ 2017, 5:23 IST
ಅಕ್ಷರ ಗಾತ್ರ

ಕವಿತಾಳ: ಸಮೀಪದ ಪಾಮನಕಲ್ಲೂರು ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಮತ್ತು ಓಣಿಗಳ ರಸ್ತೆಗಳು ಹದಗೆಟ್ಟಿದ್ದು, ಗ್ರಾಮಸ್ಥರು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಪಾಮನಕಲ್ಲೂರು ಗ್ರಾಮ ಅಂದಾಜು 8 ಸಾವಿರ ಜನಸಂಖ್ಯೆ ಹೊಂದಿದ್ದು, 8 ಜನ ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಅಲ್ಲದೆ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾಗಿದೆ. 
ಇಲ್ಲಿಗೆ ಸಮೀಪದ ಲಿಂಗಸುಗೂರು– ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಕೋಳಿ ತ್ಯಾಜ್ಯ ಸೇರಿದಂತೆ ಚರಂಡಿಗಳಲ್ಲಿ ಹೊಟೇಲ್‌ನ ಪ್ಲಾಸ್ಟಿಕ್‌ ತ್ಯಾಜ್ಯ ತಂದು ಹಾಕಲಾಗುತ್ತಿದೆ. ಒದರಿಂದ ಚರಂಡಿಗಳು ತುಂಬಿಕೊಂಡಿದ್ದು ದುರ್ವಾಸನೆ ಬೀರುತ್ತಿದೆ. ಮೂಗು ಮುಚ್ಚಿಕೊಂಡು ರಸ್ತೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಕ್ಕೆ ನೀರು ಪೂರೈಸುತ್ತಿದ್ದ 5 ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತದಿಂದ ನೀರು ಕಡಿಮೆಯಾಗಿದೆ. ಎರಡು ತಿಂಗಳಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ.

‘ಇರಕಲ್‌ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ನಿರ್ಮಿಸಿದ ಕೆರೆಯಿಂದ ಗ್ರಾಮಕ್ಕೆ ನೀರು ಪೂರೈಸಲಾಗುವುದು ಎನ್ನುವ ಭರವಸೆ ಈಡೇರಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಗ್ರಾಮದ ಲಕ್ಷ್ಮಣ ಚೌಡ್ಲಿ ಆರೋಪಿಸಿದ್ದಾರೆ.

‘ಬಹುತೇಕ ಓಣಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ನೀರು ನಿಲ್ಲುವುದರಿಂದ ಗಲೀಜು ವಾತಾವರಣ ಸೃಷ್ಟಿಯಾಗಿದೆ. ಇಲ್ಲಿನ ಬಾಲಕರ ವಸತಿ ನಿಲಯಕ್ಕೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಬೇಕಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಬೇಸಿಗೆ ಆರಂಭಕ್ಕೆ ಮುಂಚಿತವಾಗಿ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಕರವೇ ಮುಖಂಡ ವೆಂಕಟೇಶ ಶಂಕ್ರಿ ಆರೋಪಿಸಿದ್ದಾರೆ.

-ಮಂಜುನಾಥ ಎನ್ ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT