ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ಗದ ದರದಲ್ಲಿ ಹೆಚ್ಚಿನ ಇಳುವರಿ ವಿಧಾನ ಅನುಸರಿಸಿ’

Last Updated 25 ಏಪ್ರಿಲ್ 2017, 5:54 IST
ಅಕ್ಷರ ಗಾತ್ರ

ಬೆಳಗಾವಿ: ಕಬ್ಬು ಬೆಳೆಗಾರರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ಬೇಸಾಯ ಕ್ರಮವನ್ನು ಅನುಸರಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಿ.ಪಿ. ಬಿರಾದಾರ ಸಲಹೆ ನೀಡಿದರು.ರಾಜ್ಯ ಕಬ್ಬು ಬೆಳೆಗಾರರ ಸಂಘ, ‘ರೈತ ಮಿತ್ರ’ ರೈತ ಉತ್ಪಾದಕ ಕಂಪೆನಿ ಹಾಗೂ ಇಫ್ಕೋ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಬ್ಬು ಬೆಳೆ ಬೇಸಾಯ ಕಾರ್ಯಾಗಾರವನ್ನು ಉದ್ಘಾಟಿಸಿ, ‘ದನ, ಕರುಗಳನ್ನು ಬಿಟ್ಟು ಕೃಷಿ ಮಾಡುವುದ­ರಿಂದ ಪ್ರಯೋಜನವಿಲ್ಲ ಎನ್ನುವುದನ್ನು ರೈತರು ಮರೆಯಬಾರದು’ ಎಂದು ನೆನಪಿಸಿದರು.

‘ರಾಜ್ಯದಲ್ಲಿ ಹೆಕ್ಟೇರ್‌ಗೆ ಸರಾಸರಿ 74 ಟನ್‌ ಕಬ್ಬನ್ನು ಬೆಳೆಯಲಾಗುತ್ತಿದೆ. ಕೆಲ­ವರು ಎಕರೆಗೆ 100 ಟನ್‌ಗೂ ಹೆಚ್ಚಿನ ಇಳುವರಿ ಪಡೆದ ಉದಾಹರಣೆಗಳೂ ಇವೆ. ಕಾರ್ಖಾನೆಗಳು ಹೇಳುವ ತಳಿ­ಯನ್ನು ಎಲ್ಲ ರೈತರೂ ಬೆಳೆಯಬಾರದು. ಅವರ ಶೋಷಣೆಗೆ ಸಿಲುಕಬಾರದು. 10ರಿಂದ 11, 15ರಿಂದ 16 ಹಾಗೂ 17ರಿಂದ 18 ತಿಂಗಳಿಗೆ ಕಟಾವಿಗೆ ಬರುವ ತಳಿಗಳನ್ನು ಅಲ್ಲಲ್ಲಿ ಬೆಳೆಯ­ಬೇಕು. ಇದರಿಂದ, ಲಾಭ ಗಳಿಸಬಹುದು’ ಎಂದು ತಿಳಿಸಿದರು.

ಸಾವಯವ ಕೃಷಿ ಮಾಡಿ: ‘ಸಾವಯವ ಕೃಷಿ ಮಾಡಬೇಕು. ಕೊಟ್ಟಿಗೆ ಗೊಬ್ಬರ­ ಬಳಸಬೇಕು. ಇದರಿಂದ ಹೆಚ್ಚಿನ ಇಳು­ವರಿ ಪಡೆಯಬಹುದು. ರವದಿಯನ್ನು ಸುಡಬಾರದು. ಹಸಿರೆಲೆ ಗೊಬ್ಬರ ಬಳಕೆಗೆ ಆದ್ಯತೆ ಕೊಡಬೇಕು’ ಎಂದು ಕಿವಿಮಾತು ಹೇಳಿದರು.ವಿಶ್ವವಿದ್ಯಾಲಯದಿಂದ ಅಭಿವೃದ್ಧಿ­ಪಡಿಸಲಾದ ತಂತ್ರಜ್ಞಾನವನ್ನು ಕಬ್ಬು ಬೇಸಾಯದಲ್ಲಿ ಅಳವಡಿಸಿಕೊಂಡವರಿಗೆ ಪ್ರೋತ್ಸಾಹಧನ ನೀಡಲಾಗುವುದು. ಸರ್ಕಾರವು ಬಜೆಟ್‌ನಲ್ಲಿ ಇದಕ್ಕಾಗಿ ₹ 3 ಕೋಟಿ ಇಟ್ಟಿದೆ’ ಎಂದರು.

ಕೃಷಿ ಜಂಟಿ ನಿರ್ದೇಶಕ ವೆಂಕಟ­ರಾಮರೆಡ್ಡಿ ಪಾಟೀಲ, ‘ಕಬ್ಬು ಬೇಸಾಯದಲ್ಲಿ ಹನಿ ನೀರಾವರಿಗೆ ಆದ್ಯತೆ ನೀಡಬೇಕು. ಇದಕ್ಕೆ ಸರ್ಕಾರದ ಮಾನದಂಡದ ಅನ್ವಯ ಸಹಾಯಧನ­ವನ್ನೂ ಒದಗಿಸ­ಲಾಗುವುದು. ಅಂತರ ಬೆಳೆಯಿಂದ ರೈತರಿಗೆ ಅನುಕೂಲ­ವಾಗುತ್ತದೆ. ತಂತ್ರಜ್ಞಾನ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದರು.
‘ಜೂನ್‌ ಮೊದಲ ವಾರ ರೈತರಿಗೆ ಮಣ್ಣು ಆರೋಗ್ಯ ಚೀಟಿ ನೀಡಲಾಗು­ವುದು. ಅದರಲ್ಲಿ ನೀಡಲಾಗುವ ಶಿಫಾರಸುಗಳನ್ನು ಅನುಸರಿಸಬೇಕು’ ಎಂದು ಸಲಹೆ ಮಾಡಿದರು.

ರೈತರ ಶೋಷಣೆ ನಿಲ್ಲಲಿ: ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರು­ಬೂರು ಶಾಂತಕುಮಾರ, ‘ರಾಜ್ಯದಲ್ಲಿ ಕಬ್ಬು ಬೆಳೆಯುವ ಪ್ರದೇಶ, ಇಳುವರಿ ಪ್ರಮಾಣ ಕಡಿಮೆಯಾಗುತ್ತಿದೆ. ರೈತರು ಪರ್ಯಾಯ ಬೆಳೆ ಬೆಳೆಯಬಹುದು. ಆದರೆ, ಕಬ್ಬು ಕಡಿಮೆಯಾದರೆ ಕಾರ್ಖಾನೆಗಳವರಿಗೆ ನಷ್ಟವಾಗುತ್ತದೆ. ಹೀಗಾಗಿ, ಅವರು ರೈತರ ಶೋಷಣೆ ಮಾಡುವುದನ್ನು ನಿಲ್ಲಿಸಬೇಕು. ನ್ಯಾಯಯುತ ದರ ಕೊಡಬೇಕು’ ಎಂದು ಆಗ್ರಹಿಸಿದರು.

‘ಗುಜರಾತ್‌ನ ಜ್ಞಾನದೇವಿ ಸಕ್ಕರೆ ಕಾರ್ಖಾನೆಯು ಟನ್‌ ಕಬ್ಬಿಗೆ ₹ 4,441 ನೀಡಿದೆ. ಆದಾಗ್ಯೂ ₹ 8 ಕೋಟಿ ಲಾಭ ಗಳಿಸಿದೆ. ಇದೇ ರೀತಿ ರಾಜ್ಯದಲ್ಲಿಯೂ ದರ ನಿಗದಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.\ಪ್ರಗತಿಪರ ಕೃಷಿಕರಾದ ಕಾಗವಾಡದ ಜ್ಯೋತಿಕುಮಾರ ಪಾಟೀಲ, ಬಾಗಲ­ಕೋಟೆ ಜಿಲ್ಲೆಯ ಗೋವಿಂದಪ್ಪ ಗುಜ್ಜಪ್ಪನವರ ಅವರನ್ನು ಸತ್ಕರಿಸ­ಲಾಯಿತು. ಇಫ್ಕೋ ಹಿರಿಯ ಪ್ರಾದೇ­ಶಿಕ ವ್ಯವಸ್ಥಾಪಕ ಎಸ್‌. ಹರಿಯಪ್ಪ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಹರಳಿಕಟ್ಟಿ ಭಾಗವಹಿಸಿದ್ದರು.ಬಾಬು ಉಪಾಸಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT