ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ನಿಧಿ: ಶೇ 99 ಅನುದಾನ ಬಳಕೆ

Last Updated 25 ಏಪ್ರಿಲ್ 2017, 5:43 IST
ಅಕ್ಷರ ಗಾತ್ರ

ರಾಯಚೂರು: ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಶೇ 99ರಷ್ಟು ಅನುದಾನ ಬಳಸಿಕೊಂಡಿವೆ ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರ ಹಾಗೂ ಪುರಸಭೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ₹43.38 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಈ ಪೈಕಿ ₹43.24 ಕೋಟಿ ಅನುದಾನ ಬಳಕೆ ಮಾಡಿಕೊಳ್ಳಲಾಗಿದ್ದು, ಶೇ 99ರಷ್ಟು ಪ್ರಗತಿಯಾಗಿದೆ ಎಂದರು.

ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಮಿಕರಿಗೆ ನೀಡುವ ಸೌಲಭ್ಯಗಳಲ್ಲಿ ಲೋಪವಾದರೆ ಗುತ್ತಿಗೆ ಪಡೆದಿರುವ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ. ಜೊತೆಗೆ ಸ್ಥಳೀಯ ಸಂಸ್ಥೆಗಳ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವಲ್ಲಿ ವಿಳಂಬ ಆಗುವುದನ್ನು ತಡೆಯುವ ಸಲುವಾಗಿ ₹5 ಕೋಟಿವರೆಗಿನ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

ನಗರದಲ್ಲಿ ದಿನದ 24 ಗಂಟೆ ನೀರು ಸರಬರಾಜು ಯೋಜನೆಗೆ ಹಾಗೂ ಒಳಚರಂಡಿ ಯೋಜನೆಗೆ ರಾಜ್ಯ ಸರ್ಕಾರದ ಅನುದಾನದ ಜೊತೆಗೆ ಕೇಂದ್ರದ ಅಮೃತ್‌ ಯೋಜನೆಯಿಂದ ಕೂಡ ಅನುದಾನ ವಿನಿಯೋಗಿಸಲಾಗಿದೆ. ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿಗೆ ಆಗಸ್ಟ್‌ 20 ಡೆಡ್‌ಲೈನ್‌ ನಿಗದಿಪಡಿಸಲಾಗಿದೆ. ಅದರೂ, ಇನ್ನೂ ಸಮಯ ಹಿಡಯಬಹುದು ಎಂದು ತಿಳಿಸಿದರು.

ಹೌಸಿಂಗ್‌ ಫಾರ್‌ ಹಾಲ್‌ ಯೋಜನೆಗೆ 30ಸಾವಿರ ಅರ್ಜಿಗಳು ಬಂದಿದ್ದು, ಅಂದಾಜು 10ಸಾವಿರದಷ್ಟು ಅರ್ಜಿದಾರರು ನಿವೇಶನ ಹೊಂದಿದ್ದಾರೆ. ಡಿಪಿಆರ್ ಕೂಡ ಮಾಡಲಾಗಿದೆ. ನಗರೋತ್ಥಾನ ಎರಡನೇ ಹಂತದ ಯೋಜನೆಯ ಅನುದಾನದಲ್ಲಿ ₹50 ಕೋಟಿ ಅನುದಾನ ಬಳಕೆಯಾಗಿದ್ದು, ಶೇ 70ರಷ್ಟು ಪ್ರಗತಿ ಸಾಧಿಸಲಾಗಿದೆ. ಬರಗಾಲ ಆವರಿಸಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸ್ಥಳೀಯ ಸಂಸ್ಥೆಗಳಿಗೆ ₹2 ಕೋಟಿ ಅನುದಾನ ನೀಡಲಾಗಿದೆ ಎಂದರು.

ಒಳ ಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಲು ಸೂಚಿಸಲಾಗಿದೆ. ಒಳ ಚರಂಡಿ ಕಾಮಗಾರಿಗಾಗಿ ತೋಡಿರುವ ರಸ್ತೆಗಳನ್ನು ಪುನರ್‌ ನಿರ್ಮಾಣ ಮಾಡಿಸಲು ಜಿಲ್ಲಾಧಿಕಾರಿಗೆ ಜವಾಬ್ದಾರಿ ನೀಡಲಾಗಿದೆ. ಕಾನೂನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳ ವಿರುದ್ಧ ಕ್ರಮ ಜರುಗಿಸಲು, ಒತ್ತುವರಿ ತೆರವುಗೊಳಿಸಲು ಕೂಡ ಜಿಲ್ಲಾಧಿಕಾರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ರಾಯಚೂರು ನಗರ ಹೊರವಲಯ ಹೊಸೂರು ಸಮೀಪ ನಿರ್ಮಿಸುತ್ತಿರುವ ಎಸ್‌ಟಿಪಿಯನ್ನು ಸ್ಥಳಾಂತರ ಮಾಡಲು ಆಗುವುದಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಕರ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು.

ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್. ಬೋಸರಾಜು, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ, ನಗರಸಭೆ ಅಧ್ಯಕ್ಷೆ ಹೇಮಲತಾ, ಉಪಾಧ್ಯಕ್ಷ ಜಯಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT