ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಗೆ ವರದಾನವಾದ ಕೆರೆ ಮಣ್ಣು

Last Updated 25 ಏಪ್ರಿಲ್ 2017, 5:29 IST
ಅಕ್ಷರ ಗಾತ್ರ

ಡಂಬಳ: ಕಳೆದ 10 ವರ್ಷಗಳ ಕಾಲ ಬರ ಆವರಿಸಿದ್ದರೂ ಈ ಭಾಗದ ರೈತರು ಭೂಮಿ ಹಾಗೂ ಮಳೆರಾಯನ ಮೇಲೆ ನಂಬಿಕೆ ವಿಶ್ವಾಸವಿಟ್ಟು ಈ ವರ್ಷ ಹವಾಮಾನ ಇಲಾಖೆ ಮಳೆಯ ಬಗ್ಗೆ ಉತ್ತಮ ಭವಿಷ್ಯ ನುಡಿದ ಪರಿಣಾಮ ತಾಲ್ಲೂಕಿನ ರೈತರ ಜಮೀನುಗಳಲ್ಲಿ ಕೃಷಿ ಚಟುವಟೆಕೆ ಗದಿಗೆದರಿದೆ. ವಿಶೇಷವಾಗಿ ಗ್ರಾಮದ ವಿಕ್ಟೋರಿಯಾ ಕೆರೆಯ ಮಣ್ಣಿಗೆ ರೈತರಿಂದ ಭಾರಿ ಬೇಡಿಕೆ ಬಂದಿದೆ.

ಡಂಬಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿ ಹದಗೊಳಿಸಿ ಫಲವತ್ತತೆ ಹೆಚ್ಚಿಸಲು ರೈತರು ಕೆರೆ ಮಣ್ಣನ್ನು ತಮ್ಮ ಜಮೀನುಗಳಿಗೆ ಹಗಲು ರಾತ್ರಿ ಸಾಗಾಟ ಮಾಡುತ್ತಿದ್ದಾರೆ. ಕೆರೆಗೆ ಕಪ್ಪತ್ತಗುಡ್ಡ ಪ್ರದೇಶದಿಂದ ನೀರು ಹಾಗೂ ತಿಳಿ ಮಣ್ಣು ಹರಿದು ಬರುವುದರಿಂದ ರೈತರ ಜಮೀನುಗಳಿಗೆ ಹೇಳಿ ಮಾಡಿಸಿದ ಮಣ್ಣಾಗಿದೆ. ಹೀಗಾಗಿ ಈ ಮಣ್ಣು ಜಮೀನುಗಳಿಗೆ ಮಿಶ್ರಣ ಮಾಡಿದರೆ ರೈತರ ಬೆಳೆ ಇಳುವರಿ ಹೆಚ್ಚು ಬರುತ್ತದೆ ಎನ್ನುತ್ತಾರೆ ಗ್ರಾಮದ ರೈತ ಬಸವರಾಜ ಕುಸಗಲ್ಲ ಹಾಗೂ ಮಾರುತಿ ಹೊಂಬಳ.

ಈಗಾಗಲೆ ರಾಜ್ಯದ ಕೆಲ ಭಾಗಗಳಲ್ಲಿ ಮಳೆರಾಯನ ಪ್ರವೇಶವಾಗಿದ್ದರಿಂದ ತಮ್ಮ ಹೊಲವನ್ನು ಹದಗೊಳಿಸಲು ಸಿದ್ಧತೆ ನಡೆಸಿದ್ದು ರೈತರು ನೂರಾರು ಟ್ರಾಕ್ಟರ್ ಮೂಲಕ ಕೆರೆ ಮಣ್ಣನ್ನು ತಮ್ಮ ಜಮೀನುಗಳಿಗೆ ಸಾಗಾಟ ಮಾಡುತ್ತಿದ್ದು, ದುಬಾರಿ ಕೊಟ್ಟಿಗೆ ಗೊಬ್ಬರ ಹಾಕಲು ಅಶಕ್ತರಾಗುವ ರೈತರಿಗೆ ಡಂಬಳ ಕೆರೆ ಮಣ್ಣು ರೈತರಿಗೆ ವರದಾನವಾಗಿದೆ. ವಿಶೇಷ ಎಂದರೆ ಕಳೆದ ಸಲ ಮಳೆಯ ಕೊರತೆ ನಡುವೆಯೂ ಶಿಂಗಟಾಲೂರ ಏತ ನೀರಾವರಿ ಯೋಜನೆ ಮೂಲಕ ಪ್ರಾಯೋಗಿಕವಾಗಿ ಗ್ರಾಮದ ಕೆರೆಗೆ ತುಂಗಭದ್ರಾ ನದಿಯ ಮೂಲಕ ನೀರು ಭರ್ತಿಯಾಗಿದ್ದರಿಂದ ಈರುಳ್ಳಿ, ಮೆಕ್ಕೆಜೋಳ, ಮೆಣಸಿನಕಾಯಿ, ಬಿಳಿಜೋಳ ಮುಂತಾದ ಬೆಳೆ ಬೆಳೆಯಲು ಸಾಧ್ಯವಾಗಿದೆ.

ಹೀಗಾಗಿ ಈ ವರ್ಷ ಮಳೆರಾಯ ಕೃಪೆತೋರಿದರೆ ಕೆರೆ  ಭತಿರ್ಯಾಗುತ್ತದೆ. ಅಲ್ಲದೆ ಜಮೀನು ಹದಗೊಳ್ಳುವುದರಿಂದ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ಇದ್ದೇವೆ ಎನ್ನುತ್ತಾರೆ ರೈತ ವಿರುಪಾಕ್ಷಪ್ಪ ಲಕ್ಕುಂಡಿ ಹಾಗೂ ಜಾಕೀರ್ ಮೂಲಿಮನಿ.

ಒಟ್ಟಿನಲ್ಲಿ ವಿಕ್ಟೋರಿಯಾ ಮಹಾರಾಣಿ ಕೆರೆಗೆ ಮಳೆಗಾಲದ ಸಮಯದಲ್ಲಿ ಗುಡ್ಡದ ಪ್ರದೇಶದಿಂದ ಫಲವತ್ತದ ಮಣ್ಣು ನೀರಿನಲ್ಲಿ ಮಿಶ್ರಣವಾಗಿ ಬರುವುದರಿಂದ ಈ ಮಣ್ಣು ರೈತರಿಗೆ ಅನಕೂಲವಾಗಿದ್ದು, ಕೆರೆ ಮಣ್ಣಿಗೆ ಬೇರೆ ಯಾವುದೆ ರಸಗೊಬ್ಬರು ಸರಿಸಾಟಿಯಾಗಲಾರದು ಎನ್ನುವ ನಂಬಿಕೆ ಗ್ರಾಮಸ್ಥರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT