ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿಯಲ್ಲಿ ಯೋಜನೆಗಳ ಪೂರ್ಣಗೊಳಿಸಲು ಸೂಚನೆ

Last Updated 25 ಏಪ್ರಿಲ್ 2017, 5:48 IST
ಅಕ್ಷರ ಗಾತ್ರ

ಬೀದರ್: ‘ಸರ್ಕಾರದ ಯೋಜನೆಗಳು ಸಕಾಲದಲ್ಲಿ ಜನರಿಗೆ ತಲುಪುವಂತಾಗಲು ಅಧಿಕಾರಿಗಳು ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ‘ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ಅಧಿಕಾರಿಗಳು ಕಳೆದೊಂದು ವರ್ಷದಿಂದ ಅನುದಾನ ಇಲ್ಲ ಎನ್ನುವ ನೆಪವನ್ನೇ ಹೇಳುತ್ತಿದ್ದಾರೆ. ಆದರೆ, ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಪ್ರಯತ್ನಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಹುಗ್ರಾಮ ಯೋಜನೆಯಡಿ ಸಾಕಷ್ಟು ಅನುದಾನ ಒದಗಿಸಿದರೂ ಗ್ರಾಮಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಅಧಿಕಾರಿಗಳು ಜನರ ಸಮಸ್ಯೆಗೆ ಸಂದಿಸುತ್ತಿಲ್ಲ. ಗ್ರಾಮದ ಜನರು ಕುಡಿಯುವ ನೀರಿಗಾಗಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಕಮಠಾಣಾ, ಘಾಟಬೋರಾಳ, ಮುಡಬಿ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಅವೈಜ್ಞಾನಿಕವಾಗಿ ಪೈಪ್‌ಲೈನ್‌ ಅಳವಡಿಸಿರುವ ಕಾರಣ ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿಲ್ಲ ಎಂದು ಕೆಲ ಸದಸ್ಯರು ದೂರಿದರು.

‘ಔರಾದ್‌ ತಾಲ್ಲೂಕಿನ ಚಿಂತಾಕಿ ವಲಯದಲ್ಲಿ ಕುಡಿಯವ ನೀರಿನ ತೀವ್ರ ಸಮಸ್ಯೆ ಇದೆ. ನೀರು ಸರಬರಾಜು ಮಾಡುವ ವಿದ್ಯುತ್ ಮೋಟರ್‌ಗಳು ಕೆಟ್ಟರೂ ಅಧಿಕಾರಿಗಳು ಅವುಗಳನ್ನು ದುರಸ್ತಿ ಮಾಡಿಸುತ್ತಿಲ್ಲ’ ಎಂದು ಸದಸ್ಯೆ ಗೀತಾ ಚಿದ್ರಿ ಆರೋಪಿಸಿದರು.

‘ಕೆಲ ಗ್ರಾಮಗಳಲ್ಲಿ ವಿದ್ಯುತ್‌ ಮೋಟರ್‌ಗಳನ್ನು ಕಳ್ಳತನ ಮಾಡಲಾಗಿದೆ. ಕೆಲ ಗ್ರಾಮಗಳಲ್ಲಿ ಮೋಟರ್‌ಗಳು ಸುಟ್ಟು ಹೋಗಿವೆ. ಹೀಗಾಗಿ ಸ್ವಲ್ಪ ಸಮಸ್ಯೆಯಾಗಿದೆ. ಸಂತಪುರ ಸೇರಿದಂತೆ ಅಗತ್ಯವಿರುವ ಕಡೆಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ದತ್ತಾತ್ರಿ ಪೋಲಾ ತಿಳಿಸಿದರು.

‘ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರವೇಶ ನೀಡಿದ ಶಿಕ್ಷಣ ಸಂಸ್ಥೆಗಳಿಗೆ ಮಾರ್ಚ್‌ ಅಂತ್ಯದಲ್ಲಿ ಒಂದೇ ಬಾರಿಗೆ ಹಣ ಬಿಡುಗಡೆ ಮಾಡಲಾಗಿದೆ. ವಿಳಂಬಕ್ಕೆ ಏನು ಕಾರಣ’ ಎಂದು ಪ್ರಕಾಶ ಪಾಟೀಲ ಪ್ರಶ್ನಿಸಿದರು.

‘ಬೀದರ್‌ ಜಿಲ್ಲೆಗೆ ಸರ್ಕಾರದಿಂದ ಹಣ ಬಿಡುಗಡೆ ಆಗಿರಲಿಲ್ಲ. ಕೊನೆಯ ಹಂತದಲ್ಲಿ ಸುಮಾರು ₹7 ಕೋಟಿ ಬಿಡುಗಡೆ ಮಾಡಲಾಯಿತು. ಹೀಗಾಗಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಕೊನೆಯ ಹಂತದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಣ ಬಿಡುಗಡೆಗೆ ವಿಳಂಬ ಆಗಿಲ್ಲ’ ಎಂದು ಶಿಕ್ಷಣ ಇಲಾಖೆಯ ಬಿಸಿಯೂಟ ಯೋಜನೆಯ ಅಧಿಕಾರಿ ಇನಾಯತ್‌ ಅಲಿ ಶಿಂಧೆ  ಸ್ಪಷ್ಟಪಡಿಸಿದರು.

‘ಜಿಲ್ಲೆಯಲ್ಲಿ ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಿದರೂ ಬಹಳಷ್ಟು ಸ್ಥಾನಗಳು ಖಾಲಿ ಉಳಿಯುತ್ತಿವೆ’ ಎಂದು ಸಭೆಯ ಗಮನಕ್ಕೆ ತಂದರು.
ಸಿಇಒ ಆರ್‌.ಸೆಲ್ವಮಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಧಿಕಾರಿ ಡಾ. ಎಂ.ಎ. ಜಬ್ಬಾರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT